ಚುನಾವಣೆ ವೇಳೆ ಮಾತ್ರ ರಾಮಮಂದಿರದ ಚರ್ಚೆ ನಡೆಯುತ್ತಿದ್ದು, ಬಳಿಕ ರಾಮಮಂದಿರದ ಹೆಸರು ಎಲ್ಲೂ ಪ್ರಸ್ತಾಪವಾಗುವುದಿಲ್ಲ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.
ಧಾರವಾಡ (ಜ.15): ಚುನಾವಣೆ ವೇಳೆ ಮಾತ್ರ ರಾಮಮಂದಿರದ ಚರ್ಚೆ ನಡೆಯುತ್ತಿದ್ದು, ಬಳಿಕ ರಾಮಮಂದಿರದ ಹೆಸರು ಎಲ್ಲೂ ಪ್ರಸ್ತಾಪವಾಗುವುದಿಲ್ಲ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸ್ತುತ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯವಾಗಿ ರಾಮ ಮಂದಿರವನ್ನು ಬಿಜೆಪಿ ಬಳಸುತ್ತಿದೆ. ಮಾಧ್ಯಮದವರೂ ಈ ಬಗ್ಗೆಯೇ ಈಗ ಪ್ರಶ್ನೆ ಕೇಳುತ್ತಿದ್ದು, ಚುನಾವಣೆ ನಂತರ ಮಾಧ್ಯಮಗಳು ಈ ಬಗ್ಗೆ ಆಸಕ್ತಿ ತೋರುವುದಿಲ್ಲ ಎಂದರು.
ಹಿಂದಿನ ವರ್ಷ ರಾಮ ಮಂದಿರದ ಮಾತುಗಳು ಏತಕ್ಕೆ ಇರಲಿಲ್ಲ? ಕಳೆದ ಬಾರಿ ಫುಲ್ವಾಮಾ ಪ್ರಕರಣ ತಂದರು. ಈಗ ರಾಮ ಮಂದಿರ, ಹಿಂದುತ್ವ ತರುತ್ತಿದ್ದಾರೆ. ಇದನ್ನು ಬಿಟ್ಟರೆ ಬೇರೆ ಏನಾದರೂ ಇದೆಯಾ? ಮಾಧ್ಯಮದವರೂ ಕೂಡಾ ಇದನ್ನು ಪ್ರಶ್ನಿಸಬೇಕು. ನಮಗೂ ಇದರಿಂದಾಗಿ ಸುಸ್ತಾಗಿದೆ. ನಮ್ಮನ್ನು ಉಳಿಸಿ ತಮ್ಮಲ್ಲಿ ಕೈಮುಗಿಯುತ್ತೇನೆ ಎಂದು ಮಾಧ್ಯಮದವರಿಗೆ ಲಾಡ್ ಕೈ ಮುಗಿದು, ಕಳೆದ ಹತ್ತು ವರ್ಷಗಳಲ್ಲಿ ಎರಡು ಕೋಟಿ ಹಿಂದೂಗಳು ಬೇರೆ ದೇಶಕ್ಕೆ ಹೋಗಿದ್ದಾರೆ. ಅದರ ಬಗ್ಗೆ ಚರ್ಚೆ ಮಾಡೋಣವಾ?
ಜಿಡಿಪಿ ಬಗ್ಗೆ ಮಾತನಾಡಬೇಕು. ಇಂದು ಶ್ರೀಲಂಕಾ, ಬಂಗ್ಲಾ, ನೇಪಾಳ ಸೇರಿ ಮಾಲ್ಡೀವ್ಸ್ ಬಗ್ಗೆ ವ್ಯವಹಾರ ಹೇಗಿದೆ? ವಿಶ್ವಗುರು ಅಂತ ನೀವೇ ಹೇಳ್ತೀರಿ. ಇಡೀ ಏಷ್ಯಾದಲ್ಲಿ ಯಾವ ವಿಶ್ವಗುರು ಪಾಲಿಸಿ ಚೆನ್ನಾಗಿದೆ? ಚೈನಾ ದೇಶ ನಮ್ಮ ಗಡಿ ಒಳಗಡೆ ಬಂದಿದೆ ಎಂಬುದರ ಬಗ್ಗೆ ಚರ್ಚೆ ಮಾಡೋದು ಬಿಟ್ಟು ಬರೀ ರಾಮ ಮಂದಿರದ ಬಗ್ಗೆ ಪ್ರಶ್ನಿಸುವುದು ಸೂಕ್ತವಲ್ಲ ಎಂದರು.
ರಾಮ ಮಂದಿರದ ಉದ್ಘಾಟನೆಗೆ ಬರಬೇಕೆಂದು ಕೆಲವರು ಆಹ್ವಾನ ನೀಡಿದ್ದಾರೆ. ನಮ್ಮನ್ನು ಕರೆಯಲು ಇವರ್ಯಾರು? ಇಷ್ಟು ವರ್ಷ ಕರೆದಿಲ್ಲ, ಈಗ ಏಕೆ ಕರೆಯುತ್ತಿದ್ದಾರೆ? ನರೇಂದ್ರ ಮೋದಿ ಹತ್ತು ವರ್ಷಗಳಲ್ಲಿ ಎಷ್ಟು ಸಲ ರಾಮಮಂದಿರಕ್ಕೆ ಹೋಗಿದ್ದಾರೆ? ಬಿಜೆಪಿ ಕಾರ್ಯಕರ್ತರು ಹಾಗೂ ಮಾಧ್ಯಮದವರು ನೀವೆಷ್ಟು ಸರಿ ಮಂದಿರಕ್ಕೆ ಹೋಗಿದ್ದೀರಿ? ನೀವೇ ಹೋಗಿಲ್ಲ ಅಂದ ಮೇಲೆ ಬೇರೆಯವರನ್ನು ಏಕೆ ಕರಿತೀರಿ? ಇದೆಲ್ಲ ಕೇವಲ ರಾಜಕೀಯ ಲಾಭಕ್ಕೆ ಮಾತ್ರ ಎಂದು ಬಿಜೆಪಿ ಮುಖಂಡರಿಗೆ ಪ್ರಶ್ನಿಸಿದರು.
ರಾಮ ಮಂದಿರದ ಉದ್ಘಾಟನೆಗೆ ಶಂಕರಾಚಾರ್ಯ ಪೀಠದವರು ಬರೋದಿಲ್ಲ ಅಂದಿದ್ದಾರೆ. ಇದಕ್ಕೆಲ್ಲ ಕಾರಣವಾದರೂ ಏನು? ರಾಜಕೀಯ ಲಾಭಕ್ಕೆ ಹೀಗೆ ಮಾಡುತ್ತಿದ್ದಾರೆ ಎಂದು ಅವರೇ ಹೇಳಿದ್ದಾರೆ. ಮೋದಿಯವರು ರಾಮಮಂದಿರ ಪರ ಹೋರಾಟ ಮಾಡಿದ ನಿದರ್ಶನ ಇದೆಯಾ? ಎಂದು ಪ್ರಶ್ನಿಸಿದ ಲಾಡ್, ನಾವು ರಾಜಕೀಯವಾಗಿ ಎಲ್ಲ ಧರ್ಮವನ್ನು ಪಾಲಿಸುತ್ತೇವೆ. ಕಾಂಗ್ರೆಸ್ ನವರು ಹಿಂದೂ ವಿರೋಧಿ ಎಂದು ಈ ಮೂಲಕ ತೋರಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಯಶ್ ರಾವಣ ಟೆಸ್ಟ್ ಲುಕ್ ಫೋಟೋ ವೈರಲ್: ರಾಕಿಂಗ್ ಸ್ಟಾರ್ ರಾವಣ ಆಗೋದು ಕನ್ಫರ್ಮ್!
ಲಾಡ್ ಕನಸಿನಲ್ಲಿ ರಾಮ: ಇತಿಹಾಸ ನೋಡಿದರೆ ರಾಮ ಮಂದಿರ ಆರ್‌ಎಸ್ಸೆಸ್ ಹಾಗೂ ವಿಶ್ವ ಹಿಂದೂ ಪರಿಷತ್ತಿನ ಪ್ರಣಾಳಿಕೆ ಇರಲಿಲ್ಲ. 30 ವರ್ಷಗಳ ಹಿಂದೆ ಬಾಬರಿ ಮಸೀದಿ ಗಲಾಟೆ ಆಯಿತು. ಇದಾದ ಬಳಿಕವಷ್ಟೇ ರಾಮ ಮಂದಿರ ಚರ್ಚೆ ಆಗಿದೆ. ಈ ವಿಚಾರ ಎಲ್ಲರಿಗೂ ಗೊತ್ತಿದೆ. ಚುನಾವಣೆ ಗಿಮಿಕ್ ಇದು. ಮತ್ತೊಮ್ಮೆ ಅಧಿಕಾರಕ್ಕೆ ಬರಲು ರಾಮ ಮಂದಿರದ ಉದ್ಘಾಟನೆ ವಿಷಯ ಇಟ್ಟುಕೊಳ್ಳಲಾಗಿದೆ. ನನಗೆ ರಾಮ ಕನಸಿನಲ್ಲಿ ಬಂದಿದ್ದರು. ನಾನು ಎಲ್ಲರಿಗೆ ದೇವರಾಗಿದ್ದೇನೆ ಎಂದ. ಬಿಜೆಪಿಯವರು ಇದನ್ನು ರಾಜಕೀಯವಾಗಿ ಬಳಸಿಕೊಳ್ಳಬಾರದು. ನನಗೆ ಬಿದ್ದ ಕನಸಿದು ಎಂದು ಲಾಡ್ ನಸುನಗುತ್ತಾ ಹೇಳಿದರು.