
ಬೆಂಗಳೂರು (ಸೆ.19): ಆಳಂದ ವಿಧಾನಸಭಾ ಕ್ಷೇತ್ರದ ಮತ ಅಕ್ರಮದ ಬಗ್ಗೆ ಸಿಐಡಿ ತನಿಖೆಗೆ ಚುನಾವಣಾ ಆಯೋಗ ಸಹಕಾರ ನೀಡದಿರುವುದನ್ನು ನೋಡಿದರೆ, ಅವರೂ ಮತಗಳವು ಷಡ್ಯಂತ್ರದಲ್ಲಿ ಭಾಗಿಯಾಗಿದ್ದಾರೆಂಬ ಅನುಮಾನ ಸಹಜವಾಗಿ ಮೂಡುತ್ತದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. ಅಲ್ಲದೆ, ಆಳಂದ ಕ್ಷೇತ್ರ ಮಾತ್ರವಲ್ಲ ಬೇರೆ ಕ್ಷೇತ್ರಗಳಲ್ಲೂ ಈ ರೀತಿಯ ಅಕ್ರಮ ನಡೆದಿದೆ ಎಂದು ಅವರು ಆರೋಪಿಸಿದ್ದಾರೆ.
ಆಳಂದ ಕ್ಷೇತ್ರದಲ್ಲಿ ಮತಗಳವು ಬಗ್ಗೆ ರಾಹುಲ್ ಗಾಂಧಿ ಅವರ ಆರೋಪದ ಕುರಿತ ಪ್ರಶ್ನೆ ಕುರಿತು ಸುದ್ದಿಗಾರರ ಜತೆಗೆ ಮಾತನಾಡಿ, ಅವರು ಮಾಡಿರುವ ಆರೋಪಗಳೆಲ್ಲವೂ ಸತ್ಯ. ಕೇವಲ ಆಳಂದ ವಿಧಾನಸಭಾ ಕ್ಷೇತ್ರ ಮಾತ್ರವಲ್ಲ, ಬೇರೆ ಕ್ಷೇತ್ರಗಳಲ್ಲೂ ಈ ರೀತಿ ಅಕ್ರಮಗಳು ನಡೆದಿವೆ. ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವಂತಹ ಪರಿಶಿಷ್ಟರು, ಅಲ್ಪಸಂಖ್ಯಾತರು, ಸಾಮಾನ್ಯ ವರ್ಗದವರು ಸೇರಿ ಎಲ್ಲ ಜನ ಸಾಮಾನ್ಯರ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ಗಡಿ ಭಾಗದಲ್ಲಿರುವ ಬೇರೆ ರಾಜ್ಯದವರ ಹೆಸರನ್ನು ಸೇರಿಸಲಾಗಿತ್ತು. ಒಟ್ಟಾರೆ ಇದೆಲ್ಲವನ್ನೂ ಪೂರ್ವ ನಿಯೋಜಿತವಾಗಿ ಮಾಡಲಾಗಿತ್ತು ಎಂದು ತಿಳಿಸಿದರು.
ಸುಮಾರು 6 ಸಾವಿರ ಮತಗಳನ್ನು ತೆಗೆದು ಹಾಕಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಆಳಂದ ಶಾಸಕರು ದೂರು ನೀಡಿದ್ದರು. ಈ ಕುರಿತು ಪ್ರಕರಣವೂ ದಾಖಲಾಯಿತು. ಈ ಮಧ್ಯೆ ಚಿಲುಮೆ ಸಂಸ್ಥೆ ಅಕ್ರಮದ ವಿಚಾರವಾಗಿ ನಾವು ಹೋರಾಟ ಮಾಡಿ ಕೇಂದ್ರ ಚುನಾವಣಾ ಆಯೋಗವನ್ನು ಭೇಟಿ ಮಾಡಿದ್ದೆವು. ಆಳಂದ ಕ್ಷೇತ್ರದ ಪ್ರಕರಣದ ಬಗ್ಗೆ ಸಿಐಡಿ ತನಿಖೆ ಆರಂಭಿಸಿ ಚುನಾವಣಾ ಆಯೋಗದಿಂದ ಮಾಹಿತಿ ಕೇಳಿತ್ತು. ಆದರೆ ಆಯೋಗ ತನಿಖೆಗೆ ಸಹಕಾರ ನೀಡಲಿಲ್ಲ. ಆಯೋಗ ಸೂಕ್ತ ಮಾಹಿತಿ, ದಾಖಲೆ ನೀಡದಿದ್ದರೆ ತನಿಖೆ ಹೇಗೆ ಪೂರ್ಣವಾಗುತ್ತದೆ ಎಂದರು.
ಕೇಂದ್ರ ಸರ್ಕಾರದ ಜೊತೆ ಕೇಂದ್ರ ಚುನಾವಣಾ ಆಯೋಗ ಷಾಮೀಲಾಗಿ ಈ ಷಡ್ಯಂತ್ರ ರೂಪಿಸುತ್ತಿದೆ ಎಂಬ ರಾಹುಲ್ ಗಾಂಧಿ ಅವರ ಆರೋಪದ ಬಗ್ಗೆ ಕೇಳಿದಾಗ, ಅವರು ಮಾಡಿರುವ ಆರೋಪ ಸತ್ಯ ಎಂದು ನಾನು ಹೇಳುತ್ತಿದ್ದೇನೆ. ಯಾವುದೇ ವ್ಯಕ್ತಿ ಮತಪಟ್ಟಿಯಿಂದ ಹೆಸರು ತೆಗೆಸಲು ಅರ್ಜಿ ನೀಡಿದರೆ ಆತ ತನ್ನ ಮೊಬೈಲ್ ಸಂಖ್ಯೆ ನೀಡಬೇಕು ಹಾಗೂ ಆ ಸಂಖ್ಯೆಗೆ ಓಟಿಪಿ ಹೋಗಬೇಕಲ್ಲವೇ? ಈ ಎಲ್ಲವನ್ನೂ ಪರಿಶೀಲನೆ ಮಾಡಿದ ಬಳಿಕ ಮತಪಟ್ಟಿಯಲ್ಲಿ ಹೆಸರು ತೆಗೆಯಬೇಕು.
ಈ ವಿಚಾರವಾಗಿಯೇ ರಾಹುಲ್ ಗಾಂಧಿ ಅವರು ದೇಶಾದ್ಯಂತ ಹೋರಾಟ ಮಾಡುತ್ತಿದ್ದಾರೆ. ನಮ್ಮ ಮತ, ನಮ್ಮ ಹಕ್ಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನದ ಹಕ್ಕು ಕಾಯುವುದು ಚುನಾವಣಾ ಆಯೋಗದ ಕರ್ತವ್ಯ, ಕಸಿಯುವುದಲ್ಲ. ಪ್ರತಿಯೊಬ್ಬರ ಹಕ್ಕು ರಕ್ಷಣೆ ಮಾಡಿ, ರಾಜಕೀಯ ಪಕ್ಷಗಳ ಮೇಲೆ ಅವಲಂಬಿತರಾಗಬೇಡಿ ಎಂದು ಸುಪ್ರೀಂ ಕೋರ್ಟ್ ಕೂಡ ಹೇಳಿದೆ. ರಾಜಕೀಯ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸುತ್ತವೆಯೋ ಇಲ್ಲವೋ ಅದು ಬೇರೆ ಪ್ರಶ್ನೆ. ಆದರೆ ಆಯೋಗ ನ್ಯಾಯಬದ್ಧವಾಗಿ ಮತದಾನದ ಹಕ್ಕು ಕಾಪಾಡಬೇಕು ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.