ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆ: ಗ್ಯಾರಂಟಿ ಯೋಜನೆಗಳ ನಿಲ್ಲಿಸಲು ಕಾಂಗ್ರೆಸ್‌ ಶಾಸಕರ ಒತ್ತಡ?

By Kannadaprabha News  |  First Published Jun 6, 2024, 4:40 AM IST

ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷಿತ ಸಂಖ್ಯೆ ದೊರೆಯದ ಹಿನ್ನೆಲೆಯಲ್ಲಿ ಗ್ಯಾರಂಟಿ ಯೋಜನೆಗಳ ಬಗ್ಗೆ ಮರು ಪರಿಶೀಲನೆ ನಡೆಸುವಂತೆ ಕಾಂಗ್ರೆಸ್‌ ಶಾಸಕರು ರಾಜ್ಯ ನಾಯಕತ್ವದ ಮೇಲೆ ಒತ್ತಡ ನಿರ್ಮಾಣ ಮಾಡಲು ಆರಂಭಿಸಿದ್ದಾರೆ. 


ಬೆಂಗಳೂರು (ಜೂ.06): ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷಿತ ಸಂಖ್ಯೆ ದೊರೆಯದ ಹಿನ್ನೆಲೆಯಲ್ಲಿ ಗ್ಯಾರಂಟಿ ಯೋಜನೆಗಳ ಬಗ್ಗೆ ಮರು ಪರಿಶೀಲನೆ ನಡೆಸುವಂತೆ ಕಾಂಗ್ರೆಸ್‌ ಶಾಸಕರು ರಾಜ್ಯ ನಾಯಕತ್ವದ ಮೇಲೆ ಒತ್ತಡ ನಿರ್ಮಾಣ ಮಾಡಲು ಆರಂಭಿಸಿದ್ದಾರೆ. ಕನಿಷ್ಠ 14 ಕ್ಷೇತ್ರಗಳಲ್ಲಿ ಗೆಲುವು ನಿರೀಕ್ಷಿಸಿದ್ದ ಹಾಗೂ ಗ್ಯಾರಂಟಿ ಯೋಜನೆಗಳನ್ನು ಜನ ಮೆಚ್ಚಿದ್ದರೆ ಈ ಸಂಖ್ಯೆ 20 ಮುಟ್ಟಬಹುದು ಎಂದು ಭಾವಿಸಿದ್ದ ಕಾಂಗ್ರೆಸ್ಸಿಗರಿಗೆ 9 ಕ್ಷೇತ್ರಗಳಲ್ಲಿ ಗೆದ್ದಿರುವುದು ಸಮಾಧಾನ ತಂದಿಲ್ಲ. ಅದರಲ್ಲೂ ಮಹಿಳೆಯರಿಗೆ ನೇರವಾಗಿ ಮುಟ್ಟುವಂತಹ ಭಾಗ್ಯಲಕ್ಷ್ಮೀ ಹಾಗೂ ಶಕ್ತಿ ಯೋಜನೆಗಳಿಂದಾಗಿ ಈ ಚುನಾವಣೆಯಲ್ಲಿ ಪುರುಷರಲ್ಲದಿದ್ದರೂ ಮಹಿಳೆಯರು ಪಕ್ಷದ ಪರ ನಿಲ್ಲುತ್ತಾರೆ ಎಂದು ಬಲವಾಗಿ ಕಾಂಗ್ರೆಸ್‌ ನಂಬಿತ್ತು.

ಆದರೆ, ಫಲಿತಾಂಶ ಈ ನಂಬಿಕೆಗೆ ಪೂರಕವಾಗಿಲ್ಲ. ಮಹಿಳೆಯರು ಸಹ ಕಾಂಗ್ರೆಸ್‌ ಕೈಹಿಡಿದಿಲ್ಲ ಎಂಬ ಭಾವನೆ ಕಾಂಗ್ರೆಸ್ ಪಕ್ಷದಲ್ಲಿ ಬಲವಾಗಿ ಮೂಡಿದೆ. ಇದಕ್ಕೆ ನಿರೀಕ್ಷಿಸಿದಷ್ಟು ಕ್ಷೇತ್ರದಲ್ಲಿ ಗೆಲ್ಲಲು ಸಾಧ್ಯವಾಗದೇ ಇರುವುದು ಮಾತ್ರ ಕಾರಣವಲ್ಲ. ಬೆಂಗಳೂರು ದಕ್ಷಿಣ, ಬೆಳಗಾವಿ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಉತ್ತರ ಕನ್ನಡ, ದಕ್ಷಿಣ ಕನ್ನಡ, ತುಮಕೂರು, ಮೈಸೂರು, ಚಿಕ್ಕಬಳ್ಳಾಪುರದಂತಹ ಕ್ಷೇತ್ರಗಳಲ್ಲಿ ಲಕ್ಷಕ್ಕೂ ಮೀರಿದ ಅಂತರದಲ್ಲಿ ಕಾಂಗ್ರೆಸ್‌ ಸೋಲುಂಡಿರುವುದನ್ನು ಕಾಂಗ್ರೆಸ್‌ ನಾಯಕರಿಗೆ ನಂಬಲಾಗುತ್ತಿಲ್ಲ.

Tap to resize

Latest Videos

undefined

ಹಗರಣಗಳಲ್ಲೇ ಮುಳುಗಿದ ಕಾಂಗ್ರೆಸ್ ಸರ್ಕಾರ: ಸಿ.ಪಿ.ಯೋಗೇಶ್ವರ್

ಗ್ಯಾರಂಟಿ ಯೋಜನೆಗಳಿಂದಾಗಿ ದೊಡ್ಡ ಸಂಖ್ಯೆಯ ಗೆಲುವು ದೊರೆಯದಿದ್ದರೂ ಬಹುತೇಕ ಕ್ಷೇತ್ರಗಳಲ್ಲಿ ನೇರಾನೇರ ಫೈಟ್ ಇರುತ್ತದೆ. ಯಾರೇ ಗೆದ್ದರೂ ಹತ್ತರಿಂದ ಇಪ್ಪತ್ತು ಸಾವಿರ ಅಂತರದಲ್ಲಿ ಮಾತ್ರ ಎಂದು ಭಾವಿಸಿದ್ದ ಕ್ಷೇತ್ರಗಳಲ್ಲೂ ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಾಗಿದೆ. ಉತ್ತರ ಕನ್ನಡ ಹಾಗೂ ಮಂಡ್ಯದಂತಹ ಕ್ಷೇತ್ರಗಳಲ್ಲಿ ಸುಮಾರು ಮೂರು ಲಕ್ಷದಷ್ಟು ಮತಗಳ ಅಂತರದಿಂದ ಸೋಲು ಉಂಟಾಗಿದೆ.

ಇಡೀ ರಾಜ್ಯಕ್ಕೆ ತಲುಪುವಂತಹ ಯೋಜನೆಗಳನ್ನು ನೀಡಿದರೂ ಕೇವಲ ಹೈದರಾಬಾದ್ ಕರ್ನಾಟಕ ಮಾತ್ರ ಕಾಂಗ್ರೆಸ್ ಕೈಹಿಡಿದಿದೆ. ಶಾಸಕರ ಅನುದಾನಕ್ಕೆ ಕತ್ತರಿ ಹಾಕಿ, ಅಭಿವೃದ್ಧಿ ಯೋಜನೆಗಳನ್ನು ಹತೋಟಿಯಲ್ಲಿಟ್ಟುಕೊಂಡು ಅನಗತ್ಯ ವೆಚ್ಚ ಮಾಡದೆ ಸರ್ಕಾರದ ಎಲ್ಲ ಆರ್ಥಿಕ ಸಂಪನ್ಮೂಲವನ್ನು ಗ್ಯಾರಂಟಿ ಯೋಜನೆಗಳ ಜಾರಿಗೆ ವ್ಯಯಿಸಲಾಗಿದೆ. ಅಧಿಕಾರಕ್ಕೆ ಬಂದ ಕೇವಲ ಒಂದು ವರ್ಷದಲ್ಲಿ ವಿಶ್ವದಲ್ಲಿ ಇನ್ನೆಲ್ಲೂ ಇಲ್ಲದಂತಹ ಯೋಜನೆಗಳನ್ನು ಜಾರಿ ಮಾಡಿ ದಾಖಲೆ ನಿರ್ಮಾಣ ಮಾಡಲಾಗಿದೆ.

ಲೋಕಸಭಾ ಚುನಾವಣೆಯಲ್ಲಿ ನಮ್ಮದು ಜನಬಲ, ಕಾಂಗ್ರೆಸ್‌ನದ್ದು ಹಣಬಲ: ಸಿ.ಪಿ.ಯೋಗೇಶ್ವರ್

ಇಷ್ಟಾಗಿಯೂ ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷಿತ ಸಾಧನೆ ಸಾಧ್ಯವಾಗಿಲ್ಲ ಎಂದರೆ ಗ್ಯಾರಂಟಿ ಯೋಜನೆಗಳು ಜನರ ಮನಸ್ಸು ಗೆದ್ದಿಲ್ಲ. ಹೀಗಾಗಿ ಈ ಯೋಜನೆಗಳ ಬಗ್ಗೆ ಪುನರ್‌ ಪರಿಶೀಲನೆ ನಡೆಸಬೇಕು ಎಂಬುದು ಶಾಸಕರ ಒತ್ತಡ. ಈ ಹಿನ್ನೆಲೆಯಲ್ಲಿ ಗ್ಯಾರಂಟಿ ಯೋಜನೆಗಳ ಪರಿಣಾಮವೇನಾಗಿದೆ ಎಂಬ ಬಗ್ಗೆ ಜೂನ್‌ ಎರಡು ಅಥವಾ ಮೂರನೇ ವಾರದಲ್ಲಿ ರಾಜ್ಯ ನಾಯಕತ್ವ ಸಭೆಯೊಂದನ್ನು ಆಯೋಜಿಸಲಿದೆ ಎಂದು ಮೂಲಗಳು ಹೇಳಿವೆ.

click me!