ಬಿವೈವಿ ಜತೆ ಸಿಎಂ ಸಂವಾದಕ್ಕೆ ಬರಲಿ: ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನ್‌

Kannadaprabha News   | Kannada Prabha
Published : May 29, 2025, 09:47 AM IST
BY Vijayendra, Radha Mohandas

ಸಾರಾಂಶ

ರಾಜ್ಯದ ಕಾಂಗ್ರೆಸ್ ಸರ್ಕಾರದ ಎರಡು ವರ್ಷದ ಅರಾಜಕತೆಯನ್ನು ಜನರ‌ ಮುಂದೆ ಇಟ್ಟಿದ್ದೇವೆ. ನಾವು ಮಾಡಿದ ಆರೋಪಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನರಿಗೆ ಉತ್ತರ ನೀಡಲಿ.

ಬೆಂಗಳೂರು (ಮೇ.29): ‘ರಾಜ್ಯದ ಕಾಂಗ್ರೆಸ್ ಸರ್ಕಾರದ ಎರಡು ವರ್ಷದ ಅರಾಜಕತೆಯನ್ನು ಜನರ‌ ಮುಂದೆ ಇಟ್ಟಿದ್ದೇವೆ. ನಾವು ಮಾಡಿದ ಆರೋಪಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನರಿಗೆ ಉತ್ತರ ನೀಡಲಿ. ಇಲ್ಲದಿದ್ದರೆ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಜೊತೆ ಸಂವಾದಕ್ಕೆ ಬರಲಿ’ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಡಾ.ರಾಧಾಮೋಹನ್ ದಾಸ್ ಅಗರ್‌ವಾಲ್‌ ಸವಾಲು ಎಸೆದಿದ್ದಾರೆ. ಬುಧವಾರ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ಸಿದ್ದರಾಮಯ್ಯ ಅವರು ಪ್ರಜಾಸತ್ತಾತ್ಮಕ ವಿಧಾನದಿಂದ ಓಡಿ ಹೋಗಬಾರದು. ವಿಜಯೇಂದ್ರ ಅವರ ಜೊತೆ ಸಂವಾದಕ್ಕೆ ಬರಬೇಕು. ಟಿ.ವಿ.ಗಳಲ್ಲಿ ಇದರ ನೇರ ಪ್ರಸಾರ ಆಗಲಿ. ಆರೋಪಗಳು ತಪ್ಪೆಂಬ ವಿಶ್ವಾಸವಿದ್ದರೆ ಮುಖ್ಯಮಂತ್ರಿಗಳು ಸಂವಾದಕ್ಕೆ ಬರಲಿ ಎಂದು ಸವಾಲು ಹಾಕಿದರು.

ಕಾಂಗ್ರೆಸ್ ಪಕ್ಷ ಎರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸರ್ಕಾರದ ವೈಫಲ್ಯಗಳ ಕುರಿತು ಬಿಜೆಪಿ ಪತ್ರಿಕೆಗಳ ಮೂಲಕ ಜಾಹೀರಾತು ನೀಡಿ ಜನರಿಗೆ ಮಾಹಿತಿ ಕೊಟ್ಟಿತ್ತು. ಅಲ್ಲದೆ, ಆರೋಪಪಟ್ಟಿ ಬಿಡುಗಡೆ ಮಾಡಿತ್ತು. ಸತ್ಯಾಂಶಗಳನ್ನು ಜನರಿಗೆ ತಿಳಿಸಿದ್ದರಿಂದ ಕಾಂಗ್ರೆಸ್ ಪಕ್ಷ ಆತಂಕಗೊಂಡಿತ್ತು. ಅದು ಜನರಿಗೆ ಉತ್ತರ ಕೊಡಬೇಕಿತ್ತು. ಪ್ರಜಾಸತ್ತೆಯಲ್ಲಿ ಆರೋಪ-ಪ್ರತ್ಯಾರೋಪ ಸಾಮಾನ್ಯ ಪ್ರಕ್ರಿಯೆ. ಆದರೆ, ಬಿಜೆಪಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದು, ಭಾರತ ಮಾತ್ರವಲ್ಲ ಜಗತ್ತಿನಲ್ಲೇ ಮೊದಲ ಬಾರಿಗೆ ಎಂದು ಲೇವಡಿ ಮಾಡಿದರು.

ಈಗ ಚುನಾವಣೆ ನಡೆದರೆ ಬಿಜೆಪಿಗೆ ಗೆಲುವು: ರಾಜ್ಯದಲ್ಲಿ ಬಿಜೆಪಿ ಕಡೆ ಜನರ ಒಲವು ಹೆಚ್ಚಾಗಿದ್ದು, ಈಗ ಚುನಾವಣೆ ನಡೆದರೆ ಬಿಜೆಪಿ 150 ರಿಂದ 155 ಸೀಟುಗಳನ್ನು ಪಡೆಯುವ ಸಾಧ್ಯತೆ ಇದೆ ಎಂಬುದಾಗಿ ಸಮೀಕ್ಷೆಗಳು ತಿಳಿಸಿವೆ ಎಂದು ಇದೇ ವೇಳೆ ಅಗರ್‌ವಾಲ್ ಸಂತಸ ವ್ಯಕ್ತಪಡಿಸಿದರು. 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಉತ್ತಮ ಪ್ರದರ್ಶನ ನೀಡಿರಲಿಲ್ಲ. ಕಾಂಗ್ರೆಸ್ ಪಕ್ಷ ಬಹುಮತ ಪಡೆದಿತ್ತು. ಆದರೆ, ನಂತರ ನಡೆದ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರ ರಾಷ್ಟ್ರೀಯ ನೇತೃತ್ವ ಮತ್ತು ವಿಜಯೇಂದ್ರ ಅವರ ಸ್ಥಳೀಯ ನಾಯಕತ್ವದಲ್ಲಿ ಬಿಜೆಪಿ ಚುನಾವಣೆ ಎದುರಿಸಿತ್ತು. ನಾವು 135 ಸೀಟುಗಳಲ್ಲಿ ಮುನ್ನಡೆ ಪಡೆದಿದ್ದೆವು ವಿಶ್ಲೇಷಿಸಿದರು.ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಸಿರೋಯಾ, ಶಾಸಕರಾದ ಹರೀಶ್ ಪೂಂಜಾ, ಮಾನಪ್ಪ ವಜ್ಜಲ್, ಡಾ.ಶೈಲೇಂದ್ರ ಬೆಲ್ದಾಳೆ, ಡಾ.ಅವಿನಾಶ್ ಜಾಧವ್, ಡಾ.ಚಂದ್ರು ಲಮಾಣಿ, ಕೃಷ್ಣ ನಾಯ್ಕ್ ಮತ್ತಿತರರು ಉಪಸ್ಥಿತರಿದ್ದರು.

ಇಲ್ಲಿರುವುದು ಮುಸ್ಲಿಂ ಲೀಗ್ ಸರ್ಕಾರ: ಕಳೆದ ಎರಡು ವರ್ಷಗಳಿಂದ ಕರ್ನಾಟಕದಲ್ಲಿ ಕಾಂಗ್ರೆಸ್ ಬದಲಾಗಿ ಬಹುತೇಕ ಮುಸ್ಲಿಂ ಲೀಗ್‌ ಸರ್ಕಾರ ಆಡಳಿತದಲ್ಲಿದೆ ಎಂದು ಬಿಜೆಪಿ ಉಸ್ತುವಾರಿ ಅಗರ್‌ವಾಲ್‌ ಆಪಾದಿಸಿದ್ದಾರೆ. ಅಂಗಡಿಯಲ್ಲಿ ಹನುಮಾನ್ ಪೂಜೆ ಮಾಡಿದ ಅಪರಾಧಕ್ಕೆ ಅಂಗಡಿಗೆ ನುಗ್ಗಿ ಹಲ್ಲೆ ಮಾಡಲಾಗಿತ್ತು. ತುಷ್ಟೀಕರಣಕ್ಕಾಗಿ ವಕ್ಫ್ ಮಂಡಳಿಗೆ ಭಾರಿ ಪ್ರಮಾಣದ ಜಮೀನು ನೀಡಿದ್ದು ಗೊತ್ತಿದೆ. ಅವರಿಗೆ 150 ಕೋಟಿ ಕೊಟ್ಟದ್ದು, ಶೇ.4 ಮೀಸಲಾತಿ ನೀಡಿದ್ದು ನಾವು ನೋಡಿದ್ದೇವೆ. ಕಾಂಗ್ರೆಸ್ ರಾಜ್ಯಸಭಾ ಸದಸ್ಯರೊಬ್ಬರು ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದರು. ಕಾಂಗ್ರೆಸ್ ಮುಸ್ಲಿಂ ತುಷ್ಟೀಕರಣ ನೀತಿ ಕೈಬಿಡಲಿ. ರಾಷ್ಟ್ರವಾದದ ರಾಜಕಾರಣವನ್ನು ಅಳವಡಿಸಿಕೊಳ್ಳಲಿ ಎಂದು ಆಗ್ರಹಿಸಿದರು.

ಅಧ್ಯಕ್ಷ ವಿಜಯೇಂದ್ರ ಬಗ್ಗೆ ರಾಧಾಮೋಹನ್‌ ಮೆಚ್ಚುಗೆ: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಬಿ.ವೈ.ವಿಜಯೇಂದ್ರ ಅವರ ಮುಂದುವರಿಕೆ ಬಗ್ಗೆ ಪಕ್ಷದಲ್ಲಿ ಇನ್ನೂ ಚರ್ಚೆ ಮುಂದುವರೆದಿರುವ ಮಧ್ಯೆಯೇ ಅವರ ಕಾರ್ಯವೈಖರಿ ಬಗ್ಗೆ ಪಕ್ಷದ ರಾಜ್ಯ ಉಸ್ತುವಾರಿ ಡಾ.ರಾಧಾಮೋಹನ್ ದಾಸ್ ಅಗರ್‌ವಾಲ್‌ ಬಹಿರಂಗವಾಗಿಯೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ವಿಜಯೇಂದ್ರ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಪಕ್ಷ ಸಂಘಟನೆ ಉತ್ತಮವಾಗಿದೆ’ ಎಂದು ಅಗರ್‌ವಾಲ್‌ ಹೇಳಿದ್ದಾರೆ. ಬುಧವಾರ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ನಾನು ಹೊಗಳಿದರೆ ಹೊಗಳಿದೆ ಎನ್ನುತ್ತೀರಿ. ತೆಗಳಿದರೆ ತೆಗಳಿದೆ ಎನ್ನುತ್ತೀರಿ. ನಾನು ವಿಜಯೇಂದ್ರ ಅವರನ್ನು ಹೊಗಳುತ್ತೇನೆ. ವಿಜಯೇಂದ್ರ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಪಕ್ಷ ಸಂಘಟನೆ ಉತ್ತಮವಾಗಿದೆ. ಇಲ್ಲಿನ ಪ್ರತಿಪಕ್ಷವಾದ ಬಿಜೆಪಿ ಸಾಧನೆ ನನಗೆ ಸಂತಸ ನೀಡಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ರಾಜ್ಯಾಧ್ಯಕ್ಷರ ಚುನಾವಣೆ ಯಾವಾಗ ಎನ್ನುವುದರ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ತಿಳಿಸಿದರು. ಈ ವೇಳೆ ವಿಜಯೇಂದ್ರ ಅವರು ಅಗರ್‌ವಾಲ್ ಪಕ್ಕದಲ್ಲೇ ಆಸೀನರಾಗಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರೈತರ ಬೆಳೆಗಳಿಗೆ ಮಾರುಕಟ್ಟೆ ಕಲ್ಪಿಸಲು 'ಅಂತಾರಾಷ್ಟ್ರೀಯ ಸ್ಯಾಂಡ್‌ವಿಚ್ ಸ್ನಾತಕೋತ್ತರ ಕೋರ್ಸ್': ಸಿಎಂ ಸಿದ್ದರಾಮಯ್ಯ
ಸಿದ್ಧರಾಮಯ್ಯ ಮಾತು ಎತ್ತಿದ್ರೆ ಸಾಬ್ರು ಸಾಬ್ರು ಅಂತ ಜಪ ಮಾಡ್ತಾರೆ: ಶಾಸಕ ಯತ್ನಾಳ್ ವ್ಯಂಗ್ಯ!