
ಮೈಸೂರು (ಅ.21): ಮೀಸಲಾತಿ ಕುರಿತು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಬಹಿರಂಗ ಚರ್ಚೆಗೆ ಬರಲಿ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸವಾಲು ಹಾಕಿದರು. ನಗರದ ಹೊರವಲಯದ ರೆಸಾರ್ಟ್‌ನಲ್ಲಿ ಗುರುವಾರ ನಡೆದ ಶಾಸಕರು ಮತ್ತು ಪಕ್ಷದ ಟಿಕೆಟ್ ಆಕಾಂಕ್ಷಿಗಳ ಚಿಂತನ-ಮಂಥನ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ, ಎಲ್ಲಾ ವರ್ಗದವರನ್ನು ಗುರುತಿಸಿ ಒಟ್ಟುಗೂಡಿಸಿಕೊಂಡು ಮೀಸಲಾತಿ ಕಲ್ಪಿಸಿದ್ದರೆ ಅದು ಈ ದೇವೇಗೌಡ ಮಾತ್ರ. ನಾನು ಈ ಮಾತನ್ನು ಅಹಂಕಾರದಿಂದ ಹೇಳುತ್ತಿಲ್ಲ ಎಂದರು.
ಸುರಪುರದಲ್ಲಿ ಬಿಜೆಪಿ ಸಭೆಯಲ್ಲಿ ಏನು ಮಾತನಾಡಿದ್ದಾರೆ ಎಂಬುದನ್ನು ಗಮನಿಸಿದ್ದೇನೆ. ಕಾಂಗ್ರೆಸ್ ನಾಯಕರು ಏನು ಹೇಳುತ್ತಿದ್ದಾರೆ ಎಂಬುದನ್ನು ನೋಡಿದ್ದೇನೆ. ಮಹಿಳೆಯರಿಗೆ ಮೀಸಲಾತಿ ನೀಡಿದ್ದು ಇಂದಿರಾ ಗಾಂಧಿಯಲ್ಲ, ಆ ಕೆಲಸವನ್ನು ಮೊದಲ ಬಾರಿಗೆ ಕರ್ನಾಟಕದಲ್ಲಿ ಮಾಡಿದ್ದು ಯಾರು? ಎಂಬುದು ಗೊತ್ತಿದೆ. ಮೀಸಲಾತಿ ಕಲ್ಪಿಸಿದ್ದು ಯಾರು? ಎಂಬುದು ಗೊತ್ತಿದೆ ಎಂದು ಹೇಳಿದರು.
ವಾಗ್ದಾನ ಪೂರೈಸದಿದ್ದರೆ ಜೆಡಿಎಸ್ ಪಕ್ಷ ವಿಸರ್ಜನೆ: ಎಚ್.ಡಿ.ಕುಮಾರಸ್ವಾಮಿ
ಕಾಂಗ್ರೆಸ್‌ನ ಇಬ್ಬರು ನಾಯಕರ ನಡವಳಿಕೆ ಮತ್ತು ಟೀಕೆಗಳನ್ನು ಕೇಳಿದ್ದೇನೆ. ಅಲ್ಲದೆ, ಜೆಡಿಎಸ್ ಕುರಿತು ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಆಡುತ್ತಿರುವ ಮಾತುಗಳನ್ನು ಗಮನಿಸಿದ್ದೇನೆ. ಇನ್ನೇನು ಪಕ್ಷ ಮುಗಿದೇ ಹೋಯಿತು ಎಂದೆಲ್ಲ ಹೇಳಿದ್ದಾರೆ. ಆದರೆ ಜೆಡಿಎಸ್‌ನ ನಿಜವಾದ ಶಕ್ತಿ ಏನೆಂದು ನಾನು ತೋರಿಸಿಕೊಡುತ್ತೇನೆ. ಜನರಲ್ಲಿ ಪಕ್ಷದ ಬಗ್ಗೆ ಬೇರೆಯದೇ ಅಭಿಪ್ರಾಯ ಬರುವಂತೆ ಬಿಂಬಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಾನು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಬದಲಿಗೆ ಸಮಯ ಬಂದಾಗ ತಕ್ಕ ಉತ್ತರ ಕೊಡುತ್ತೇನೆ. ನಾನು ಇಲ್ಲಿ ಕುಮಾರಸ್ವಾಮಿಯನ್ನು ಮುಖ್ಯಮಂತ್ರಿಯನ್ನಾಗಿಸಲು ಶಕ್ತಿ ತುಂಬುವ ಕೆಲಸ ಮಾಡಲು ಬಂದಿಲ್ಲ. ಆದರೆ ಜೆಡಿಎಸ್‌ಗೆ ಇಂದು ಪೂರಕ ವಾತಾವರಣವಿದೆ. 2023ಕ್ಕೆ ಈಗಿನಿಂದಲೇ ಶ್ರಮಿಸಿದರೆ ಖಂಡಿತವಾಗಿಯೂ ಅಧಿಕಾರಕ್ಕೆ ಬರಬಹುದು. ಇಷ್ಟಕ್ಕೂ ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವ ಎಲ್ಲ ಅವಕಾಶವಿದೆ. ಅಂತಹ ವಾತಾವರಣವನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.
ನನ್ನ ಕಣ್ಮುಂದೆ ಜೆಡಿಎಸ್‌ಗೆ ಮತ್ತೆ ಅಧಿಕಾರ: ದೇವೇಗೌಡ
ಎಚ್.ಡಿ. ಕುಮಾರಸ್ವಾಮಿ ಅವರ ಆಡಳಿತದ ಕುರಿತು ಹೇಳುತ್ತ ಹೋದರೆ 10 ವರ್ಷವಾದರೂ ಮುಗಿಯುವುದಿಲ್ಲ. ಅಷ್ಟೊಂದು ಕೆಲಸವನ್ನು ಅವರು ಮಾಡಿದ್ದಾರೆ. ಇಲ್ಲಿರುವ ಪ್ರತಿಯೊಬ್ಬರಲ್ಲೂ ಒಂದೊಂದು ರೀತಿಯ ಶಕ್ತಿ ಇದೆ. ಅದನ್ನು ಒಗ್ಗೂಡಿಸುವ ಕೆಲಸವನ್ನು ಕುಮಾರಸ್ವಾಮಿ ಮಾಡುತ್ತಿದ್ದಾರೆ ಎಂದು ಅವರು ಶ್ಲಾಘಿಸಿದರು. ಕುಮಾರಸ್ವಾಮಿ ಅವರು ಬೆಂಗಳೂರು ಮತ್ತು ಬಿಡದಿಯಲ್ಲಿ ಮಾಡಿದ ಎರಡೂ ಕಾರ್ಯಕ್ರಮಗಳು ಅಭೂತಪೂರ್ವ ಯಶಸ್ಸು ಕಂಡವು. ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಈ ಕಾರ್ಯಕ್ರಮ ಆಯೋಜಿಸಿದ್ದಾರೆ. ಮುಂದೆಯೂ ಇದೇ ರೀತಿ ಪಕ್ಷಕ್ಕೆ ಯಶಸ್ಸು ದೊರಕಬೇಕು ಎಂದು ಅವರು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.