ಯತ್ನಾಳ್ 2500 ಕೋಟಿ ಹೇಳಿಕೆ ತನಿ​ಖೆ​ಯಾ​ಗ​ಲಿ ಎಂದ ಸಿದ್ದರಾಮಯ್ಯ!

Published : May 08, 2022, 12:54 AM IST
ಯತ್ನಾಳ್ 2500 ಕೋಟಿ ಹೇಳಿಕೆ ತನಿ​ಖೆ​ಯಾ​ಗ​ಲಿ ಎಂದ ಸಿದ್ದರಾಮಯ್ಯ!

ಸಾರಾಂಶ

ರಾಜ್ಯದಲ್ಲಿರುವ ಸರ್ಕಾರ ಎಲೆಕ್ಟೆಡ್‌ ಸರ್ಕಾರ ಅಲ್ಲ. ಯಡಿಯೂರಪ್ಪ, ಬೊಮ್ಮಾಯಿ ಎಲೆಕ್ಟೆಡ್‌ ಸಿಎಂ ಅಲ್ಲ. ಇವರಿಬ್ಬರೂ ಅಪಾಯಿಂಟೆಡ್‌ ಸಿಎಂ. ಇವರಿಗೇನು ಜನ ಬಹುಮತ ಕೊಟ್ಟಿರಲಿಲ್ಲ. ದುಡ್ಡು ಖರ್ಚು ಮಾಡಿ ಹಿಂಬಾಗಿಲಿನಿಂದ ಆಡಳಿತಕ್ಕೆ ಬಂದಿರುವ ಸರ್ಕಾರ. ಇದೊಂದು ಅನೈತಿಕ ಶಿಶು ಎಂದು ಸಿದ್ಧರಾಮಯ್ಯ ಕಿಡಿಕಾರಿದ್ದಾರೆ.

ಬೆಳಗಾವಿ (ಮೇ.8): ಮುಖ್ಯಮಂತ್ರಿಯಾಗಲು ಶಾಸಕ ಬಸನಗೌಡ ಪಾಟೀಲ ಯತ್ನಾಳಗೆ (basanagouda patil yatnal ) 2500 ಕೋಟಿ ಹಣ ಸಿದ್ಧಮಾಡಿಕೊಳ್ಳಲು ಹೇಳಿದವರು ಯಾರು ಹಾಗೂ ನೂರು ಕೋಟಿ ಕೊಟ್ಟು ಮಂತ್ರಿಯಾದವರು ಯಾರು ಎಂಬುವುದರ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ (siddaramaiah ) ಆಗ್ರಹಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತ್ನಾಳಗೆ ಹಣ ಕೇಳಿ​ದವರು ಯಾರು? ಹಿಂದೆ ಸಿಎಂ ಆದವರು, ಯಡಿಯೂರಪ್ಪ ಎಷ್ಟುಕೋಟಿ ಕೊಟ್ಟು ಸಿಎಂ ಆಗಿದ್ದಾರೆ? ಮಂತ್ರಿಗಳು ಎಷ್ಟುದುಡ್ಡು ಕೊಟ್ಟು ಆಗಿದ್ದಾರೆ? ಬಸವರಾಜ ಬೊಮ್ಮಾಯಿ (Basavaraj Bommai) ಎಷ್ಟುಕೋಟಿ ಕೊಟ್ಟು ಸಿಎಂ ಆಗಿದ್ದಾರೆ? ಅಷ್ಟೊಂದು ಹಣ ಎಲ್ಲಿಂದ ಬಂತು ಎನ್ನುವ ಬಗ್ಗೆ ತನಿಖೆಯಾಗಬೇಕು ಎಂದು ಒತ್ತಾ​ಯಿ​ಸಿದರು.

ಬೊಮ್ಮಾಯಿ ಸರ್ಕಾರದಲ್ಲಿ ಆದ ಹಗರಣಗಳು ಯಾವ ಕಾಲದಲ್ಲಿಯೂ ಆಗಿಲ್ಲ. ಇಷ್ಟು ಭ್ರಷ್ಟಸರ್ಕಾರ ನಾನು ನೋಡಿಯೇ ಇಲ್ಲ. ಪಿಎಸ್‌ಐ ನೇಮಕದಲ್ಲಿ ಭ್ರಷ್ಟಾಚಾರ, ಕಾಮಗಾರಿ ಮಾಡಲು ಶೇ.40 ರಷ್ಟುಕಮಿಷನ್‌ ಕೊಡಬೇಕು ಎಂದು ಗುತ್ತಿಗೆದಾರರು ಪ್ರಧಾನಿ ಮೋದಿಗೆ ಪತ್ರ ಬರೆದು 10 ತಿಂಗಳಾದರೂ ಯಾವುದೇ ಕ್ರಮ ಇಲ್ಲ. ಪ್ರಧಾನಿ ನರೇಂದ್ರ ಮೋದಿ ಭ್ರಷ್ಟಾಚಾರಕ್ಕೆ ಸಾಥ್‌ ಕೊಡುತ್ತಿದ್ದಾರೆ ಅಂದಹಾಗೆ ಎಂದು ವಾಗ್ದಾಳಿ ನಡೆಸಿದರು.

ಕೊರೋನಾದಿಂದ ಮೃತಪಟ್ಟವರ ಸಂಖ್ಯೆ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸುಳ್ಳು ಹೇಳುತ್ತಿ​ವೆ. ಅನೇಕ ಜನರು ಮೃತಪಟ್ಟಿ​ದ್ದಾರೆ. ಸರ್ಕಾರ ಲೆಕ್ಕ ಮಾಡಿಲ್ಲ, ಸು​ಳ್ಳು ಹೇಳುತ್ತಿದ್ದಾರೆ. ಪ್ರಧಾನಿಯೂ ಸುಳ್ಳು ಹೇಳುತ್ತಿದ್ದಾರೆ. ಕೊರೋನಾದಿಂದ ಮೃತಪಟ್ಟವರು ಎಷ್ಟುಎಂದು ಡೆತ್‌ ಆಡಿಟ್‌ (Death Audit) ಆಗಬೇಕು ಎಂದು ಆಗ್ರ​ಹಿ​ಸಿ​ದ​ರು.

ಸಂಪು​ಟ​ದಿಂದ ಕಿತ್ತು ಹಾಕಿ: ಸಚಿವ ಪ್ರಭು ಚವ್ಹಾಣ ಪಿಎಸ್‌ಐ ಪರೀಕ್ಷೆಯಲ್ಲಿ ಅಕ್ರಮವಾಗಿದೆ ಎಂದು ಮುಖ್ಯಮಂತ್ರಿಗೆನೇ ಪತ್ರ ಬರೆದಿದ್ದಾರೆ. ಆದರೆ ಗೃಹ ಸಚಿವ ಆರಗ ಜ್ಞಾನೇಂದ್ರ ಯಾವುದೇ ಅಕ್ರಮ ನಡೆದಿಲ್ಲ. ಕಾನೂನು ಬದ್ಧವಾಗಿ ನಡೆದಿದೆ ಎಂದಿದ್ದಾರೆ. ಈಗ ಅಕ್ರಮ ನಡೆದಿದೆಯಲ್ಲ. ಆರಗ ಜ್ಞಾನೇಂದ್ರ ಸಚಿವನಾಗಿ ಮುಂದುವರಿಯಲು ಯೋಗ್ಯನಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮಾನ ಮರ್ಯಾದೆ ಇದ್ದರೆ ಅವರನ್ನು ಸಚಿವ ಸಂಪುಟದಿಂದ ಕಿತ್ತು ಹಾಕಬೇಕು ಎಂದು ಕಿಡಿಕಾರಿದರು.

ರಾಜ್ಯದಲ್ಲಿರುವ ಸರ್ಕಾರ ಎಲೆಕ್ಟೆಡ್‌ ಸರ್ಕಾರ ಅಲ್ಲ. ಯಡಿಯೂರಪ್ಪ, ಬೊಮ್ಮಾಯಿ ಎಲೆಕ್ಟೆಡ್‌ ಸಿಎಂ ಅಲ್ಲ. ಇವರಿಬ್ಬರೂ ಅಪಾಯಿಂಟೆಡ್‌ ಸಿಎಂ. ಇವರಿಗೇನು ಜನ ಬಹುಮತ ಕೊಟ್ಟಿರಲಿಲ್ಲ. ದುಡ್ಡು ಖರ್ಚು ಮಾಡಿ ಹಿಂಬಾಗಿಲಿನಿಂದ ಆಡಳಿತಕ್ಕೆ ಬಂದಿರುವ ಸರ್ಕಾರ. ಇದೊಂದು ಅನೈತಿಕ ಶಿಶು ಎಂದು ಕಿಡಿಕಾರಿದರು.

ಕುಮಾರಸ್ವಾಮಿ 1 ವರ್ಷ 2 ತಿಂಗಳು ಸಿಎಂ ಆಗಿದ್ದರು. ಅದಾದ ಮೇಲೆ ಯಡಿಯೂರಪ್ಪ ಆಪರೇಶನ್‌ ಕಮಲ ಮಾಡಿ ಎರಡು ವರ್ಷ ಸಿಎಂ ಆಗಿದ್ದರು. ಇವರದ್ದು ಎರಡು ವರ್ಷಕ್ಕೆ ಒಪ್ಪಂದ ಆಗಿತ್ತು. ಆ ಮೇಲೆ ಮುಖ್ಯಮಂತ್ರಿಯಾಗಿ ಬೊಮ್ಮಾಯಿ ಅವರನ್ನು ಅಪಾಯಿಂಟ್‌ ಮಾಡಿದ್ದಾರೆ. ಬೊಮ್ಮಾಯಿ ಆರ್‌ಎಸ್‌ಎಸ್‌ನ ಕೈಗೊಂಬೆ, ಆರ್‌ಎಸ್‌ಎಸ್‌ ಕುಳಿತುಕೊ ಎಂದರೆ ಕುಳಿತುಕೊಳ್ಳಬೇಕು, ನಿಂತಕೊ ಎಂದರೆ ನಿಲ್ಲಬೇಕು. ಡ್ಯಾನ್ಸ್‌ ಮಾಡಿ ಎಂದರೆ ಡ್ಯಾನ್ಸ್‌ ಮಾಡಬೇಕು ಎಂದು ಲೇವಡಿ ಮಾಡಿದರು. ಈ ವೇಳೆ ಶಾಸಕರಾದ ಲಕ್ಷ್ಮೀ ಹೆಬ್ಬಾಳ್ಕರ್‌, ಗಣೇಶ ಹುಕ್ಕೇರಿ, ವಿಧಾನ ಪರಿಷತ್‌ ಸದಸ್ಯ ಚನ್ನರಾಜ ಹಟ್ಟಿಹೊಳಿ, ಮಾಜಿ ಸಚಿವ ಎ.ಬಿ.ಪಾಟೀಲ, ಕಾಂಗ್ರೆಸ್‌ ಗ್ರಾಮೀಣ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು

ನ್ಯಾಯಾ​ಧೀ​ಶರ ಮೇಲು​ಸ್ತು​ವಾ​ರಿ​ಯಲ್ಲಿ ತನಿ​ಖೆ​ಯಾ​ಗ​ಲಿ : ಪಿಎಸ್‌ಐ ಹಗರಣ ಹೈಕೋರ್ಚ್‌ ನ್ಯಾಯಾಧೀಶರ ಮೇಲುಸ್ತುವಾರಿಯಲ್ಲಿ ತನಿಖೆ ನಡೆಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಈ ಎಲ್ಲಾ ಹಗರಣಗಳನ್ನು ನ್ಯಾಯಾಧೀಶರ ಮೇಲುಸ್ತುವಾರಿಯಲ್ಲಿ ತನಿಖೆ ಮಾಡಿ ಅಂತಾ ಹೇಳಿದ್ದೇನೆ. ಸಿದ್ದರಾಮಯ್ಯ ಗಾಳಿಯಲ್ಲಿ ಗುಂಡು ಹೊಡೆಯುತ್ತಾರೆ ಎನ್ನುತ್ತಾರೆ, ಮತ್ಯಾಕೆ ಪಿಎಸ್‌ಐ ಮರು ಪರೀಕ್ಷೆಯನ್ನು ಮಾಡಿದಿರಿ? ಪಿಎಸ್‌ಐ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದಿದೆ. ಹೈಕಕ್ಕೆ ಅನ್ಯಾಯ ಆಗಿದೆ ಅಂತಾ ಪತ್ರ ಬರೆದಿದ್ದಾರೆ. ಅಲ್ಲದೇ ವಿಧಾನ ಪರಿಷತ ಸದಸ್ಯ ಸಂಕನೂರು ಪತ್ರ ಬರೆದಿದ್ದಾರೆ. ಜತೆಗೆ ವಿಧಾನ ಪರಿ​ಷ​ತ್ತಿ​ನಲ್ಲಿ ಪ್ರಶ್ನೆ ಕೇಳಿದಾಗ ಯಾವ ಅಕ್ರಮ ನಡೆದಿಲ್ಲ ಅಂತಾ ಲಿಖಿತ ಉತ್ತರ ಕೊಟ್ಟಿದ್ದಾರೆ. ಈಗ ಅಕ್ರಮ ನಡೆದಿರೋದು ಸತ್ಯ ಆಗಿಬಿಟ್ಟಿದೆಯಲ್ಲ, ಗೃಹಸಚಿವರು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಗೃಹಸಚಿವರಾಗಿ ಮುಂದುವರಿಯಲು ಅರ್ಹತೆ ಇದೆಯಾ? ಸದನಕ್ಕೆ ತಪ್ಪು ಮಾಹಿತಿ ಕೊಟ್ಟಿದ್ದಾರೆ. ಸಚಿವರು ಪತ್ರ ಬರೆದಿದ್ದರೂ ಆರಗ ಜ್ಞಾನೇಂದ್ರ ಸದನದಲ್ಲಿ ಬೇಜವಾಬ್ದಾರಿ ಉತ್ತರ ಕೊಟ್ಟಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು. ಅಶ್ವತ್ಥ ನಾರಾಯಣ್‌ ಬೇರೆ ಕಥೆ ಇದೆ, ಈ ಇಬ್ಬರೂ ಸಚಿವ ಸ್ಥಾನದಿಂದ ಕಿತ್ತೊಗೆಯಬೇಕು ಎಂದು ಆಗ್ರಹಿಸಿದರು.

ಹೊಂದಾ​ಣಿಕೆ ರಾಜ​ಕಾ​ರ​ಣ​ ಎಂಬ ಶಾಸಕ ಯತ್ನಾಳ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿ, ನಾನು ವಿರೋಧ ಪಕ್ಷದಲ್ಲಿ ಇರುವುದು, ನನಗೆ ಮಾಹಿತಿ ಇರುವುದನ್ನು ಹೊರ ಹಾಕುತ್ತೇನೆ. ಅದನ್ನು ಹೇಳುವುದು ನನ್ನ ಡ್ಯೂಟಿ. ನಾನು ಹೇಳದೇ ಮತ್ತೆ ಯಾರು ಹೇಳಬೇಕು, ಎರಡೂವರೆ ಸಾವಿರ ಕೋಟಿ ಕೇಳಿದ್ದಾರೆ ಅಂತಾ ಹೇಳಿದ್ದು ಅವರೇ, ಯತ್ನಾಳ ಅವರಿಗೆ ಕೇಳಿ. ನೀನೆ ಹೇಳಿದಿಯಲ್ಲಪ್ಪಾ ಹಣ ಕೊಡು ಅಂತಾ ನಿನಗೆ ಕೇಳಿದವರು ಯಾರು? ಕಳು​ಹಿ​ಸಿದವರು ಯಾರು ಹಣ ಕೊಟ್ಟಮಂತ್ರಿಯಾದವರು ಯಾರು? ಅಂತಾ ಯತ್ನಾಳಗೆ ಕೇಳಿ ಎಂದು ಮಾಧ್ಯಮದವರಿಗೆ ತಿಳಿಸಿದರು.

ಕುಮಾರಸ್ವಾಮಿ ಬಿಟ್ಹಾಕಿ ಬೇರೆ ಇದ್ದರೆ ಹೇಳಿ. ನಾನು ಕುಮಾರಸ್ವಾಮಿ ಹೇಳಿಕೆ ವಿಚಾರದ ಕುರಿತು ಪ್ರತಿಕ್ರಿಯೆ ನೀಡುವುದಿಲ್ಲ. ಬೇರೆ ಏನಾದರೂ ಇದ್ದರೆ ಕೇಳಿ. ಸುಳ್ಳು ಹೇಳುವವರ ಹೇಳಿಕೆಗೆ ಪ್ರತಿಕ್ರಿಯಿಸಲ್ಲ ಎಂದರು.

ದಿಢೀರ್ ಯುಟರ್ನ್, ಫೋನ್‌ಗೆ ಬೆದರಿದ್ರಾ ಬಸನಗೌಡ ಪಾಟೀಲ್ ಯತ್ನಾಳ್?

ಪಿಎಸ್‌ಐ ಹಗರಣದ ಕುರಿತು ಮಾತನಾಡಿದರೆ ನೋಟಿಸ್‌ ನೀಡುತ್ತಿರುವ ವಿಚಾರ ಉತ್ತರಿಸಿದ ಅವರು, ಮಾಹಿತಿ ಕೊಟ್ಟರೆ ನೋಟಿಸ್‌ ಕೊಡುವುದು ಕಾನೂನು ಬಾಹಿರ. ನಾನು ವಕೀಲರಾಗಿದ್ದವನು. ಕಾನೂನು ಆ ರೀತಿ ಹೇಳಲ್ಲ, ತನಿಖೆಯನ್ನು ಪೊಲೀಸರೇ ಮಾಡಲಿ. ಆದರೆ, ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ನಡೆಯಲಿ ಎಂದರು. ಪೊಲೀಸ್‌ ಅಧಿಕಾರಿಗಳು ಅರೆಸ್ಟ್‌ ಆಗಿದ್ದಾರೆ, ರಾಜಕಾರಣಿಗಳು ಹಾಗೂ ಅವರ ಕುಟುಂಬಸ್ಥರು ಭಾಗಿಯಾಗಿರುವುದರಿಂದ ಸಿಐಡಿ ಮೇಲೆ ಪ್ರಭಾವ ಬೀರುತ್ತಾರೆ ಎಂದ​ರು.

ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಖಡಕ್ ಮಾತು, ಸಂಕಷ್ಟಕ್ಕೆ ಸಿಲುಕಿದ ಯತ್ನಾಳ್

ಅಶ್ವತ್ಥ ನಾರಾಯಣ್ ಸಂಬಂಧಿಕ ಒಬ್ಬ ಆಯ್ಕೆ ಆಗಿದ್ದ, ಪೊಲೀಸರು ನೋಟಿಸ್‌ ಕೊಟ್ಟು ವಿಚಾರಣೆಗೆ ಕರೆದಿದ್ದರು. ಅವನನ್ನ ನಂತರ ಬಿಟ್ಟು ಬಿಟ್ರಲ್ಲಾ ಯಾಕೆ? ಅಶ್ವತ್ಥ ನಾರಾಯಣ ಬಿಡುವಂತೆ ಪೊಲೀಸರ ಮೇಲೆ ಒತ್ತಡ ಹೇರಿರಬೇಕಲ್ವಾ? ನನ್ನ ಪ್ರಕಾರ ಈ ಹಗರಣದಲ್ಲಿ ಸರ್ಕಾರ ಹಾಗೂ ಸಚಿವರು ಇನ್ವಾಲ್ಮೆಂಟ್‌ ಇಲ್ಲದೇ ಈ ರೀತಿ ಕೃತ್ಯ ನಡೆಯಲು ಸಾಧ್ಯವಿಲ್ಲ. ಪೊಲೀಸರು ರಾಜಕಾರಣಿಗಳ ಜತೆಗೆ ಬಾಂಧವ್ಯ ಇಟ್ಟುಕೊಂಡೇ ಮಾಡಿದ್ದು ಇದು ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅಧಿವೇಶನ ವೇಳೆ ಹಳೆಯ ಬೇಡಿಕೆಗಳ ಹೊಸ ಕೂಗು!
ಸದನದಲ್ಲಿ ಆಡಳಿತ, ವಿಪಕ್ಷ ಭಾರೀ ಕದನ ಸಂಭವ!