
ಜನಪಯೋಗಿ ಆಡಳಿತವನ್ನು ಜನತೆ ಮರೆಯಲ್ಲ, ಜನಪಯೋಗಿ ಕೆಲಸ ಮರೆತವರನ್ನು ಜನರೂ ಮರೆಯುವುದಿಲ್ಲ. ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂಬುದಕ್ಕೆ ಚುನಾವಣೆಯೇ ಸಾಕ್ಷಿ.
ಸೋಮವಾರ ಪ್ರಕಟವಾದ 5 ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ಹಲವು ವಿಷಯದಲ್ಲಿ, ಹಲವು ಕಾರಣಕ್ಕೆ ಅತ್ಯಂತ ಮಹತ್ವದ್ದು. ಚುನಾವಣೆ ನಡೆದ 5 ರಾಜ್ಯಗಳ ಪೈಕಿ ಅಸ್ಸಾಂ ಮತ್ತು ಪುದುಚೇರಿಯಲ್ಲಿ ಹಾಲಿ ಆಡಳಿತಾರೂಢ ಪಕ್ಷಗಳು ಗೆಲುವು ಸಾಧಿಸಿದ್ದರೆ, ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಕೇರಳದಲ್ಲಿ ಹೊಸ ಪಕ್ಷಗಳಿಗೆ ಅಧಿಕಾರದ ಚುಕ್ಕಾಣಿ ಸಿಕ್ಕಿದೆ. ಇದು ಕೆಲ ರಾಜ್ಯಗಳಲ್ಲಿ ಆಡಳಿತ ಬದಲಾವಣೆಗೆ ಜನರ ಮನಸ್ಸು ಮತ್ತು ಇನ್ನು ಕೆಲ ರಾಜ್ಯಗಳಲ್ಲಿ ಅಭಿವೃದ್ಧಿ ಪರ ಜನರ ಜೈಕಾರ ಎಂಬುದನ್ನು ತೋರಿಸುತ್ತದೆ.
ಸತತ ಅಧಿಕಾರ ಸಿಕ್ಕಿದ್ದರಿಂದ ಜನಪಯೋಗಿ ಕೆಲಸಗಳಿಂದ ವಿಮುಖರಾಗಿ, ಕುಟುಂಬ ರಾಜಕಾರಣ, ಓಲೈಕೆ ರಾಜಕಾರಣದಿಂದ, ಕಚ್ಚಾಟ ನಡೆಸಿದ ರಾಜಕಾರಣಿಗಳಿಗೆ ಈ ಪಂಚ ರಾಜ್ಯ ಚುನಾವಣೆಯು ತಕ್ಕ ಪಾಠ ಕಲಿಸಿದೆ. ಇದಕ್ಕೆಉದಾಹರಣೆ ಪಶ್ಚಿಮ ಬಂಗಾಳ. ಸತತ 15 ವರ್ಷಗಳಿಂದ ಅಧಿಕಾರದಲ್ಲಿದ್ದ ಮಮತಾ, ಅಷ್ಟೂ ವರ್ಷ ಕೇಂದ್ರದ ಜೊತೆ ಸಂಘರ್ಷ ನಡೆಸುತ್ತಲೇ ರಾಜ್ಯದಲ್ಲಿ ಜಾರಿಗೊಳಿಸಬಹುದಾಗಿದ್ದ ಅಭಿವೃದ್ಧಿ ಯೋಜನೆಗಳಿಗೆ ಸ್ವತಃ ತಾವೇ ಅಡ್ಡಿ ಮಾಡಿಕೊಂಡರು. ವಿಪಕ್ಷಗಳ ಆಡಳಿತದ ಹೊರತಾಗಿಯೂ ಕೇಂದ್ರದೊಂದಿಗೆ ಉತ್ತಮ ಸಂಬಂಧ ಕಾಪಾಡಿಕೊಂಡು ಅನುದಾನ ತರುವ ಅವಕಾಶ ಬಳಸಿಕೊಂಡ ಹಲವು ರಾಜ್ಯಗಳ ತಾಜಾ ಉದಾಹರಣೆ ಇರುವಾಗಲೇ ಅದನ್ನು ಮಮತಾ ದೂರ ತಳ್ಳಿದ್ದು ವಿಪರ್ಯಾಸ. ಜೊತೆಗೆ ಅತಿಯಾದ ಓಲೈಕೆ ರಾಜಕಾರಣ, ಅಕ್ರಮ ಒಳನುಸುಳುವಿಕೆ ಕುರಿತ ಅವರ ಉದಾಸೀನತೆ, ಬಹುಸಂಖ್ಯಾತರ ಕುರಿತ ತಾತ್ಸಾರ ಮನೋಭಾವನೆಗಳೂ ಅವರ ಪತನಕ್ಕೆ ಮುನ್ನುಡಿ ಬರೆಯಿತು. ಇನ್ನು ತಮಿಳುನಾಡಿನಲ್ಲಿ ಆಡಳಿತರೂಢ ಡಿಎಂಕೆ, ಪ್ರಮುಖ ಪ್ರತಿಪಕ್ಷ ಅಣ್ಣಾಡಿಎಂಕೆ ತೀವ್ರ ಪ್ರತಿಸ್ಪರ್ಧೆಯನ್ನೂ ಮೆಟ್ಟಿನಿಂತು ವಿಜಯ್ ಅಭೂತಪೂರ್ವ ಗೆಲುವು ಸಾಧಿಸಿದ್ದು, ಜನ ಹೊಸತನ, ಬದಲಾವಣೆ ಬಯಸಿದ್ದರು ಎಂಬುದರ ಧ್ಯೋತಕ. ಕೇರಳದಲ್ಲೂ ಅದೇ ಕಥೆ. ಸತತ 10 ವರ್ಷಗಳ ಎಲ್‌ಡಿಎಫ್‌ನ ಆಡಳಿತದ ಉತ್ತಮ ಅಂಶಗಳನ್ನು ಕೆಲ ವಿವಾದ, ಭ್ರಷ್ಟಾಚಾರ ನುಂಗಿಹಾಕಿದವು.
ಇನ್ನು ಅಸ್ಸಾಂ ಮತ್ತು ಪುದುಚೇರಿ ಎರಡೂ ಕಡೆ ಆಡಲಿತಾರೂಢ ಪಕ್ಷಗಳೇ ಅಧಿಕಾರಕ್ಕೆ ಮರಳಿವೆ. ಅಸ್ಸಾಂನಲ್ಲಿ ಬಿಜೆಪಿ ಸತತ 3 ಮತ್ತು ಪುದುಚೇರಿಯಲ್ಲಿ ಎಐಎನ್‌ಆರ್‌ಸಿ ಕಾಂಗ್ರೆಸ್ ಕೂಡಾ ಸತತ 2ನೇ ಬಾರಿ ಅಧಿಕಾರಕ್ಕೆ ಬಂದಿದೆ. ಅಸ್ಸಾಂ ಸತತ 15 ವರ್ಷಗಳಿಂದ ಅಭಿವೃದ್ಧಿಯ ಪಥದಲ್ಲಿ ಸಾಗಿದೆ. ಪುದುಚೇರಿಯಲ್ಲಿ ಜನಸಾಮಾನ್ಯರ ಸಿಎಂ ಎನ್ನಿಸಿಕೊಂಡ ರಂಗಸಾಮಿ ಅವರ ಜನಪತ ಆಡಳಿತ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರಿಸಿದೆ. ಇದು ಜನಪರ ಆಡಳಿತದಲ್ಲಿ ಜನತೆ ವಿಶ್ವಾಸ ಹೊಂದಿದ್ದಾರೆ ಎಂಬುದರ ಧ್ಯೋತಕ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.