ರಾಯಚೂರು ಜಿಲ್ಲೆಯ ಲಿಂಗಸುಗೂರು ವಿಧಾನಸಭಾ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ಶುರು , ಲಿಂಗಸೂಗೂರು ಗೆಲುವಿಗಾಗಿ ಜಿದ್ದಾಜಿದ್ದಿನ ಪೈಪೋಟಿ ಶಕ್ತಿ ಪ್ರದರ್ಶನ , ಎಲ್ಲಾ ಆಕಾಂಕ್ಷಿಗಳಿಂದ ಕ್ಷೇತ್ರದಲ್ಲಿ ಭರ್ಜರಿ ಓಡಾಟ.
ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್
ರಾಯಚೂರು(ಜ.24): ರಾಯಚೂರು ಜಿಲ್ಲೆ ಲಿಂಗಸುಗೂರು ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ಚುನಾವಣೆ ವಾತಾವರಣ ಸೃಷ್ಟಿಯಾಗಿದೆ. ಎಲ್ಲಾ ಪಕ್ಷದ ರಾಜಕಾರಣಿಗಳು ಚುನಾವಣೆ ಘೋಷಣೆಗೂ ಮುನ್ನ ಅಬ್ಬರದ ಪ್ರಚಾರ ಶುರು ಮಾಡಿದ್ದಾರೆ. ಅದರಲ್ಲೂ ನಾವು ಯಾವುದರಲ್ಲೂ ಕಮ್ಮಿ ಇಲ್ಲ ಅಂತ ಜಿದ್ದಾಜಿದ್ದಿಗೆ ಬಿದ್ದು ಶಕ್ತಿ ಪ್ರದರ್ಶನವೂ ನಡೆದಿದೆ.
ಟಿಕೆಟ್ ಗೊಂದಲ ನಡುವೆಯೂ ಅಬ್ಬರದ ಶಕ್ತಿ ಪ್ರದರ್ಶನ
ಲಿಂಗಸೂಗೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಯಾವ ಅಭ್ಯರ್ಥಿ ನೀಡುತ್ತಾರೆ ಎಂಬುವುದು ಇನ್ನೂ ಖಚಿತವಾಗಿಲ್ಲ. ಆದ್ರೂ ಸಹ ಸೇವಾ ಆಕಾಂಕ್ಷಿಗಳಾದ ಹಾಲಿ ಶಾಸಕ ಡಿ.ಎಸ್ ಹೂಲಗೇರಿ, ಸೂರ್ಯ ಚಂದ್ರರು ಇರುವುದು ಎಷ್ಟು ಸತ್ಯವೊ ಟಿಕೆಟ್ ಸಿಗುವುದು ಅಷ್ಟೇ ಸತ್ಯ ಎನ್ನುತ್ತಿದ್ದರೆ. ಇನ್ನೂ ಗೊತ್ತು ಗುರಿ ಇಲ್ಲದೆ ಕಳೆದ ಆರು ತಿಂಗಳಿಂದ ಲಿಂಗಸೂಗೂರಿನಲ್ಲಿ ಬಿಡುಬಿಟ್ಟಿದ ಆರ್. ರುದ್ರಯ್ಯ. ಟಿಕೆಟ್ ತರುವುದು ನನ್ನ ಜವಾಬ್ದಾರಿ ಗೆಲ್ಲಿಸುವುದು ನಿಮ್ಮ ಕರ್ತವ್ಯ ಎನ್ನುತ್ತಿದ್ದಾರೆ.ಮಾಜಿ ಸಚಿವ ಹನುಮಂತಪ್ಪ ಆಲೋಡ್, ಕಾಂಗ್ರೆಸ್ ಪಕ್ಷವು ಸೂಕ್ತ ಅವಕಾಶ ನೀಡಲಿದೆ ಎಂಬ ಆಶಾ ಭಾವನೆ ವ್ಯಕ್ತಪಡಿಸುತ್ತಾರೆ. ಇತ್ತ ಎಚ್.ಬಿ ಮುರಾರಿ ಟಿಕೆಟ್ ಹಂಚಿಕೆಯಲ್ಲಿ ಲಿಂಗಸುಗೂರಲ್ಲಿ ನಮಗೇ ಟಿಕೆಟ್ ಸಿಗುತ್ತದೆ ಎಂದು ಹೇಳುತ್ತಾರೆ. ಟಿಕೆಟ್ ಹಂಚಿಕೆ ಗೊಂದಲ ಒ೦ದೆಡೆಯಾದರೆ ಜನರನ್ನು ಸಂಘಟಿಸಲು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಪ್ರತ್ಯೇಕ ಮಾರ್ಗಗಳನ್ನು ಬಳಸುತ್ತಿದ್ದಾರೆ. ಇದರ ಮಧ್ಯೆ ಶಾಸಕ ಡಿ.ಎಸ್ ಹೂಲಗೇರಿ ಸರ್ಕಾರದ ಅಭಿವೃದ್ಧಿ ಕಾಮಗಾರಿ, ಪಕ್ಷದ ಕಾರ್ಯಕ್ರಮಗಳ ಮೂಲಕ ಸಂಘಟನೆ ನಡೆಸಿದ್ದಾರೆ.
Raichur: ಮೋದಿ ಕಾರ್ಯಕ್ರಮಕ್ಕೆ ನನ್ನ ಕರೆದಿಲ್ಲ; ಅದಕ್ಕೆ ನಾನು ಹೋಗಿಲ್ಲ: ಶ್ರೀರಾಮುಲು
ಮಾನಪ್ಪ ಕೈಯಿಂದ ಕಮಲ ಟಿಕೆಟ್ ಕೈತಪ್ಪುತ್ತಾ?
ಮಾನಪ್ಪ ವಜ್ಜಲ್ ಅಂತ ಇಡೀ ಲಿಂಗಸೂಗೂರು ವಿಧಾನಸಭಾ ಕ್ಷೇತ್ರದ ತುಂಬಾ ಗೊತ್ತು. ಮಾನಪ್ಪ ವಜ್ಜಲ್ ಸಹ ಪಕ್ಷ ಸೇರ್ಪಡೆ, ಪಕ್ಷದ ಪ್ರತಿಯೊಂದು ಕಾರ್ಯಕ್ರಮ ಮಾಡುತ್ತಾ ಲಿಂಗಸೂಗೂರು ವಿಧಾನಸಭಾ ಕ್ಷೇತ್ರದಲ್ಲಿ ಓಡಾಟ ಮಾಡುತ್ತಾ ಇದ್ದಾರೆ. ಅಷ್ಟೇ ಅಲ್ಲದೇ ಕಾಂಗ್ರೆಸ್ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದ್ದು, ಗಲಾಟೆ ಮಾಡಿಕೊಂಡಿದ್ದು ಇದೆ. ಇಷ್ಟು ಓಡಾಟ ನಡುವೆಯೂ ಕ್ಷೇತ್ರದಲ್ಲಿ ಈಗ ಹೊಸದೊಂದು ಚರ್ಚೆ ಶುರುವಾಗಿದೆ. ಇಷ್ಟು ದಿನಗಳ ಕಾಲ ಎಲ್ಲಿಯೂ ಕಾಣಿಸಿಕೊಳ್ಳದ ಡಾ. ಸುದರ್ಶನ ಸಜ್ಜನ್. ಈಗ ಏಕಾಏಕಿ ಆಗಮಿಸಿ ಲಿಂಗಸೂಗೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಆಕಾಂಕ್ಷಿ ನಾನು ಇದ್ದೇನೆ. ನಾನು ಸ್ಥಳೀಯ ನನಗೆ ಬಿಜೆಪಿ ಹೈಕಮಾಂಡ್
ಟಿಕೆಟ್ ಕೊಟ್ಟರೆ ಒಂದು ಚಾನ್ಸ್ ನೋಡುವುದಾಗಿ ಹೇಳುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಮತ್ತು ವಿಡಿಯೋಗಳು ಹಾಕಲು ಶುರು ಮಾಡಿದ್ದಾರೆ. ಅಷ್ಟೇ ಅಲ್ಲದೆ ಲಿಂಗಸೂಗೂರು ವಿಧಾನಸಭಾ ಕ್ಷೇತ್ರದ ಜಾತ್ರೆ, ಹಬ್ಬ- ಹರಿದಿನಗಳು,
ರಾಷ್ಟ್ರನಾಯಕರ ಜಯಂತಿಗಳಿಗೆ ಶುಭ ಕೋರುತ್ತಾ ಬ್ಯಾನರ್ ಹಾಕಿ ಜನರ ಮನಸೆಳೆಯಲು ಕಸರತ್ತು ಶುರು ಮಾಡಿದ್ದಾರೆ. ಅಷ್ಟೇ ಅಲ್ಲದೇ ಪಕ್ಷ ಸಂಘಟನೆ ನಾನು ಮಾಡಿದ್ದೇನೆ. ಹೈಕಮಾಂಡ್ ನನಗೆ ಲಿಂಗಸೂಗೂರು ಟಿಕೆಟ್ ಸಿಗುತ್ತೆ ಅಂತ ನಾಲ್ಕು- ಐದು ಜನರಿಗೆ ಜೊತೆಗೆ ಕರೆದುಕೊಂಡು ಓಡಾಟ ನಡೆಸಿದ್ದಾರೆ. ಆದ್ರೆ ಮಾನಪ್ಪ ವಜ್ಜಲ್ ಇಡೀ ಲಿಂಗಸೂಗೂರು ಕ್ಷೇತ್ರದ ತುಂಬಾ ಹಿಡಿತ ಇರುವ ನಾಯಕನಾಗಿದ್ದು, ಮಾನಪ್ಪ ವಜ್ಜಲ್ ಗೆ ಬಿಜೆಪಿ ಟಿಕೆಟ್ ಕೈ ತಪ್ಪಲ್ಲ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಚರ್ಚೆ ಆಗುತ್ತಿದೆ.
ಲಿಂಗಸೂಗೂರು ಕ್ಷೇತ್ರದ ಜನರೇ ನನಗೆ ಒಂದು ಅವಕಾಶ ನೀಡಿ
ಲಿಂಗಸೂಗೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಿದ್ದು ಬಂಡಿ ಕಳೆದ 15 ವರ್ಷಗಳಿಂದ ಸಕ್ರಿಯ ರಾಜಕಾರಣದಲ್ಲಿ ಇದ್ದಾರೆ. ಎರಡು ಬಾರಿ ಸೋತಿರುವ ಸಿದ್ದು ಬಂಡಿ ಮೂರನೇ ಬಾರಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಕಳೆದ 2018ರ ಚುನಾವಣೆಯಲ್ಲಿ ಕೂದಲೆಳ ಅಂತರದಲ್ಲಿ ಸೋಲುಂಡಿರುವ ಸಿದ್ದು ಬಂಡಿ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಿದ್ದಾರೆ.ಅನೇಕ ಗ್ರಾಮಗಳಲ್ಲಿ ಪಕ್ಷದ ಚುನಾವಣಾ ಪ್ರಚಾರ ಕೈಗೊಂಡಿದ್ದು, ಎಚ್ ಡಿ ಕುಮಾರಸ್ವಾಮಿ ಅವರ ಪಂಚರನ್ನ ಯಾತ್ರೆಗಾಗಿ ಸಕಲ ತಯಾರಿ ಮಾಡಿದ್ರು. ಲಿಂಗಸೂಗೂರು ವಿಧಾನಸಭಾ ಕ್ಷೇತ್ರದ 9 ಕಡೆಗಳಲ್ಲಿ ಪಂಚರನ್ನ ಯಾತ್ರೆ ನಡೆಯಲಿದ್ದು ಪ್ರತಿ ಸ್ಥಳದಲ್ಲಿಯೂ 20-30ಸಾವಿರ ಜನರನ್ನು ಸೇರಿಸಲು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಸಿದ್ದು ಬಂಡಿ ಓಡಾಟ ನಡೆಸಿದ್ದಾರೆ. ಅಷ್ಟೇ ಅಲ್ಲದೇ ಸಿದ್ದು ಬಂಡಿ ಪರ ಇಡೀ ಲಿಂಗಸೂಗೂರು ವಿಧಾನಸಭಾ ಕ್ಷೇತ್ರದಲ್ಲಿ ಅನುಕಂಪದ ಅಲೆಯೂ ಇದೆ.
ಬಿಜೆಪಿಯಿಂದ ಮೀಸಲಾತಿ ಅಪ್ರಸ್ತುತ: ಸಿದ್ದರಾಮಯ್ಯ
ಇನ್ನೂ ಇದರ ಮಧ್ಯೆ ಲಿಂಗಸೂಗೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಆಪ್‌ನಲ್ಲಿ ಶಿವಪುತ್ರ ಗಾಣಾದಾಳೆ.ನ್ಯಾಯವಾದಿ ಕುಪ್ಪಣ್‌ಮಾಣಿಕ್ ಸೇರಿ ಮೂರು ಜನ ಆಕಾಂಕ್ಷಿಗಳು ಸ್ಪರ್ಧೆಗೆ ತಾಯಾರಿ ನಡೆಸಿದ್ದಾರೆ. ಜನಾರ್ದನ ರೆಡ್ಡಿಯ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಅಮರೇಶ ನಾಯ್ಕ ಚುನಾವಣೆಗೆ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಟಿಕೆಟ್ ಖಚಿತತೆ ಆಗದಿದ್ದರೂ ಸ್ಪರ್ಧಾಕಾಂಕ್ಷಿಗಳು ಕ್ಷೇತ್ರದಲ್ಲಿ ಓಡಾಟ ಮಾಡುತ್ತಾ ಹಳ್ಳಿ- ಹಳ್ಳಿಗೆ ತೆರಳಿ ಸಭೆ, ಸಮಾವೇಶ ಮಾಡುತ್ತಾ ಶಕ್ತಿ ಪ್ರದರ್ಶನ ಮಾಡಲು ಮುಂದಾಗಿದ್ದಾರೆ.