ಮಾಜಿ ಸಚಿವ ವಿ.ಸೋಮಣ್ಣ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಆಗುವ ಬಯಕೆಯನ್ನು ವಿಜಯಪುರ ಲೋಕಸಭಾ ಕ್ಷೇತ್ರದ ಸಂಸದ, ಕೇಂದ್ರ ಮಾಜಿ ಸಚಿವ ರಮೇಶ್ ಜಿಗಜಿಣಗಿ ಹೊರಹಾಕಿದ್ದಾರೆ.
ಬೆಳಗಾವಿ (ಜೂ.25): ಮಾಜಿ ಸಚಿವ ವಿ.ಸೋಮಣ್ಣ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಆಗುವ ಬಯಕೆಯನ್ನು ವಿಜಯಪುರ ಲೋಕಸಭಾ ಕ್ಷೇತ್ರದ ಸಂಸದ, ಕೇಂದ್ರ ಮಾಜಿ ಸಚಿವ ರಮೇಶ್ ಜಿಗಜಿಣಗಿ ಹೊರಹಾಕಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, ರಾಜ್ಯಾಧ್ಯಕ್ಷ ಯಾರು ಆಗಬೇಕು ಎಂಬುದನ್ನು ಬಹಿರಂಗ ಚರ್ಚೆ ಮಾಡುವುದು ಸರಿಯಲ್ಲ. ನಮ್ಮದು ರಾಷ್ಟ್ರೀಯ ಪಕ್ಷ, ರಾಷ್ಟ್ರೀಯ ನಾಯಕರೇ ರಾಜ್ಯಾಧ್ಯಕ್ಷರನ್ನು ಆಯ್ಕೆ ಮಾಡ್ತಾರೆ. ನಳಿನ್‌ಕುಮಾರ್ ಕಟೀಲ್ ಅವಧಿ ಮುಗಿದಿದೆ ಎಂದು ನಾನೂ ಮಾಧ್ಯಮಗಳಲ್ಲಿ ಗಮನಿಸಿದ್ದೇನೆ.
ಎಲ್ಲರಿಗೂ ರಾಜ್ಯಾಧ್ಯಕ್ಷ ಆಗಬೇಕು ಎಂಬ ಆಶಯ ಇರುವುದು ಸಹಜ. ನಾನೂ ಬಿಜೆಪಿಯ ಹಿರಿಯ ನಾಯಕ, ಅವಕಾಶ ಕೊಟ್ಟರೆ ನಾನು ಕೂಡ ರಾಜ್ಯಾಧ್ಯಕ್ಷನಾಗುವೆ. ಬಿಜೆಪಿಯಲ್ಲಿ ದಲಿತರು ರಾಜ್ಯದ ಅಧ್ಯಕ್ಷ ಆಗಬಾರದೇ ಎಂದು ಪ್ರಶ್ನಿಸಿದರು. ರಾಜ್ಯಾಧ್ಯಕ್ಷ ಸ್ಥಾನ ನೀಡುವಂತೆ ಕೇಳ್ತಿರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಜಿಗಜಿಣಗಿ, ಎಲ್ಲಿ ಕೇಳಬೇಕು ಎಂಬುದು ನನಗೆ ಗೊತ್ತಿದೆ, ನನಗೂ ರಾಜ್ಯಾಧ್ಯಕ್ಷ ಸ್ಥಾನ ನೀಡುವಂತೆ ಕೋರುತ್ತೇನೆ ಎಂದು ಪ್ರತಿಕ್ರಿಯಿಸಿದರು.
ನನ್ನ ರಾಜಕೀಯ ಜೀವನದ 2ನೇ ಇನ್ನಿಂಗ್ಸ್ ಶುರು: ಜಗದೀಶ್ ಶೆಟ್ಟರ್
ಕೇಂದ್ರ ಸರ್ಕಾರ ಸರ್ವರ್ ಹ್ಯಾಕ್ ಮಾಡಿಲ್ಲ: ರಾಜ್ಯದ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಅಡ್ಡಿಪಡಿಸಲು ಕೇಂದ್ರ ಸರ್ಕಾರದವರು ಸರ್ವರ್ ಹ್ಯಾಕ್ ಮಾಡಿಲ್ಲ. ಬಿಜೆಪಿ ಮೇಲೆ ಗೂಬೆ ಕೂರಿಸಲು ಕಾಂಗ್ರೆಸ್ಸಿನವರು ಸುಳ್ಳು ಆರೋಪ ಮಾಡುತ್ತಿದ್ದು, ಕಾಂಗ್ರೆಸ್ಸಿನವರೇ ಸರ್ವರ್ ಹ್ಯಾಕ್ ಮಾಡಿಸಿರಬಹುದು ಎಂದು ಸಂಸದ ರಮೇಶ ಜಿಗಜಿಣಗಿ ದೂರಿದರು. ಗ್ಯಾರಂಟಿ ಯೋಜನೆಗಳ ಅನುಷ್ಠಾನ ತಡೆಯಲು ಕೇಂದ್ರದ ಬಿಜೆಪಿ ಸರ್ಕಾರ ಸರ್ವರ್ ಹ್ಯಾಕ್ ಮಾಡಿದೆ ಎಂದು ಸಚಿವ ಸತೀಶ ಜಾರಕಿಹೊಳಿ ಮಾಡಿದ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಸಚಿವ ಸತೀಶ ಜಾರಕಿಹೊಳಿ ಅವರ ಬುದ್ಧಿ ಅಷ್ಟೇ ಇದೆ. ಅದಕ್ಕಾಗಿ ಈ ರೀತಿ ತಲೆಬುಡ ಇಲ್ಲದ ಆರೋಪ ಮಾಡಿದ್ದಾರೆ ಎಂದು ತಿರುಗೇಟು ನೀಡಿದರು.
ಹಾವೇರಿ ಸಂಸತ್ ಟಿಕೆಟ್‌ಗೆ ಪುತ್ರ ಆಕಾಂಕ್ಷಿ: ಕೆ.ಎಸ್.ಈಶ್ವರಪ್ಪ
ಮುಖ್ಯಮಂತ್ರಿ ಸಿದ್ದರಾಮಯ್ಯ ಚುನಾವಣೆಗೆ ಮುನ್ನವೇ ನಾವು ವಿತರಿಸುವ ಉಚಿತ ಅಕ್ಕಿಯಲ್ಲಿ ಕೇಂದ್ರದ ಪಾಲೂ ಇದೆ ಎಂದು ಹೇಳಬೇಕಿತ್ತು. ಅಥವಾ ಕೇಂದ್ರ ಸರ್ಕಾರ ನೀಡುವ ಅಕ್ಕಿಯ ಹೊರತಾಗಿ 10 ಕೆಜಿ ಅಕ್ಕಿ ಪ್ರತ್ಯೇಕವಾಗಿ ಕೊಡುತ್ತೇವೆ ಎಂದಾದರೂ ಹೇಳಬೇಕಿತ್ತು ಎಂದರು. ಕಾಂಗ್ರೆಸ್ಸಿನವರು ಬಡವರಿಗೆ ಮೋಸ ಮಾಡುತ್ತಿದ್ದಾರೆ. ಕೊರೋನಾ ಸಂದರ್ಭದಿಂದಲೂ ಕೇಮದ್ರ ಸರ್ಕಾರ ಜನರಿಗೆ ಉಚಿತ ಅಕ್ಕಿ ವಿತರಣೆ ಮಾಡುತ್ತಿದೆ. ಇದನ್ನು ರಾಜ್ಯದ ಕಾಂಗ್ರೆಸ್ ಮುಖಂಡರು ಅರಿತುಕೊಳ್ಳಬೇಕು ಎಂದರು. ಕಾಂಗ್ರೆಸ್ ಗ್ಯಾರಂಟಿಗಳು ಅನುಷ್ಠಾನವಾಗದಂತೆ ಬಿಜೆಪಿ ಹುನ್ನಾರ ನಡೆಸಿಲ್ಲ. ಬದಲಾಗಿ ಸ್ವತಃ ಕಾಂಗ್ರೆಸ್ಸಿನವರೇ ಗ್ಯಾರಂಟಿ ಅನುಷ್ಠಾನ ರದ್ದು ಮಾಡಲು ಅಥವಾ ವಿಳಂಬ ಮಾಡಲು ಸರ್ವರ್ ಹ್ಯಾಕ್ ನಾಟಕ ಹೂಡಿದ್ದು, ಬಿಜೆಪಿ ವಿರುದ್ಧ ಸುಖಾಸಮ್ಮನೇ ಆರೋಪ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.