UP Election : ಮೊದಲ ಹಂತದಲ್ಲಿ ಶೇ. 60.17 ರಷ್ಟು ಮತದಾನ

By Suvarna NewsFirst Published Feb 10, 2022, 11:10 PM IST
Highlights

ಮೊದಲ ಹಂತದಲ್ಲಿ ಶಾಂತಿಯುತ ಮತದಾನ
ಒಟ್ಟು ಶೇ. 60.17ರಷ್ಟು ಮತದಾರರಿಂದ ವೋಟ್
ಒಟ್ಟು 58 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಮತದಾನ

ಲಖನೌ (ಫೆ. 10): ದೇಶದ ಅತಿದೊಡ್ಡ ರಾಜ್ಯ ಉತ್ತರ ಪ್ರದೇಶದ (Uttar Pradesh) ಮೊದಲ ಹಂತದ ಚುನಾವಣೆ (1st Phase Election) ಯಶಸ್ವಿಯಾಗಿ ಮುಕ್ತಾಯವಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದೇ ಸಂಪೂರ್ಣ ಶಾಂತಿಯುತವಾಗಿ ಮತದಾನ ನಡೆದಿದೆ. ಮೊದಲ ಹಂತದಲ್ಲಿ ಶೇ. 60.17ರಷ್ಟು ಮತದಾನವಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗ (Election Commission) ತಿಳಿಸಿದೆ. 11 ಜಿಲ್ಲೆಗಳ 58 ಅಸೆಂಬ್ಲಿ ಸ್ಥಾನಗಳಿಗೆ ಬೆಳಿಗ್ಗೆ 7 ಗಂಟೆಗೆ ಮತದಾನ ಪ್ರಾರಂಭವಾಯಿತು. ಬಹುತೇಕವಾಗಿ ಪಶ್ಚಿಮ ಉತ್ತರ ಪ್ರದೇಶದ ಜಾಟ್ ಪ್ರಾಬಲ್ಯದ ವಲಯದಲ್ಲಿ ಚುನಾವಣೆ ನಡೆದಿದೆ.

ಇಂದು ಚುನಾವಣೆ ನಡೆದ 11 ಜಿಲ್ಲೆಗಳೆಂದರೆ ಶಾಮ್ಲಿ, ಹಾಪುರ್, ಗೌತಮ್ ಬುದ್ಧ ನಗರ, ಮುಜಾಫರ್‌ನಗರ, ಮೀರತ್, ಬಾಗ್‌ಪತ್, ಗಾಜಿಯಾಬಾದ್, ಬುಲಂದ್‌ಶಹರ್, ಅಲಿಗಢ, ಮಥುರಾ ಮತ್ತು ಆಗ್ರಾ. ಮೊದಲ ಹಂತದ ಮತದಾನಕ್ಕೆ ತೆರೆ ಬೀಳುತ್ತಿದ್ದಂತೆಯೇ ಮುಖ್ಯ ಚುನಾವಣಾಧಿಕಾರಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿ, ಶಾಂತಿಯುತವಾಗಿ ಮತದಾನ ನಡೆದಿದ್ದು, ಎಲ್ಲಿಯೂ ಅಹಿತಕರ ಘಟನೆ ವರದಿಯಾಗಿಲ್ಲ ಎಂದು ತಿಳಿಸಿದರು.

ಯುಪಿ ರಾಜ್ಯ ವಿಧಾನಸಭಾ ಚುನಾವಣೆಯು ಪ್ರಮುಖವಾಗಿ ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಸಮಾಜವಾದಿ ಪಕ್ಷ (ಎಸ್‌ಪಿ)-ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ) ಮೈತ್ರಿಕೂಟದ ನಡುವಿನ ಸ್ಪರ್ಧೆಯಾಗಿದೆ.  2017ರ ಚುನಾವಣೆಯಲ್ಲಿ 58 ಸ್ಥಾನಗಳಲ್ಲಿ ಬಿಜೆಪಿ 53 ಸ್ಥಾನಗಳನ್ನು ಗೆದ್ದಿದ್ದರೆ, ಎಸ್‌ಪಿ (SP) ಮತ್ತು ಬಿಎಸ್‌ಪಿ (BSP) ತಲಾ ಎರಡು ಸ್ಥಾನಗಳನ್ನು ಪಡೆದಿದ್ದರೆ, ಆರ್‌ಎಲ್‌ಡಿ ಒಂದು ಸ್ಥಾನವನ್ನು ಜಯಿಸಿತ್ತು.
 

उत्तर प्रदेश विधानसभा सामान्य निर्वाचन-2022 के प्रथम चरण मतदान के संदर्भ में प्रेसवार्ता करते मुख्य निर्वाचन अधिकारी https://t.co/6IC8kUO54c

— CEO UP #DeshKaMahaTyohar (@ceoup)


ಪಶ್ಚಿಮ ಉತ್ತರ ಪ್ರದೇಶದಲ್ಲಿ ಗುರುವಾರ ನಡೆದ ಮೊದಲ ಹಂತದ ವಿಧಾನಸಭಾ ಚುನಾವಣೆಗೆ 800 ಅರೆಸೇನಾ ಪಡೆಗಳ ಕಂಪನಿ ಜೊತೆಗೆ ಉತ್ತರ ಪ್ರದೇಶ ಪೊಲೀಸ್ ಮತ್ತು ಗೃಹ ರಕ್ಷಕರ ಒಂದು ಲಕ್ಷಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಮೊದಲ ಹಂತದಲ್ಲಿ 58 ಕ್ಷೇತ್ರಗಳಲ್ಲಿ ಒಟ್ಟು 623 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಇದರಲ್ಲಿ 73 ಮಂದಿ ಮಹಿಳೆಯರಾಗಿದ್ದಾರೆ. ಮೊದಲ ಹಂತದಲ್ಲಿ ಒಟ್ಟು 2.28 ಕೋಟಿ ಮತದಾರರಿದ್ದು, 1.24 ಕೋಟಿ ಪುರುಷರು ಹಾಗೂ 1.04 ಕೋಟಿ ಮಹಿಳಾ ಮತದಾರರು ಇದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿತ್ತು.

UP Elections: ಮೊದಲ ಹಂತದ ಚುನಾವಣೆಯಲ್ಲಿ ಮಹತ್ವದ ಸಂದೇಶ ಕೊಟ್ಟ ವೃದ್ಧರು, ವಿಕಲಚೇತನರು!
ಮೊದಲ ಹಂತದ 11 ಜಿಲ್ಲೆಗಳಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಾದ ದಿನದಿಂದ ಒಟ್ಟು 1,60,237 ಪರವಾನಗಿ ಹೊಂದಿದ ಶಸ್ತ್ರಾಸ್ತ್ರಗಳನ್ನು ಪೊಲೀಸರಿಗೆ ಸುಪರ್ದಿಗೆ ಇಡಲಾಗಿದ್ದು, 151 ಪರವಾನಗಿ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಲಾಗಿದೆ. ಅಲ್ಲದೆ, ಚುನಾವಣೆ ಸಂದರ್ಭದಲ್ಲಿ ಶಾಂತಿ ಕದಡುವ ಸಾಧ್ಯತೆಯ ಹಿನ್ನೆಲೆಯಲ್ಲಿ 441 ಶಸ್ತ್ರಾಸ್ತ್ರ ಪರವಾನಗಿಗಳನ್ನು ರದ್ದುಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

3,98,432 ಜನರ ವಿರುದ್ಧ CrPC ಸೆಕ್ಷನ್ 107/116 ಅಡಿಯಲ್ಲಿ ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಒಟ್ಟು 1,783 ಅಕ್ರಮ ಶಸ್ತ್ರಾಸ್ತ್ರಗಳು, 2,048 ಕಾಟ್ರಿಡ್ಜ್‌ಗಳು ಮತ್ತು 20 ಕೆಜಿ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ವಿವರ ನೀಡಿದ್ದಾರೆ. ಇದುವರೆಗೆ ಚುನಾವಣಾ ಪೂರ್ವದಲ್ಲಿ ತಪಾಸಣೆ ವೇಳೆ ಒಟ್ಟು 12.45 ಕೋಟಿ ರೂ., 7.83 ಕೋಟಿ ಅಕ್ರಮ ಮದ್ಯ ಹಾಗೂ 7.89 ಕೋಟಿ ಮೌಲ್ಯದ ಮಾದಕ ದ್ರವ್ಯ ವಶಪಡಿಸಿಕೊಳ್ಳಲಾಗಿದೆ.

Hijab Row: ವಿವಾದದ ಸಮಯದಲ್ಲಿ ಮಹತ್ವ ಪಡೆದಿದೆ ಯುಪಿಯಲ್ಲಿ ಮೋದಿ ಕೊಟ್ಟ ಹೇಳಿಕೆ!
ಬಿಜೆಪಿ 300ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಮತ್ತೆ ಅಧಿಕಾರಕ್ಕೆ ಬರಲಿದೆ: ಉತ್ತರ ಪ್ರದೇಶದ ವಾರಣಾಸಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಅನುರಾಗ್ ಠಾಕೂರ್ (Anurag Thakur), ಇಂದು ಕೈರಾನಾದಲ್ಲಿ ನಡೆದ ಮತದಾನವು ಬಿಜೆಪಿಯ ಗೆಲುವನ್ನು ಖಾತ್ರಿಪಡಿಸಿದೆ. ಮುಂದಿನ ಹಂತಗಳಲ್ಲಿ ಕೈರಾನಾದಿಂದ ಪಶ್ಚಿಮದಿಂದ ಪೂರ್ವಕ್ಕೆ ಕಾಶಿ, ಪಶ್ಚಿಮದಿಂದ ಪೂರ್ವಕ್ಕೆ ಈ ಅಲೆ ಬಲಗೊಳ್ಳಲಿದೆ. ಮೋದಿಜಿ ಹಾಗೂ ಯೋಗಿ ಜೀ ಬಿಜೆಪಿ 300 ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಮತ್ತೆ ಅಧಿಕಾರಕ್ಕೆ ಬರಲಿದೆ ಎಂದಿದ್ದಾರೆ.

Latest Videos

click me!