* ಕರ್ನಾಟಕದಲ್ಲಿ ಹಿಜಾಬ್ ವಿವಾದ
* ಬಿಜೆಪಿ ಸರ್ಕಾರದ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ
* ಹಿಂದೂ ಧರ್ಮ ಗಟ್ಟಿಗೊಳಿಸಿ ಮತ ಕ್ರೋಢೀಕರಣಕ್ಕೆ ವಿವಾದ ಸೃಷ್ಟಿಸಿದ್ದಾರೆ ಎಂದ ಸಿದ್ದು
ಬೆಂಗಳೂರು, (ಫೆ.10): ಹಿಜಾಬ್ (Hijab)ಬಹಳ ವರ್ಷಗಳಿಂದ ಮುಸ್ಲಿಂ ಯುವತಿಯವರು ಧರಿಸುತ್ತಿದ್ದಾರೆ. ಬಿಜೆಪಿ, ಸಂಘ ಪರಿವಾರದವರು ಹಿಂದುತ್ವ, ಹಾಗೂ ಮತ ಕ್ರೂಡಿಕರಣಕ್ಕಾಗಿ ಈ ರೀತಿ ಮಾಡ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಆರೋಪಿಸಿದ್ದಾರೆ.
ಹಿಂದೂ (Hindu) ಧರ್ಮ ಗಟ್ಟಿಗೊಳಿಸಿ ಮತ ಕ್ರೋಢೀಕರಣಕ್ಕೆ ವಿವಾದ ಸೃಷ್ಟಿಸಿದ್ದಾರೆ. ಕೇಸರಿ ಶಾಲನ್ನು ವಿದ್ಯಾರ್ಥಿಗಳು ಖರೀದಿಸಿ ಹಾಕಿಕೊಂಡಿಲ್ಲ. ಸಂಘ ಪರಿವಾರದವರೇ ಅದನ್ನು ಖರೀದಿಸಿ ನೀಡಿದ್ದಾರೆ. ಮಕ್ಕಳಿಗೆ ಒತ್ತಾಯದಿಂದ ಕೇಸರಿ ಶಾಲು ಹಾಕಿ ಕಳಿಸಿದ್ದಾರೆ. ಸಮವಸ್ತ್ರದ ಹೆಸರಲ್ಲಿ ದ್ವೇಷದ ಭಾವನೆ ಹುಟ್ಟಿಸುವ ಉದ್ದೇಶ ಅಂತ ಹೇಳಿದರು.
Hijab Row ಹಿಜಾಬ್ ವಿವಾದ, ಶಿಕ್ಷಣ ಸಚಿವ ನಾಗೇಶ್ ವಿರುದ್ಧ ಸಿದ್ದರಾಮಯ್ಯ ಕೆಂಡಾಮಂಡಲ
ಬಿಜೆಪಿ (BJP) ಅಧಿಕಾರಕ್ಕೆ ಬಂದಮೇಲೆ ಜನ ಕಷ್ಟ ಎದುರಿಸಬೇಕಾಗಿದೆ. ಬಿಜೆಪಿಯವರು ಭಾವನಾತ್ಮಕ ವಿಚಾರ ಜನರ ಮುಂದಿಟ್ಟು ಧರ್ಮ, ಜಾತಿ ನಶೆಯನ್ನು ಜನರಿಗೆ ಅಂಟಿಸಿದ್ದಾರೆ. ದೇಶದ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ನಿಂತಿದೆ. ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ದೇಶವನ್ನು ಲೂಟಿ ಹೊಡೆಯುತ್ತಿದ್ದಾರೆ. ಇದನ್ನೆಲ್ಲ ಮುಚ್ಚಲು ಭಾವನಾತ್ಮಕ ವಿಚಾರ ಜನರ ಮುಂದಿಡುತ್ತಿದ್ದಾರೆ ಅಂತ ಬೆಂಗಳೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಆರು ಮಂದಿ ವಿದ್ಯಾರ್ಥಿಗಳು ಅವರ ನಂಬಿಕೆ ಪ್ರಕಾರ ನಡೆದುಕೊಳ್ಳುತ್ತಾರೆ. ಹಿಜಾಬ್ ಧರಿಸಿದರೆ ಯಾರಿಗಾದರೂ ಬೇರೆಯವರಿಗೆ ತೊಂದರೆ ಆಗಿತ್ತಾ? ಆ ಹೆಣ್ಣು ಮಕ್ಕಳಿಗೆ ಹಿಜಾಬ್ ಧರಿಸಿದ್ದೀರಿ ಅಂತ ಪ್ರಿನ್ಸಿಪಾಲ್ ಗೇಟ್ ಹಾಕುತ್ತಾರೆ ಅಂದರೆ ಇದಕ್ಕಿಂತ ಅಮಾನವೀಯವಾಗಿದ್ದು ಇಲ್ಲ. ಇವರಿಗೆ ಸಂವಿಧಾನದ ಮೇಲೆ ನಂಬಿಕೆ ಇದ್ದಿದ್ದರೆ ಪ್ರಿನ್ಸಿಪಾಲ್ ಸಸ್ಪೆಂಡ್ ಮಾಡಬೇಕಾಗಿತ್ತು. ಮಕ್ಕಳಲ್ಲಿ ಧರ್ಮ, ಜಾತಿ ತುಂಬಿ ಮಕ್ಕಳನ್ನು ಹಾಳು ಮಾಡುವ ಕೆಲಸ ಬಿಜೆಪಿ ಸಂಘ ಪರಿವಾರ ಮಾಡುತ್ತಿದ್ದಾರೆ. ದೇಶದಲ್ಲಿ ಏನು ಅಪಾಯ ಆಗಬಹುದು ಇವರು ಊಹಿಸಲಿಲ್ಲ. ರಾಷ್ಟ್ರಧ್ವಜ ಇಳಿಸಿ ಕೇಸರಿ ಝಂಡಾ ಮೇಲಕ್ಕೆ ಏರಿಸುವ ಕೆಲಸ ಮಾಡುತ್ತಾರೆ. ಇದನ್ನು ಖಂಡಿಸುತ್ತೇವೆ ಅಂತ ಸಿದ್ದರಾಮಯ್ಯ ಹೇಳಿದರು.
ಇಂದು ದೇಶ ಬಹಳ ಬಿಕ್ಕಟ್ಟನ್ನ ಎದುರಿಸುತ್ತಿದೆ. ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಬಂದ ನಂತರ ಮಹಿಳೆಯರಿಗೆ, ಬಡವರಿಗೆ, ಕಾರ್ಮಿಕರಿಗೆ ತೊಂದರೆಯಾಗಿದೆ ಎಂದರು.
ಕಾಂಗ್ರೆಸ್ ಮುಂದೆ ದೊಡ್ಡ ಸವಾಲ್ ಇದೆ. ದೇಶ ಉಳಿಸಬೇಕಾಗಿದೆ, ಸಂವಿಧಾನ ಉಳಿಸಬೇಕಾಗಿದೆ. ದೇಶ ಆರ್ಥಿಕವಾಗಿ ದಿವಾಳಿಯಾಗ್ತಾ ಇದೆ. ಯುವಕರು ಭವಿಷ್ಯದ ನಾಯಕರು ಎಂದು ತಿಳಿಸಿದರು.
ಬಿಜೆಪಿ ಏಳೆಂಟು ವರ್ಷದಲ್ಲಿ ಜನಪರ ಕೆಲಸ ಮಾಡಿಲ್ಲ. ನುಡಿದಂತೆ ನಡೆಯಲಿಲ್ಲ, ಸುಳ್ಳು ಹೇಳಿದ್ದಾರೆ. ಭಾವನಾತ್ಮಕ ವಿಷಯಗಳನ್ನ ಜನರ ಮುಂದೆ ಇಟ್ಟು ಧರ್ಮ ನಶೆ ಏರಿಸಿದ್ದಾರೆ.. ರಾಜ್ಯ ಸರ್ಕಾರ ಕಳೆದ ಎರಡು ವರ್ಷದಿಂದ ಏನ್ ಮಾಡಿಲ್ಲ. ಭ್ರಷ್ಟಾಚಾರದಿಂದ ರಾಜ್ಯವನ್ನ ಲೂಟಿ ಮಾಡ್ತಿದ್ದಾರೆ. ಇದನ್ನ ಮುಚ್ಚಿಸುವ ಸಲುವಾಗಿ ಭಾವನಾತ್ಮಕ ವಿಷಯಗಳನ್ನ ಮುಂದಿಟ್ಟು ಜನರನ್ನ ಹಾದಿ ತಪ್ಪಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.