ಕಾಂಗ್ರೆಸ್ ಮುಖಂಡ ವೈಎಸ್‌ವಿ ದತ್ತಾ ಅವರ ಪಾಲಿಗೆ ಗಾಯದ ಮೇಲೆ ಉಪ್ಪು ಸುರಿದಪಂಚರತ್ನ ಯಾತ್ರೆ, ಕಾಂಗ್ರೆಸ್ ಟಿಕೆಟ್ ತಪ್ಪಿದ ಬೆನ್ನಲ್ಲೇ ಮಹತ್ವದ ತೀರ್ಮಾನಕ್ಕೆ ಮುಂದಾದ ಮಾಜಿ ಶಾಸಕ ವೈಎಸ್‌ವಿ ದತ್ತಾ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ಏ.07): ಗಣಿತದ ಶಿಕ್ಷಕರಾಗಿ ಎಲ್ಲರಿಗೂ ದತ್ತ ಮೇಸ್ಟ್ರು ಎಂದೇ ಪ್ರೀತಿ ಪಾತ್ರರಾಗಿದ್ದ ವೈಎಸ್‌ವಿ ದತ್ತ ರಾಜಕೀಯ ಲೆಕ್ಕಾಚರದ ಆಳ-ಅಗಲ ಅರಿಯುವಲ್ಲಿ ಮಾತ್ರ ನಪಾಸಾದರೆ ಎನ್ನುವ ವಿಶ್ಲೇಷಣೆಗಳು ಇದೀಗ ರಾಜಕೀಯ ವಲಯದಲ್ಲಿ ಆರಂಭವಾಗಿದೆ.ಸರಳ ಸಜ್ಜನಿಕೆಯ ಕಾರಣಕ್ಕೆ ಸ್ವಜಾತಿಯ ಬೆರಳೆಣಿಕೆ ಮತಗಳಿರುವ ಚಿಕ್ಕಮಗಳೂರು ಜಿಲ್ಲೆಯ ಕಡೂರು ಕ್ಷೇತ್ರದಲ್ಲಿ 47 ಸಾವಿರ ಮತಗಳ ಅಂತರದಿಂದ ಆರಿಸಿ ಬಂದು ಪ್ರಜಾತಂತ್ರವನ್ನೂ ಗೆಲ್ಲಿಸಿದ್ದ ದತ್ತ ಜೆಡಿಎಸ್ ತೊರೆಯುವ ಹಂತದಲ್ಲೇ ರಾಜಕೀಯವಾಗಿ ಎಡವಿದರೇ ಎನ್ನುವ ಪ್ರಶ್ನೆ ಎದುರಾಗಿದೆ.
undefined
ದೇವೇಗೌಡರಿಂದಲೂ ದೂರ ಇತ್ತ ಕೈ ತಪ್ಪಿದ ಟಿಕೆಟ್
ದೇವೇಗೌಡ ಬಗ್ಗೆ ಅಪಾರ ಗೌರವ, ಪ್ರೀತಿ ಇದ್ದಾಗ್ಯೂ, ಅವರ ಪುತ್ರ ಎಚ್.ಡಿ.ಕುಮಾರಸ್ವಾಮಿ ಅವರ ಮೇಲಿನ ಅಸಮಾಧಾನಕ್ಕೆ ಪಕ್ಷವನ್ನೇ ತೊರೆಯುವ ನಿರ್ಧಾರಕ್ಕೆ ಬಂದ ದತ್ತ ಅವರ ಸ್ಥಿತಿ ಈಗ ಕೋಪದ ಕೈಗೆ ಅಸ್ತ್ರಕೊಟ್ಟು ಮೂಗು ಕೊಯ್ದುಕೊಂಡಂತಾಗಿದೆ.ಕಾಂಗ್ರೆಸ್ ಪಕ್ಷ ಸೇರುವಾಗಲೇ ಚುನಾವಣೆ ಮೇಲೆ ಕಣ್ಣಿಟ್ಟಿದ್ದ ದತ್ತ ಪಕ್ಷ ಸೇರಿದ ನಂತರವೂ ಯೋಜನಾ ಬದ್ಧ ಅಗತ್ಯವಿರುವ ಕೆಲವು ಭೂಮಿಕೆಗಳನ್ನು ಸಿದ್ಧಪಡಿಸಿಕೊಳ್ಳುವಲ್ಲಿ ಎಡವಿದ್ದೂ ಸಹ ಅವರಿಗೆ ಟಿಕೆಟ್ ಕೈ ತಪ್ಪಲು ಕಾರಣವಾಗಿದೆ.ಇದೇ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ಆಕಾಂಕ್ಷಿಗಳಿಗೆ 2 ಲಕ್ಷ ರೂ. ಠೇವಣಿಯೊಂದಿಗೆ ಅರ್ಜಿ ಸಲ್ಲಿಸುವ ಹೊಸ ಪದ್ಧತಿಯನ್ನು ಜಾರಿಗೆ ತಂದಿದೆ. ಆದರೆ ದತ್ತ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿರಲಿಲ್ಲ. ಅದಕ್ಕೆ ನಿಗಧಿಯಾಗಿದ್ದ ಅವಧಿ ಮುಗಿದ ನಂತರವೂ ಅರ್ಜಿ ಸಲ್ಲಿಸಲು ಅವರಿಗೊಂದು ಅವಕಾಶ ನೀಡಲು ಪಕ್ಷ ಸಿದ್ಧವಿತ್ತು. ಅದರ ಲಾಭ ಪಡೆಯುವ ಕಡೇ ಘಳಿಗೆಯ ಪ್ರಯತ್ನಗಳು ದತ್ತ ಅವರಿಗೆ ಕೈಗೂಡಲಿಲ್ಲ ಎನ್ನಲಾಗುತ್ತಿದೆ.ದತ್ತ ಅವರಿಗಿರುವ ವೈಯಕ್ತಿಕ ವರ್ಚಸ್ಸಿನ ಜೊತೆಗೆ ಅವರ ಬೆನ್ನಿಗೆ ದೊಡ್ಡ ಅಭಿಮಾನಿ ಬಳಗ ಇರುವ ಕಾರಣಕ್ಕೆ ಅವರ ಸೇರ್ಪಡೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಮತ್ತಷ್ಟು ಬಲ ಬಂದಂತೆ ಭಾಸವಾಗಿತ್ತು. ಇದೇ ಕಾರಣಕ್ಕೆ ಚುನಾವಣೆ ಕಾವು ಆರಂಭವಾದ ದಿನದಿಂದಲೂ ಕಾಂಗ್ರೆಸ್‌ನಿಂದ ದತ್ತ ಸ್ಪರ್ಧೆ ಖಚಿತ ಎನ್ನುವ ಮಾತುಗಳು ಕೇಳಿಬಂದಿತ್ತು.
ವೈ.ಎಸ್.ವಿ. ದತ್ತಾಗೆ ಚುನಾವಣೆ ಖರ್ಚಿಗೆ 101 ರೂಪಾಯಿ ಹಣ ನೀಡಿದ ಅಭಿಮಾನಿ!
ಕಾಂಗ್ರೆಸ್ ನಲ್ಲಿ ಒಂಟಿಯಾದರೆ ಎನ್ನುವ ಭಾವನೆ :
ದತ್ತ ಅವರಿಗೆ ಪಕ್ಷ ಟಿಕೆಟ್ ನಿರಾಕರಿಸುತ್ತಿದ್ದಂತೆ ಕಾಂಗ್ರೆಸ್‌ನಲ್ಲಿ ಅವರು ಒಂಟಿಯಾದರೆ ಎನ್ನುವ ಭಾವನೆ ಮೂಡುವಂತಾಗಿದೆ. ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟಗೊಳ್ಳುತ್ತಿದ್ದಂತೆ ನಿನ್ನೆ ತಡ ರಾತ್ರಿ ಯಗಟಿಯ ದತ್ತ ಅವರ ನಿವಾಸದಲ್ಲಿ ನಡೆದ ಅಸಮಾಧಾನಿತರ ದಂಡೇ ಹರಿದುಬಂದಿತ್ತು.ಅದು ಇಂದು ಕೂಡ ಮುಂದುರಿದು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಮನೆಗ ಧಾವಿಸಿ ಬರುತ್ತಿದ್ದಾರೆ. ಈ ನಡುವೆ ದತ್ತ ಅವರಿಗೆ ಕಾಂಗ್ರೆಸ್ನ ಉನ್ನತ ನಾಯಕರು ಕರೆ ಮಾಡಿ ಮನವೊಲಿಸುವ ಪ್ರಯತ್ನವನ್ನು ಮಾಡಿದೇ ಇರುವುದ ದತ್ತ ಅಸಮಾಧನಕ್ಕೆ ಮುತ್ತಷ್ಟು ಕಾರಣವಾಗಿದೆ. ಈ ಕಾರಣಕ್ಕಾಗಿಯೇ ದತ್ತ ಅವರು ಅಭಿಮಾನಿಗಳೋಂದಿಗೆ ಮಾತಾಡುವಾಗ ಭಾವಾವೇಶದಿಂದ ಮಾತನಾಡಿದ್ದಾರೆ. ಆತ್ಮಗೌರವ, ಸ್ವಾಭಿಮಾನಕ್ಕೆ ಧಕ್ಕೆ ಆಗಿದೆ ಎನ್ನುವುದನ್ನು ಹೇಳಿಕೊಂಡಿದ್ದಾರೆ. ನಾನು ಯಾವತ್ತೂ ತೀರ್ಮಾನ ತೆಗೆದುಕೊಂಡ ಮೇಲೆ ನನ್ನನ್ನ ನಾನೇ ಅಳೆದುಕೊಳ್ಳುತ್ತೇನೆ ಎಂದು ಮಾರ್ಮಿಕವಾಗಿ ಹೇಳಿಕೊಂಡಿದ್ದಾರೆ.
ಅಭಿಮಾನಿಗಳಿಗೆ ಪತ್ರ
ಈ ನಡುವೆ ವೈಎಸ್‌ವಿ ದತ್ತ ಅವರು ಅಭಿಮಾನಿಗಳಿಗೆ ಪತ್ರವೊಂದನ್ನು ಬರದಿದ್ದು ಅದರ ಒಕ್ಕಣೆ ಹೀಗಿದೆ.ಆತ್ಮೀಯ ನನ್ನ ಪ್ರೀತಿಪಾತ್ರರಾದ ಎಲ್ಲ ಅಭಿಮಾನಿಗಳಲ್ಲಿ ವಿನಂತಿ, ನೀವು ನನಗೆ ಪ್ರೀತಿಯನ್ನು ಧಾರೆ ಎರೆದಿದ್ದೀರಿ. ಹಣವಿಲ್ಲದ, ಜಾತಿ ಇಲ್ಲದ ನನ್ನನ್ನು ದತ್ತ, ದತ್ತಣ್ಣ ಎಂದು ಅಭಿಮಾನದಿಂದ ತಬ್ಬಿಕೊಂಡು ಬೆಳೆಸಿದ್ದೀರಿ. ಈಗ ಬಂದಿರುವ ವಿಶೇಷ ರಾಜಕೀಯ ಪರಿಸ್ಥಿತಿಯಲ್ಲಿ ನಿಮ್ಮ ಜೊತೆಗೆ ನಾನಿರಬೇಕು, ನನ್ನ ಜೊತೆ ನೀವಿರಬೇಕು ಎನ್ನುವುದು ಅನಿವಾರ್ಯವಾಗಿದೆ. ಈ ಕಾರಣದಿಂದ ಇದು ನನ್ನ ಮತ್ತು ನಿಮ್ಮೆಲ್ಲರ ಆತ್ಮಗೌರವಕ್ಕೆ, ಸ್ವಾಭಿಮಾನಕ್ಕೆ ಆದ ಅಪಮಾನವಾಗಿದೆ. ಹೀಗಾಗಿ ಈ ಕ್ಷೇತ್ರದ ಮತದಾರರ ಸ್ವಾಬಿಮಾನಕ್ಕಾಗಿ ನಾನು ನಿಮ್ಮೆಲ್ಲರ ಆಶೀರ್ವಾದ ಬೇಡಲು ಕಡೂರು ಪಟ್ಟಣದಲ್ಲಿ ಏಪ್ರಿಲ್ 9 ರಂದು ಬೆಳಗ್ಗೆ 11 ಕ್ಕೆ ನ್ನ ಅಭಿಮಾನಿಗಳ ಸಭೆ ಕರೆದಿರುತ್ತೇನೆ. ತಾವು ತಮ್ಮ ಸಂಗಡಿಗರು, ಬಂಧು, ಬಾಂಧವರೊಂದಿಗೆ ಬಂದು ನನ್ನನ್ನು ಹರಸಿ, ಆಶೀರ್ವದಿಸಬೇಕೆಂದು ಕೋರುತ್ತೇನೆ. ವಂದನೆಗಳೊಂದಿಗೆ ವೈಎಸ್‌ವಿ ದತ್ತ
ದತ್ತಾ ಪಾಲಿಗೆ ಗಾಯದ ಮೇಲೆ ಉಪ್ಪು ಸುರಿದ ಪಂಚರತ್ನ ಯಾತ್ರೆ !
ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ನಡೆದ ಜೆಡಿಎಸ್ ಪಂಚರತ್ನ ರಥಯಾತ್ರೆಯು ಕಾಂಗ್ರೆಸ್ ಮುಖಂಡ ವೈಎಸ್‌ವಿ ದತ್ತಾ ಅವರ ಪಾಲಿಗೆ ಗಾಯದ ಮೇಲೆ ಉಪ್ಪು ಸುರಿದಂತಾಯಿತು. ನಿನ್ನೆಯಷ್ಟೇ ಟಿಕೆಟ್ ಕೈ ತಪ್ಪಿದ ಆಘಾತದಿಂದ ಹೊರ ಬರುವ ಮುನ್ನವೇ ಕಡೂರು ಪಟ್ಟಣಕ್ಕಾಗಮಿಸಿದ್ದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರು ಮೊನಚು ಮಾತುಗಳಿಂದಲೇ ದತ್ತ ಅವರನ್ನು ತಿವಿದರು.
ದತ್ತ ಯಾರು ಎಂದೇ ನನಗೆ ಗೊತ್ತಿಲ್ಲ ಎಂದು ನಿಷ್ಠುರವಾಗಿಯೇ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ನಾನು ಅವರ ಹೆಸರನ್ನೇಲು ಸಿದ್ದನಿಲ್ಲ. ಅವರು ತುಂಬಾ ದೊಡ್ಡವರು, ಅವರ ಬಗ್ಗೆ ನನಗೆ ಗೊತ್ತಿಲ್ಲ. ಆ ಬಗ್ಗೆ ನಾನೇಕೆ ಚರ್ಚೆ ಮಾಡಲಿ, ನನ್ನದು ಸಣ್ಣ ಪಕ್ಷ, ನನ್ನ ಪಕ್ಷಕ್ಕೆ ಅವರೇಕೆ ಬರುತ್ತಾರೆ? ಅವರು ಇಂಟರ್ ನ್ಯಾಷನಲ್ ಪಕ್ಷ ಸೇರಲು ಹೊರಟವರು. ಅವರು ದೊಡ್ಡ ಪಕ್ಷದಲ್ಲೇ ಇರಲಿ ಎಂದು ಮಾತಿನ ಚಾಟಿ ಬೀಸಿದರು.ಇಲ್ಲಿನಾನು ಐದು-ಎರಡು ಚೆಕ್ ಪಡೆದುಕೊಳ್ಳಲು ಬಂದಿಲ್ಲ.
ನಮ್ಮ ಪಕ್ಷಕ್ಕೆ ದೋಖಾ ಮಾಡಿ ಹೋಗಿದ್ದಾರೆ :
ನಮ್ಮ ಹಳೇ ಲೀಡರ್ ನನಗೆ ಬಹಳ ಚಾರ್ಜ್ ಮಾಡಿದ್ದಾರೆ. ನಮ್ಮ ಪಕ್ಷಕ್ಕೆ ದೋಖಾ ಮಾಡಿ ಹೋಗಿದ್ದಾರೆ. ಬಿಜೆಪಿ ಜೊತೆ ಕುಮಾರಸ್ವಾಮಿ ಹೊಂದಾಣಿಕೆ ಇದೆ ಎಂದು ಹೇಳಿದ್ದೇ ಹೇಳಿದ್ದು, ಅವರನ್ನು ಎಂಎಲ್ಸಿ ಮಾಡದಿದ್ದರೆ ಕಡೂರಿನ ಜನ ಅವರನ್ನು ಗುರುತಿಸುತ್ತಿದ್ದರಾ? ವಿಧಾನ ಸೌಧದಲ್ಲಿ 2 ನೇ ಸೀಟಿನಲ್ಲಿ ನನ್ನ ಪಕ್ಕ ಕೂರುತ್ತಿದ್ದರು. ಈಗ ಯಾರೂ ಇಲ್ಲದಾಗ ಪಕ್ಷದ ಗೌರವ ಉಳಿಸಲು ಧನಂಜಯ್ ಬಂದಿದ್ದಾರೆ ಎಂದರು.
ಕಾಂಗ್ರೆಸ್ ಸೇರಿದ ಜೆಡಿಎಸ್‌ನ ದತ್ತ, ಪಕ್ಷೇತರ ಶಾಸಕ ನಾಗೇಶ್
ಬೇಡೋ ಜಾಗಕ್ಕೆ ಹೋಗಿದ್ದಾರೆ
ಇನ್ನು ಜೆಡಿಎಸ್ ರಾಜ್ಯಾಧ್ಯಕ್ಷರೂ ದತ್ತ ವಿರುದ್ಧ ಟೀಕೆ ಮುಂದುವರಿಸಿದರು. ಕಡೂರಿನಲ್ಲಿ ಒಬ್ಬ ಪುಣ್ಯಾತ್ಮ ಇದ್ದರು. ಕೊಡೋ ಜಾಗದಲ್ಲಿ ಅವರನ್ನು ಇಟ್ಟಿದ್ವಿ, ಈಗ ಬೇಡೋ ಜಾಗಕ್ಕೆ ಹೋಗಿದ್ದಾರೆ. ಕಾರ್ಯಕರ್ತರೇ ಇದು ನಿಮ್ಮ ಮನೆ ನೀವೆಲ್ಲಾ ವಾಪಾಸ್ ಬನ್ನಿ ಕೈಮುಗಿದು ಕೇಳಿಕೊಳ್ಳುತ್ತೇನೆ ಎಂದು ಹೇಳಿ ದತ್ತ ಅವರನ್ನು ಛೇಡಿಸಿದರು.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.