
ಬಳ್ಳಾರಿ (ಡಿ.2): ಗಣಿ ನಾಡು ಬಳ್ಳಾರಿಯಲ್ಲಿ ವಾಲ್ಮೀಕಿ ಪುತ್ಥಳಿ ಅನಾವರಣ, ಬ್ಯಾನರ್ ಕಟ್ಟುವ ವಿಚಾರಕ್ಕಾಗಿ ನಡೆದ ಹೈಡ್ರಾಮಾ ಹಾಗೂ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ, ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕ ಬಿ ನಾಗೇಂದ್ರ ಬಿಜೆಪಿಯ ವಿರುದ್ಧ ಕೆಂಡಕಾರಿದರು.
ಬಳ್ಳಾರಿ ಗಲಾಟೆ ವಿಚಾರವಾಗಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಳ್ಳಾರಿಯನ್ನು ಮತ್ತೊಮ್ಮೆ ರಿಪಬ್ಲಿಕ್ ಆಫ್ ಬಳ್ಳಾರಿ ಮಾಡಲು ಬಿಜೆಪಿ ಸಂಚು ರೂಪಿಸಿದೆ ಎಂದು ಗಂಭೀರ ಆರೋಪ ಮಾಡಿದರು.
ವಾಲ್ಮೀಕಿ ಪುತ್ಥಳಿ ಅನಾವರಣದ ಸಂಭ್ರಮದ ನಡುವೆಯೇ ರಾಜಶೇಖರ ಎಂಬ ಯುವಕ ಪ್ರಾಣ ಕಳೆದುಕೊಂಡಿರುವುದು ಅತ್ಯಂತ ದುಃಖಕರ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದ ಅವರು, ನಾರಾ ಭರತ್ ರೆಡ್ಡಿ ಅತ್ಯಂತ ಭಕ್ತಿಯಿಂದ 1.5 ಕೋಟಿ ವೆಚ್ಚದಲ್ಲಿ ವಾಲ್ಮೀಕಿ ಪುತ್ಥಳಿ ನಿರ್ಮಿಸಿದ್ದರು. ಆದರೆ, ಒಬ್ಬ ಯುವಕನ ಪ್ರಾಣ ಹೋಗಿರುವುದರಿಂದ, ಸೂತಕದ ಛಾಯೆಯಲ್ಲಿ ಕಾರ್ಯಕ್ರಮ ಮಾಡುವುದು ಬೇಡ ಎಂದು ಸಿಎಂ ಸೂಚಿಸಿದ್ದಾರೆ. ಹೀಗಾಗಿ ನಾಳೆಯ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಮುಂದೂಡುತ್ತಿದ್ದೇವೆ ಎಂದರು.
ಬಿಜೆಪಿ ನಾಯಕರು ದೊಣ್ಣೆ, ಕಲ್ಲುಗಳನ್ನು ಹಿಡಿದುಕೊಂಡು ಓಡಾಡುತ್ತಾ ಶಾಂತಿ ಕದಡುತ್ತಿದ್ದಾರೆ ಎಂದು ಕಿಡಿಕಾರಿದ ನಾಗೇಂದ್ರ, ಬಿಜೆಪಿಯವರು ವಿನಾಕಾರಣ ಕಾಲು ಕೆರೆದು ಜಗಳ ಮಾಡುತ್ತಿದ್ದಾರೆ. ಈಗಾಗಲೇ ಬಳ್ಳಾರಿಯನ್ನು ಬಿಹಾರವನ್ನಾಗಿ ಮಾಡಿದ್ದಾರೆ. ಅಭಿವೃದ್ಧಿಯನ್ನು ಸಹಿಸಲಾಗದೆ ಯುವ ನಾಯಕ ಭರತ್ ರೆಡ್ಡಿ ಅವರಿಗೆ ಕಳಂಕ ತರಲು ವ್ಯವಸ್ಥಿತ ಪಿತೂರಿ ನಡೆಸುತ್ತಿದ್ದಾರೆ. ಭಗವಂತ ಇವರಿಗೆ ಒಳ್ಳೆಯದನ್ನು ಮಾಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು..
ಎರಡು ದಿನಗಳ ಹಿಂದೆ ಗಲಾಟೆಗೆ ಶ್ರೀರಾಮುಲುರಿಂದ ಪ್ರಚೋದನೆ
ಬಳ್ಳಾರಿ ಗಲಾಟೆಗೆ ಎರಡು ದಿನಗಳ ಹಿಂದೆಯೇ ಶ್ರೀರಾಮುಲು ಪ್ರಚೋದನೆ ನೀಡಿದ್ದರು, ಎಂದು ನೇರ ಆರೋಪ ಮಾಡಿದ ಅವರು, ಜನಾರ್ದನ ರೆಡ್ಡಿ ವಿರುದ್ಧವೂ ವಾಗ್ದಾಳಿ ನಡೆಸಿದರು. ಬೆಳೆಯುವ ಯುವಕನ ಬಗ್ಗೆ ಜನಾರ್ದನ ರೆಡ್ಡಿ ಅವರು ಅವಹೇಳನಕಾರಿಯಾಗಿ ಮಾತನಾಡುವುದು ಅವರ ವಯಸ್ಸಿಗೆ ಶೋಭೆ ತರುವುದಿಲ್ಲ. ಅಧಾರರಹಿತ ಆರೋಪ ಮಾಡುವುದನ್ನು ಅವರು ನಿಲ್ಲಿಸಬೇಕು. ಮಹರ್ಷಿ ವಾಲ್ಮೀಕಿ ಯಾರೊಬ್ಬರ ಸ್ವತ್ತಲ್ಲ ಎಂದು ತಿರುಗೇಟು ನೀಡಿದರು.
ನಮ್ಮದು ಕಣ್ಣು ಮುಚ್ಚಿ ಕುಳಿತುಕೊಳ್ಳುವ ಸರ್ಕಾರವಲ್ಲ
ರಾಜ್ಯದಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರ ನೇತೃತ್ವದ ಸಮರ್ಥ ಸರಕಾರವಿದೆ ಎಂದು ನೆನಪಿಸಿದ ಅವರು, ನಮ್ಮದು ಕಣ್ಣು ಮುಚ್ಚಿ ಕುಳಿತುಕೊಳ್ಳುವ ಸರಕಾರವಲ್ಲ. ವ್ಯವಸ್ಥಿತವಾಗಿ ಕೊಲೆ ಮಾಡಲು ಸಂಚು ರೂಪಿಸಿದವರ ವಿರುದ್ಧ ತನಿಖೆ ನಡೆಸಿ ಶಿಕ್ಷೆ ಕೊಡಿಸುತ್ತೇವೆ. ಬಳ್ಳಾರಿಯಲ್ಲಿ ಶಾಂತಿ ಕದಡುವ ಕೆಲಸಕ್ಕೆ ನಮ್ಮ ಆಡಳಿತದಲ್ಲಿ ಅವಕಾಶವಿಲ್ಲ. ಮುಂದಿನ ಚುನಾವಣೆಯಲ್ಲಿ ಐದಕ್ಕೆ ಐದು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುವುದು ಖಚಿತ ಎಂದು ಸವಾಲು ಹಾಕಿದರು.
ಘಟನೆಯ ಹಿನ್ನೆಲೆ:
ಬಳ್ಳಾರಿಯಲ್ಲಿ 1.5 ಕೋಟಿ ರೂ. ವೆಚ್ಚದ ವಾಲ್ಮೀಕಿ ಪುತ್ಥಳಿ ಅನಾವರಣಕ್ಕೆ ಸಿದ್ಧತೆ ನಡೆದಿತ್ತು. ಈ ವೇಳೆ ಹೊಸವರ್ಷದಂದು ಬ್ಯಾನರ್ ಕಟ್ಟುವ ವಿಚಾರಕ್ಕೆ ನಡೆದ ಘರ್ಷಣೆಯಲ್ಲಿ ರಾಜಶೇಖರ ಎಂಬ ಯುವಕ ಮೃತಪಟ್ಟಿದ್ದಾನೆ. ಈ ಘಟನೆಗೆ ಬಿಜೆಪಿ ಪ್ರಚೋದನೆಯೇ ಕಾರಣ ಎಂದು ಕಾಂಗ್ರೆಸ್ ಆರೋಪಿಸಿದರೆ, ಕಾಂಗ್ರೆಸ್ಸಿಗರೇ ಬಿಹಾರ ಗೂಂಡಗಳನ್ನ ಕರೆಯಿಸಿ ನಮ್ಮನ್ನ ಹತ್ಯೆ ಮಾಡಲು ಸಂಚು ರೂಪಿಸಿದ್ದಾರೆ ಎಂದು ಶಾಸಕ ಜನಾರ್ದನ ರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ. ಈ ರಾಜಕೀಯ ಜಿದ್ದಾಜಿದ್ದಿನಿಂದಾಗಿ ಪ್ರಸ್ತುತ ಪುತ್ಥಳಿ ಅನಾವರಣ ಕಾರ್ಯಕ್ರಮವನ್ನು ಮುಂದೂಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.