
ವಿಜಯಪುರ (ಅ.01): ಬಿಜೆಪಿ ತೊರೆಯುವವರೆಲ್ಲರೂ ವೇಸ್ಟ್ ಬಾಡಿಗಳು ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ವ್ಯಂಗ್ಯವಾಡಿದರು. ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ನೇತೃತ್ವದಲ್ಲಿ ರಾಮಣ್ಣ ಲಮಾಣಿ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಅವರು ಈ ರೀತಿ ಪ್ರತಿಕ್ರಿಯೆ ನೀಡಿದರು. ಜಗದೀಶ ಶೆಟ್ಟರ್ ಎಷ್ಟು ಜನರನ್ನು ಕರೆದೊಯ್ಯುತ್ತಾರೆಯೋ ಒಯ್ಯಲಿ. ಅವರೆಲ್ಲರೂ ವೇಸ್ಟ್ ಬಾಡಿಗಳು. ಬಿಜೆಪಿಗೆ ಹೊಸ ಯುವಕರು ಬರುತ್ತಾರೆ. ಹೊಸ ಜನರೇಶನ್ ಬರಬೇಕಿದೆ. ಬಿಜೆಪಿಯಿಂದ ಕಾಂಗ್ರೆಸ್ಸಿಗೆ ಹೋಗುವವರು ಹೋಗಲಿ. ಅವರಿಗೆ ದೇಶ, ಧರ್ಮ ಬೇಕಾಗಿಲ್ಲ.
ಶೆಟ್ಟರ್ ಅವರು ಚುನಾವಣೆಯಲ್ಲಿ ಸೋತಿದ್ದಾರೆ. ಈಗ ಸೋತ ಬಿಜೆಪಿಗರನ್ನು ಕರೆದುಕೊಂಡು ಹೊರಟಿದ್ದಾರೆ. ಹೋಗುವವರು ಹೋಗಲಿ. ಬಿಜೆಪಿ ಯಾರ ಮೇಲೆಯೂ ಡಿಫೆಂಡ್ ಇಲ್ಲ. ಹೊಸ ಯುವಕರು ಬಂದು ಶಾಸಕರಾದರೆ ಅವರು ಹುರುಪಿನಿಂದ ಕೆಲಸ ಮಾಡುತ್ತಾರೆ ಎಂದು ಸಮರ್ಥಿಸಿಕೊಂಡರು. ಲಕ್ಷ್ಮಣ ಸವದಿ, ಜಗದೀಶ ಶೆಟ್ಟರ್ ಹೋಗಿದ್ದರಿಂದ ಬಿಜೆಪಿಗೆ ಯಾವುದೇ ಹಿನ್ನಡೆಯಾಗಿಲ್ಲ. ಒಳ ಮೀಸಲಾತಿ ಹಾಗೂ ಗ್ಯಾರಂಟಿಯಿಂದ ಹಿನ್ನಡೆಯಾಗಿದೆ. ಇವುಗಳ ಪರಿಣಾಮದ ಬಗ್ಗೆ ನಮ್ಮವರು ಸರಿಯಾಗಿ ಜನರಿಗೆ ತಿಳಿ ಹೇಳಲಿಲ್ಲ. ನಮ್ಮ ಆಡಳಿತದಲ್ಲಿನ ಲೋಪದೋಷಗಳೇ ನಮ್ಮ ಹಿನ್ನಡೆಗೆ ಕಾರಣವಾದವು. ಇದಕ್ಕೆ ಬೇರೆ ಕಾರಣವಿಲ್ಲ ಎಂದು ತಿಳಿಸಿದರು.
ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ಈ ಕೂಡಲೇ ನಿಲ್ಲಿಸಬೇಕು: ಸಿ.ಎಸ್.ಪುಟ್ಟರಾಜು
ಪ್ರತಿ ತಿಂಗಳು ₹3 ಸಾವಿರ ನೀಡುವಂತೆ ನಾನು ತಿಳಿಸಿದ್ದೆ. ಪ್ರಧಾನಿ ಮೋದಿ ಅವರು ಹೀಗೆಲ್ಲ ಫ್ರೀ ಕೊಡುವುದು ಬೇಡ. ಇದರಿಂದ ದೇಶ ದಿವಾಳಿಯಾಗಬಾರದು ಎಂದು ಅವರು ಫ್ರೀ ಕೊಡುಗೆಗಳ ಕಡೆಗೆ ಗಮನ ಹರಿಸಲಿಲ್ಲ. ಕಾಂಗ್ರೆಸ್ ನೀಡಿದ ಫ್ರೀ ಗ್ಯಾರಂಟಿ ಯೋಜನೆಗಳಿಂದ ಬಿಜೆಪಿಗೆ ಹಿನ್ನಡೆಯಾಗಿದೆ ಎಂದು ಹೇಳಿದರು. ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆ ಪ್ರಕರಣದ ಮ್ಯಾಜಿಸ್ಟ್ರೇಟ್ ವರದಿ ಸರ್ಕಾರದಿಂದ ಅಂಗೀಕಾರವಾಗಿದೆ. ಮುಸ್ಲಿಮರು ದೇಶದ್ರೋಹಿ ಕೆಲಸ ಮಾಡಿದರೂ, ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದರೂ ಅವರನ್ನು ಕಾಂಗ್ರೆಸ್ ಸರ್ಕಾರ ರಕ್ಷಣೆ ಮಾಡುತ್ತಿದೆ. ಕಾಂಗ್ರೆಸ್ ಸರ್ಕಾರಕ್ಕೆ ನೈತಿಕತೆ ಇದ್ದರೆ ಈ ಪ್ರಕರಣದಲ್ಲಿ ಯಾರು ತಪ್ಪಿತಸ್ಥರಿದ್ದಾರೆಯೋ ಅವರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.
ಭಾವಚಿತ್ರ ಹರಿದ ಪ್ರಕರಣದಲ್ಲಿ ಮೂವರು ವಶಕ್ಕೆ: ಗಣೇಶೋತ್ಸವದ ನಿಮಿತ್ತ ನಗರದ ಶಿವಾಜಿ ವೃತ್ತದಲ್ಲಿ ನಿಲ್ಲಿಸಿದ್ದ ತಮ್ಮ ಕಟೌಟ್‌ನಲ್ಲಿರುವ ಭಾವಚಿತ್ರ ಹರಿದು ಹಾಕಿದ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಅವರು, ಕಳೆದ ಎರಡು ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದ ಕಾಂಗ್ರೆಸ್ ಅಭ್ಯರ್ಥಿಯ ಬೆಂಬಲಿಗರ ಕೃತ್ಯ ಇದಾಗಿರಬಹುದು. ಕಾಂಗ್ರೆಸ್ ಅಭ್ಯರ್ಥಿ ಚುನಾವಣೆಯಲ್ಲಿ ಪರಾಭವಗೊಂಡಿದ್ದರಿಂದ ಹತಾಶರಾಗಿ ಅವರ ಬೆಂಬಲಿಗರು ಈ ರೀತಿಯ ಕೃತ್ಯ ಎಸಗಿರಬಹುದು. ಪೊಲೀಸರು ಈಗಾಗಲೇ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು ಎಂದು ಒತ್ತಾಯಿಸಿದರು.
ಅಮೆರಿಕದಲ್ಲಿ ಸಾಂಸ್ಕೃತಿಕ ಉತ್ಸವ: ನಾವೆಲ್ಲರೂ ವಿಶ್ವ ಕುಟುಂಬಕ್ಕೆ ಸೇರಿದವರು: ರವಿಶಂಕರ್ ಗುರೂಜಿ
ಕಾಂಗ್ರೆಸ್ ಸರ್ಕಾರದಲ್ಲಿ ಲಿಂಗಾಯತ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ಇಲ್ಲ. ಲಿಂಗಾಯತರಿಗೆ ಡಿಸಿಎಂ ಸ್ಥಾನ ಅಲ್ಲ, ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂಬ ಶಾಮನೂರ ಶಿವಶಂಕರಪ್ಪ ಹೇಳಿಕೆ ಸರಿಯಾಗಿದೆ. ಕಳೆದ ಚುನಾವಣೆಯಲ್ಲಿ ಲಿಂಗಾಯತರು ಕಾಂಗ್ರೆಸ್ ಬೆಂಬಲಿಸಿದ್ದರಿಂದಲೇ 135 ಶಾಸಕರು ಚುನಾಯಿತರಾಗಿದ್ದಾರೆ. ಶಾಮನೂರ ಶಿವಶಂಕರಪ್ಪ ಅವರು ಸತ್ಯ ಮಾತನಾಡಿದ್ದಾರೆ ಎಂದರು. ವಿವಿಧ ಇಲಾಖೆಗಳಲ್ಲಿಯೂ ಲಿಂಗಾಯತರಿಗೆ ಸೂಕ್ತ ಪ್ರಾತಿನಿಧ್ಯ ದೊರೆತಿಲ್ಲ. ಡಿಸಿ, ಎಸ್ಪಿ ಸೇರಿದಂತೆ ಉನ್ನತಾಧಿಕಾರಿ ಹುದ್ದೆಯಲ್ಲಿ ಲಿಂಗಾಯತರು ಇಲ್ಲ. ಕಾಂಗ್ರೆಸ್ ಸರ್ಕಾರದಲ್ಲಿ ಲಿಂಗಾಯತರನ್ನು ಸಂಪೂರ್ಣ ಕಡೆಗಣಿಸಲಾಗಿದೆ ಎಂದು ಶಾಸಕ ಯತ್ನಾಳ ಟೀಕಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.