
ಕಲಬುರಗಿ (ಜ.06): ತಮ್ಮ ವಿರುದ್ಧದ ಬಿಜೆಪಿ ಹೋರಾಟಕ್ಕೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಟಾಂಗ್ ಕೊಟ್ಟಿದ್ದಾರೆ. ಬಿಜೆಪಿಯದ್ದು ಸಹಮತವಿಲ್ಲದ ಪ್ರತಿಭಟನೆ ಎಂದು ತಮ್ಮ‘ಎಕ್ಸ್’ ಖಾತೆಯಲ್ಲಿ ಬಿಜೆಪಿಗೆ ತಿರುಗೇಟು ನೀಡಿದ್ದಾರೆ. ‘ನನ್ನ ರಾಜೀನಾಮೆ ಕೇಳುವುದು ಕಾಮಿಡಿ ಸಿನೆಮಾದಂತಿದೆ’ ಎಂದು ಕುಟುಕಿದ್ದಾರೆ. ಶನಿವಾರ ನಡೆದದ್ದು ಬಿಜೆಪಿಯವರ ಕುರ್ಚಿ ಕಾಳಗದ ಹೋರಾಟ, ವಿಜೆಪಿ ಶಿವಮೊಗ್ಗದಲ್ಲಿ ಕುರ್ಚಿ ಉಳಿಸಿಕೊಳ್ಳುವ ಹೋರಾಟದಲ್ಲಿದ್ದರೆ, ವೈಜೆಪಿ ವಕ್ಫ್ ಹೆಸರು ಹೇಳಿಕೊಂಡು ಕುರ್ಚಿ ಕಿತ್ತುಕೊಳ್ಳುವ ಹೋರಾಟದಲ್ಲಿತ್ತು.
ಬಿಜೆಪಿ ಎತ್ತ ಸೇರುವುದು ಎಂದು ತಿಳಿಯದೆ ಕಲಬುರಗಿಯಲ್ಲಿ ಹೋರಾಟದ ನಾಟಕ ನಡೆಸಿತ್ತು ಎಂದು ಟೀಕಿಸಿದ್ದಾರೆ. ಬಿಜೆಪಿಯಲ್ಲಿ ಸಹಮತ, ಸಹಬಾಳ್ವೆ, ಸಮಾಧಾನ ಯಾವುದೂ ಇಲ್ಲದೆ ತಮ್ಮ ಹುಳುಕು ಮುಚ್ಚಿಕೊಳ್ಳಲು ಪ್ರಿಯಾಂಕ್ ಖರ್ಗೆ ಹೆಸರಿಗೆ ಜೋತು ಬಿದ್ದಿದೆ! ನನ್ನ ವಿರುದ್ಧ ಬಿಜೆಪಿ ನಡೆಸಿದ ಪ್ರತಿಭಟನೆಗೆ ಬಿಜೆಪಿಯಲ್ಲೇ ಸಹಮತ ಇಲ್ಲದಿರುವುದು ಬಟಾಬಯಲಾಗಿದೆ. ಬಿಜೆಪಿಯ ರಾಜ್ಯಾಧ್ಯಕ್ಷ, ವಿರೋಧ ಪಕ್ಷದ ನಾಯಕರ ಮಾತಿಗೆ, ಪ್ರತಿಭಟನೆಯ ಕರೆಗೆ ಬಿಜೆಪಿಯಲ್ಲೇ ನಯಾಪೈಸೆ ಕಿಮ್ಮತ್ತು ಸಿಗದಿರುವಾಗ ಇವರು ನನ್ನ ರಾಜೀನಾಮೆ ಕೇಳುವುದು ಕಾಮಿಡಿ ಸಿನೆಮಾ ನೋಡಿದಂತೆ ಭಾಸವಾಗುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.
ರಾಜೀನಾಮೆ ಪ್ರಶ್ನೆಯೇ ಇಲ್ಲ: ‘ಬೀದರ್‌ನ ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಪಾತ್ರವಿಲ್ಲ, ಅವರ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳೂ ಇಲ್ಲ. ಇದು ರಾಜಕೀಯ ದ್ವೇಷದಿಂದ ಮಾಡುತ್ತಿರುವ ಆರೋಪ ಆಗಿರುವುದರಿಂದ ಪ್ರಿಯಾಂಕ್ ರಾಜೀನಾಮೆ ಪಡೆಯುವ ಪ್ರಶ್ನೆಯೇ ಇಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸಚಿವ ಪ್ರಿಯಾಂಕ್ ಖರ್ಗೆಯವರು ರಾಜೀನಾಮೆ ನೀಡಬೇಕೆಂಬ ಪ್ರತಿಪಕ್ಷಗಳ ಒತ್ತಾಯ ರಾಜಕೀಯ ಪ್ರೇರಿತ.
ಬಿಜೆಪಿಗೆ ನಾನು, ನನ್ನ ತಂದೆಯೇ ಟಾರ್ಗೆಟ್: ಮುಖಾಮುಖಿ ಸಂದರ್ಶನದಲ್ಲಿ ಪ್ರಿಯಾಂಕ್ ಖರ್ಗೆ ಹೇಳಿದ್ದೇನು?
ಪ್ರಕರಣದಲ್ಲಿ ಪ್ರಿಯಾಂಕ್ ಪಾತ್ರವಿಲ್ಲ, ಅವರ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳೂ ಇಲ್ಲ. ಜತೆಗೆ ಪ್ರಕರಣದಲ್ಲಿ ಯಾವುದೇ ವಿಚಾರಣೆಗೂ ತಾವು ಸಿದ್ಧ ಎಂದು ಪ್ರಿಯಾಂಕ್ ಹೇಳಿದ್ದಾರೆ’ ಎಂದು ಸ್ಪಷ್ಟಪಡಿಸಿದರು. ಇಂಥದ್ದೇ ಪ್ರಕರಣದಲ್ಲಿ ಹಿಂದೆ ಬಿಜೆಪಿ ಕೆ.ಎಸ್.ಈಶ್ವರಪ್ಪ ಅವರಿಂದ ರಾಜೀನಾಮೆ ಪಡೆದಿರಲಿಲ್ಲವೇ? ಎಂಬ ಪ್ರಶ್ನೆಗೆ, ‘ಆಗ ಗುತ್ತಿಗೆದಾರನ ಡೆತ್‌ನೋಟ್‌ನಲ್ಲಿ ಈಶ್ವರಪ್ಪ ಹೆಸರು ಬರೆದಿದ್ದರು. ಈಗ ಈ ಗುತ್ತಿಗೆದಾರನ ಡೆತ್‌ನೋಟ್‌ನಲ್ಲಿ ಪ್ರಿಯಾಂಕ್ ಹೆಸರು ಇದೆಯಾ? ಪ್ರಿಯಾಂಕ್ ಖರ್ಗೆ ಹೆಸರು ಎಲ್ಲೂ ಇಲ್ಲ. ಜತೆಗೆ ಅವರು ಎಲ್ಲಾ ತನಿಖೆಗೂ ಸಿದ್ಧ ಎಂದು ಹೇಳಿದ್ದಾರೆ. ಹೀಗಾಗಿ ಮೊದಲು ಸಿಐಡಿ ತನಿಖೆ ನಡೆಸಿ ವರದಿ ಕೊಡಲಿ’ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.