ಪ್ರಾದೇಶಿಕ ಅಸಮಾನತೆ ನಿವಾರಿಸಲು ಸರ್ಕಾರ ಬದ್ಧ: ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?

Published : Mar 15, 2026, 05:39 PM IST
Siddaramaiah

ಸಾರಾಂಶ

ಗ್ಯಾರಂಟಿ ಯೋಜನೆಗಳಿಂದಾಗಿ ಅಭಿವೃದ್ಧಿಗೆ ಸರಕಾರ ಬಳಿ ಹಣವಿಲ್ಲ ಎಂದು ಬಿಜೆಪಿಯವರು ಸುಳ್ಳು ಆರೋಪ ಮಾಡುತ್ತಿದ್ದಾರೆ. ನಮ್ಮ ಸರಕಾರ ಗ್ಯಾರಂಟಿ ಹಾಗೂ ಅಭಿವೃದ್ಧಿಯನ್ನು ಸಮಾನ ಆದ್ಯತೆ ನೀಡುತ್ತಿದೆ.

ಬಾಗಲಕೋಟೆ (ಮಾ.15): ಉತ್ತರ ಕರ್ನಾಟಕದ ಪ್ರಾದೇಶಿಕ ಅಸಮಾನತೆ ನಿವಾರಿಸಲು ಸರ್ಕಾರ ಬದ್ಧವಾಗಿದ್ದು, ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುವ ಜನರ ಸರ್ಕಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಬಾಗಲಕೋಟೆ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆ ಶಂಕುಸ್ಥಾಪನೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಕೃಷ್ಣಾ ಮೇಲ್ದಂಡೆ ಯೋಜನೆ ಹಂತ 3ರ ಭೂ ಸ್ವಾಧೀನಗೊಳ್ಳುವ ಜಮೀನುಗಳಿಗೆ ಒಪ್ಪಂದದ ದರದಂತೆ ಪರಿಹಾರ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಬಾಗಲಕೋಟೆ ಸರ್ಕಾರಿ ಮೆಡಿಕಲ್ ಕಾಲೇಜು ಶಂಕುಸ್ಥಾಪನೆಯಾಗಲು ಎಚ್.ವೈ. ಮೇಟಿಯವರೇ ಕಾರಣ. ಮೆಡಿಕಲ್ ಕಾಲೇಜು ಸ್ಥಾಪಿಸಲು 2025ರ ಬಜೆಟ್ ನಲ್ಲಿ ಘೋಷಣೆಯಾಗಿದ್ದು, ಇಂದು ಶಂಕುಸ್ಥಾಪನೆಗೊಳ್ಳುತ್ತಿದೆಯೇ ಹೊರತು, ಉಪಚುನಾವಣೆಯ ಕಾರಣಕ್ಕಾಗಿ ಅಲ್ಲ ಎಂದು ಸ್ಪಷ್ಟಪಡಿಸಿದರು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ, ಅನೇಕ ಜಿಲ್ಲೆಗಳನ್ನು ಅಭಿವೃದ್ಧಿಗೊಳಿಸುವ ದಿಸೆಯಲ್ಲಿ ಹಲವು ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಮಾಡಲಾಗಿದೆ. ಪ್ರತಿ ಜಿಲ್ಲೆಗಳಲ್ಲಿ ಮೆಡಿಕಲ್ ಕಾಲೇಜು ಹಾಗೂ ಟ್ರಾಮಾ ಸೆಂಟರ್ ಸ್ಥಾಪನೆ ಉದ್ದೇಶವಿದ್ದು, ಈಗಾಗಲೇ ಸುಮಾರು 25 ಜಿಲ್ಲೆಗಳಲ್ಲಿ ಕ್ರಮ ಕೈಗೊಳ್ಳಲಾಗಿದೆ. ಮುಂದಿನ ವರ್ಷ ಇಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಗ್ಯಾರಂಟಿ, ಅಭಿವೃದ್ಧಿಗೆ ಸಮಾನ ಆದ್ಯತೆ: ಗ್ಯಾರಂಟಿ ಯೋಜನೆಗಳಿಂದಾಗಿ ಅಭಿವೃದ್ಧಿಗೆ ಸರಕಾರ ಬಳಿ ಹಣವಿಲ್ಲ ಎಂದು ಬಿಜೆಪಿಯವರು ಸುಳ್ಳು ಆರೋಪ ಮಾಡುತ್ತಿದ್ದಾರೆ. ನಮ್ಮ ಸರಕಾರ ಗ್ಯಾರಂಟಿ ಹಾಗೂ ಅಭಿವೃದ್ಧಿಯನ್ನು ಸಮಾನ ಆದ್ಯತೆ ನೀಡುತ್ತಿದೆ. ಪ್ರತಿ ವರ್ಷ ಗ್ಯಾರಂಟಿಗಳಿಗೆ ಸುಮಾರು ₹50 ಸಾವಿರ ಕೋಟಿ ವೆಚ್ಚ ಮಾಡುತ್ತಿದ್ದು, ಇದುವರೆಗೆ ₹1.22 ಲಕ್ಷ ಕೋಟಿ ವೆಚ್ಚ ಮಾಡಲಾಗಿದೆ. ಬಿಜೆಪಿಯವರು ನಾಲ್ಕು ವರ್ಷ ಅಧಿಕಾರದಲ್ಲಿದ್ದರೂ, ಬಾಗಲಕೋಟೆಯಲ್ಲಿ ಮೆಡಿಕಲ್ ಕಾಲೇಜು ಸ್ಥಾಪಿಸಲಿಲ್ಲ. ಜಾತಿ ಧರ್ಮಗಳ ಮಧ್ಯೆ ವೈಮನಸ್ಸು ತರುವುದು ಅವರ ದುರಾಲೋಚನೆಯಾಗಿದೆ ಎಂದು ಬಿಜೆಪಿ ವಿರುದ್ಧ ಟೀಕಾ ಪ್ರಹಾರ ನಡೆಸಿದರು.

ಯುಕೆಪಿ-3 ಭೂಪರಿಹಾರ ಒಂದೇ ಬಾರಿಗೆ ಪಾವತಿ: ಬಿಜೆಪಿಯವರು ತಮ್ಮ ಅವಧಿಯಲ್ಲಿ ಯುಕೆಪಿ ಯೋಜನೆಗೆ ಪರಿಹಾರ ನೀಡಲು ಆಸಕ್ತಿ ವಹಿಸಲಿಲ್ಲ. ಆದ್ದರಿಂದ ರೈತರು ಭೂಮಿ ನೀಡಲು ಮುಂದೆ ಬರಲಿಲ್ಲ. ಈಗ ರೈತರಿಗೆ ಭೂ ಪರಿಹಾರವನ್ನು ಒಂದೇ ಬಾರಿಗೆ ನೀಡಲು ಕಾಂಗ್ರೆಸ್ ಸರ್ಕಾರ ನಿರ್ಣಯಿಸಿದೆ. ಈ ಬಾರಿಯ ಬಜೆಟ್ ನಲ್ಲಿ ಯುಕೆಪಿ 3 ಹಂತದಲ್ಲಿ ಭೂಪರಿಹಾರಕ್ಕೆ ಹಣ ಮೀಸಲಿಡಲಾಗಿದ್ದು, ನಂತರವೂ ಹೆಚ್ಚಿನ ಅನುದಾನಕ್ಕೆ ವ್ಯವಸ್ಥೆಗೊಳಿಸಲಾಗುವುದು. ಸ್ವಯಂ ಪ್ರೇರಣೆಯಿಂದ ಭೂಮಿ ನೀಡುವ ರೈತರಿಗೆ ನೀರಾವರಿ ಜಮೀನಿಗೆ ₹40 ಲಕ್ಷ ಹಾಗೂ ಖುಷ್ಕಿ ಜಮೀನಿಗೆ ₹30 ಲಕ್ಷ ನೀಡಲು ಸರಕಾರದ ನಿರ್ಣಯಿಸಿದೆ. ಆದರೆ ಈ ಬಗ್ಗೆ ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ ಎಂದರು.

ರಾಜ್ಯದ ನೀರಾವರಿ ಯೋಜನೆಗಳಿಗೆ ಕೇಂದ್ರದ ಅನುಮತಿ ದೊರತಿಲ್ಲ: ಯುಕೆಪಿ ಯೋಜನೆಯ ವ್ಯಾಪ್ತಿಗೆ ಬರುವ 8 ಗ್ರಾಮಗಳಲ್ಲಿ 900 ಎಕರೆಗೆ ₹446 ಕೋಟಿ ಪರಿಹಾರ ಕೊಡಲಾಗುತ್ತಿದೆ. ಕಾಂಗ್ರೆಸ್ ಸರ್ಕಾರ ಎಂದಿಗೂ ನುಡಿದಂತೆ ನಡೆಯುತ್ತದೆ. ಕೇಂದ್ರಕ್ಕೆ ಹಲವು ಮನವಿಗಳ ನಂತರವೂ ಯುಕೆಪಿ, ಮಹಾದಾಯಿ ಸೇರಿದಂತೆ ಹಲವು ನೀರಾವರಿ ಯೋಜನೆಗೆ ಬೇಕಾದ ಅಗತ್ಯ ಅನುಮತಿ ಕೇಂದ್ರ ಸರಕಾರ ಇದುವರೆಗೆ ನೀಡಿಲ್ಲ. ಆದರೆ ನಮ್ಮ ಸರಕಾರ ಉತ್ತರ ಕರ್ನಾಟಕದ ಜನತೆಗೆ ನ್ಯಾಯ ಒದಗಿಸಲು ಪ್ರಯತ್ನಿಸಲಾಗುತ್ತಿದೆ. ಉತ್ತರ ಕರ್ನಾಟಕದ ಪ್ರಾದೇಶಿಕ ಅಸಮಾನತೆ ನಿವಾರಿಸಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದರು.

ಮೇಟಿ ಅವರ ಆತ್ಮಕ್ಮೆ ಶಾಂತಿ ಸಿಗಲಿದೆ

ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಮಾತನಾಡಿ, ಎಚ್.ವೈ.ಮೇಟಿ ಅವರ ಬಹುದಿನದ ಕನಸು ಈಡೇರಿದೆ. ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಯಾಗುತ್ತಿದ್ದು, ಇದರಿಂದ ಮೇಟಿ ಅವರ ಆತ್ಮಕ್ಮೆ ಶಾಂತಿ ಸಿಗಲಿದೆ. ಸಿಎಂ ಮತ್ತು ಡಿಸಿಎಂ ಅವರ ಕಾರ್ಯ ಸ್ಮರಣೀಯವಾಗಿದೆ. ಕೃಷ್ಣಾ ಮೇಲ್ದಂಡೆ ಯೋಜನೆಗೆ ಒಳ್ಳೆಯ ಪರಿಹಾರ ಘೋಷಣೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರು ದೀರ್ಘಾವಧಿ ಸಿಎಂ ಆಗಿ ಹೊಸ ಇತಿಹಾಸ ಬರೆದರು. ಡಿಸಿಎಂ ಡಿಕೆ ಶಿವಕುಮಾರ್‌ ಹಗಲಿರುಳು ಶ್ರಮಿಸಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರಲು ಕಾರಣವಾದರು. ರೈತರ ಪರವಾಗಿ ನಿಂತ ಇಬ್ಬರಿಗೂ ಧನ್ಯವಾದ ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಪಂಚರಾಜ್ಯ ಚುನಾವಣೆ: ಪಶ್ಚಿಮ ಬಂಗಾಳದಲ್ಲಿ 8 ಹಂತಗಳ ಬದಲು ಈ ಬಾರಿ ಕೇವಲ 2 ಹಂತಗಳಲ್ಲಿ ಮತದಾನ ಏಕೆ?
ಬಹು ನಿರೀಕ್ಷಿತ ಪಂಚರಾಜ್ಯಗಳ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆ ಮಾಡಿದ ಚುನಾವಣಾ ಆಯೋಗ