ಆಡಳಿತ ವಿರೋಧಿ ಅಲೆ ಚುನಾವಣೆಯಲ್ಲಿ ಬಿರುಗಾಳಿಯಂತೆ ಬೀಸಿತು. ಆ ಗಾಳಿಯ ರಭಸಕ್ಕೆ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರಂತಹ ದೊಡ್ಡ ಬುಡಗಳೇ ನೆಲಕ್ಕುರಳಿದವು. ಪಕ್ಷದ ನಾಯಕನಾಗಿ ಆಡಳಿತ ವಿರೋಧಿ ಇದ್ದಿದ್ದನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಲು ಸಿದ್ದನಿದ್ದೇನೆ: ಡಿ.ವಿ.ಸದಾನಂದಗೌಡ
ರಾಮನಗರ(ಜೂ.24): ಬಿಜೆಪಿ ಸರ್ಕಾರದ ಆಡಳಿತ ವಿರೋಧಿ ಅಲೆ ತಗ್ಗಿಸಿ ಪೊಲಿಟಿಕಲ್ ಸ್ಟ್ರಾಟರ್ಜಿ ಮಾಡುವಲ್ಲಿ ಹಾಗೂ ಕಾಂಗ್ರೆಸ್‌ನ ಸುಳ್ಳಿನ ಗ್ಯಾರಂಟಿಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವಲ್ಲಿ ವಿಫಲವಾಗಿದ್ದೆ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರು ಆಡಳಿತ ವಿರೋಧಿ ಅಲೆ ಇದ್ದಿದ್ದನ್ನು ಒಪ್ಪಿಕೊಂಡರು.
ನಗರದಲ್ಲಿ ಬಿಜೆಪಿ ಆಯೋಜಿಸಿದ್ದ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಆಡಳಿತ ವಿರೋಧಿ ಅಲೆ ಚುನಾವಣೆಯಲ್ಲಿ ಬಿರುಗಾಳಿಯಂತೆ ಬೀಸಿತು. ಆ ಗಾಳಿಯ ರಭಸಕ್ಕೆ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರಂತಹ ದೊಡ್ಡ ಬುಡಗಳೇ ನೆಲಕ್ಕುರಳಿದವು. ಪಕ್ಷದ ನಾಯಕನಾಗಿ ಆಡಳಿತ ವಿರೋಧಿ ಇದ್ದಿದ್ದನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಲು ಸಿದ್ದನಿದ್ದೇನೆ. ಬಿಜೆಪಿ ಸರ್ಕಾರದ ಸಾಧನೆಗಳು ಜನರಿಗೆ ತಲುಪಿಸುವಲ್ಲಿ ನಾವು ಸೋತವು. ಕಾಂಗ್ರೆಸ್ ಪಕ್ಷದ ಸುಳ್ಳಿನ ಗ್ಯಾರಂಟಿಗಳಿಗೆ ಕೌಂಟರ್ ಮಾಡುವಲ್ಲಿ ವಿಫಲರಾದೆವು. ಅದ್ಯಾವ ಅಂಡರ್ ಕರೆಂಚ್ ಕೆಲಸ ಮಾಡಿತೊ ಗೊತ್ತಿಲ್ಲ. ಸುಳ್ಳು ಆಶ್ವಾಸನೆಯ ಚುನಾವಣೆ ಎಂಬುದಕ್ಕೆ ಈ ಚುನಾವಣೆ ನಿದರ್ಶನ ಎಂದು ಹೇಳಿದರು.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ - ಜೆಡಿಎಸ್ ಮೈತ್ರಿ: ರಾಜಕೀಯ ಗುಟ್ಟು ಬಹಿರಂಗ
ರಾಜ್ಯ ಹಾಗೂ ಜಿಲ್ಲಾ ನಾಯಕರ ಮಟ್ಟದಲ್ಲಿ ಕೆಲವೊಂದು ತಪ್ಪುಗಳು ಆಗಿರಬಹುದು. ಆದರೆ, ಸೋಲಿಗೆ ಯಾರೂ ಎದೆಗುಂದಬೇಕಿಲ್ಲ. ಬಿಜೆಪಿ ಇಂತಹ ಅನೇಕ ಸೋಲು ಗೆಲುವುಗಳನ್ನು ಕಂಡಿದೆ. ಸೋತವೆಂದು ಕೈಕಟ್ಟಿಕೂರಲ್ಲ, ಪಲಾಯನ ಮಾಡುವುದಿಲ್ಲ. ನಾವೀಗ ಗಾಯಗೊಂಡ ಹುಲಿಯಾಗಿದ್ದು, ಮತ್ತೆ ಬೇಟೆಯಾಡಬೇಕಿದೆ. ನಾವು ಎಲ್ಲಿ ಕಳೆದುಕೊಂಡಿದ್ದೇವೆಯೊ ಅಲ್ಲಿಯೇ ಹುಡುಕಬೇಕು. ಬೆಂಗಳೂರು ಗ್ರಾಮಾಂತರ ಸಂಸತ್ ಕ್ಷೇತ್ರದಲ್ಲಿ ವಿಜಯ ಪತಾಕೆ ಹಾರಿಸಿ ಬಿಜೆಪಿ ಶಕ್ತಿ ತೋರಿಸಬೇಕಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಅಹಂಕಾರ, ಧಿಮಾಕಿಗೆ ಜನರೇ ಪಾಠ ಕಲಿಸುತ್ತಾರೆ ಎಂದು ಸದಾನಂದಗೌಡ ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಮಾತನಾಡಿ, ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಹೋರಾಟ ನಡೆಸಿದರು ಎಲ್ಲೂ ಗೆಲುವು ಸಾಧಿಸಲು ಆಗಲಿಲ್ಲ. ಬಿಜೆಪಿ ಮತ್ತು ಜೆಡಿಎಸ್ ಹೋರಾಟದಲ್ಲಿ ಕಾಂಗ್ರೆಸ್‌ಗೆ ಲಾಭವಾಗಿದೆ. ಆದರೆ, ಮೈಸೂರು ಭಾಗದಲ್ಲಿ ಜೆಡಿಎಸ್ ಶಕ್ತಿಯನ್ನು ಕುಂದಿಸಿದ್ದೇವೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಿಲ್ಲೆಯಲ್ಲಿ ಯಾವುದೇ ಛಾಪು ಮೂಡಿಸಲಿಲ್ಲ. ನಮ್ಮದೇ ಸರ್ಕಾರ ಇದ್ದರೂ ಜನಸಾಮಾನ್ಯರನ್ನು ಪಕ್ಷಕ್ಕೆ ಸೆಳೆಯಲಾಗಲಿಲ್ಲ. ಜನರಲ್ಲಿ ಭರವಸೆ ಮೂಡಿಸಲು ಆಗಲಿಲ್ಲ ಎಂಬ ನೋವಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸುಳ್ಳು ಭರವಸೆ ಮತ್ತು ಟೋಕನ್ ಹಂಚಿ ಗೆಲುವು ಸಾಧಿಸಿದೆ. ಆ ಪಕ್ಷದಲ್ಲಿ ಎರಡು ಗುಂಪುಗಳಿದ್ದು, ಜನರಿಗೆ ಕೊಟ್ಟಿರುವ ಭರವಸೆಯನ್ನು ಈಡೇರಿಸುವುದಿಲ್ಲ. ಮಹಿಳೆಯರಿಗೆ ಸಾರಿಗೆ ಬಸ್ಸಿನಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿದರು. ಆದರೆ, ಖಾಸಗಿ ಬಸ್ ನವರಿಗೆ ಪರ್ಯಾಯ ವ್ಯವಸ್ಥೆ ಮಾಡಲಿಲ್ಲ. ಆ ಪಕ್ಷದ ಐದು ಗ್ಯಾರಂಟಿಗಳು ಇದೇ ರೀತಿಯಿದ್ದು, ಅವೆಲ್ಲವೂ ವಿಫಲವಾಗಲಿವೆ ಎಂದು ಹೇಳಿದರು.ಮುಂದಿನ ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ಗೆ ಕರ್ನಾಟಕದಿಂದಲೇ ಹಣ ಹೊಂದಿಸಬೇಕಿದೆ. ಆ ಚುನಾವಣೆ ವೇಳೆಗೆ ಬದಲಾದ ಪರಿಸ್ಥಿತಿಯಲ್ಲಿ ಪಕ್ಷದ ವರಿಷ್ಠರು ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವು ಬದ್ಧರಾಗಿ ಕೆಲಸ ಮಾಡಬೇಕಿದೆ ಎಂದು ಯೋಗೇಶ್ವರ್ ಬಿಜೆಪಿ - ಜೆಡಿಎಸ್ ಮೈತ್ರಿ ಬಗ್ಗೆ ಪರೋಕ್ಷವಾಗಿ ಪ್ರಸ್ತಾಪಿಸಿದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥ ನಾರಾಯಣಗೌಡ ಮಾತನಾಡಿ, ಉತ್ತಮ ಆಡಳಿತ ನೀಡಿಯೂ ಬಿಜೆಪಿ ಸೋತಿದೆ. ಜನರು ನಮ್ಮ ಸಾಧನೆಗಳನ್ನು ನೋಡಿ ಕೈ ಹಿಡಿಯಲಿಲ್ಲ. ಕಾಂಗ್ರೆಸ್ ಪಕ್ಷ ರಚನಾತ್ಮಕವಾಗಿ ಕೆಲಸ ಮಾಡಿ ಅಧಿಕಾರಕ್ಕೆ ಬಂದಿಲ್ಲ ಎಂದು ಟೀಕಿಸಿದರು.
ಯಡಿಯೂರಪ್ಪರವರು ತಮ್ಮ ಅವಧಿಯಲ್ಲಿ ಸದಾನಂದಗೌಡ, ಜಗದೀಶ್ ಶೆಟ್ಟರ್ ಹಾಗೂ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಮಾಡಿದರು. ಆದರೆ, ಸಿದ್ದರಾಮಯ್ಯನವರು ದಲಿತರಿಗೆ ಅವಕಾಶ ನೀಡಲಿಲ್ಲ. ಕೆಪಿಸಿಸಿ ಅಧ್ಯಕ್ಷರಾದ ಕಾರಣಕ್ಕೆ ಡಿ.ಕೆ.ಶಿವಕುಮಾರ್ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಿದ್ದಾರೆ ಎಂದು ಹೇಳಿದರು.
ಸಭೆಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಹುಲುವಾಡಿ ದೇವರಾಜು, ಪ್ರಧಾನ ಕಾರ್ಯದರ್ಶಿ ರುದದ್ರದೇವರು, ಮುಖಂಡರಾದ ಪ್ರಸಾದ್‌ಗೌಡ, ಅಪ್ಪಾಜಿಗೌಡ ಉಪಸ್ಥಿತರಿದ್ದರು.
ವಿಧಾನಸಭಾ ಚುನಾವಣೆ ಫಲಿತಾಂಶ ನಿರಾಶೆ ಮೂಡಿಸಿದೆ. ಆಗಿರುವ ತಪ್ಪುಗಳು ಮರುಕಳಿಸದಂತೆ ನಾವು ನೋಡಿಕೊಳ್ಳಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಗಳನ್ನು ನಾವು ಮನೆಮನೆಗೆ ತಲುಪಿಸುವಲ್ಲಿ ನಾವು ವಿಫಲರಾದೆವು ಅಂತ ವಿಧಾನ ಪರಿಷತ್ ಸದಸ್ಯ ಅ.ದೇವೇಗೌಡ ತಿಳಿಸಿದ್ದಾರೆ.
ರಾಜಕಾರಣ ಅಷ್ಟೊಂದು ಚೆನ್ನಾಗಿಲ್ಲ, ರಾಜಕೀಯ ಸಾಕಾಗಿದೆ: ಡಿ.ಕೆ.ಸುರೇಶ್ ವೈರಾಗ್ಯದ ಮಾತು..!
ಬೀದಿಗೆ ಬಂದ ಬಿಜೆಪಿ ಜಗಳ
ರಾನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಪಕ್ಷದ ಕಾರ್ಯಕರ್ತರ ಸಭೆ ಮುಕ್ತಾಯಗೊಂಡ ನಂತರ ಬಿಜೆಪಿ ಜಗಳ ಬೀದಿಗೆ ಬಂದಿತು. ವಿಧಾನಸಭಾ ಚುನಾವಣೆಯಲ್ಲಿ ಸರಿಯಾಗಿ ಹಣ ಹಂಚಿಕೆ ಮಾಡಿಲ್ಲ ಎಂದು ಅರೋಪಿಸಿ ಕನಕಪುರ ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ರಮೇಶ್ ಹಾಗೂ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಪೈಲ್ವಾನ್ ಸಿದ್ದಮರಿಗೌಡ ನಡುವೆ ಗುದ್ದಾಟ ನಡೆಯಿತು.
ಚುನಾವಣೆ ಸಮಯದಲ್ಲಿ ಪಕ್ಷದ ನಾಯಕರು ಖರ್ಚಿಗಾಗಿ 50 ಸಾವಿರ ತಲುಪಿಸುವಂತೆ ನೀಡಿದ್ದರು. ಆ ಹಣವನ್ನು ಏಕೆ ತಲುಪಿಸಲಿಲ್ಲ ಎಂದು ಸಿದ್ದಮರಿಗೌಡರವರು ರಮೇಶ್ ಅವರನ್ನು ಪ್ರಶ್ನಿಸಿದರು. ಇದು ವಾಗ್ವಾದಕ್ಕೆ ತಿರುಗಿತು. ಇಬ್ಬರು ಕೈ-ಕೈ ಮಿಲಾಯಿಸಿ, ಕತ್ತಿನಪಟ್ಟಿಹಿಡಿದು ತಳ್ಳಾಟ, ನೂಕಾಟವಾಯಿತು. ಈ ವೇಳೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥ ನಾರಾಯಣಗೌಡ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರುದ್ರದೇವರು ಮಧ್ಯಪ್ರವೇಶಿಸಿ ಇಬ್ಬರನ್ನು ಸಮಾಧಾನಪಡಿಸಿದರು.