ಪರಿಷತ್‌ ಸಭಾಪತಿ ಹುದ್ದೆ: ಮತ್ತೆ ಗದ್ದಲ ಆಗುತ್ತಾ?

By Kannadaprabha NewsFirst Published Jan 29, 2021, 11:41 AM IST
Highlights

ಬಿಜೆಪಿ, ಜೆಡಿಎಸ್‌ನಿಂದ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ವಿರುದ್ಧ ಅವಿಶ್ವಾಸ, ತಾಂತ್ರಿಕ ಕಾರಣದಿಂದ ಪ್ರಕರಣ ಜಗ್ಗಲು ಕಾಂಗ್ರೆಸ್‌ ಚಿಂತನೆ| ಫೆ.2ರ ನಂತರ ಅವಿಶ್ವಾಸ ನಿರ್ಣಯ ಮೇಲ್ಮನೆಯಲ್ಲಿ ಚರ್ಚೆ ಸಂಭವ| ಮತ್ತೆ ಗದ್ದಲವೋ, ಶೆಟ್ಟಿ ರಾಜೀನಾಮೆ ನೀಡಿ ಸುಖಾಂತ್ಯವೋ?| 

ಬೆಂಗಳೂರು(ಜ.29):  ವಿಧಾನ ಪರಿಷತ್‌ ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ ಅವರ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್‌ ಸದಸ್ಯರು ಸಲ್ಲಿಸಿರುವ ಅವಿಶ್ವಾಸ ನಿರ್ಣಯ ಸೂಚನೆ ಈ ಬಾರಿಯ ಅಧಿವೇಶನದಲ್ಲೂ ಕೋಲಾಹಲ, ಗದ್ದಲದ ವಾತಾವರಣಕ್ಕೆ ಕಾರಣವಾಗುತ್ತದೆಯೇ ಅಥವಾ ರಾಜೀನಾಮೆ ನೀಡುವುದರೊಂದಿಗೆ ಸುಖಾಂತ್ಯವಾಗುತ್ತದೆಯೇ ಅಥವಾ ತಾಂತ್ರಿಕ ಕಾರಣಗಳಿಂದ ಮುಂದುವರೆಯಲು ಅವಕಾಶ ಸಿಗುತ್ತದೆಯೇ ಎಂಬುದು ಕುತೂಹಲ ಮೂಡಿಸಿದೆ.

ಡಿ.15ರಂದು ವಿಧಾನ ಪರಿಷತ್‌ನಲ್ಲಿ ನಡೆದ ಅಹಿತಕರ ಘಟನೆ ನಂತರ ಸಾಕಷ್ಟು ಬೆಳವಣಿಗೆ ನಡೆದಿದ್ದು, ಉಪಸಭಾಪತಿಯಾಗಿದ್ದ ಎಸ್‌.ಎಲ್‌. ಧರ್ಮೆಗೌಡ ನಿಧನರಾಗಿದ್ದಾರೆ. ಪರಿಷತ್‌ನಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಒಂದಾಗಿವೆ. ಈ ಹಿನ್ನೆಲೆಯಲ್ಲಿ ಸಭಾಪತಿಗಳು ಯಾವ ನಿರ್ಧಾರ ತೆಗೆದುಕೊಳ್ಳಲಿದ್ದಾರೆಂಬುದು ಕುತೂಹಲಕ್ಕೆ ಕಾರಣವಾಗಿದೆ.

ಸಭಾಪತಿ ಅಥವಾ ಉಪಸಭಾಪತಿ ಅವರನ್ನು ಹುದ್ದೆಯಿಂದ ತೆಗೆದುಹಾಕುವ ನಿರ್ಣಯದ ಸಂಬಂಧವಾದ ಸೂಚನಾ ಪತ್ರ ತಲುಪಿದ 14 ದಿನಗಳ ನಂತರ ಅವಿಶ್ವಾಸ ನಿರ್ಣಯವನ್ನು ಸದನದಲ್ಲಿ ಮಂಡಿಸಬೇಕೆಂಬ ನಿಯಮವಿದೆ. ಹೀಗಾಗಿ ಫೆ.2ರ ನಂತರವೇ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಅವರ ವಿರುದ್ಧದ ಅವಿಶ್ವಾಸ ನಿರ್ಣಯ ಸೂಚನೆ ಸದನದ ಮುಂದೆ ಬರಲಿದೆ.

ಪರಿಷತ್ತಿನ 'ಮರ್ಯಾದಾ ಹತ್ಯೆ'; ಮೇಲ್ಮನೆ ಘನತೆಗೆ ಕಪ್ಪುಚುಕ್ಕೆ ಇಟ್ಟ ಕುಸ್ತಿವೀರರು!

ಈ ನಡುವೆ ಉಪಸಭಾಪತಿ ಸ್ಥಾನಕ್ಕೆ ಜ.29ರಂದು ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಂ.ಕೆ.ಪ್ರಾಣೇಶ್‌ ಅವರನ್ನು ಬೆಂಬಲಿಸಲು ಜೆಡಿಎಸ್‌ ನಿರ್ಧರಿಸಿದೆ. ಇದಕ್ಕೆ ಪ್ರತಿಯಾಗಿ ಬಿಜೆಪಿ ಪ್ರತಾಪಚಂದ್ರಶೆಟ್ಟಿಅವರು ರಾಜೀನಾಮೆ ನೀಡಿದ ನಂತರ ಆ ಸ್ಥಾನಕ್ಕೆ ಜೆಡಿಎಸ್‌ ಹಿರಿಯ ಸದಸ್ಯ ಬಸವರಾಜ ಹೊರಟ್ಟಿಅವರನ್ನು ಆಯ್ಕೆ ಮಾಡಲು ಒಪ್ಪಿಕೊಂಡಿದೆ. ಬಿಜೆಪಿ ಮತ್ತು ಜೆಡಿಎಸ್‌ ಒಂದಾಗಿರುವ ಹಿನ್ನೆಲೆಯಲ್ಲಿ ಜೆಡಿಎಸ್‌ನ ಜಾತ್ಯತೀತ ಬಣ್ಣವನ್ನು ಬಯಲು ಮಾಡುವ ಉದ್ದೇಶದಿಂದ ಉಪಸಭಾಪತಿ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕೆ.ಸಿ. ಕೊಂಡಯ್ಯ ಅವರನ್ನು ಕಣಕ್ಕಿಳಿಸಿದೆ.

ತಾಂತ್ರಿಕ ಕಾರಣ ಹುಡುಕುತ್ತಿರುವ ಕಾಂಗ್ರೆಸ್‌:

ಈ ಮಧ್ಯೆ, ಪ್ರತಿಪಕ್ಷ ಕಾಂಗ್ರೆಸ್‌ ಸದನದಲ್ಲಿ ನಡೆದ ಅಹಿತಕರ ಘಟನೆ ಬಗ್ಗೆ ಫೆ.2ರೊಳಗೆ ಪ್ರಸ್ತಾಪಿಸಲು ಅವಕಾಶ ಸಿಕ್ಕರೆ ಅದನ್ನು ಬಳಸಿಕೊಂಡು ಇಡೀ ಘಟನೆಗೆ ಬಿಜೆಪಿ, ಜೆಡಿಎಸ್‌ ಸದಸ್ಯರು ಕಾರಣರೆಂದು ವಾದಿಸಲು ಕಾಯುತ್ತಿದೆ. ಇದರ ಜೊತೆಗೆ ಘಟನೆಗೆ ಕಾರಣವಾದ ಅಂಶಗಳ ಬಗ್ಗೆ ವರದಿ ನೀಡಲು ಮರಿತಿಬ್ಬೇಗೌಡ ಅಧ್ಯಕ್ಷತೆಯಲ್ಲಿ ರಚಿಸಿರುವ ಸಮಿತಿ ಪೂರ್ಣ ಪ್ರಮಾಣದ ವರದಿ ನೀಡುವವರೆಗೂ ಪ್ರತಾಪಚಂದ್ರ ಶೆಟ್ಟಿಅವರನ್ನು ಮುಂದುವರೆಸಲು ಅವಕಾಶ ಇದೆಯೇ ಎಂಬ ಬಗ್ಗೆ ಗಂಭೀರವಾಗಿ ಪರಿಶೀಲನೆ ನಡೆಸುತ್ತಿದೆ.

ಸಭಾಪತಿ ಪ್ರತಾಪಚಂದ್ರ ಶೆಟ್ಟಿ ವಿರುದ್ಧ ಬಿಜೆಪಿ ಅವಿಶ್ವಾಸ

ಒಂದು ವೇಳೆ ತಾಂತ್ರಿಕ ಅಥವಾ ಕಾನೂನಿನ ಅಂಶಗಳು ಸಿಗದೇ ಇದ್ದರೆ ಸಭಾಪತಿ ಪ್ರತಾಪಚಂದ್ರಶೆಟ್ಟಿಅವರ ಇಚ್ಛೆಯಂತೆ ರಾಜೀನಾಮೆ ನೀಡಲು ಅವಕಾಶ ನೀಡುವ ಮನಸ್ಥಿತಿಯೂ ಕಾಂಗ್ರೆಸ್‌ ನಾಯಕರಿಗೆ ಇದೆ. ಹೀಗಾದಲ್ಲಿ ಫೆ.2ರ ವೇಳೆಗೆ ಪ್ರತಾಪಚಂದ್ರಶೆಟ್ಟಿರಾಜೀನಾಮೆ ನೀಡಬಹುದು.

ರಾಜೀನಾಮೆ ನೀಡುವ ವಿಶ್ವಾಸದಲ್ಲಿ ಬಿಜೆಪಿ:

ಆಡಳಿತಾರೂಢ ಬಿಜೆಪಿ ಮಾತ್ರ ಈಗಾಗಲೇ ಅವಿಶ್ವಾಸ ನಿರ್ಣಯ ಸೂಚನೆ ಸಲ್ಲಿಕೆಯಾಗಿರುವುದರಿಂದ ಸಭಾಪತಿ ಪ್ರತಾಪಚಂದ್ರಶೆಟ್ಟಿಅವರು ರಾಜೀನಾಮೆ ನೀಡದೆ ಬೇರೆ ದಾರಿಯೇ ಇಲ್ಲ. ಈ ಹಿಂದೆ ಜೆಡಿಎಸ್‌ ಸದಸ್ಯರ ಬೆಂಬಲದೊಂದಿಗೆ ಅವರು ಸಭಾಪತಿಯಾಗಿದ್ದರು. ಈಗ ಬೆಂಬಲ ವಾಪಸ್‌ ಪಡೆದು ಅವಿಶ್ವಾಸ ನಿರ್ಣಯ ಸೂಚನೆ ಸಲ್ಲಿಸಿರುವುದರಿಂದ ರಾಜೀನಾಮೆ ಕೊಡುತ್ತಾರೆಂಬ ವಿಶ್ವಾಸ ಹೊಂದಿದೆ.

click me!