ರಾಜ್ಯದಲ್ಲಿ ಬಿಜೆಪಿ ನೇತೃತ್ವದ 40 ಪರ್ಸೆಂಟ್ ಭ್ರಷ್ಟಸರ್ಕಾರ ಅಧಿಕಾರದಲ್ಲಿದ್ದು ಜನಹಿತ ಮರೆತಿರುವ ಬಿಜೆಪಿ ಸರ್ಕಾರವನ್ನು ರಾಜ್ಯದ ಜನತೆ ಚುನಾವಣೆಯಲ್ಲಿ ಕಿತ್ತೊಗೆಯುವುದು ಖಚಿತ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿದರು.
ಚಿಕ್ಕಬಳ್ಳಾಪುರ (ಫೆ.16): ರಾಜ್ಯದಲ್ಲಿ ಬಿಜೆಪಿ ನೇತೃತ್ವದ 40 ಪರ್ಸೆಂಟ್ ಭ್ರಷ್ಟಸರ್ಕಾರ ಅಧಿಕಾರದಲ್ಲಿದ್ದು ಜನಹಿತ ಮರೆತಿರುವ ಬಿಜೆಪಿ ಸರ್ಕಾರವನ್ನು ರಾಜ್ಯದ ಜನತೆ ಚುನಾವಣೆಯಲ್ಲಿ ಕಿತ್ತೊಗೆಯುವುದು ಖಚಿತ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿದರು. ನಗರದ ಶ್ರೀದೇವಿ ಪ್ಯಾಲೇಸ್‌ನಲ್ಲಿ ಸಂಜೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿರುವ ಗೃಹ ಲಕ್ಷೀ ಹಾಗೂ ಭಾಗ್ಯಜ್ಯೋತಿ ಯೋಜನೆಗಳ ಗ್ಯಾರೆಂಟಿ ಕೂಪನ್‌ಗಳನ್ನು ವಿತರಿಸಿ ಬಳಿಕ ಮಾತನಾಡಿದರು.
ರಾಜ್ಯದಲ್ಲಿ ವ್ಯಾಪಕ ಭ್ರಷ್ಟಚಾರ ನಡೆಯುತ್ತಿರುವುದರ ಬಗ್ಗೆ ರಾಜ್ಯದ ಗುತ್ತಿಗೆದಾರರು ಪ್ರಧಾನಿ ಮೋದಿ ಗಮನಕ್ಕೆ ತಂದರೂ ಬೊಮ್ಮಾಯಿ ಸರ್ಕಾರದ ಮೇಲೆ ಏಕೆ ಏನು ಕ್ರಮ ಕೈಗೊಂಡಿಲ್ಲ. ರಾಜ್ಯದಲ್ಲಿನ ಬಿಜೆಪಿ ಸರ್ಕಾರದ ಭ್ರಷ್ಟಾಚಾರಕ್ಕೆ ಮೋದಿ ಪರೋಕ್ಷವಾಗಿ ಕುಮ್ಮಕ್ಕು ನೀಡುತ್ತಿದ್ದಾರೆ. ಬಿಜೆಪಿ ನುಡಿದಂತೆ ನಡೆಯುವುದಿಲ್ಲ. ಬರೀ ಸುಳ್ಳು ಭರವಸೆಗಳ ಮೂಲಕ ಅಧಿಕಾರಕ್ಕೆ ಬಂದು ಲೂಟಿ ಹೊಡೆಯುವುದನ್ನು ಕಾಯಕ ಮಾಡಿಕೊಂಡಿದೆ ಎಂದರು. ಬಿಜೆಪಿ ಅಧಿಕಾರಕ್ಕಾಗಿ ಏನು ಮಾಡಬೇಕಾದರೂ ಮಾಡಲು ಹಿಂಜರಿಯುವುದಿಲ್ಲ. ಬಿಜೆಪಿ ಅಧಿಕಾರದಲ್ಲಿ ಮುಂದುವರೆದರೆ ದೇಶದ ಒಕ್ಕೂಟ ಹಾಗೂ ಜಾತ್ಯಾತೀತ ವ್ಯವಸ್ಥೆಗೆ ದಕ್ಕೆ ಬರಲಿದೆ.
ನಾವೆಂದೂ ಮತಗಳಿಗಾಗಿ ಆಮಿಷವೊಡ್ಡಲ್ಲ: ಶಾಸಕಿ ಅನಿತಾ ಕುಮಾರಸ್ವಾಮಿ
ಅಲ್ಲದೇ ಸಾಮಾಜಿಕ ನ್ಯಾಯ ಹಾಗೂ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ನಾಶ ಮಾಡುತ್ತದೆ. ಕಾಂಗ್ರೆಸ್ ಪಕ್ಷ ನುಡಿದಂತೆ ನಡೆಯುತ್ತದೆ. ಆ ಕಾರಣಕ್ಕಾಗಿಯೆ ಪ್ರತಿ ಕುಟುಂಬದ ಮಹಿಳೆಗೆ ಮಾಸಿಕ 2000, ಪ್ರತಿ ಮನೆಗೆ 200 ಯೂನಿಟ್ ಉಚಿತ ನೀಡುವ ಘೋಷಣೆ ಮಾಡಿ ಅದರ ಗ್ಯಾರೆಂಟಿ ಕಾರ್ಡ್‌ಗಳನ್ನು ಜನತೆಗೆ ನೀಡಲಾಗುತ್ತಿದೆ ಎಂದರು. ಬಿಜೆಪಿಗೆ ಪ್ರಜಾಪ್ರಭುತ್ವದ ವ್ಯವಸ್ಥೆ ಮೇಲೆ ನಂಬಿಕೆ ಇಲ್ಲ. ಬರೀ ವಾಮಾ ಮಾರ್ಗದಲ್ಲಿ ಅಧಿಕಾರಕ್ಕೆ ಬಂದು ರಾಜ್ಯದ ಸಂಪತ್ತನ್ನು ಲೂಟಿ ಮಾಡುತ್ತಿದೆ. ಪ್ರತಿ ಕಾಮಗಾರಿ, ಗುತ್ತಿಗೆಯಲ್ಲಿ ಭ್ರಷ್ಟಾಚಾರ ನಡೆಸುತ್ತಿದೆ. ರಾಜ್ಯದ ಜನತೆ ಬಿಜೆಪಿಯನ್ನು ಮನೆಗೆ ಕಳಿಸಲು ಸಿದ್ದರಾಗಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಪಕ್ಷ ನೀಡಿರುವ ಭರವಸೆಗಳ ಗ್ಯಾರೆಂಟ್ ಕಾರ್ಡ್‌ನ್ನು ಮನೆಗೆ ಮನೆಗೆ ತಲುಪಿಸಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಬೇಕೆಂದರು.
ಸಭೆಯಲ್ಲಿ ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ, ಎಐಸಿಸಿ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಅಭಿಷೇಕ್ ದತ್ತ, ಕೆಪಿಸಿಸಿ ವಕ್ತಾರ ವಿ.ಎಸ್.ಉಗ್ರಪ್ಪ, ಜಿಲ್ಲೆಯ ಶಾಸಕರಾದ ಗೌರಿಬಿದನೂರಿನ ಎನ್.ಎಚ್.ಶಿವಶಂಕರರೆಡ್ಡಿ, ಶಿಡ್ಲಘಟ್ಟದ ವಿ.ಮುನಿಯಪ್ಪ, ಬಾಗೇಪಲ್ಲಿ ಎಸ್.ಎನ್.ಸುಬ್ಬಾರೆಡ್ಡಿ, ಮಾಜಿ ಶಾಸಕರಾದ ಎಸ್.ಎಂ.ಮುನಿಯಪ್ಪ, ಡಾ.ಎಂ.ಸಿ.ಸುಧಾಕರ್, ಎನ್.ಸಂಪಂಗಿ, ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷೆ ಪುಪ್ಪ ಅಮರನಾಥ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ, ಟಿಕೆಟ್ ಆಕಾಂಕ್ಷಿಗಳಾದ ಗಂಗರೇಕಾಲುವೆ ನಾರಾಯಣಸ್ವಾಮಿ, ಯಲುವಹಳ್ಳಿ ರಮೇಶ್, ರಾಜೀವ್‌ಗೌಡ, ಪುಟ್ಟು ಅಂಜಿನಪ್ಪ ಸೇರಿದಂತೆ ಮತ್ತಿತರರು ಇದ್ದರು.
ಪ್ರತಿಭಟನೆ ಮಾಡಲು ಶಾಸಕರಿಗೆ ಯಾವುದೇ ನೈತಿಕತೆ ಇಲ್ಲ: ಸಚಿವ ಎಂಟಿಬಿ ನಾಗರಾಜ್ ಆಕ್ರೋಶ
ವೇದಿಕೆಯಲ್ಲಿ ಸುಬ್ಬಾರೆಡ್ಡಿ, ಸಂಪಂಗಿ ಅಕ್ಕಪಕ್ಕ!: ವೇದಿಕೆಯಲ್ಲಿ ಜಿಲ್ಲೆಯ ಬಾಗೇಪಲ್ಲಿ ಶಾಸಕರಾದ ಎಸ್.ಎನ್.ಸುಬ್ಬಾರೆಡ್ಡಿ ಹಾಗೂ ಮಾಜಿ ಶಾಸಕ ಎನ್.ಸಂಪಂಗಿ ವೇದಿಕೆಯಲ್ಲಿ ಅಕ್ಕಪಕ್ಕವೇ ಕೂತು ಗಮನ ಸೆಳೆದರೂ ಒಬ್ಬರಿಗೊಬ್ಬರು ಮಾತನಾಡಿಕೊಳ್ಳಲೇ ಇಲ್ಲ. ಇನ್ನೂ ಕೆ.ಎಚ್.ಮುನಿಯಪ್ಪ ಹಾಗೂ ಚಿಂತಾಮಣಿ ಮಾಜಿ ಶಾಸಕ ಎಂ.ಸಿ.ಸುಧಾಕರ್ ವೇದಿಕೆ ಹಂಚಿಕೊಂಡರು.