ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಲು ಸೂಚನೆ ಇದೆ. ಆದರೆ, ಅಂತಿಮವಾಗಿ ಈ ಕುರಿತು ಹೈಕಮಾಂಡ್ ತೀರ್ಮಾನಿಸಲಿದೆ ಎಂದು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ತಿಳಿಸಿದ್ದಾರೆ.
ನವದೆಹಲಿ (ಜೂ.22): ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಲು ಸೂಚನೆ ಇದೆ. ಆದರೆ, ಅಂತಿಮವಾಗಿ ಈ ಕುರಿತು ಹೈಕಮಾಂಡ್ ತೀರ್ಮಾನಿಸಲಿದೆ ಎಂದು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ತಿಳಿಸಿದ್ದಾರೆ. ದೆಹಲಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಪಕ್ಷದ ವರಿಷ್ಠರ ಭೇಟಿಗಾಗಿ ದೆಹಲಿಗೆ ಬಂದಿದ್ದೆ. ಕೆಲವು ಪ್ರಮುಖರನ್ನು ಭೇಟಿ ಮಾಡಿದ್ದೇನೆ. ಲೋಕಸಭೆ ಚುನಾವಣೆ ಬಗ್ಗೆಯೂ ಚರ್ಚೆ ಮಾಡಿದ್ದೇನೆ. ಬೆಂಗಳೂರು ಗ್ರಾಮಾಂತರಕ್ಕೆ ಅಭ್ಯರ್ಥಿಯಾಗುವ ಸೂಚನೆ ಸಿಕ್ಕಿದೆ ಎಂದರು.
ರಾಜಕೀಯ ಬೇಸರ ತರಿಸಿದೆ ಎಂಬ ಸಂಸದ ಡಿ.ಕೆ.ಸುರೇಶ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಅವರು ಯಾಕೆ ವೈರಾಗ್ಯದ ಮಾತು ಆಡುತ್ತಿದ್ದಾರೋ ಗೊತ್ತಿಲ್ಲ. ಅವರ ಹೇಳಿಕೆ ಹಿಂದೆ ಗೂಡಾರ್ಥ ಇದೆ. ಅವರ ಅಣ್ಣನನ್ನು ಸಿಎಂ ಮಾಡಲು ಪ್ರಯತ್ನಿಸಿರಬೇಕು. ಇಲ್ಲವೇ, ದೆಹಲಿಗಿಂತ ಕರ್ನಾಟಕದ ರಾಜಕೀಯದಲ್ಲಿ ಸಕ್ರಿಯವಾಗಿರಲು ನಿರ್ಧರಿಸಬೇಕು. ಅವರು ಸುಲಭವಾಗಿ ರಾಜಕೀಯದಿಂದ ಹಿಂದೆ ಸರಿಯಲ್ಲ ಎನಿಸುತ್ತದೆ ಎಂದರು.
ಜು.3ರಿಂದ 10 ದಿನ ವಿಧಾನಸಭೆ ಅಧಿವೇಶನ: ಜು.7ಕ್ಕೆ ಬಜೆಟ್ ಮಂಡನೆ
ಬಿಜೆಪಿ ಸೋಲಿಗೆ ನಾಯಕರು ಹೊಂದಾಣಿಕೆ ಕಾರಣ-ಯೋಗಿ: ಹೊಂದಾಣಿಕೆ ರಾಜಕೀಯ ಕುರಿತು ಪ್ರತಿಕ್ರಿಯಿಸಿ, ವಿಧಾನಸಭೆ ಚುನಾವಣೆಯಲ್ಲಿ ಹಿರಿಯ ನಾಯಕರ ಹೊಂದಾಣಿಕೆ ಮುಗಿದ ಕಥೆ. ಈಗ ಆ ಬಗ್ಗೆ ಮಾತನಾಡಿದರೆ ನಾವು ಬೆಂಕಿ ಹಚ್ಚಿದಂತೆ. ನಮ್ಮ ಹಿರಿಯ ನಾಯಕರು ಹೊಂದಾಣಿಕೆ ಮಾಡಿಕೊಂಡಿರುವುದು ನಿಜ. ನನಗೂ ವೈಯಕ್ತಿಕವಾಗಿ ಹೀಗೆ ಅನಿಸಿದೆ. ಅದಕ್ಕೂ ಮಿಗಿಲಾಗಿ, ಬಿಜೆಪಿ ಅವಧಿಯಲ್ಲಿ ಮಂತ್ರಿಮಂಡಲ ವಿಸ್ತರಣೆ ಮಾಡದಿರುವುದು, ನಮ್ಮ ಆಡಳಿತ ವ್ಯವಸ್ಥೆ ಸರಿಯಿಲ್ಲದಿರುವುದು, ಕಾಂಗ್ರೆಸ್‌ಗೆ ಠಕ್ಕರ್ ಕೊಡದಿರುವುದು ಬಿಜೆಪಿ ಸೋಲಿಗೆ ಕಾರಣ ಎಂದು ವಿಶ್ಲೇಷಿಸಿದರು.
ಗೃಹಜ್ಯೋತಿ ನೋಂದಣಿಗೆ ಇಂದಿನಿಂದ 2000 ಸೇವಾ ಕೇಂದ್ರ: 4 ದಿನದಲ್ಲಿ 12.51 ಲಕ್ಷ ನೋಂದಣಿ
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಕುರಿತು ಪ್ರತಿಕ್ರಿಯಿಸಿ, ಈ ಬಗ್ಗೆ ಪಕ್ಷ ತೀರ್ಮಾನ ಮಾಡಲಿದೆ. ಹಳೆ ಮೈಸೂರು ಭಾಗದಲ್ಲಿ ಬಿಜೆಪಿಗೂ ಮತ ಇದೆ. ಜೆಡಿಎಸ್-ಬಿಜೆಪಿ ಹೋರಾಟದಿಂದ ಮೂರನೆಯವರಿಗೆ ಲಾಭವಾಗಿದೆ ಎನ್ನುವ ಮೂಲಕ ಬಿಜೆಪಿ-ಜೆಡಿಎಸ್ ಮೈತ್ರಿಗೆ ಪರೋಕ್ಷ ಬೆಂಬಲ ಸೂಚಿಸಿದರು.