
ಇಂದು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಭರ್ಜರಿಯ ಗೆಲುವು ಮಾತ್ರವಲ್ಲದೇ ಐತಿಹಾಸಿಕ ದಾಖಲೆ ಬರೆದಿದೆ. ಇದೇ ಮೊದಲ ಬಾರಿಗೆ ಪಶ್ಚಿಮ ಬಂಗಾಳದ ಚುಕ್ಕಾಣಿ ಹಿಡಿಯಲಿರುವ ಬಿಜೆಪಿ ದೀದಿ ಕೋಟೆಯನ್ನು ಛಿದ್ರಗೊಳಿಸಿದೆ. ಅದು ಎಷ್ಟರಮಟ್ಟಿಗೆ ಎಂದರೆ ಖುದ್ದು ಮಮತಾ ಬ್ಯಾನರ್ಜಿ ಅವರು ತಾವು ನಿಂತುಕೊಂಡ ಕ್ಷೇತ್ರದಿಂದಲೇ ಬಿಜೆಪಿ ಅಭ್ಯರ್ಥಿಗೆ ಸೋಲನ್ನುಂಡಿದ್ದಾರೆ. ದೀದಿಗೆ ಮರ್ಮಾಘಾತವಾಗಿದೆ. ಕಮಲ ಅರಳಿ ನಿಂತಿದೆ. ಇದರ ಬೆನ್ನಲ್ಲೇ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ತಾವು ಅಂದು ಹೇಳಿದ ಆ ಮಾತನ್ನು ಇಂದು ನೆನಪಿಸಿಕೊಂಡಿದ್ದಾರೆ.
ಅದೇನೆಂದರೆ ಕಳೆದ ನವೆಂಬರ್ 14ರಂದು ಬಿಹಾರ ಚುನಾವಣಾ ಫಲಿತಾಂಶಗಳು ಪ್ರಕಟವಾದಾಗ ಮೋದಿ ಅವರು, ಗಂಗಾ ಬಿಹಾರವನ್ನು ಮೀರಿ ಗಂಗಾಸಾಗರಕ್ಕೆ ಹರಿಯುತ್ತದೆ ಎಣದಯ ಹೇಳಿದ್ದರು. ಉತ್ತರಾಖಂಡ, ಉತ್ತರ ಪ್ರದೇಶ, ಬಿಹಾರ ಮತ್ತು ಈಗ ಪಶ್ಚಿಮ ಬಂಗಾಳದಲ್ಲಿ ಗಂಗಾನದಿ ಹರಿಯುವಲ್ಲೆಲ್ಲಾ ಕಮಲ ಅರಳುತ್ತದೆ ಎಂದಿದ್ದರು. ಆ ಮಾತು ಇಂದು ನಿಜವಾಗಿದೆ. ಈ ಬಗ್ಗೆ ಖುದ್ದು ಪ್ರಧಾನಿ ಇಂದು ತಮ್ಮ ಭಾಷಣದಲ್ಲಿ ಹೇಳಿದ್ದಾರೆ. ನಾನು ಇಲ್ಲಿಯೇ ನಿಂತು ಗಂಗಾ ಬಿಹಾರವನ್ನು ಮೀರಿ ಗಂಗಾಸಾಗರಕ್ಕೆ ಹರಿಯುತ್ತದೆ ಎಂದು ಹೇಳೀರುವ ಮಾತು ನಿಜವಾಗಿದೆ. ಗಂಗೆ ಹರಿಯುವ ಕಡೆಗಳೆಲ್ಲಾ ಕಮಲ ಅರಳಿದೆ ಎಂದು ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಐತಿಹಾಸಿಕ ಜಯ ಗಳಿಸುತ್ತಲೇ ಜನರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಪವಿತ್ರ ಭೂಮಿ ಬಂಗಾಳದಲ್ಲಿ ಹೊಸ ಸೂರ್ಯೋದಯ ಉದಯಿಸುತ್ತಿದೆ. ಇದು ತಲೆಮಾರುಗಳಿಂದ ಕಾಯುತ್ತಿದ್ದ ಉದಯ ಎಂದರು. ಮೂರು ರಾಜ್ಯಗಳ ವಿಧಾನಸಭಾ ಕ್ಷೇತ್ರಗಳಲ್ಲಿ ಹೆಚ್ಚು ಸ್ಥಾನಗಳನ್ನು ಪಡೆದುಕೊಂಡಿರುವುದು ಐತಿಹಾಸಿಕ ದಿನ ಎಂದು ಹೇಳಿ, ಐದು ರಾಜ್ಯಗಳ ಮತದಾರರಿಗೆ ಧನ್ಯವಾದ ಅರ್ಪಿಸಿದರು. ನಾನು ಅಂದು ಹೇಳಿದ್ದೆ ನಾನಾಗಿ ಬಂದಿಲ್ಲ ಗಂಗಾಮಾತೆ ನನ್ನನ್ನು ಕರೆಸಿಕೊಂಡಿದ್ದಾಳೆ ಎಂದರು.
ಪಶ್ಚಿಮ ಬಂಗಾಳದಲ್ಲಿ ಸುಮಾರು ಶೇಕಡ 93ರಷ್ಟು ಮತದಾನವು ಸ್ವತಃ ಐತಿಹಾಸಿಕವಾಗಿದೆ. ಅಸ್ಸಾಂ, ತಮಿಳುನಾಡು, ಪುದುಚೇರಿ ಮತ್ತು ಕೇರಳದಲ್ಲಿಯೂ ಹೊಸ ಮತದಾನ ದಾಖಲೆಗಳು ಸ್ಥಾಪಿಸಲ್ಪಟ್ಟಿವೆ. ಮಹಿಳೆಯರ ಭಾಗವಹಿಸುವಿಕೆಯೂ ತುಂಬಾ ಹೆಚ್ಚಾಗಿದೆ. ಇದು ಭಾರತೀಯ ಪ್ರಜಾಪ್ರಭುತ್ವದ ಪ್ರಕಾಶಮಾನವಾದ ಚಿತ್ರವಾಗುತ್ತಿದೆ ಎಂದು ಪ್ರಧಾನಿ ಹೇಳಿದರು. 2013ರಲ್ಲಿ ಬಿಜೆಪಿ ನನಗೆ ಪ್ರಧಾನಿ ಅಭ್ಯರ್ಥಿಯಾಗಲು ಜವಾಬ್ದಾರಿ ನೀಡಿದಾಗ, ನಾನು ಕಾಶಿಗೆ ನಾಮಪತ್ರ ಸಲ್ಲಿಸಲು ಹೋದಾಗ ಪತ್ರಕರ್ತರು ನನ್ನನ್ನು ಪ್ರಶ್ನಿಸಿದರು. ಆಗ ನನ್ನ ಹೃದಯದಿಂದ ಒಂದು ಧ್ವನಿ ಸ್ವಾಭಾವಿಕವಾಗಿ ಹೊರಬಂತು. ನಾನಾಗೇ ಬಂದಿಲ್ಲ ಗಂಗಾ ಮಾತೆ ನನ್ನನ್ನು ಕರೆಸಿಕೊಂಡಿದ್ದಾಳೆಂದು, ಇಂದು ಗಂಗಾ ಮಾತೆಯ ಆಶೀರ್ವಾದ ನಮ್ಮೆಲ್ಲರ ಮೇಲೆ ನಿರಂತರವಾಗಿ ಸುರಿಯುತ್ತಿರುವುದನ್ನು ನಾನು ಪ್ರತಿ ಕ್ಷಣವೂ ಅನುಭವಿಸುತ್ತಿದ್ದೇನೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.