ಶ್ರೀರಾಮುಲು ಸೋಲಿಸಿದ ನಾಗೇಂದ್ರಗೆ ಒಲಿದ ಮಂತ್ರಿ ಪಟ್ಟ..!

By Kannadaprabha NewsFirst Published May 28, 2023, 4:00 AM IST
Highlights

ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸತತ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಗೊಂಡಿರುವ ಸಂಡೂರಿನ ಶಾಸಕ ಈ. ತುಕಾರಾಂ ಅವರಿಗೆ ಈ ಬಾರಿಯ ಸಚಿವ ಸಂಪುಟದಲ್ಲಿ ಸ್ಥಾನ ಸಿಕ್ಕಿಲ್ಲ. ನಾಗೇಂದ್ರ ಅವರಿಗೆ ಸಚಿವ ಸ್ಥಾನಕ್ಕೆ ಪರಿಗಣಿಸಿದ್ದರಿಂದ ತುಕಾರಾಂ ಅವರಿಗೆ ಮಂತ್ರಿ ಪಟ್ಟಕೈ ತಪ್ಪಿದೆ.

ಕೆ.ಎಂ. ಮಂಜುನಾಥ್‌

ಬಳ್ಳಾರಿ(ಮೇ.28):  ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕ ಬಿ. ನಾಗೇಂದ್ರ ಅವರು ಬೆಂಗಳೂರಿನಲ್ಲಿ ಶನಿವಾರ ಜರುಗುವ ಸಚಿವ ಸಂಪುಟ ವಿಸ್ತರಣೆ ಸಮಾರಂಭದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದು, ಸಾವಿರಾರು ಅಭಿಮಾನಿಗಳೂ ಪಾಲ್ಗೊಂಡಿದ್ದರು.

ಬಳ್ಳಾರಿ ಜಿಲ್ಲೆಯಿಂದ 20ಕ್ಕೂ ಹೆಚ್ಚು ಖಾಸಗಿ ಬಸ್‌ಗಳು, ಇತರೆ ವಾಹನಗಳ ಮೂಲಕ ನಾಗೇಂದ್ರ ಬೆಂಬಲಿಗರು ಬೆಂಗಳೂರು ತಲುಪಿದ್ದಾರೆ. ಶಾಸಕ ನಾಗೇಂದ್ರಗೆ ಈ ಬಾರಿ ಸಚಿವ ಸ್ಥಾನ ಸಿಗುವುದು ಖಚಿತ ಎಂಬುದು ಕ್ಷೇತ್ರದ ಜನರಿಗೆ ಖಾತ್ರಿಯಿತ್ತು. ಹೀಗಾಗಿ ಸಚಿವ ಸಂಪುಟ ವಿಸ್ತರಣೆಯ ದಿನಾಂಕವನ್ನು ತೀವ್ರ ಕುತೂಹಲದಿಂದ ಎದುರು ನೋಡುತ್ತಿದ್ದ ಅಭಿಮಾನಿಗಳು ಹಾಗೂ ಬೆಂಬಲಿಗರು ದೊಡ್ಡ ಸಂಖ್ಯೆಯಲ್ಲಿ ಬೆಂಗಳೂರು ಕಡೆ ಹೆಜ್ಜೆ ಹಾಕಿದ್ದಾರೆ.
ಇತ್ತ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಜನರ ನಿರೀಕ್ಷೆಯಂತೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಂಪುಟದಲ್ಲಿ ನಾಗೇಂದ್ರಗೆ ಸ್ಥಾನ ಸಿಕ್ಕಿರುವುದು ಕ್ಷೇತ್ರದ ಜನರಿಗೆ ಸಂತಸ ಮೂಡಿದೆ.

ಕಾಂಗ್ರೆಸ್ಸಿನ ‘ಸುಳ್ಳು ಗ್ಯಾರಂಟಿ’ಯಿಂದ ಬಿಜೆಪಿಗೆ ಸೋಲು: ಹಾಲಪ್ಪ ಆಚಾರ್‌

ನಾಗೇಂದ್ರಗೆ ಸಿಕ್ಕ ಆದ್ಯತೆ:

ವಾಲ್ಮೀಕಿ ಸಮಾಜದ ಬಿಜೆಪಿಯ ವರ್ಚಸ್ಸಿನ ನಾಯಕ ಮಾಜಿ ಸಚಿವ ಬಿ. ಶ್ರೀರಾಮುಲು ವಿರುದ್ಧ ಬಿ. ನಾಗೇಂದ್ರ ಗೆಲುವು ದಾಖಲಿಸಿದ್ದೇ ಸಚಿವ ಸ್ಥಾನಕ್ಕೆ ಆದ್ಯತೆ ನೀಡಲು ಪ್ರಮುಖ ಕಾರಣ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಶ್ರೀರಾಮುಲು ಅಖಾಡಕ್ಕೆ ಇಳಿದಿದ್ದರಿಂದ ಈ ಕ್ಷೇತ್ರ ಹೈವೊಲ್ಟೇಜ್‌ ಕ್ಷೇತ್ರವಾಗಿತ್ತು. ಕೈ- ಕಮಲ ಅಭ್ಯರ್ಥಿಗಳ ಪ್ರಚಾರದ ಭರಾಟೆಯೂ ಜೋರಾಗಿತ್ತು.

ಬಳ್ಳಾರಿ ನಗರ ಹಾಗೂ ಗ್ರಾಮೀಣ ಕ್ಷೇತ್ರದ ಆಯಾ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಪ್ರಧಾನಮಂತ್ರಿ ನರೇಂದ್ರ ಮೋದಿ, ಕಾಂಗ್ರೆಸ್‌ ಅಭ್ಯರ್ಥಿ ಪರ ಪಕ್ಷದ ಯುವನಾಯಕ ರಾಹುಲ್‌ ಗಾಂಧಿ ಅವರು ಬಳ್ಳಾರಿಗೆ ಬಂದು ಪ್ರಚಾರ ಕೈಗೊಂಡಿದ್ದರು. ಈ ಎಲ್ಲ ಬೆಳವಣಿಗೆ ನಡುವೆ ಕ್ಷೇತ್ರದಲ್ಲಾಗುತ್ತಿದ್ದ ನಾನಾ ರಾಜಕೀಯ ಬೆಳವಣಿಗೆ ನೆಲೆಯಲ್ಲಿ ಇಬ್ಬರು ಅಭ್ಯರ್ಥಿಗಳು ಗೆಲುವಿನ ವಿಶ್ವಾಸದಲ್ಲಿದ್ದರು. ಶಾಸಕ ನಾಗೇಂದ್ರ ಜಾತಿವಾರು ಲೆಕ್ಕಾಚಾರದ ಮತಗಳ ಗಣನೆಯಲ್ಲಿ ಭಾರೀ ಅಂತರದ ಗೆಲುವು ದಾಖಲಿಸುವ ನಿರೀಕ್ಷೆಯಲ್ಲಿದ್ದರಲ್ಲದೆ, ಈ ಬಾರಿ ಜರುಗುವ ಹಣಬಲ- ಜನಬಲದ ನಡುವೆ ಜನಬಲಕ್ಕೆ ಜಯ ದಕ್ಕಲಿದೆ ಎಂದು ಹೇಳುತ್ತಿದ್ದರು.

ಚುನಾವಣೆ ಫಲಿತಾಂಶದಲ್ಲಿ ನಾಗೇಂದ್ರ ಹೇಳಿದಂತೆಯೇ ಶ್ರೀರಾಮುಲು ವಿರುದ್ಧ 29,300 ಮತಗಳ ಅಂತರದ ಗೆಲುವು ದಾಖಲಿಸಿದರು. ಈ ಗೆಲುವು ಶಾಸಕ ನಾಗೇಂದ್ರರ ವರ್ಚಸ್ಸು ಹೆಚ್ಚಿಸಿತಲ್ಲದೆ, ಸಚಿವ ಸಂಪುಟದಲ್ಲಿ ಆದ್ಯತೆ ಸಿಗಲು ಆಸ್ಪದವಾಯಿತು.

ಗ್ರಾಮೀಣ ಕ್ಷೇತ್ರದ ಎರಡನೇ ಸಚಿವ

ನಾಗೇಂದ್ರ ಗ್ರಾಮೀಣ ಕ್ಷೇತ್ರದಿಂದ ಸ್ಥಾನ ಪಡೆದ ಎರಡನೇ ಸಚಿವ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. 2008ರಲ್ಲಿ ಬಿ. ಶ್ರೀರಾಮುಲು ಇದೇ ಕ್ಷೇತ್ರದಿಂದ ಸ್ಪರ್ಧಿಸಿ, ಆಯ್ಕೆಯಾಗಿ ಸಚಿವರಾಗಿದ್ದರು. ಪುನರ್‌ವಿಂಗಡಣೆಯಿಂದ ಅಸ್ತಿತ್ವಕ್ಕೆ ಬಂದ ಗ್ರಾಮೀಣ ಕ್ಷೇತ್ರದಿಂದ ಮೊದಲ ಬಾರಿಗೆ ಬಿ. ಶ್ರೀರಾಮುಲು ಸ್ಪರ್ಧಿಸಿ ಗೆಲುವು ದಾಖಲಿಸಿದ್ದರು. 2013ರ ಚುನಾವಣೆಯಲ್ಲಿ ಬಿ. ಶ್ರೀರಾಮುಲು ಬಿಎಸ್ಸಾರ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದರು. 2018ರ ಚುನಾವಣೆಯಲ್ಲಿ ನಾಗೇಂದ್ರ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ ಶ್ರೀರಾಮುಲು ಹತ್ತಿರದ ಸಂಬಂಧಿ ಸಣ್ಣ ಪಕ್ಕೀರಪ್ಪರನ್ನು ಸೋಲಿಸಿ, ಶಾಸಕರಾಗಿ ಆಯ್ಕೆಗೊಂಡರು. ಈ ಬಾರಿಯ ಚುನಾವಣೆಯಲ್ಲಿ ಶ್ರೀರಾಮುಲು ಅವರನ್ನು ಭಾರೀ ಅಂತರದಿಂದ ಮಣಿಸಿದ್ದಾರೆ.

2008ರಲ್ಲಿ ಮೂವರು ಸಚಿವರು:

2008ರಲ್ಲಿ ಅಸ್ತಿತ್ವಕ್ಕೆ ಬಂದ ಬಿಜೆಪಿ ಸರ್ಕಾರದಲ್ಲಿ ಬಳ್ಳಾರಿ ಜಿಲ್ಲೆಯ ಮೂವರು ಸಚಿವ ಸ್ಥಾನ ದಕ್ಕಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಗಾಲಿ ಜನಾರ್ದನ ರೆಡ್ಡಿ ಪ್ರವಾಸೋದ್ಯಮ, ಬಿ. ಶ್ರೀರಾಮುಲು ಆರೋಗ್ಯ ಹಾಗೂ ಕರುಣಾಕರ ರೆಡ್ಡಿ ಕಂದಾಯ ಸಚಿವರಾಗಿದ್ದರು. ಜನಾರ್ದನ ರೆಡ್ಡಿ ಸಹೋದರ ಜಿ. ಸೋಮಶೇಖರ ರೆಡ್ಡಿ ಕೆಎಂಎಫ್‌ ಅಧ್ಯಕ್ಷರಾಗಿದ್ದರು.

ಗೆಲುವಿನ ಹರಕೆ ತೀರಿಸಿದ ಶಾಸಕ ನಾಗೇಂದ್ರ: ರಾಜಸ್ಥಾನದ ಅಜ್ಮೀರ ದರ್ಗಾಕ್ಕೆ ಭೇಟಿ

ತುಕಾರಾಂಗೆ ನಿರಾಸೆ

ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸತತ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಗೊಂಡಿರುವ ಸಂಡೂರಿನ ಶಾಸಕ ಈ. ತುಕಾರಾಂ ಅವರಿಗೆ ಈ ಬಾರಿಯ ಸಚಿವ ಸಂಪುಟದಲ್ಲಿ ಸ್ಥಾನ ಸಿಕ್ಕಿಲ್ಲ. ನಾಗೇಂದ್ರ ಅವರಿಗೆ ಸಚಿವ ಸ್ಥಾನಕ್ಕೆ ಪರಿಗಣಿಸಿದ್ದರಿಂದ

ತುಕಾರಾಂ ಅವರಿಗೆ ಮಂತ್ರಿ ಪಟ್ಟಕೈ ತಪ್ಪಿದೆ.

2008ರಲ್ಲಿ ಸಂಡೂರು ಹೊರತುಪಡಿಸಿ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ದಾಖಲಿಸಿತ್ತು. ಆದರೆ, ಸಂಡೂರು ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ಸಿನ ತುಕಾರಾಂ ಗೆಲುವು ದಾಖಲಿಸಿ, ಸಂಡೂರು ಕಾಂಗ್ರೆಸ್‌ ಭದ್ರಕೋಟೆ ಎಂದು ನಿರೂಪಿಸಿದ್ದರು. ಈ ಬಾರಿಯ ಸಚಿವ ಸಂಪುಟದಲ್ಲಿ ಸ್ಥಾನ ಸಿಗಬಹುದು ಎಂದೇ ನಿರೀಕ್ಷಿಸಲಾಗಿತ್ತು. ಕೊನೆ ಗಳಿಗೆಯಲ್ಲಿ ಕೈ ತಪ್ಪಿತು.

click me!