
ಬೆಂಗಳೂರು (ಮೇ.29): ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ 1,741.60 ಕೋಟಿ ರು. ಬಂಡವಾಳ ಹೂಡಿಕೆಯ 63 ಯೋಜನೆಗಳ ಅನುಷ್ಠಾನಕ್ಕೆ 153ನೇ ರಾಜ್ಯಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ ಸಭೆ ಅನುಮೋದನೆ ನೀಡಿತು. ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಮಿತಿ ಸಭೆಯಲ್ಲಿ, ದಕ್ಷಿಣ ಕನ್ನಡ, ತುಮಕೂರು, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ 1,741.60 ಕೋಟಿ ರು. ಮೌಲ್ಯದ ಬಂಡವಾಳ ಹೂಡಿಕೆಯ 63 ಯೋಜನೆಗಳ ಅನುಷ್ಠಾನಕ್ಕೆ ಅನುಮೋದನೆ ನೀಡಲಾಯಿತು. ಈ ಕ್ರಮದಿಂದಾಗಿ ನಾಲ್ಕು ಜಿಲ್ಲೆಗಳಲ್ಲಿ 12500 ಉದ್ಯೋಗ ಸೃಷ್ಟಿಯಾಗಲಿದೆ.
ನಾಲ್ಕು ಜಿಲ್ಲೆಗಳಲ್ಲಿ ಅತ್ಯಾಧುನಿಕ ಫೀಡ್‌ಪ್ಲ್ಯಾಂಟ್, ಪ್ರಿ-ಫ್ಯಾಬ್ರಿಕೇಟೆಡ್ ಮಾಡ್ಯುಲರ್, ಬಸ್ ಬಾಡಿ ಬಿಲ್ಡಿಂಗ್, ವೈಮಾಂತರಿಕ್ಷ ಹಾಗೂ ರಕ್ಷಣಾ ವಲಯಕ್ಕೆ ಸಂಬಂಧಿಸಿದ ಎಲೆಕ್ಟ್ರಾನಿಕ್ಸ್ ವ್ಯವಸ್ಥೆ ಮತ್ತು ಬಿಡಿಭಾಗ ತಯಾರಿಕಾ ಘಟಕಗಳ ಸ್ಥಾಪನೆಯ 60 ಯೋಜನೆಗಳಿಗೆ ಅನುಮೋದಿಸಲಾಗಿದೆ. ಜತೆಗೆ ಹೆಚ್ಚುವರಿ ಬಂಡವಾಳ ಹೂಡಿಕೆಯ 3 ಯೋಜನೆಗಳಿಗೂ ಸಭೆಯಲ್ಲಿ ಅನುಮತಿ ನೀಡಲಾಗಿದೆ. ಅನುಮೋದನೆ ನೀಡಿದ ಯೋಜನೆಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರಿ ತಾಲೂಕಿನಲ್ಲಿ 125.88 ಕೋಟಿ ರು. ವೆಚ್ಚದ ಅತ್ಯಾಧುನಿಕ ಫೀಡ್ ಪ್ಲ್ಯಾಂಟ್, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ 97.52 ಕೋಟಿ ರು. ವೆಚ್ಚದ ಪ್ರಿಫ್ಯಾಬ್ರಿಕೇಟೆಡ್ ಮಾಡ್ಯುಲರ್ ಪ್ರಾಡಕ್ಟ್ ಘಟಕ, ತುಮಕೂರು ಜಿಲ್ಲೆಯ ಹಿರೇಹಳ್ಳಿಯಲ್ಲಿ 91.2 ಕೋಟಿ ರು. ವೆಚ್ಚದ ಟ್ರಾನ್ಸ್‌ಫಾರ್ಮರ್ ರೇಡಿಯೇಟರ್ ತಯಾರಿಕಾ ಘಟಕ ಸ್ಥಾಪನೆ ಪ್ರಮುಖ ಯೋಜನೆಗಳಾಗಿವೆ.
ಒಟ್ಟಾರೆ 50 ಕೋಟಿ ರು.ಗೂ ಹೆಚ್ಚಿನ ಮೊತ್ತದ ಬಂಡವಾಳ ಹೂಡಿಕೆಯ 7 ಪ್ರಮುಖ ಬೃಹತ್ ಮತ್ತು ಮಧ್ಯಮ ಯೋಜನೆಗಳಿಗೆ, 15ರಿಂದ 50 ಕೋಟಿ ರು. ಒಳಗಿನ 53 ಯೋಜನೆಗಳಿಗೆ ಹಾಗೂ 41.20 ಕೋಟಿ ರು. ಮೊತ್ತದ ಹೆಚ್ಚುವರಿ ಬಂಡವಾಳ ಹೂಡಿಕೆಯ 3 ಯೋಜನೆಗಳಿಗೆ ಏಕಗವಾಕ್ಷಿ ಅನುಮೋದನಾ ಸಮಿತಿ ಅನುಮತಿಸಿದೆ. ಸಭೆಯಲ್ಲಿ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಸೆಲ್ವಕುಮಾರ್, ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ, ಕೆಐಎಡಿಬಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎನ್.ಮಹೇಶ್ ಇತರರಿದ್ದರು.
15,441 ಕೋಟಿ ರು.ಗಳ ಹೂಡಿಕೆ ಯೋಜನೆಗಳಿಗೆ ಒಪ್ಪಿಗೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಬುಧವಾರ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿಯ 65ನೇ ಸಭೆ ನಡೆದಿದ್ದು, ರಾಜ್ಯದಲ್ಲಿ 15,441.17 ಕೋಟಿ ರು. ಬಂಡವಾಳ ಹೂಡಿಕೆ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ನಡೆದ ಸಭೆಯಲ್ಲಿ ನಾಲ್ಕು ಬಂಡವಾಳ ಹೂಡಿಕೆ ಪ್ರಸ್ತಾವನೆ ಹಾಗೂ ಎರಡು ಹೆಚ್ಚುವರಿ ಬಂಡವಾಳ ಹೂಡಿಕೆ ಪ್ರಸ್ತಾವನೆ ಸೇರಿ ವಿವಿಧ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಲಾಗಿದೆ.
ಹೂಡಿಕೆ ಯೋಜನೆಗಳ ವಿವರ: ಈ ವೇಳೆ ಶ್ರೀ ಸಿಮೆಂಟ್ ಲಿಮಿಟೆಡ್ ಸಂಸ್ಥೆಯ 2406 ಕೋಟಿ ರು.ಗಳ ಹೊಸ ಬಂಡವಾಳ ಹೂಡಿಕೆಯ ಯೋಜನೆಗೆ ಅನುಮೋದನೆ ನೀಡಿದ್ದು, ಇದರಿಂದ 300 ಉದ್ಯೋಗ ಸೃಷ್ಟಿ ನಿರೀಕ್ಷಿಸಲಾಗಿದೆ. ಉಳಿದಂತೆ ದಾಲ್ಮಿಯಾ(ಭಾರತ್) ಲಿಮಿಟೆಡ್‌ನಿಂದ 3020 ಕೋಟಿ ರು. ಹೂಡಿಕೆಯಾಗಲಿದ್ದು, 570 ಉದ್ಯೋಗ ಸೃಷ್ಟಿಯಾಗಲಿದೆ. ಎಂವೀ ಎನರ್ಜಿ ಕಂಪೆನಿಯಿಂದ 5495 ಕೋಟಿ ರು. ಹೂಡಿಕೆಗೆ ಅನುಮೋದನೆ ನೀಡಿದ್ದು, ಇದರಿಂದ 2508 ಉದ್ಯೋಗ ಸೃಷ್ಟಿಯಾಗಲಿದೆ. ನೂತನ ಹೂಡಿಕೆ ಪ್ರಸ್ತಾವನೆಗಳಿಂದ ಒಟ್ಟು 13921 ಕೋಟಿ ರು. ಬಂಡವಾಳ ಹರಿದುಬರಲಿದ್ದು, 3948 ಉದ್ಯೋಗ ಸೃಷ್ಟಿಯಾಗಲಿದೆ. ಉಳಿದಂತೆ ಹೆಚ್ಚುವರಿ ಹೂಡಿಕೆಗಳಿಂದ ಸೇರಿ 15,441 ಕೋಟಿ ರು. ಹೂಡಿಕೆಗಳಿಗೆ ಒಪ್ಪಿಗೆ ನೀಡಲಾಗಿದೆ ಎಂದು ತಿಳಿದುಬಂದಿದೆ.
ಎಂವೀ ಎನರ್ಜಿಯ 5,495 ಕೋಟಿ ಹೂಡಿಕೆಗೆ ಅನುಮತಿ: ಸಭೆಯಲ್ಲಿ ಸಚಿವರಾದ ಎಂ.ಬಿ. ಪಾಟೀಲ್, ಚೆಲುವರಾಯಸ್ವಾಮಿ, ಪ್ರಿಯಾಂಕ್ ಖರ್ಗೆ, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಎಲ್.ಕೆ ಅತೀಕ್, ವಾಣಿಜ್ಯ ಮತ್ರು ಕೈಗಾರಿಕಾ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಸೇರಿ ಹಲವರು ಹಾಜರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.