ಖಾತೆ ಅತೃಪ್ತಿ: ಇನ್ನೂ ಅಧಿಕಾರ ಸ್ವೀಕರಿಸದ ಆನಂದ್‌ ಸಿಂಗ್‌

By Kannadaprabha NewsFirst Published Jan 29, 2021, 12:09 PM IST
Highlights

ಸದನದ ಕಲಾಪದಲ್ಲಿ ಪಾಲ್ಗೊಂಡರೂ ಯಾರೊಂದಿಗೂ ಹೆಚ್ಚು ಮಾತನಾಡದ ಆನಂದ್‌ ಸಿಂಗ್‌| ವಿಜಯನಗರ ನೂತನ ಜಿಲ್ಲೆ ರಚನೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಒತ್ತಡ ತಂತ್ರ ಅನುಸರಿಸುತ್ತಿದ್ದಾರಾ ಆನಂದ್‌ ಸಿಂಗ್‌?| ಖಾತೆ ಹಂಚಿಕೆ ಸಂಬಂಧ ಆನಂದ್‌ ಸಿಂಗ್‌ಗೆ ಬೇಸರವಾಗಿರಬಹುದು|

ಬೆಂಗಳೂರು(ಜ.29):  ಖಾತೆ ಹಂಚಿಕೆಯಾದರೂ ಅಧಿಕಾರ ಸ್ವೀಕರಿಸದ ಸಚಿವ ಆನಂದ್‌ ಸಿಂಗ್‌ ಅವರ ನಡೆ ಕುತೂಹಲಕರವಾಗಿದ್ದು, ಶುಕ್ರವಾರ ತಮ್ಮ ಮುಂದಿನ ನಡೆ ಘೋಷಿಸುವ ನಿರೀಕ್ಷೆಯಿದೆ.

ಮೂರು ಬಾರಿ ಖಾತೆ ಬದಲಾಗಿ ಅಂತಿಮವಾಗಿ ಇದೀಗ ಮೂಲಸೌಕರ್ಯ ಅಭಿವೃದ್ಧಿ, ಹಜ್‌ ಮತ್ತು ವಕ್ಫ್ ಖಾತೆಯನ್ನು ಆನಂದ್‌ ಸಿಂಗ್‌ ಅವರಿಗೆ ನೀಡಲಾಗಿದೆ. ಮೂರು ದಿನಗಳಾದರೂ ಅವರು ಖಾತೆಯ ಅಧಿಕಾರ ಸ್ವೀಕರಿಸಿಲ್ಲ. ಗುರುವಾರ ವಿಧಾನಮಂಡಲದ ಅಧಿವೇಶನಕ್ಕೆ ಆಗಮಿಸಿದ ಅವರು ಸದನದ ಕಲಾಪದಲ್ಲಿ ಪಾಲ್ಗೊಂಡರೂ ಯಾರೊಂದಿಗೂ ಹೆಚ್ಚು ಮಾತನಾಡಲಿಲ್ಲ. ನಿರ್ಗಮಿಸುವ ವೇಳೆ ಸುದ್ದಿಗಾರರು ಪ್ರಶ್ನಿಸಿದಾಗಲೂ ನಾಳೆ (ಶುಕ್ರವಾರ) ಪ್ರತಿಕ್ರಿಯೆ ನೀಡುತ್ತೇನೆ ಎಂದಷ್ಟೇ ಹೇಳಿ ಮುಂದೆ ಸಾಗಿದರು.

ಶೀಘ್ರವೇ ವಿಜಯನಗರ ಜಿಲ್ಲೆ ಅಧಿಕೃತ ಘೋಷಣೆ: ಆನಂದ್‌ ಸಿಂಗ್‌

ಹೀಗಾಗಿ, ಖಾತೆ ಹಂಚಿಕೆಗೆ ಬೇಸರ ವ್ಯಕ್ತಪಡಿಸಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಬಗ್ಗೆ ಏನಾದರೂ ಘೋಷಣೆ ಮಾಡಲಿದ್ದಾರೆಯೇ ಎಂಬ ವದಂತಿ ಹಬ್ಬಿದೆ. ಆದರೆ, ಆಡಳಿತಾರೂಢ ಬಿಜೆಪಿ ಮೂಲಗಳು ಇದನ್ನು ನಿರಾಕರಿಸುತ್ತಿವೆ. ಖಾತೆ ಹಂಚಿಕೆ ಸಂಬಂಧ ಆನಂದ್‌ ಸಿಂಗ್‌ ಅವರಿಗೆ ಬೇಸರವಾಗಿರಬಹುದು. ರಾಜೀನಾಮೆ ನೀಡುವ ಪ್ರಸಂಗ ಏನೂ ಇಲ್ಲ ಎಂದು ಬಿಜೆಪಿ ನಾಯಕರು ತಿಳಿಸಿದ್ದಾರೆ. ಮತ್ತೊಂದು ಮೂಲದ ಪ್ರಕಾರ, ವಿಜಯನಗರ ನೂತನ ಜಿಲ್ಲೆ ರಚನೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಆನಂದ್‌ ಸಿಂಗ್‌ ಅವರು ಒತ್ತಡ ತಂತ್ರ ಅನುಸರಿಸುತ್ತಿರಬಹುದು ಎನ್ನಲಾಗಿದೆ.
 

click me!