
ಬಿಹಾರದ ಜನತೆ ಬದಲಾವಣೆ ಬಯಸುತ್ತಿದ್ದಾರೆ ಎಂಬುದರ ಪ್ರತೀಕ ಇದು. ನಾನು ಗೆದ್ದಿದ್ದೇನೆ ಎಂದು ರಾತ್ರೋರಾತ್ರಿ ಬಂಕೀಪುರ ಕ್ಷೇತ್ರವು ಬೆಂಗಳೂರಾಗಿ ಬದಲಾವಣೆ ಆಗದು. ಮುಂದಿನ 3 ತಿಂಗಳಲ್ಲಿ ಬದಲಾವಣೆ ಕಾಣುವಂತೆ ಮಾಡುತ್ತೇನೆ.
- ಪ್ರಶಾಂತ್ ಕಿಶೋರ್, ಬಂಕೀಪುರ ಶಾಸಕ
ಪಟನಾ (ಆ.4): ಅಚ್ಚರಿಯ ಬೆಳವಣಿಗೆಯಲ್ಲಿ ಬಿಹಾರದ ಬಂಕೀಪುರ ವಿಧಾನಸಭಾ ಉಪಚುನಾವಣೆ(Bankipur assembly by-election in Bihar)ಯಲ್ಲಿ ಚುನಾವಣಾ ರಣತಂತ್ರಗಾರ, ಜನ ಸುರಾಜ್ ಪಕ್ಷದ ಅಧ್ಯಕ್ಷ ಪ್ರಶಾಂತ್ ಕಿಶೋರ್(Prashant Kishor) ಬಿಜೆಪಿಯ ಎದುರಾಳಿ ವಿರುದ್ಧ 19000 ಮತಗಳ ಭರ್ಜರಿ ಗೆಲುವು ಸಾಧಿಸಿ ವಿಧಾನಸಭೆ ಪ್ರವೇಶಿಸಿದ್ದಾರೆ. ವಿಶೇಷವೆಂದರೆ, ಕೆಲ ತಿಂಗಳ ಹಿಂದಷ್ಟೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ನಿತಿನ್ ನವೀನ್(Nitin Nabin) ಸತತ 20 ವರ್ಷಗಳಿಂದ ಗೆಲ್ಲುತ್ತಾ ಬಂದಿದ್ದ ಕ್ಷೇತ್ರ ಇದೀಗ ಪಕ್ಷದ ಕೈತಪ್ಪಿದ್ದು ಕಮಲದ ಪಕ್ಷಕ್ಕೆ ಇರುಸುಮುರಸು ಉಂಟಾಗಿದೆ. ಜೊತೆಗೆ 35 ವರ್ಷಗಳ ಬಳಿಕ ಕ್ಷೇತ್ರ ಬಿಜೆಪಿ ಕೈತಪ್ಪಿದಂತೆ ಆಗಿದೆ.
ರಾಜ್ಯಸಭೆಗೆ ಆಯ್ಕೆಯಾದ ನಿತಿನ್ ನವೀನ್ ರಾಜೀನಾಮೆಯಿಂದ ತೆರವಾಗಿದ್ದ ಬಂಕೀಪುರ ಕ್ಷೇತ್ರಕ್ಕೆ ಜು.29ರಂದು ನಡೆದಿದ್ದ ಉಪಚುನಾವಣೆಯ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಪ್ರಶಾಂತ್ ಕಿಶೋರ್ 6415 ಮತಗಳನ್ನು ಪಡೆದರೆ, ಸಮೀಪದ ಪ್ರತಿಸ್ಪರ್ಧಿ, ಬಿಜೆಪಿಯ ನೀರಜ್ ಕುಮಾರ್ 44827 ಮತಗಳನ್ನು ಗಳಿಸಿದರು. ಈ ಮೂಲಕ ಪ್ರಶಾಂತ್ 19324 ಮತಗಳ ಅಂತರದ ಗೆಲುವು ಸಾಧಿಸಿದರು. ಈ ಬಾರಿ ಕ್ಷೇತ್ರದಲ್ಲಿ ಕೇವಲ ಶೇ.33ರಷ್ಟು ಮಾತ್ರವೇ ಮತ ಚಲಾವಣೆಯಾಗಿತ್ತು.
2024ರ ಅ.2ರಂದು ಜನ ಸುರಾಜ್ ಪಕ್ಷ ಸ್ಥಾಪನೆಯಾಗಿತ್ತು. ಕಳೆದ ವರ್ಷದ ಬಿಹಾರ ಚುನಾವಣೆಯಲ್ಲಿ ಪಕ್ಷ 238 ಕಡೆ ಸ್ಪರ್ಧಿಸಿದರೂ ಒಂದೂ ಸ್ಥಾನ ಗೆಲ್ಲಲಾಗದೆ ಹೀನಾಯವಾಗಿ ಸೋಲು ಕಂಡಿತ್ತು. ಪ್ರಶಾಂತ್ ಕಿಶೋರ್ ಸ್ಪರ್ಧಿಸಿರಲಿಲ್ಲ. ಈ ನಡುವೆ ನಿತಿನ್ ನವೀನ್ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಕಣಕ್ಕೆ ಇಳಿಯುವ ಮೂಲಕ ಮೊದಲ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದ ಚುನಾವಣಾ ರಣತಂತ್ರಗಾರನಿಗೆ ಮೊದಲ ಅವಕಾಶದಲ್ಲೇ ಜಯ ಸಿಕ್ಕಿದೆ.
ಗೆಲುವಿನ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿದ ಕಿಶೋರ್, ‘ಇದು ಬಿಹಾರದ ಜನತೆ ಬದಲಾವಣೆ ಬಯಸುತ್ತಿದ್ದಾರೆ ಎಂಬುದರ ಪ್ರತೀಕ. ಜೊತೆಗೆ ರಾಜ್ಯದ ಭ್ರಷ್ಟ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರನ್ನು ಬದಲಿಸಬೇಕು ಎಂದು ಪ್ರಧಾನಿ ಮೋದಿ ಅವರಿಗೆ ನೀಡಿದ ಸಂದೇಶವೂ ಹೌದು. ಬಿಜೆಪಿ ಮತ್ತು ಆರ್‌ಜೆಡಿಯಿಂದ ಅತೃಪ್ತರಾದವರು ನೀಡಿದ ಮತಗಳಿಂದ ನಾನು ಗೆಲುವು ಸಾಧಿಸಿದ್ದೇನೆ. ಆದರೆ ನಾನು ಗೆದ್ದಿದ್ದೇನೆ ಎಂದು ರಾತ್ರೋರಾತ್ರಿ ಬಂಕೀಪುರ ಬೆಂಗಳೂರಾಗಿ ಬದಲಾವಣೆ ಆಗದು. ಮುಂದಿನ 3 ತಿಂಗಳಲ್ಲಿ ಬದಲಾವಣೆ ಕಾಣುವಂತೆ ಮಾಡುತ್ತೇನೆ’ ಎಂದು ಹೇಳಿದ್ದಾರೆ.
ಮಧ್ಯಪ್ರದೇಶದ ದತಿಯಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನ ಘನಶ್ಯಾಮ್ ಸಿಂಗ್ ಅವರು ಬಿಜೆಪಿಯ ಅಶುತೋಷ್ ತಿವಾರಿ ಅವರು 6016 ಮತಗಳ ಅಂತರದಿಂದ ಸೋಲಿಸಿದರು. ಹಾಲಿ ಕಾಂಗ್ರೆಸ್ ಶಾಸಕ ರಾಜೇಂದ್ರ ಭಾರ್ತಿ ಅವರು ವಂಚನೆ ಕೇಸಲ್ಲಿ 3 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿ ಸ್ಥಾನ ಕಳೆದುಕೊಂಡ ಕಾರಣ ಉಪಚುನಾವಣೆ ನಡೆದಿತ್ತು.
ಇನ್ನು ಗುಜರಾತ್‌ನ ಮಂಜಾಲ್‌ಪುರ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯ ಸತೀಶ್ ಗೋವಿಂದಭಾಯ್ ಅವರು ಕಾಂಗ್ರೆಸ್‌ನ ಭಿಕಾಭಾಯ್ ರಾಬರಿ ಅವರನ್ನು 30630 ಮತಗಳ ಅಂತರದಿಂದ ಸೋಲಿಸಿದರು
- ಸ್ವತಃ ಪ್ರಶಾಂತ್ ಕಿಶೋರ್ ವರ್ಚಸ್ಸು. ಕಣಕ್ಕೆ ಇಳಿಯಲು ನಡೆಸಿದ್ದ ಪೂರ್ವ ಸಿದ್ಧತೆ
- ನಿತಿನ್ ನವೀನ್ 2006ರಿಂದ ಗೆಲ್ಲುತ್ತಾ ಬಂದಿದ್ದ ಕ್ಷೇತ್ರದಲ್ಲಿ ಪ್ರಬಲರಲ್ಲದ ನೀರಜ್ ಕುಮಾರ್ ಬಿಜೆಪಿ ಅಭ್ಯರ್ಥಿಯಾಗಿದ್ದು
- ಇತರರಿಗೆ ಹೋಲಿಸಿದರೆ ಪ್ರಶಾಂತ್ ಕಿಶೋರ್ ಗೆಲುವಿಗೆ ಹೆಚ್ಚು ಅರ್ಹ ಎಂಬ ಕುರಿತು ಸ್ಥಳೀಯ ಮತದಾರರ ನಿಲುವು
- ಮೇಲ್ವರ್ಗದ ಪೈಕಿ ಕಾಯಸ್ಥ ಸಮುದಾಯ ಬಿಜೆಪಿಗೆ ಮತ ಹಾಕಿದರೆ, ಉಳಿದ ಮೇಲ್ವರ್ಗ, ಒಬಿಸಿ ಮತ ಪ್ರಶಾಂತ್‌ಗೆ
- ಬಿಜೆಪಿ ಅಭ್ಯರ್ಥಿ ಸೋಲಿಸುವ ಸಾಮರ್ಥ್ಯ ಇದೆ ಎಂದು ಮನಗಂಡು ಆರ್‌ಜೆಡಿಯ ಯಾದವ, ಮುಸ್ಲಿಂ ಮತ ಪ್ರಶಾಂತ್‌ಗೆ
- ಚುನಾವಣೆಯಲ್ಲಿ ಪ್ರಶಾಂತ್ ಉದ್ಯೋಗ, ನಾಗರಿಕ ಸಮಸ್ಯೆ, ಶಿಕ್ಷಣದಂತಹ ನಿರ್ದಿಷ್ಟ ವಿಷಯ ಆಧರಿತ ಪ್ರಚಾರ ನಡೆಸಿದರು
- ಬಿಜೆಪಿಯಂತೆ ದೊಡ್ಡ ದೊಡ್ಡ ಪ್ರಚಾರ ಸಭೆಗೆ ಮೊಹಲ್ಲಾ ಸಭೆ ನಡೆಸಿ ಜನರ ಗಮನ ಸೆಳೆಯುವ ಯತ್ನ ಮಾಡಿದರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.