ಸಿಂದಗಿ ಕ್ಷೇತ್ರದ ಹಿರಿಯ ಶಾಸಕ ಎಂ ಸಿ ಮನಗೂಳಿ (85) ವಿಧಿವಶ| ಸಿಂದಗಿ ಪಟ್ಟಣದ ಮನಗೂಳಿ ನಿವಾಸದಲ್ಲಿ ನೀರವ ಮೌನ| ಶಾಸಕ ಮನಗೂಳಿ ನಿವಾಸದತ್ತ ಜಮಾಯಿಸುತ್ತಿರುವ ಜನರು| ಮನಗೂಳಿ ಪಾರ್ಥಿವ ಶರೀರ ಬೆಂಗಳೂರಿನಿಂದ ಸಿಂದಗಿಯತ್ತ
ಸಿಂದಗಿ(ಜ.28): ವಿಜಯಪುರ ಸಿಂದಗಿ ವಿಧಾನಸಭಾ ಕ್ಷೇತ್ರ ಹಿರಿಯ ಶಾಸಕ, ಜೆಡಿಎಸ್ ನಾಯಕ ಎಂ ಸಿ ಮನಗೂಳಿ(85) ಕೊನೆಯುಸಿರೆಳೆದಿದ್ದಾರೆ. ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಮನಗೂಳಿಯನ್ನು ಜನವರಿ 9ರಂದು ಬನ್ನೇರುಘಟ್ಟ ರಸ್ತೆಯ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ರಾತ್ರಿ 1 ಗಂಟೆಗೆ ನಿಧನರಾಗಿದ್ದಾರೆ.
undefined
ಕಫ, ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಮನಗೂಳಿಯವರನ್ನು ಕಲಬುರ್ಗಿಯಿಂದ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಕರೆತರಲಾಗಿತ್ತು.
ಶಾಸಕನ ನಿಧನದಿಂದಾಗಿ ಸಿಂದಗಿ ಪಟ್ಟಣದ ಅವರ ನಿವಾಸದಲ್ಲಿ ನೀರವ ಮೌನ ಆವರಿಸಿದೆ. ಮನಗೂಳಿ ನಿವಾಸದತ್ತ ಜನರು ಜಮಾಯಿಸುತ್ತಿದ್ದಾರೆ. ಮನಗೂಳಿ ಪಾರ್ಥಿವ ಶರೀರವನ್ನು ರಸ್ತೆ ಮಾರ್ಗವಾಗಿ ಬೆಂಗಳೂರಿನಿಂದ ಸಿಂದಗಿಯತ್ತ ಕುಟುಂಬಸ್ಥರು ತರುತ್ತಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಪಾರ್ಥೀವ ಶರೀರ ಸಿಂದಗಿ ತಲುಪುವ ನಿರೀಕ್ಷೆ ಇದೆ. ಅಂತ್ಯ ಸಂಸ್ಕಾರ ಸಮಯ ಹಾಗೂ ಸ್ಥಳದ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ.
1936ರ ಸೆಪ್ಟೆಂಬರ್ 29ರಂದು ಬಾಗೇವಾಡಿ ತಾಲ್ಲೂಕಿನ ಮನಗೂಳಿಯಲ್ಲಿ ಜನಿಸಿದ್ದ ಅವರ ಪೂರ್ಣ ಹೆಸರು ಮಲ್ಲಪ್ಪ ಚೆನ್ನವೀರಪ್ಪ ಮನಗೂಳಿ. ಹತ್ತನೇ ತರಗತಿಯವರೆಗೆ ಶಿಕ್ಷಣ ಪಡೆದಿದ್ದ ಎಂಸಿ ಮನಗೂಳಿ ಅವರು ಸಿಂದಗಿ ಕ್ಷೇತ್ರದಿಂದ ಏಳು ಬಾರಿ ಸ್ಪರ್ಧಿಸಿದ್ದರು. ಎರಡು ಬಾರಿ ಶಾಸಕರಾಗಿದ್ದರು. 1994ರಲ್ಲಿ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಅವರು, ಜೆಎಚ್ ಪಟೇಲ್ ಅವರ ಸರ್ಕಾರದಲ್ಲಿ 12 ತಿಂಗಳು ಪಂಚಾಯತ್ ರಾಜ್ ಸಚಿವರಾಗಿ ಮತ್ತು 2018ರ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ತೋಟಗಾರಿಕೆ ಸಚಿವರಾಗಿದ್ದರು. ವಿಜಯಪುರ ಜಿಲ್ಲೆ ಉಸ್ತುವಾರಿ ಸಚಿವರಾಗಿ ಸಹ ಕಾರ್ಯನಿರ್ವಹಿಸಿದ್ದರು.2018ರ ವಿಧಾನ ಸಭೆ ಚುನಾವಣೆಯಲ್ಲಿ ಇದೇ ನನ್ನ ಕೊನೆಯ ಚುನಾವಣೆ ಎಂದಿದ್ದ ಮನಗೂಳಿ ಮುತ್ಯಾ ಕೊನೆಗೂ ಅಧಿಕಾರವಧಿಯಲ್ಲೇ ಕೊನೆಯುಸಿರೆಳೆದರು.
ಆರು ಬಾರಿ ವಿಧಾನ ಸಭೆಗೆ ಸ್ಪರ್ಧಿಸಿ ಎರಡು ಬಾರಿ ಗೆದ್ದಿದ್ದ ಮಾಜಿ ಸಚಿವ ದಿ.ಎಂ.ಸಿ. ಮನಗೂಳಿ ಗೆದ್ದಾಗೊಮ್ಮೆ ಮಂತ್ರಿಯಾಗಿದ್ದರು. ಜ.28 ರಂದು ಮಧ್ಯರಾತ್ರಿ ವಿಧಿ ವಶರಾಗಿರುವ ಸಿಂದಗಿ ಶಾಸಕ ಎಂ.ಸಿ. ಮನಗೂಳಿ (84) ಕೊನೆಗೂ ತಮ್ಮ ಕೊನೆಯಾಸೆ ಈಡೇರಿಸಿಕೊಂಡಿದ್ದು, ಶಾಸಕರಾಗಿಯೇ ಕೊನೆಯುಸಿರೆಳೆದರು. 1994 ಹಾಗೂ 2018ರ ವಿಧಾನ ಸಭೆ ಚುನಾವಣೆಯಲ್ಲಿ ವಿಜೇತರಾದ ಮನಗೂಳಿ ಮುತ್ಯಾ ಗೆದ್ದಾಗೊಮ್ಮೆ ಮಂತ್ರಿ ಪಟ್ಟ ಫಿಕ್ಸ್ ಎನ್ನುತ್ತಿದ್ದರು.
ಮೊದಲ ಬಾರಿ ಶಾಸಕರಾದಾಗ ಗ್ರಾಮೀಣಾಭಿವೃದ್ಧಿ ಸಚಿವರಾಗಿ ಎರಡನೇ ಬಾರಿ ತೋಟಗಾರಿಕೆ ಮಂತ್ರಿಯಾಗಿ ಬರದ ಜಿಲ್ಲೆಗೆ ಅಪಾರ ಕೊಡುಗೆ ನೀಡಿದ್ದಾರೆ.
ಬಿಜೆಪಿ ಮಾಜಿ ಶಾಸಕ ರಮೇಶ ಭೂಸನೂರ ವಿರುದ್ಧ 2018 ರ ವಿಧಾನ ಸಭೆ ಚುನಾವಣೆಯಲ್ಲಿ 9305 ಮತಗಳ ಅಂತರದಿಂದ ಜಯ ಸಾಧಿಸಿದ್ದರು. ಬಳಿಕ ಸಮ್ಮಿಶ್ರ ಸರ್ಕಾರದಲ್ಲಿ ಮಂತ್ರಿ ಭಾಗ್ಯವೂ ಒಲಿದು ಬಂತು. ತೋಟಗಾರಿಕೆ ಇಲಾಖೆ ಸಚಿವರಾಗಿ ಮನಗೂಳಿ ಜಿಲ್ಲೆಗೆ ತೋಟಗಾರಿಕೆ ಕಾಲೇಜ್ ಕೊಡಿಸುವಲ್ಲಿ ಸಫಲರಾಗಿದ್ದರು. ಅಲ್ಲದೇ ಸದರಿ ಕಾಲೇಜ್ ತಮ್ಮ ಕ್ಷೇತ್ರದ ಆಲಮೇಲದಲ್ಲಿಯೇ ಆಗಬೇಕೆಂಬ ಕನಸು ಕಂಡಿದ್ದರು. ಅದಕ್ಕಾಗಿ ಸಾಕಷ್ಟು ಪ್ರಯತ್ನ ಮಾಡಿದ್ದರು.