ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌: ಹಾಲು ಮಾರುವ ಆಟೋ ಚಾಲಕ ಚುನಾವಣೆಗೆ ಸ್ಪರ್ಧೆ

By Kannadaprabha News  |  First Published Apr 30, 2023, 10:59 AM IST

ಹುಬ್ಬಳ್ಳಿಯ ದಯಪ್ಪಗೌಡ (ಶಿವರಾಜ) ಕಲ್ಲನಗೌಡ ಶಿವನಗೌಡ್ರ ಇಂಥ ಅಪರೂಪದ ಅಭ್ಯರ್ಥಿ. ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಬಿಜೆಪಿ ತೊರೆದು ಕಾಂಗ್ರೆಸ್‌ ಅಭ್ಯರ್ಥಿಯಾಗುತ್ತಿದ್ದಂತೆ ಇಡೀ ರಾಷ್ಟ್ರದ ಕುತೂಹಲ ಕೆರಳಿಸಿರುವ ಕ್ಷೇತ್ರವಾಗಿರುವುದು ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ ಕ್ಷೇತ್ರ. ಇಂಥ ಹೈವೋಲ್ಟೇಜ್‌ ಕ್ಷೇತ್ರದಲ್ಲೇ ಶಿವರಾಜ ‘ಉತ್ತಮ ಪ್ರಜಾಕೀಯ’ ಪಕ್ಷದಿಂದ ಕಣಕ್ಕಿಳಿದಿದ್ದಾರೆ.


ಶಿವಾನಂದ ಗೊಂಬಿ

ಹುಬ್ಬಳ್ಳಿ(ಏ.30):  ಚುನಾವಣೆ ಬಂದರೆ ಸಾಕು ಹಗಲಿರಳು ಬೆವರಿಳಿಸುವ ಅಭ್ಯರ್ಥಿಗಳು, ಜೈಕಾರ ಕೂಗುವ ಮರಿಪುಡಾರಿಗಳ ಗುಂಪು ಮಾಮೂಲಿ. ಆದರೆ ಇದಕ್ಕೆಲ್ಲ ಅಪವಾದವೆಂಬಂತೆ ಮನೆ ಮನೆಗೆ ಹಾಲು ಹಾಕುತ್ತಾ, ಆಟೋ ಚಲಾಯಿಸುತ್ತಾ, ಏಕಾಂಗಿಯಾಗಿ ಮತ ಯಾಚಿಸುವವರು ಇವರು!

Tap to resize

Latest Videos

ಹುಬ್ಬಳ್ಳಿಯ ದಯಪ್ಪಗೌಡ (ಶಿವರಾಜ) ಕಲ್ಲನಗೌಡ ಶಿವನಗೌಡ್ರ ಇಂಥ ಅಪರೂಪದ ಅಭ್ಯರ್ಥಿ. ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಬಿಜೆಪಿ ತೊರೆದು ಕಾಂಗ್ರೆಸ್‌ ಅಭ್ಯರ್ಥಿಯಾಗುತ್ತಿದ್ದಂತೆ ಇಡೀ ರಾಷ್ಟ್ರದ ಕುತೂಹಲ ಕೆರಳಿಸಿರುವ ಕ್ಷೇತ್ರವಾಗಿರುವುದು ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ ಕ್ಷೇತ್ರ. ಇಂಥ ಹೈವೋಲ್ಟೇಜ್‌ ಕ್ಷೇತ್ರದಲ್ಲೇ ಶಿವರಾಜ ‘ಉತ್ತಮ ಪ್ರಜಾಕೀಯ’ ಪಕ್ಷದಿಂದ ಕಣಕ್ಕಿಳಿದಿದ್ದಾರೆ.

ಕಂಪ್ಲಿ: ಎಲೆಕ್ಷನ್‌ ಅಖಾಡದಲ್ಲಿ ಕರ್ನಾಟಕದ ಏಕೈಕ ಮಂಗಳಮುಖಿ ಟಿ. ರಾಮಕ್ಕ..!

ಉಪ್ಪಿ ಅಭಿಮಾನಿ:

ಎಸ್ಸೆಸ್ಸೆಲ್ಸಿವರೆಗೂ ಓದಿರುವ ಶಿವರಾಜ ಶಿವನಗೌಡ್ರ, 32ರ ಹರೆಯದ ಯುವಕ. ಮೊದಲಿನಿಂದಲೂ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಿದವರೆ. ಭ್ರಷ್ಟಾಚಾರದಿಂದ ಸಮಾಜವನ್ನು ಮುಕ್ತವನ್ನಾಗಿಸಬೇಕು ಎಂಬ ಹಂಬಲ ಹೊಂದಿದವರು. ರಾಜಕೀಯ, ಸಾಮಾಜಿಕ ವ್ಯವಸ್ಥೆ ಬದಲಾಗಬೇಕೆಂದರೆ ಮೊದಲು ನಾವು ಬದಲಾಗಬೇಕೆಂಬ ಮಾತಿನಲ್ಲಿ ನಂಬಿಕೆ ಇಟ್ಟವರು. ಚಿತ್ರನಟ ಉಪೇಂದ್ರ ‘ಉತ್ತಮ ಪ್ರಜಾಕೀಯ’ ಪಕ್ಷವನ್ನು ಸ್ಥಾಪಿಸಿದಾಗಲೇ ಅದರ ಉದ್ದೇಶಗಳನ್ನು ಅರಿತು ಆ ಪಕ್ಷಕ್ಕೆ ಹೋದವರು. ಈ ಮೊದಲು ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಿದರಾಯ್ತು ಎಂದುಕೊಂಡು ನಾಮಪತ್ರ ಸಲ್ಲಿಸಿದ್ದರು. ಆದರೆ ಕೊಂಚ ತಾಂತ್ರಿಕ ತೊಂದರೆಯಿಂದಾಗಿ ಅವರ ನಾಮಪತ್ರ ತಿರಸ್ಕೃತಗೊಂಡಿತು. ಇದೀಗ ಅದೇ ಪಕ್ಷದಿಂದ ಸೆಂಟ್ರಲ್‌ ಕ್ಷೇತ್ರದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

ವೃತ್ತಿಯೇನು?:

ಬೆಳಗ್ಗೆ ಮತ್ತು ಸಂಜೆ ಮನೆ ಮನೆಗೆ ತೆರಳಿ ಹಾಲು ಕೊಟ್ಟು ಬರುತ್ತಾರೆ. ಹಾಗಂತ ಇವರದೇನು ಹೈನುಗಾರಿಕೆ ಇಲ್ಲ. ಮೊದಲು ಇತ್ತಂತೆ. ಆದರೆ ಎಮ್ಮೆ, ಹಸುಗಳಿಗೆ ಆರ್ಥಿಕ ತೊಂದರೆಯಿಂದ ಹೊಟ್ಟು, ಮೇವು ಸಕಾಲಕ್ಕೆ ಒದಗಿಸಲು ಸಾಧ್ಯವಾಗದ ಕಾರಣ ಅವುಗಳನ್ನು ಮಾರಾಟ ಮಾಡಿದ್ದಾರೆ. ಇದೀಗ ಗೌಳಿಗರ ಮನೆಗಳಿಗೆ ತೆರಳಿ ಅಲ್ಲಿಂದ ಖರೀದಿಸಿ ಗ್ರಾಹಕರಿಗೆ ಮಾರಾಟ ಮಾಡುತ್ತಾರೆ. ಪ್ರತಿನಿತ್ಯ 25 ಲೀ.ವರೆಗೂ ಹಾಲು ಮನೆ ಮನೆಗೆ ಕೊಡುತ್ತಾರೆ. ಇನ್ನು ಹಾಲು ಕೊಡುವುದು ಮುಗಿದ ಮೇಲೆ ಬಾಡಿಗೆ ಆಟೋ ಪಡೆದು ದಿನವಿಡೀ ಆಟೋ ಚಲಾಯಿಸುತ್ತಾರೆ. ಇದೇ ಇವರ ದುಡಿಮೆ. ತಾಯಿ, ಸಹೋದರಿ ಮಾತ್ರ ಇರುವ ಇವರು, ಸಹೋದರಿಯ ಮದುವೆಯಾಗಿದ್ದು, ತಾಯಿಯೊಂದಿಗೆ ಜೀವನ ಸಾಗಿಸುತ್ತಿದ್ದಾರೆ.

ಪ್ರಚಾರದ ವೈಶಿಷ್ಟ್ಯ:

ಇವರ ಪ್ರಚಾರವೂ ವೈಶಿಷ್ಟ್ಯಪೂರ್ಣವಾಗಿದೆ. ತಮ್ಮನ್ನು ಆರಿಸಿ ತಂದರೆ ಯಾವ ರೀತಿ ಕೆಲಸ ಮಾಡುತ್ತೇನೆ ಎಂದೆಲ್ಲ ಪಟ್ಟಿಮಾಡಿ ಬಾಂಡ್‌ ಮಾಡಿಸಿದ್ದಾರೆ. ಅದನ್ನು ತೋರಿಸಿ ಮತಯಾಚಿಸುತ್ತಾರೆ. ಇನ್ನು ಚುನಾವಣೆಯೆಂದೇನೂ ತಮ್ಮ ಕೆಲಸ ಬಿಟ್ಟಿಲ್ಲ. ಮನೆ ಮನೆಗೆ ಹಾಲು ಹಾಕುತ್ತಲೇ ಪ್ರಚಾರ ಮಾಡುತ್ತಾರೆ. ಜತೆಗೆ ತಮ್ಮ ಆಟೋದಲ್ಲಿ ಬರುವ ಪ್ರಯಾಣಿಕರಿಗೂ ತನ್ನ ಉದ್ದೇಶವೇನು? ತಾನೇಕೆ ಚುನಾವಣಾ ಕಣಕ್ಕಿಳಿದಿದ್ದೇನೆ? ಮತದಾರರ ಜವಾಬ್ದಾರಿಯೇನು? ಒಬ್ಬ ಜನಪ್ರತಿನಿಧಿಯ ಜವಾಬ್ದಾರಿಯೇನು? ಎಂಬ ಬಗ್ಗೆ ತಿಳಿಸುತ್ತಾ ಈ ಮೂಲಕ ಪ್ರಚಾರ ಕೈಗೊಳ್ಳುತ್ತಾರೆ.

ಚುನಾವಣಾ ರಣಾಂಗಣ: ಆದಿ ಉಡುಪಿ, ಹಿಜಾಬ್‌ ಕೇಸಿನಿಂದ ಉದ್ಭವಿಸಿದ ಬಿಜೆಪಿ ಅಭ್ಯರ್ಥಿ ಸುವರ್ಣ..!

ಈವರೆಗೂ ಕರಪತ್ರಗಳನ್ನು ಮಾಡಿಸಿಲ್ಲ. ಇನ್ನೆರಡು ದಿನಗಳಲ್ಲಿ ದುಡ್ಡು ಹೊಂದಿಸಿಕೊಂಡು ಕರಪತ್ರ ಮುದ್ರಿಸುತ್ತೇನೆ. ಚುನಾವಣೆ ಇದೆ ಎಂದು ಕೆಲಸ ಮಾತ್ರ ಬಿಡುವುದಿಲ್ಲ. ಹಾಲು ಕೊಡುವುದು, ಆಟೋ ಚಲಾಯಿಸುವ ಕೆಲಸ ಮಾಡುತ್ತಲೇ ಸದ್ದಿಲ್ಲದೆ ಪ್ರಚಾರ ಮಾಡುತ್ತೇನೆ ಎನ್ನುತ್ತಾರೆ ದಯಪ್ಪಗೌಡ.

ಭ್ರಷ್ಟಾಚಾರ ಕಡಿಮೆ ಆಗಲಿ

ಪ್ರತಿ ಕೆಲಸದಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ. ಇದು ಕಡಿಮೆಯಾಗಬೇಕೆಂದರೆ ಪ್ರತಿಯೊಬ್ಬರು ಜವಾಬ್ದಾರಿಯುತರಾಗಬೇಕು. ಇದು ನನ್ನ ಗುರಿ. ನನಗೆ ಎಷ್ಟುಜನ ಮತ ಹಾಕುತ್ತಾರೋ ಗೊತ್ತಿಲ್ಲ. ಆದರೆ ತಮ್ಮ ಜವಾಬ್ದಾರಿ ಅರಿತವರು ಖಂಡಿತ ನನಗೇ ಮತ ಚಲಾಯಿಸುತ್ತಾರೆ ಎಂಬ ನಂಬಿಕೆ ಇದೆ ಅಂತ ಉತ್ತಮ ಪ್ರಜಾಕೀಯ ಅಭ್ಯರ್ಥಿ ದಯಪ್ಪಗೌಡ (ಶಿವರಾಜ) ಕಲ್ಲನಗೌಡ ಶಿವನಗೌಡ್ರ ತಿಳಿಸಿದ್ದಾರೆ. 

click me!