ನಿರೀಕ್ಷೆಯಂತೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ನಾಲ್ಕು ಸ್ಥಾಯಿ ಸಮಿತಿಗೆ ಬಿಜೆಪಿಗರೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. 2 ಸಮಿತಿಗಳಿಗೆ ಕಾಂಗ್ರೆಸ್ಸಿಗರೂ ನಾಮಪತ್ರ ಸಲ್ಲಿಸಿದ್ದರಾದರೂ ಕೊನೆ ಕ್ಷಣದಲ್ಲಿ ಅದನ್ನು ವಾಪಸ್ ಪಡೆದ ಕಾರಣ ನಾಲ್ಕು ಸಮಿತಿಗಳಿಗೂ ಅವಿರೋಧ ಆಯ್ಕೆ ನಡೆಯಿತು
ಹುಬ್ಬಳ್ಳಿ (ಆ.34) :\ ನಿರೀಕ್ಷೆಯಂತೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ನಾಲ್ಕು ಸ್ಥಾಯಿ ಸಮಿತಿಗೆ ಬಿಜೆಪಿಗರೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. 2 ಸಮಿತಿಗಳಿಗೆ ಕಾಂಗ್ರೆಸ್ಸಿಗರೂ ನಾಮಪತ್ರ ಸಲ್ಲಿಸಿದ್ದರಾದರೂ ಕೊನೆ ಕ್ಷಣದಲ್ಲಿ ಅದನ್ನು ವಾಪಸ್ ಪಡೆದ ಕಾರಣ ನಾಲ್ಕು ಸಮಿತಿಗಳಿಗೂ ಅವಿರೋಧ ಆಯ್ಕೆ ನಡೆಯಿತು. ತೆರಿಗೆ ನಿರ್ಧರಣಾ, ಹಣಕಾಸು ಸ್ಥಾಯಿ ಸಮಿತಿಗೆ ಬಿಜೆಪಿಯ ಶಿವು ಮೆಣಸಿನಕಾಯಿ, ಕಾಂಗ್ರೆಸ್‌ನ ಇಮ್ರಾನ್ ಯಲಿಗಾರ ನಾಮಪತ್ರ ಸಲ್ಲಿಸಿದ್ದರು. ಇಮ್ರಾನ್ ಯಲಿಗಾರ ನಾಮಪತ್ರ ಹಿಂಪಡೆದರು. ಇದರಿಂದ ಶಿವು ಮೆಣಸಿನಕಾಯಿ ಅವಿರೋಧ ಆಯ್ಕೆಯಾದರು.
ಲಂಚ ಪಡೆದು ಪೇಡೆ ಬಾಕ್ಸ್ ಕೊಟ್ಟರು: ಆಡಳಿತ ಪಕ್ಷದಿಂದಲೆ ಭ್ರಷ್ಟಾಚಾರದ ಆರೋಪ !
ಇನ್ನೂ ನಗರ ಯೋಜನಾ ಹಾಗೂ ಅಭಿವೃದ್ಧಿ ಸ್ಥಾಯಿ ಸಮಿತಿಗೆ ಬಿಜೆಪಿಯ ವಿಜಯಾನಂದ ಶೆಟ್ಟಿ, ಕಾಂಗ್ರೆಸ್ಸಿನ ರಾಜಶೇಖರ ಕಮತಿ ನಾಮಪತ್ರ ಸಲ್ಲಿಸಿದರು. ರಾಜಶೇಖರ ಕೂಡ ನಾಮಪತ್ರ ಹಿಂಪಡೆದರು. ಹೀಗಾಗಿ ವಿಜಯಾನಂದ ಶೆಟ್ಟಿಆಯ್ಕೆ ಸಲೀಸಾಯಿತು. ಸಾರ್ವಜನಿಕ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಗೆ ಸುರೇಶ ಬೇದರೆ ಹಾಗೂ ಲೆಕ್ಕಗಳ ಸ್ಥಾಯಿ ಸಮಿತಿಗೆ ರಾಧಾಬಾಯಿ ಸಫಾರೆ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಈ ಇಬ್ಬರು ಅವಿರೋಧ ಆಯ್ಕೆಯಾದರು. ಎರಡು ಸ್ಥಾಯಿ ಸಮಿತಿಗೆ ಕಾಂಗ್ರೆಸ್ಸಿಗರು ಕಾಟಾಚಾರಕ್ಕೆಂಬಂತೆ ನಾಮಪತ್ರ ಸಲ್ಲಿಸಿದಂತಾಗಿತ್ತು. ಹಿಂಪಡೆಯುವವರೇ ಇದ್ದರೆ ನಾಮಪತ್ರ ಸಲ್ಲಿಸುವ ಅಗತ್ಯವೇನಿತ್ತು ಎಂಬ ಪ್ರಶ್ನೆ ಕಾಂಗ್ರೆಸ್ ಸದಸ್ಯರು ಮಾಡುತ್ತಿದ್ದರು.
ಮೇಯರ್ ಈರೇಶ ಅಂಚಟಗೇರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆಯ್ಕೆ ನಡೆಯಿತು. ಅವಿರೋಧವಾಗಿ ಆಯ್ಕೆಯಾಗಿದ್ದನ್ನು ಮೇಯರ್ ಘೋಷಿಸಿದರು. ಬಳಿಕ ಆಯ್ಕೆಯಾದ ನಾಲ್ವರನ್ನು ಮೇಯರ್ ಅಂಚಟಗೇರಿ ಹಾಗೂ ಆಯುಕ್ತ ಡಾ. ಗೋಪಾಲಕೃಷ್ಣ ಅವರು ಅಭಿನಂದಿಸಿದರು. ಆಡಳಿತಾರೂಢ ಬಿಜೆಪಿ ಮತ್ತು ವಿಪಕ್ಷ ಕಾಂಗ್ರೆಸ್ ಎರಡೂ ಪಕ್ಷಗಳು ತಲಾ ನಾಲ್ಕು ಹಾಗೂ ಮೂರು ಸೂತ್ರದನ್ವಯ ಹೊಂದಾಣಿಕೆ ಮಾಡಿಕೊಂಡ ಹಿನ್ನೆಲೆಯಲ್ಲಿ ಕಳೆದ ತಿಂಗಳು ನಡೆದ ಚುನಾವಣೆಯಲ್ಲಿ 28 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದರು. ಹಣಕಾಸು ಮತ್ತು ನಗರಯೋಜನಾ ಸಮಿತಿಗೆ ತೀವ್ರ ಪೈಪೋಟಿಯಿದ್ದರೂ ಶಿವು ಹಾಗೂ ವಿಜಯಾನಂದ ಶೆಟ್ಟಿಅವರಿಗೆ ಪಟ್ಟಕಟ್ಟಲಾಗಿದೆ.
ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷನ ಬರ್ಬರ ಕೊಲೆ!
ಮಹಾನಗರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ನೂತನ ಅಧ್ಯಕ್ಷರಾದ ಮೆಣಸಿನಕಾಯಿ, ಬೇದರೆ, ವಿಜಯಾನಂದ ಶೆಟ್ಟಿ, ರಾಧಾಭಾಯಿ ಸಫಾರೆ ಹೇಳಿದ್ದಾರೆ. ಬಹುತೇಕ ಎಲ್ಲ ಸ್ಥಾಯಿ ಸಮಿತಿ ಸದಸ್ಯರು ಇಂದಿನ ಪ್ರಕ್ರಿಯೆಗೆ ಹಾಜರಾಗಿದ್ದರು.ಪಕ್ಷೇತರರಾಗಿ ಆಯ್ಕೆಯಾದ ದುರ್ಗಮ್ಮ ಬಿಜವಾಡ, ಕಿಶನ್ ಬೆಳಗಾವಿ, ಚಂದ್ರಿಕಾ ಮೇಸ್ತ್ರಿ, ಜೆಡಿಎಸ್‌ನ ಲಕ್ಷ್ಮಿ ಹಿಂಡಸಗೇರಿ ಬಿಜೆಪಿ ಬೆಂಬಲಿಸಿದ್ದು ಸ್ಥಾಯಿ ಸಮಿತಿಯಲ್ಲಿ ಸ್ಥಾನ ಪಡೆದಿದ್ದಾರೆ..