ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಮಂಗಳವಾರ ಸೋನಿಯಾ ಗಾಂಧಿ ಅವರೊಂದಿಗೆ ಸಭೆ ನಡೆಸಿದ್ದು, ಈ ಹಿನ್ನೆಲೆ ಅವರೇ ಕಾಂಗ್ರೆಸ್‌ನ ಮುಂದಿನ ಅಧ್ಯಕ್ಷರಾಗ್ತಾರಾ ಎಂಬ ಮಾತುಗಳು ಕೇಳಿಬರುತ್ತಿವೆ.
ಕಾಂಗ್ರೆಸ್‌ನ ನೂತನ ಅಧ್ಯಕ್ಷರ ಚುನಾವಣೆ ಇನ್ನು ಕೆಲ ದಿನಗಳಲ್ಲಿ ನಡೆಯುವ ಸೂಚನೆಗಳಿದ್ದು, ಈ ನಡುವೆ ವಿದೇಶಕ್ಕೆ ತೆರಳುವ ಮುನ್ನ ಮಂಗಳವಾರ ಸೋನಿಯಾ ಗಾಂಧಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಈ ಸಭೆಯಲ್ಲಿ ಅಶೋಕ್ ಗೆಹ್ಲೋಟ್ ಹಾಗೂ ಸೋನಿಯಾ ಗಾಂಧಿ ನಡುವೆ ಮಾತ್ರ ನಡೆದಿದ್ದು, ಪಕ್ಷದ ವಲಯದಲ್ಲಿ ಸಂಚಲನ ಮೂಡಿಸಿದೆ. ಅಲ್ಲದೆ, ಆ ಸಭೆಯಲ್ಲಿ ನಡೆದ ಮಾತುಕತೆಯ ಬಗ್ಗೆ ಅಶೋಕ್ ಗೆಹ್ಲೋಟ್ ಯಾವ ಗುಟ್ಟನ್ನೂ ಬಿಟ್ಟುಕೊಟ್ಟಿಲ್ಲ ಎಂದೂ ಮೂಲಗಳು ತಿಳಿಸಿವೆ. ಪಕ್ಷವು ಈ ವಾರ ಹೊಸ ಮುಖ್ಯಸ್ಥರ ಚುನಾವಣೆಯನ್ನು ಅಧಿಸೂಚಿಸಲಿದೆ ಎಂಬ ಹೆಚ್ಚುತ್ತಿರುವ ಊಹಾಪೋಹದ ನಡುವೆ ಈ ಸಭೆ ನಡೆದಿರುವುದರಿಂದ ರಾಜಸ್ಥಾನ ಸಿಎಂ ಕಾಂಗ್ರೆಸ್‌ನ ನೂತನ ಅಧ್ಯಕ್ಷರಾಗ್ತಾರಾ ಎಂಬ ಗುಸುಗುಸು ಚರ್ಚೆ ಆರಂಭವಾಗಿದೆ.
ಆದರೆ, ಈ ಸಂಬಂಧ ಪ್ರತಿಕ್ರಿಯೆ ನೀಡಿದ ಅಶೋಕ್ ಗೆಹ್ಲೋಟ್ ಅವರು ತಮ್ಮ ಉಮೇದುವಾರಿಕೆಯ ಸುತ್ತಲಿನ ಊಹಾಪೋಹಗಳನ್ನು "ಮಾಧ್ಯಮಗಳು ಸೃಷ್ಟಿಸಿದವು" ಎಂದು ಹೇಳಿದ್ದಾರೆ ಹಾಗೂ ನಮ್ಮ ಪಕ್ಷಕ್ಕೆ ಅಂತಹ ಪರಿಸ್ಥಿತಿ ಉಂಟಾದಾಗ ಪಕ್ಷವು ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡುತ್ತದೆ ಮತ್ತು ಜವಾಬ್ದಾರಿಯನ್ನು ತೆಗೆದುಕೊಳ್ಳಲು ಅನೇಕ ಪ್ರಖ್ಯಾತ ನಾಯಕರು ಲಭ್ಯವಿದ್ದಾರೆ ಎಂದು ಹೇಳಿದರು. ಈ ಮಧ್ಯೆ, ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಯ ನಿಖರ ದಿನಾಂಕಗಳನ್ನು ನಿರ್ಧರಿಸಲು ಆಗಸ್ಟ್ 28 ರಂದು ಮಧ್ಯಾಹ್ನ CWC ಸಭೆಯನ್ನು ನಿಗದಿಪಡಿಸಲಾಗಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ ವೇಣುಗೋಪಾಲ್ ಬುಧವಾರ ಹೇಳಿದ್ದಾರೆ. "ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಯ ನಿಖರವಾದ ವೇಳಾಪಟ್ಟಿಯನ್ನು ಅನುಮೋದಿಸಲು ಆಗಸ್ಟ್ 28 ರಂದು ಮಧ್ಯಾಹ್ನ 3:30 ಗಂಟೆಗೆ CWC ಯ ವರ್ಚುವಲ್ ಸಭೆ ನಡೆಯಲಿದೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ CWC ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ" ಎಂದು ವೇಣುಗೋಪಾಲ್ ಹೇಳಿದ್ದಾರೆ.
ಮಕ್ಕಳ ಜತೆ ಇಂದು ಲಂಡನ್‌ಗೆ ತೆರಳಲಿರುವ ಸೋನಿಯಾ ಗಾಂಧಿ: ಆರೋಗ್ಯ ತಪಾಸಣೆಗಾಗಿ ವಿದೇಶ ಪ್ರವಾಸ
ಸೀತಾರಾಮ್ ಕೇಸರಿಯ ಬಳಿಕ ಸೋನಿಯಾ ಗಾಂಧಿ ಪಕ್ಷದ ಅಧಿಕಾರವನ್ನು ವಹಿಸಿಕೊಂಡ ನಂತರ ಗಾಂಧಿಯಲ್ಲದ ಯಾರೂ ಈವರೆಗೆ ಕಾಂಗ್ರೆಸ್ ಅಧ್ಯಕ್ಷರಾಗಿಲ್ಲ. ಅಲ್ಲದೆ, ಪಕ್ಷದ ಕೆಲವು ಹಿರಿಯ ನಾಯಕರು ಮಂಗಳವಾರ ಕಾಂಗ್ರೆಸ್ ನಾಯಕತ್ವಕ್ಕೆ ಅಂದರೆ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಸೋನಿಯಾ ಗಾಂಧಿಗೆ ಸಂದೇಶವನ್ನು ಕಳುಹಿಸಿದ್ದಾರೆ ಎಂದು ಹೇಳಲಾಗಿದ್ದು, ಕುಟುಂಬದ ಸದಸ್ಯರೊಬ್ಬರು ಉನ್ನತ ಹುದ್ದೆಯನ್ನು ಸ್ವೀಕರಿಸಬೇಕೆಂದು ಅವರು ಒತ್ತಾಯಿಸಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ, ಕುಟುಂಬದ ಹೊರಗಿರುವವರು ಅಧ್ಯಕ್ಷರಾದರೆ ಪಕ್ಷ ಮತ್ತಷ್ಟು ದುಸ್ಥಿತಿಗೆ ಕುಸಿಯಲು ಕಾರಣವಾಗಬಹುದು ಮತ್ತು ಸಾಂಸ್ಥಿಕ ಏಕತೆಗೆ ಗಂಭೀರ ತೊಂದರೆಯಾಗಬಹುದು ಎಂಬ ಕಳವಳ ಪಕ್ಷದ ನಾಯಕರಲ್ಲಿದೆ ಎಂದೂ ಹೇಳಲಾಗಿದೆ.
ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ತಾನು ಅಭ್ಯರ್ಥಿ ಎಂಬ ಮಾತನ್ನು ಸಾರ್ವಜನಿಕವಾಗಿ ತಳ್ಳಿಹಾಕಿರುವ ಅಶೋಕ್ ಗೆಹ್ಲೋಟ್, ಪಕ್ಷದ ಕಾರ್ಯಕ್ರಮಕ್ಕಾಗಿ ಅಹಮದಾಬಾದ್‌ಗೆ ತೆರಳುವ ಮೊದಲು ಅರ್ಧ ಗಂಟೆ ಕಾಂಗ್ರೆಸ್ ಮುಖ್ಯಸ್ಥರನ್ನು ಭೇಟಿಯಾಗಿದ್ದರು ಮತ್ತು ಬುಧವಾರ ಜೈಪುರಕ್ಕೆ ಮರಳಲಿದ್ದಾರೆ ಎಂದು ಹೇಳಲಾಗಿದೆ. ಇನ್ನು, ತಾನು ಪಕ್ಷದ ಮುಂದಿನ ಅಧ್ಯಕ್ಷ ಎಂಬುದನ್ನು ಮಾಧ್ಯಮಗಳು ತೇಲಿಬಿಟ್ಟಿವೆ ಮತ್ತು ಕಾಂಗ್ರೆಸ್ ಹಿತದೃಷ್ಟಿಯಿಂದ ರಾಹುಲ್ ಗಾಂಧಿ ಅವರು ಉನ್ನತ ಹುದ್ದೆಯನ್ನು ಅಲಂಕರಿಸಬೇಕು ಎಂದು ಪುನರುಚ್ಚರಿಸಿದರು. ಅಲ್ಲದೆ, ಸೋನಿಯಾ ಅವರೊಂದಿಗೆ ನಡೆದ ಸಭೆಯಲ್ಲಿ ಸಹ ರಾಹುಲ್ ಗಾಂಧಿ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಒಪ್ಪಿಸುವಂತೆ ಮತ್ತೊಮ್ಮೆ ಸೋನಿಯಾ ಗಾಂಧಿ ಅವರನ್ನು ಕೋರಿದ್ದಾರೆ ಎನ್ನಲಾಗಿದೆ.
AICC President: ರಾಹುಲ್ ಅಧ್ಯಕ್ಷರಾಗದಿದ್ದರೆ ಸೋನಿಯಾ ಮುಂದುವರಿಕೆ?
ಕಳೆದ ಎರಡು ವರ್ಷಗಳಿಂದ ಆಂತರಿಕ ಸಮೀಕ್ಷೆಗಳ ಚರ್ಚೆಗೆ ಪ್ರತಿ ಬಾರಿಯೂ ಗೆಹ್ಲೋಟ್ ಅವರು ಉನ್ನತ ಅಭ್ಯರ್ಥಿ ಎಂದು ಊಹಿಸಲಾಗಿದೆ. ಆದರೆ, ಇಷ್ಟವಿಲ್ಲದ ನಾಯಕರನ್ನು ಉನ್ನತ ಹುದ್ದೆಗೆ ತಳ್ಳುವ ಸಾಧ್ಯತೆಯಿಲ್ಲ ಎಂದು ಹೇಳಲಾಗಿದ್ದು, ಉತ್ತರ ಭಾರತದ ಮಾಜಿ ಸಿಎಂ ಸೇರಿದಂತೆ ಕುಟುಂಬದ ಹೊರಗಿನ ಅನೇಕ ಹೆಸರುಗಳು ಸಹ ಕೇಳಿಬರುತ್ತಿವೆ.