ಕಾಡಾನೆ ದಾಳಿಗೆ ಸಾವನ್ನಪ್ಪಿದ ಕೇರಳ ವ್ಯಕ್ತಿಗೆ ಕೆಪಿಸಿಸಿಯಿಂದ 15 ಲಕ್ಷ ಪರಿಹಾರ ಕೊಡಿ: ಸಿಟಿ ರವಿ ಆಕ್ರೋಶ

By Suvarna NewsFirst Published Feb 20, 2024, 6:37 PM IST
Highlights

 ಕಾಡಾನೆ ದಾಳಿದಿಂದ ವ್ಯಕ್ತಿ ಸಾವು. ಕೇರಳದ ವ್ಯಕ್ತಿ ಕುಟುಂಬಕ್ಕೆ  ರಾಜ್ಯ ಸರ್ಕಾರ 15 ಲಕ್ಷ ರೂ. ಪರಿಹಾರ ಬಿಡುಗಡೆ. ಕೆಪಿಸಿಸಿಯಿಂದ ಕೊಡಿಸಿ ಸರ್ಕಾರದ ಖಜಾನೆಯಿಂದಲ್ಲ ಎಂದು ಸಿ.ಟಿ.ರವಿ ತೀವ್ರ ಆಕ್ರೋಶ

ವರದಿ: ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿಕ್ಕಮಗಳೂರು (ಫೆ.20): ಕೇರಳ ರಾಜ್ಯದ ವೈನಾಡಿನಲ್ಲಿ ಆನೆ ದಾಳಿಯಿಂದ ಸಾವಿಗಿಡಾದ ಕೇರಳದ ವ್ಯಕ್ತಿಯೊಬ್ಬರಿಗೆ ಕರ್ನಾಟಕ ರಾಜ್ಯ ಸರ್ಕಾರ 15 ಲಕ್ಷ ರೂ. ಪರಿಹಾರ ಬಿಡುಗಡೆ ಮಾಡಿರುವ ಕುರಿತು ಚಿಕ್ಕಮಗಳೂರಿನಲ್ಲಿ  ಮಾಜಿ ಶಾಸಕ ಸಿ.ಟಿ.ರವಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸತ್ತವರಿಗೆ ಪರಿಹಾರ ಕೊಡುವ ಜವಾಬ್ದಾರಿ ಇರುವುದು ಕೇರಳ ಸರ್ಕಾರದ್ದು, ಘಟನೆ ನಡೆದಿರುವುದು ಕೇರಳದಲ್ಲಿ. ತಮಾಷೆ ಎಂದರೆ ಕರ್ನಾಟಕದ ಆನೆ ಎಂದು ಹೇಳಿದ್ದಾರೆ. ಕರ್ನಾಟಕದ ಆನೆ, ತಮಿಳುನಾಡು, ಕೇರಳದ ಆನೆ ಎಂದು ಯಾವಾಗ ವರ್ಗೀಕರಣ ಮಾಡಿದರು. ಆನೆಗಳ ಗಣತಿ ಮಾಡಿ ಇದು ಕರ್ನಾಟಕದ್ದು ಎಂದು ಏನಾದರೂ ಸೀಲ್ ಹಾಕಲಾಗಿದೆಯಾ? ಎಂದು ಪ್ರಶ್ನಿಸಿದರು.

ನಾಚಿಕೆಗೇಡಿನ ಸಂಗತಿ : 
ಇದು ನಾಚಿಕೆಗೇಡಿನ ಸಂಗತಿ. ಇವರ ರಾಜಕೀಯ ಇತಾಸಕ್ತಿಯನ್ನು ಕಾಪಾಡಿಕೊಳ್ಳಲು, ಹೈಕಮಾಂಡ್ ಆದೇಶ ಪಾಲಿಸಲಿಕ್ಕೆ ಕರ್ನಾಟಕ ರಾಜ್ಯದ ತೆರಿಗೆ ಹಣವನ್ನು ಇವರ ರಾಜಕೀಯ ಹಿತಾಸಕ್ತಿಗಾಗಿ ಮಾನ ಮರ್ಯಾದೆ ಎಲ್ಲವನ್ನೂ ಬಿಟ್ಟು ಬಳಕೆ ಮಾಡಿಕೊಳ್ಳುತ್ತಿದ್ದಾರೆ ತರಾಟೆಗೆ ತೆಗೆದುಕೊಂಡರು.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೆಹಲಿಗೆ ಹೋಗಿ ನನ್ನ ತೆರಿಗೆ ನನ್ನ ಹಕ್ಕು ಎಂದು ಹೇಳಿದರು.

ಕಾಡಾನೆ ದಾಳಿಗೆ ಕೇರಳ ವ್ಯಕ್ತಿ ಬಲಿ , ಕರ್ನಾಟಕದಿಂದ 15 ಲಕ್ಷ ಪರಿಹಾರ! ದಾಳಿ ಮಾಡಿದ ಆನೆ ನಿಜವಾಗ್ಲೂ ನಮ್ಮ ರಾಜ್ಯದ್ದಾ?

ಕರ್ನಾಟಕದ ಜನರ ತೆರಿಗೆ ಹಣವನ್ನು ನಿಮ್ಮ ರಾಜಕೀಯ ಹಿತಾಸಕ್ತಿ ಕಾಪಾಡಿಕೊಳ್ಳಲು ಕೇರಳಕ್ಕೆ ಕೊಡಲು ನಾಚಿಕೆ ಆಗಲ್ವೇ. ಕೇರಳದಲ್ಲಿ ಇವರದ್ದೇ ಐಎನ್ಡಿಐಎ ಮೈತ್ರಿ ಕೂಟದ ಸರ್ಕಾರವಿದೆ. ಅವರ ಬಳಿ ಹೇಳಿ ಪರಿಹಾರ ಕೊಡಿಸುವ ಯೋಗ್ಯತೆ ಇವರ ನಾಯಕರುಗಳಿಗಿಲ್ಲವೇ? ಎಂದು ತಿವಿದರು. ಕಮ್ಯುನಿಸ್ಟ್, ಕಾಂಗ್ರೆಸ್ ಎಲ್ಲಾ ದೆಹಲಿಗೆ ಬಂದು ಮೋದಿ ವಿರುದ್ಧ ನಾವೆಲ್ಲಾ ಒಂದು ಎನ್ನುತ್ತಾರೆ.

ಆದರೆ ಕೇರಳ ಸರ್ಕಾರಕ್ಕೆ ಹೇಳಿ ಪಪರಿಹಾರ ಕೊಡಿಸಲಾಗದಷ್ಟು ನಿಮ್ಮ ನಾಯಕ ರಾಹುಲ್ ಗಾಂಧಿ ದುರ್ಬಲರೇ?, ಅಥವಾ ಅಲ್ಲಿ ನಿಮ್ಮ ವೇಣುಗೋಪಾಲ್ ಅವರದ್ದು ಏನೂ ನಡೆಯುವುದಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಇದೆ ಅಲ್ಲಿನ ಖಜಾನೆ ಖಾಲಿ ಮಾಡೋಣ ಎನ್ನುವ ತಪ್ಪು ಅಭ್ಯಾಸಕ್ಕೆ ಹೊರಟಿದ್ದೀರ? ಇದೊಂದು ಕೆಟ್ಟ ಸಂಪ್ರದಾಯ ಎಂದು ದೂರಿದರು.

ಡ್ರಗ್ಸ್‌ ಹೆಸರಲ್ಲಿ ಬೆಂಗಳೂರು ಐಟಿ ಕಂಪನಿ ಸ್ಥಾಪಕನಿಗೆ ಮೋಸ, ಕಳೆದುಕೊಂಡಿದ್ದು 2.30 ಕೋಟಿ ರೂಪಾಯಿ!

ಕೆಪಿಸಿಸಿಗೆ ಏನೂ ಬರ ಬಂದಿಲ್ಲ : 
ಒಂದು ವರ್ಷದಲ್ಲಿ ಹಲವಾರು ಕೆಟ್ಟ ಸಂಪ್ರದಾಯಕ್ಕೆ ರಾಜ್ಯದ ಕಾಂಗ್ರೆಸ್ ಸರ್ಕಾರ ಪೀಠಿಕೆ ಹಾಕಿದೆ. ನಮ್ಮ ರಾಜ್ಯದಲ್ಲಿ ಆನೆ ತುಳಿತಕ್ಕೆ ಒಳಗಾದವರಿಗೆ ಬಹಳ ಕಷ್ಟಪಟ್ಟ ಮೇಲೆ 5 ಲಕ್ಷ ಪರಿಹಾರ ಕೊಡುತ್ತಾರೆ. ನಮ್ಮ ಜಿಲ್ಲೆ ಬನ್ನೂರು, ಮೂಡಿಗೆರೆಯಲ್ಲಿ ಆನೆ ತುಳಿತಕ್ಕೆ ಒಳಗಾಗಿ ಸಾವಪ್ಪಿದವರಿಗೆ ಎಷ್ಟು ಪರಿಹಾರ ಕೊಟ್ಟಿದ್ದೀರಿ. ಸಾಯುವವರು ಬೇರೆ ರಾಜ್ಯದವರಾದರೆ ಕರ್ನಾಟಕ ಪರಿಹಾರದಿಂದ ಹೆಚ್ಚು ಪರಿಹಾರವೇ? ಇದು ಯಾವ ರಾಜ್ಯದ ಜನರ ಹಿತಾಸಕ್ತಿ? ಎಂದು ಪ್ರಶ್ನಿಸಿದರು.

ರಾಜ್ಯದ ಖಜಾನೆ ಹಣವನ್ನ ತನ್ನ ರಾಜಕೀಯ ತೆವಲಿಗೆ ಖರ್ಚು ಮಾಡಲಾಗುವುದಿಲ್ಲ. ನೀವು ನಮ್ಮ ಖಜಾನೆ ಮಾಲೀಕರಲ್ಲ. ಬರೇ ಟ್ರಸ್ಟಿ ಆಗಿದ್ದೀರಿ. ಆದರೆ ನಿಮ್ಮ ಮನೆ ಜೇಬಿನಿಂದ ತೆಗೆದು ಕೊಡುವ ರೀತಿ ರಾಜ್ಯದ ಖಜಾನೆ ಹಣವನ್ನು ಖರ್ಚು ಮಾಡಿದ್ದೀರಿ. ಕೆಪಿಸಿಸಿಗೆ ಏನೂ ಬರ ಬಂದಿಲ್ಲ. ಆಲ್ಲಿಂದ 15ಲಕ್ಷ ಅಲ್ಲದಿದ್ದರೆ 50 ಲಕ್ಷ ರೂ. ಕೊಡಿ ಆದರೆ ರಾಜ್ಯದ ಖಜಾನೆ ಹಣವನ್ನು ಬೇಕಾಬಿಟ್ಟಿ ಖರ್ಚು ಮಾಡುವುದಕ್ಕೆ ಆಗುವುದಿಲ್ಲ. ಇದು ಅಧಿಕಾರದ ದುರ್ಬಳಕೆ. ಇದನ್ನು ನಾವು ಖಂಡಿಸುತ್ತೇವೆ. ಈ ನಿರ್ಧಾರವನ್ನು ವಾಪಾಸ್ ಪಡೆಯಬೇಕು ಎಂದು ಆಗ್ರಹಿಸುತ್ತೇನೆ ಎಂದರು.

click me!