ದೇಶ ಹಾಗೂ ರಾಜ್ಯದಲ್ಲಿ ಬಿಜೆಪಿಯ ಡಬಲ್ ಇಂಜನ್ ಸರ್ಕಾರ ಜನಪರವಾದ ಯೋಜನೆ ಜಾರಿ ಮಾಡಿದೆ. ರಾಜ್ಯದ ಎಲ್ಲ ಸಮುದಾಯಕ್ಕೆ ಅನುಕೂಲವಾಗಲು ಒಳಮೀಸಲಾತಿ ಜಾರಿ ಮಾಡಲಾಗಿದೆ ಎಂದ ಪ್ರಹ್ಲಾದ ಜೋಶಿ
ಚಿಕ್ಕೋಡಿ(ಏ.19): ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಒಳಮೀಸಲಾತಿಯನ್ನು ಜಾರಿಗೆ ತಂದಿರುವುದನ್ನು ಸಹಿಸಲಾಗದೇ ನಾವು ಅಧಿಕಾರಕ್ಕೆ ಬಂದಲ್ಲಿ ಒಳಮೀಸಲಾತಿ ರದ್ದುಪಡಿಸುತ್ತೇವೆ ಎಂದು ಹೇಳುವ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಲಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸವಾಲ್ ಎಸೆದರು.
ನಗರದಲ್ಲಿ ಮಂಗಳವಾರ ನಡೆದ ಬಿಜೆಪಿ ಅಭ್ಯರ್ಥಿ ರಮೇಶ ಕತ್ತಿ ನಾಮಪತ್ರ ಸಲ್ಲಿಕೆಗೆ ಮುನ್ನ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ದೇಶ ಹಾಗೂ ರಾಜ್ಯದಲ್ಲಿ ಬಿಜೆಪಿಯ ಡಬಲ್ ಇಂಜನ್ ಸರ್ಕಾರ ಜನಪರವಾದ ಯೋಜನೆ ಜಾರಿ ಮಾಡಿದೆ. ರಾಜ್ಯದ ಎಲ್ಲ ಸಮುದಾಯಕ್ಕೆ ಅನುಕೂಲವಾಗಲು ಒಳಮೀಸಲಾತಿ ಜಾರಿ ಮಾಡಲಾಗಿದೆ ಎಂದರು.
ಎದುರಾಳಿ ಯಾರೇ ಆದರೂ ಅದಕ್ಕೆ ತಲೆ ಕೆಡಿಸಿಕೊಳ್ಳಬೇಡಿ: ಬಾಲಚಂದ್ರ ಜಾರಕಿಹೊಳಿ
ದೇಶದಲ್ಲಿ ಶಾಂತಿ ಕಾಪಾಡುವ ಮೂಲಕ ವಿಶ್ವದಲ್ಲಿಯೇ ಭಾರತದ ಕೀರ್ತಿ ಹೆಚ್ಚಿಸಿದ್ದು, ಅದು ಬಿಜೆಪಿಯಿಂದ ಮಾತ್ರ ಸಾಧ್ಯವಾಗಿದೆ. ಕೇಂದ್ರದಿಂದ ರಾಜ್ಯಕ್ಕೆ .55 ಸಾವಿರ ಕೋಟಿ ರೂಗಳ ಅನುದಾನ ಬರುತ್ತಿತ್ತು. ಈಗ ನರೇಂದ್ರ ಮೋದಿಯವರ ಅಧಿಕಾರಾವಧಿಯಲ್ಲಿ .1.35 ಸಾವಿರ ಕೋಟಿ ಬರುತ್ತಿದೆ ಎಂದರು.
ಕೇಂದ್ರ ಮತ್ತು ರಾಜ್ಯದಲ್ಲಿ ಡಬಲ್ ಇಂಜನ್ ಸರ್ಕಾರದ ಅನೇಕ ಯೋಜನೆಗಳು ಜನರಿಗೆ ಮುಟ್ಟಿವೆ. ಪ್ರಧಾನಿ ನರೇಂದ್ರ ಮೋದಿ ಕೈ ಬಲಪಡಿಸಲು ಈಗ ನಡೆಯುವ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಕತ್ತಿ ಅವರನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಬೇಕು. ಕಾರ್ಯಕರ್ತರು ಯಾವುದೇ ಆಸೆ ಆಮೀಸಕ್ಕೆ ಒಳಗಾಗದೇ ಬಿಜೆಪಿ ಅಭ್ಯರ್ಥಿ ಆಯ್ಕೆಗೆ ಒತ್ತು ಕೊಡಬೇಕು ಎಂದು ಮನವಿ ಮಾಡಿದರು.
ಚಿಕ್ಕೋಡಿ-ಸದಲಗಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ ಕತ್ತಿ ಮಾತನಾಡಿ, ಕ್ಷೇತ್ರದಲ್ಲಿ ಜನರು ಬದಲಾವಣೆ ಬಯಸುತ್ತಿದ್ದಾರೆ ಅದಕ್ಕಾಗಿ ನನ್ನ ಗೆಲವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲೆಯ ಎಲ್ಲಾ ನಾಯಕರು ಚಿಕ್ಕೋಡಿ-ಸದಲಗಾ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಬಯಸಿರುವದರಿಂದ ನಾನು ಸ್ಪರ್ಧೆ ಮಾಡಿರುವೆ. ನಾನು ಖಡಕಲಾಟ ಗ್ರಾಮದ ಮೊಮ್ಮಗನಾಗಿದ್ದೇನೆ. ಅದಕ್ಕಾಗಿ ನಾನು ಇದೇ ಕ್ಷೇತ್ರದವನು ಎಂದರು.
ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಮಾತನಾಡಿ, ಚಿಕ್ಕೋಡಿ-ಸದಲಗಾ ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರಿಸಲು ಬಿಜಿಪಿಯವರು ಹೈಕಮಾಂಡ್ ರಮೇಶ ಕತ್ತಿ ಅವರನ್ನು ಕಣಕ್ಕೆ ಇಳಿಸಿದೆ. ಡಬಲ್ ಇಂಜನ್ ಸರ್ಕಾರದ ಕಾರ್ಯ ಮುಂದೆ ಇಟ್ಟುಕೊಂಡು ಚುನಾವಣೆ ಎದುರಿಸಲಾಗುವುದು ಎಂದು ತಿಳಿಸಿದರು.
ಬಿಹಾರ ಶಾಸಕ ಸಂಜಯಸಿಂಗ್ ಚೌರಾಶಿ ಮಾತನಾಡಿ, ಡಂಬಲ್ ಇಂಜಿನ್ ಸರ್ಕಾರದಿಂದ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗಿವೆ ಎಂದರು.
ಎಂ.ಬಿ.ಜೀರಲಿ ಮಾತನಾಡಿ, ಕ್ಷೇತ್ರವನ್ನು ಭಷ್ಟಾಚಾರವನ್ನಾಗಿ ಇಲ್ಲಿನ ಶಾಸಕರು ಮಾಡಿದ್ದಾರೆ ಎಂದು ಆರೋಪಿಸಿದರು. ಕ್ಷೇತ್ರದಲ್ಲಿ ಡಿವೈಡರ್ ಹಾಕಿದ್ದರೆ ಅದು ಅಭಿವೃದ್ಧಿ ಅಲ್ಲಾ ಎಂದು ಟೀಕಿಸಿದರು. ಕೊರೋನಾದಲ್ಲೂ ಭಾರತೀಯರಿಗೆ ಉಚಿತವಾಗಿ ಮೋದಿ ಅವರು ವ್ಯಾಕ್ಸಿನ್ ನೀಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಮಾದೇವ ಯಾದವಾಡ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಅಪ್ಪಾಸಾಬ್ ಚೌಗಲಾ, ಶಾಂಭವಿ ಅಶ್ವತಪುರ, ಮಾಜಿ ಶಾಸಕ ಬಾಳಾಸಾಹೇಬ ವಡ್ಡರ, ದುಂಡಪ್ಪ ಬೆಂಡವಾಡೆ, ಶಾಂಭವಿ ಅಶ್ವತಪುರ, ಸುಜಾತ ಖೋತ, ಸಂಜಯ ಪಾಟೀಲ, ಜಯಕುಮಾರ ಖೋತ, ಮಲ್ಲಿಕಾರ್ಜುನ ಕೋರೆ, ನಾಗೇಶ ಕಿವಡ, ಸತೀಶ ಅಪ್ಪಾಜಿಗೋಳ, ಜಯಾನಂದ ಜಾಧವ, ಸಂಜಯ ಕವಟಗಿಮಠ, ಪ್ರವೀಣ ಕಾಂಬಳೆ ಉಪಸ್ಥಿತರಿದ್ದರು.
ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ರಮೇಶ ಕತ್ತಿ
ಮೇ.10 ರಂದು ನಡೆಯಲಿರುವ ಸಾರ್ವತ್ರಿಕ ವಿಧಾನಸಭೆ ಚುನಾವಣೆಗೆ ಚಿಕ್ಕೋಡಿ-ಸದಲಗಾ ವಿಧಾನಸಭೆ ಕ್ಷೇತ್ರದಿಂದ ಮಂಗಳವಾರದವರೆಗೆ 6 ಜನ 10 ನಾಮಪತ್ರಗಳನ್ನು ಸಲ್ಲಿಸಿದ್ದಾರೆ ಎಂದು ಚುನಾವಣಾಧಿಕಾರಿಗಳಾದ ಉಪವಿಭಾಗಾಧಿಕಾರಿ ಮಾಧವ ಗಿತ್ತೆ ತಿಳಿಸಿದ್ದಾರೆ.
ಭಾರತೀಯ ಜನತಾ ಪಾರ್ಟಿಯ ಅಧಿಕೃತ ಅಭ್ಯರ್ಥಿಯಾಗಿ ರಮೇಶ ಕತ್ತಿ ಅವರು ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಚಿಕ್ಕೋಡಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ, ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ, ಮಾಜಿ ರಾಜ್ಯಸಭೆ ಸದಸ್ಯ ಡಾ.ಪ್ರಭಾಕರ ಕೋರೆ, ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಹಾಗೂ ಮಹಾದೇವಪ್ಪ ಯಾದವಾಡ, ಸತೀಶ ಅಪ್ಪಾಜಿಗೋಳ ನೇತೃತ್ವದಲ್ಲಿ ಸಾವಿರಾರು ಜನ ಬಿಜೆಪಿ ಕಾರ್ಯಕರ್ತರೊಂದಿಗೆ ಭವ್ಯ ಮೆರವಣಿಗೆಯಲ್ಲಿ ಆಗಮಿಸಿ ತಮ್ಮ ನಾಮಪತ್ರವನ್ನು ಚುನಾವಣಾಧಿಕಾರಿಗಳಿಗೆ ಮಂಗಳವಾರ ಸಲ್ಲಿಸಿದರು.
ಬಿಜೆಪಿ ಮಾಡಿರುವ ಭ್ರಷ್ಟಾಚಾರ, ದುರಾಡಳಿತದಿಂದ ಜನರು ಬೇಸತ್ತಿದ್ದಾರೆ: ಸಿದ್ದರಾಮಯ್ಯ
ರಮೇಶ ಕತ್ತಿಯವರು ಬಿಡಿಸಿಸಿ ಬ್ಯಾಂಕ್‌ನ ಅಧ್ಯಕ್ಷರಾಗಿ ಒಳ್ಳೆಯ ರೀತಿಯಾಗಿ ಕೆಲಸ ಮಾಡಿದ್ದಾರೆ. ರಮೇಶ ಕತ್ತಿಯವರನ್ನು ಚಿಕ್ಕೋಡಿ ಸದಲಗಾ ಅಭ್ಯರ್ಥಿಯನ್ನಾಗಿ ಮಾಡಿದ ಬಳಿಕ ಕಾರ್ಯಕರ್ತರ ಉತ್ಸಾಹ ಇಮ್ಮಡಿಗೊಂಡಿದೆ. ಈ ಬಾರಿ ಚಿಕ್ಕೋಡಿ ಸದಲಗಾ ಕ್ಷೇತ್ರದಲ್ಲಿ ರಮೇಶ ಕತ್ತಿ ಗೆಲವು ನಿಶ್ಚಿತ ಅಂತ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.