ಸಂವಿಧಾನ ಮುಗಿಸುವ ಬಿಜೆಪಿ, ಮೋದಿಗೆ ಅಧಿಕಾರದಿಂದ ಕೆಳಗಿಳಿಸಿ: ಮಲ್ಲಿಕಾರ್ಜುನ್‌ ಖರ್ಗೆ

By Kannadaprabha NewsFirst Published Feb 21, 2024, 3:00 AM IST
Highlights

ಸಾವಿರಾರು ಸಂಖ್ಯೆಯಲ್ಲಿ ಸೇರಿರುವ ಇಲ್ಲಿನವರು ಇದೇ ಪ್ರೀತಿ ವಿಶ್ವಾಸ ಇಟ್ಟು ಬರುವ ಚುನಾವಣೆಯಲ್ಲಿ ಸಹಕಾರ ಕೊಡದಿದ್ದಲ್ಲಿ ಈ ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಲ್ಲ. ಸಂವಿಧಾನ ಉಳಿಯಲ್ಲ ಎಂದು ಎಚ್ಚರಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ 

ಬೀದರ್‌(ಫೆ.21):  ಮನುವಾದವನ್ನು ತಂದು ಸಂವಿಧಾನವನ್ನು ಮುಗಿಸುವ ಕುತಂತ್ರ ನಡೆಸುತ್ತಿರುವ ಬಿಜೆಪಿ, ಆರ್‌ಎಸ್‌ಎಸ್‌ನ ನರೇಂದ್ರ ಮೋದಿ ಅಧಿಕಾರದಿಂದ ಕೆಳಗಿಳಿಸದೇ ಇದ್ದಲ್ಲಿ ದೇಶದಲ್ಲಿ ಪ್ರಜಾಪ್ರಭುತ್ವ ಇರೋಲ್ಲ. ಮುಂಬರುವ ಚುನಾವಣೆಯಲ್ಲಿ ಬಸವಾದಿ ಶರಣರ ತತ್ವಾದರ್ಶಗಳ ಮೇಲೆ ನಡೆಯುತ್ತಿರುವ ಕಾಂಗ್ರೆಸ್‌ ಪಕ್ಷವನ್ನು ಗೆಲ್ಲಿಸಬೇಕೆಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಕರೆ ನೀಡಿದರು.

ಅವರು ಮಂಗಳವಾರ ನಗರದ ನೆಹರು ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಅಭಿನಂದನಾ ಸಮಾರಂಭಧಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಸಾವಿರಾರು ಸಂಖ್ಯೆಯಲ್ಲಿ ಸೇರಿರುವ ಇಲ್ಲಿನವರು ಇದೇ ಪ್ರೀತಿ ವಿಶ್ವಾಸ ಇಟ್ಟು ಬರುವ ಚುನಾವಣೆಯಲ್ಲಿ ಸಹಕಾರ ಕೊಡದಿದ್ದಲ್ಲಿ ಈ ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಲ್ಲ. ಸಂವಿಧಾನ ಉಳಿಯಲ್ಲ ಎಂದು ಎಚ್ಚರಿಸಿದರು.

ರಸಗೊಬ್ಬರ ಉತ್ಪಾದನೆಯಲ್ಲಿ ದೇಶ ಸ್ವಾವಲಂಬಿಯಾಗಿ ಹೊರಹೊಮ್ಮುತ್ತಿದೆ: ಭಗವಂತ ಖೂಬಾ

ಕಾಂಗ್ರೆಸ್‌ ಲಾಭ ಪಡೆದು ಬಿಜೆಪಿಯ ಹೆದರಿಕೆಗೆ ಬಗ್ಗಿ ನಮ್ಮಿಂದ ಓಡಿ ಹೋಗ್ತಿದ್ದಾರೆ:

ನಮ್ಮಿಂದ ಆಯ್ಕೆಯಾಗಿ ಹೋದವರು ನಮ್ಮ ಸಾಮಾಜಿಕ ಕಳಕಳಿಯ ತತ್ವ ಸಿದ್ಧಾಂತ ಮರೆತು ದುಡ್ಡು, ಅಧಿಕಾರದ ಆಸೆ ಮತ್ತು ಅಸೂಯೆಯಿಂದ ಹೊರ ಹೋಗಿ ಬಿಜೆಪಿ ಜೊತೆ ಸೇರಿ ನಮ್ಮ ಸರ್ಕಾರ ಬೀಳುವಂತಾಗಿವೆ. ಕರ್ನಾಟಕ, ಮಧ್ಯಪ್ರದೇಶ, ಮಣಿಪುರ, ಗೋವಾಗಳಲ್ಲಿ ಇಂಥ ಸನ್ನಿವೇಶ ನಾನು ಕಂಡಿದ್ದೇನೆ ಎಂದು ಆರೋಪಿಸಿದರು.

ಹೀಗೆಯೇ ಕಾಂಗ್ರೆಸ್‌ನಲ್ಲಿದ್ದು, ಕಾಂಗ್ರೆಸ್‌ ಲಾಭ ಪಡೆದು, ಕಾಂಗ್ರೆಸ್‌ನಿಂದ ಮಂತ್ರಿ ಮುಖ್ಯಮಂತ್ರಿಯಾದವರು ಬಿಜೆಪಿಯತ್ತ ಓಡೋಡಿ ಹೋಗುತ್ತಿದ್ದಾರೆ. ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯದ ಮೂಲಕ ಹೆದರಿಸಿ ಕಾಂಗ್ರೆಸ್‌ ಗೆದ್ದು ಬಂದಿರುವ ರಾಜ್ಯಗಳಲ್ಲಿ ಸರ್ಕಾರ ಬೀಳಿಸುವ ಕುತಂತ್ರವನ್ನು ಬಿಜೆಪಿ ಮಾಡುತ್ತಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.

ವಯಕ್ತಿಕವಾಗಿ ನರೇಂದ್ರ ಮೋದಿ, ಅದಾನಿ ವಿರುದ್ಧ ನಾವಿಲ್ಲ, ವಿಚಾರ ಭೇದವಿದೆ:

ನಾವು ವಯಕ್ತಿಕವಾಗಿ ನರೇಂದ್ರ ಮೋದಿಯಾಗಲಿ, ಅದಾನಿ ಅಥವಾ ಸಿರಿವಂತ ಮಾಲೀಕರ ಸ್ವತ್ತಾಗಿರುವ ಹತ್ತು ಹಲವು ಟಿವಿ ಚಾನಲ್‌ಗಳ ವಿರುದ್ಧವಾಗಲಿ ಇಲ್ಲ ಅವರು ಸಾಗುತ್ತಿರುವ ಮಾರ್ಗದ ವಿರುದ್ಧ ನಾವಿದ್ದೇನೆ. ಮನುವಾದ ತರುವತ್ತ ಬಿಜೆಪಿ ಆರ್‌ಎಸ್‌ಎಸ್‌ ಮುಂದಾಗಿದ್ದರೆ ಅದನ್ನು ತಡೆದು ಬಸವಣ್ಣ, ನಾರಾಯಣಗುರುಗಳ ತತ್ವಗಳನ್ನು ಜಾರಿಗೆ ತರಲೆಂಬ ಆಶಾವಾದ ಹಾಗೂ ಡಾ. ಅಂಬೇಡ್ಕರ್‌ ಅವರ ಸಂವಿಧಾನ ಎತ್ತಿ ಹಿಡಿಯೋ ಕೆಲಸ ಮಾಡುವ ಕನಸು ನಮ್ಮದಾಗಿದೆ ಎಂದರು.

ಪ್ರಜಾಪ್ರಭುತ್ವದ ಅಡಿಯಲ್ಲಿ ಕಾರ್ಯನಿರ್ವಹಿಸಬೇಕಾದ ಸಂಸ್ಥೆಗಳಾದ ಚುನಾವಣಾ ಆಯೋಗ, ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ ಇವುಗಳೆಲ್ಲವೂ ಈಗ ಬಿಜೆಪಿ, ಆರ್‌ಎಸ್‌ಎಸ್‌ ಹಾಗೂ ನರೇಂದ್ರ ಮೋದಿ ಅವರ ಹಿಡಿತದಲ್ಲಿವೆ. ಪ್ರಜಾಪ್ರಭುತ್ವ ವ್ಯವಸ್ಥೆ ಮೂಲೆಗೆ ನೂಕಲ್ಪಡುತ್ತಿದೆ ಎಂದು ಆರೋಪಿಸಿದರು.

ಈ ಹಿಂದೆ ನರೇಂದ್ರ ಮೋದಿ ನೀಡಿದ್ದ ಆಶ್ವಾಸನೆಯಂತೆ ಕಪ್ಪು ಹಣ ಜನರ ಖಾತೆಗೆ ಸೇರಲಿಲ್ಲ, ಕೋಟ್ಯಂತರ ಉದ್ಯೋಗಗಳು ದಕ್ಕಲಿಲ್ಲ. ರೈತರ ಆದಾಯ ದ್ವಿಗುಣಗೊಳ್ಳಲಿಲ್ಲ ಅದಾಗ್ಯೂ ಮೋದಿ ಮೋದಿ ಎಂದು ಹೇಳ್ತೀರಾ. ಪೆಟ್ರೋಲ್‌, ಡೀಸಲ್‌, ಅನಿಲ ಸಿಲಿಂಡರ್‌, ಗೃಹೋಪಯೋಗಿ ವಸ್ತುಗಳ ದರ ಮುಗಿಲೆತ್ತರಕ್ಕೆ ಸಾಗಿವೆ, ಪ್ರಜಾಪ್ರಭುತ್ವ ಆತಂಕದಲ್ಲಿದೆ ಈಗಲಾದರೂ ಜನರು ಅರ್ಥ ಮಾಡಿಕೊಳ್ಳಲಿ ಎಂದರು.

ನಿಮ್ಮಲ್ಲಿರುವ ಎಲ್ಲವನ್ನೂ ಇತರರಿಗೆ ಕೊಟ್ಟುಬಿಡಿ ಎಂದೆನ್ನುವ ಬಸವಣ್ಣನ ತತ್ವ ಪಾಲಿಸಿ:

ನಿಮ್ಮಲ್ಲಿರುವ ಎಲ್ಲವನ್ನೂ ಇತರರಿಗೆ ಕೊಟ್ಟುಬಿಡಿ ಎಂದು ಹೇಳುವ ಮಹಾತ್ಮ ಬಸವಣ್ಣನ ಮನೆಯಲ್ಲಿ ಕಳ್ಳ ಬಂದರೂ ಆತನಿಗೂ ಗೌರವಿಸಿ ಎಲ್ಲವನ್ನೂ ತ್ಯಾಗ ಮಾಡಿದ ಚಿಂತನೆ ವಿಶ್ವಕ್ಕೆ ಮಾದರಿ. ಆದರೆ ಈಗ ಇಲ್ಲಿ ಕಳ್ಳರೇ ಸೇರಿದ್ದಾರೆ. ಉದ್ಯಮಿಗಳ ₹13 ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡುವ ಇವರು ಹತ್ತಿಪ್ಪತ್ತು ಸಾವಿರ ರುಪಾಯಿ ಸಾಲ ಮಾಡಿದ ರೈತನ ಜೀವ ತಿನ್ನುತ್ತಾರೆ ಎಂದು ಆರೋಪಿಸಿದರು.

'ಶಾಲೆಗಳಲ್ಲಿ ದೇವರ ಪೂಜೆ ಬೇಕಾಗಿಲ್ಲ' ಘೋಷವಾಕ್ಯ ಬದಲಾವಣೆ ಕಿಡಿ ಹೊತ್ತಿರೋ ಬೆನ್ನಲ್ಲೇ ಹೊಸ ವಿವಾದ ಸೃಷ್ಟಿಸಿದ ನಟ

ಕಾಂಗ್ರೆಸ್‌ ಯೋಜನೆ, ಸಾಧನೆ ತನ್ನದೆಂದು ಹೇಳುತ್ತಿರುವ ನರೇಂದ್ರ ಮೋದಿ:

ನರೇಗಾ, ಆಹಾರ ಭದ್ರತಾ ನೀತಿಗ‍ಳನ್ನು ನಾವು ಜಾರಿಗೆ ತಂದಿದ್ದೇವೆ ಆದರೂ ನರೇಂದ್ರ ಮೋದಿ ದೇಶದ 80ಕೋಟಿ ಬಡವರಿಗೆ ಉಚಿತವಾಗಿ ಆಹಾರ ನೀಡುತ್ತಿದ್ದೇನೆ ಎಂದು ಹೇಳುತ್ತಿದ್ದಾರೆ. ಆದರೆ ಅದಕ್ಕಾಗಿ ಈ ಹಿಂದೆ ಸೋನಿಯಾ ಗಾಂಧಿ ಅವರು ಕಾನೂನು ಮಾಡಿದರು ಸಿದ್ದರಾಮಯ್ಯ ಅವರ ಸರ್ಕಾರ ಬಂದ ಮೇಲೆ ರಾಜ್ಯದ ಬಡ ಜನರಿಗೆ ಉಚಿತ ಅಕ್ಕಿ ನೀಡಿತು. ನಾವು ಮಾಡುವ ಕೆಲಸವನ್ನೇಲ್ಲ ನಾನೇ ಮಾಡಿದ್ದು ಅಂತಾರೆ ಮೋದಿ. ನೆಹರು, ಇಂದಿರಾಗಾಂಧಿ ಅವರ ಹಸಿರು ಕ್ರಾಂತಿ, ಕ್ಷೀರ ಕ್ರಾಂತಿ ಅದೂ ನನ್ನದು ಎಂದೆನ್ನುತ್ತಾರೆ ಎಂದು ಖರ್ಗೆ ಲೇವಡಿ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಸಚಿವ ರಹೀಮ್‌ ಖಾನ್‌, ಮಾಜಿ ಸಚಿವ ರಾಜಶೇಖರ ಪಾಟೀಲ್‌, ಶಾಸಕರಾದ ಭೀಮರಾವ್‌ ಪಾಟೀಲ್‌, ಡಾ. ಚಂದ್ರಶೇಖರ ಪಾಟೀಲ್‌, ಅರವಿಂದಕುಮಾರ ಅರಳಿ, ಬಿಆರ್‌ ಪಾಟೀಲ್‌, ಡಿಎಸ್‌ಎಸ್‌ ರಾಜ್ಯ ಪ್ರಮುಖ ಮಾವಳ್ಳಿ ಶಂಕರ, ಮಾಜಿ ಶಾಸಕರಾದ ಅಶೋಕ ಖೇಣಿ, ವಿಜಯಸಿಂಗ್‌, ಕೆ. ಪುಂಡಲಿಕರಾವ್‌, ಗುರಮ್ಮ ಸಿದ್ದಾರೆಡ್ಡಿ, ಅಮರಕುಮಾರ ಖಂಡ್ರೆ, ಅಭಿಷೇಕ ಪಾಟೀಲ್ ಬಸವರಾಜ ಬುಳ್ಳಾ, ಮಹ್ಮದ ಗೌಸ್‌ ನರಸಿಂಗರಾವ್‌ ಸೂರ್ಯವಂಶಿ, ಭೀಮಸೇನರಾವ ಶಿಂಧೆ, ಸಾಗರ ಖಂಡ್ರೆ, ದಿಲೀಪ ತಾಡಂಪಳ್ಳಿ, ಮಾಲಾ ಬಿ., ಮೀನಾಕ್ಷಿ ಸಂಗ್ರಾಮ, ಅನೀಲಕುಮಾರ ಬೆಲ್ದಾರ, ಮನ್ನಾನ್‌ ಸೇಠ್‌, ದತ್ತಾತ್ರಿ ಮೂಲಗೆ ಹಾಗೂ ಆನಂದ ದೇವಪ್ಪ ಇದ್ದರು. 

click me!