
ಹೊಸಕೋಟೆ (ಜೂ.25): ರಾಜ್ಯದಲ್ಲಿದ್ದ ಭ್ರಷ್ಟಬಿಜೆಪಿ ಸರ್ಕಾರವನ್ನು ರಾಜ್ಯದ ಜನ ಕಿತ್ತೊಗೆದ್ದಕ್ಕೆ ಕೇಂದ್ರ ಬಿಜೆಪಿ ಸರ್ಕಾರ ರಾಜ್ಯದ ಬಡವರಿಗೆ ಅಕ್ಕಿ ನೀಡದೆ ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ಶಾಸಕ ಶರತ್ ಬಚ್ಚೇಗೌಡ ಆರೋಪಿಸಿದರು. ತಾಲೂಕಿನ ಅತ್ತಿವಟ್ಟಗ್ರಾಮದಲ್ಲಿ ಶ್ರೀ ವೇಣುಗೋಪಾಲ ಸ್ವಾಮಿ ದೇವಾಲಯದ ವಾರ್ಷಿಕೋತ್ಸವ ಕಾರ್ಯಕ್ರಮ ಹಾಗೂ ಶಾಸಕರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸ್ಪಷ್ಟಬಹುಮತ ಬಂದ ಕೂಡಲೆ ಕೇಂದ್ರಕ್ಕೆ ಪತ್ರ ಬರೆದು ರಾಜ್ಯಕ್ಕೆ ಹೆಚ್ಚುವರಿ ಅಕ್ಕಿ ನೀಡುವಂತೆ ಮನವಿ ಸಲ್ಲಿಸಲಾಗಿತ್ತು.
ಅದಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿ ಈಗ ಅಕ್ಕಿಯನ್ನು ನೀಡುವುದಿಲ್ಲ ಎಂದು ಮರುಪತ್ರ ಕಳುಹಿಸಿದೆ. ಅಕ್ಕಿಯನ್ನು ಮಾರುಕಟ್ಟೆಬೆಲೆಗೆ ಖರೀದಿಸಲು ಮುಂದಾದರೂ ದಲ್ಲಾಳಿಗೆ ನೀಡುತ್ತೇವೆ. ಆದರೆ ಕರ್ನಾಟಕ ರಾಜ್ಯಕ್ಕೆ ಮಾತ್ರ ಅಕ್ಕಿ ನೀಡದೆ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ದೂರಿದರು. ದೇಶದ ಎಲ್ಲಾ ರಾಜ್ಯಗಳಿಗೆ ಅಕ್ಕಿ ಸರಬರಾಜಿಗೆ 135 ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು ದಾಸ್ತಾನು ಇಡಬೇಕು. ಆದರೆ, ಕೇಂದ್ರದಲ್ಲಿ ಸುಮಾರು 300 ಲಕ್ಷ ಟನ್‌ಗೂ ಹೆಚ್ಚು ಅಕ್ಕಿಯನ್ನು ದಾಸ್ತಾನು ಮಾಡಿಕೊಂಡು ಅಕ್ಕಿ ಕೊಳೆಯುವಂತೆ ಮಾಡುತ್ತಿದೆ.
ಪತ್ನಿ ಮೇಲಿನ ಅನುಮಾನಕ್ಕೆ ಮಕ್ಕಳನ್ನ ಸುತ್ತಿಗೆಯಿಂದ ಹೊಡೆದು ಕೊಂದ ತಂದೆಯ ಬಂಧನ
ಯಾರು ಏನೇ ಮಾಡಿದರೂ ಕಾಂಗ್ರೆಸ್ ಸರ್ಕಾರ ನೀಡಿರುವ ಎಲ್ಲಾ ಭರವಸೆಗಳನ್ನು ಈಡೇರಿಸಿಯೇ ತೀರುತ್ತೇವೆ. ತಾಲೂಕಿನ ಪ್ರತಿ ಹೋಬಳಿ ಮಟ್ಟದಲ್ಲಿ ಬಾಗ್ಯ ಲಕ್ಷ್ಮಿ, ಗೃಹ ಜ್ಯೋತಿ ಯೋಜನೆಗಳ ನೋಂದಣಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗುತ್ತಿದ್ದು, ಪ್ರತಿ ದಿನ ಕಚೇರಿಗಳಿಗೆ ನೋಂದಣಿಗೆ ಸುತ್ತುವುದನ್ನು ತಪ್ಪಿಸಲು ಈ ಕ್ರಮ ಕೈಗೊಂಡಿದ್ದು ಇದೇ ರೀತಿ ನಗರದ ಪ್ರತಿಯೊಂದು ವಾರ್ಡ್‌ನಲ್ಲಿ ನೋಂದಣಿ ಕೇಂದ್ರಗಳನ್ನು ಮುಂದಿನ ವಾರದಿಂದ ತೆರೆಯಲಾಗುವುದು ಎಂದು ಹೇಳಿದರು.
ಕಳೆದ ವರ್ಷ ದೇವಾಲಯದ ಉದ್ಘಾಟನಾ ಸಂದರ್ಭದಲ್ಲಿ ಗ್ರಾಮದಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣ ಮಾಡಿ ಪೊಲೀಸ್ ತುಕಡಿಗಳನ್ನು ನಿಯೋಜಿಸಿ ಅಧಿಕಾರ ದರ್ಪದಿಂದ ದೇವಾಲಯ ಉದ್ಘಾಟನೆಗೆ ಮುಂದಾಗಿದ್ದರು. ಈ ಬಾರಿ ವಾರ್ಷಿಕೋತ್ಸವದಲ್ಲಿ ಗ್ರಾಮಸ್ಥರು ಅಣ್ಣ ತಮ್ಮಂದಿರಂತೆ ಅದ್ಧೂರಿಯಾಗಿ ವಾರ್ಷಿಕೋತ್ಸವವನ್ನು ಸಂಭ್ರಮದಿಂದ ಆಚರಿಸುತ್ತಿರುವುದು ಕಂಡು ಸಂತಸವಾಗುತ್ತಿದೆ. ಕೇವಲ ಒಂದು ಜಾತಿ ಧರ್ಮದ ಮತಗಳಿಂದ ಜನನಾಯಕರಾಗಲು ಸಾಧ್ಯವಿಲ್ಲ, ಪ್ರಜಾ ಪ್ರಭುತ್ವದಲ್ಲಿ ಅಭಿವೃದ್ಧಿ ಕಾರ್ಯ ಹಾಗೂ ಜನ ಮನ್ನಣೆಯಿಂದ ಮಾತ್ರ ಜನಮನ ಗೆಲ್ಲಲು ಸಾಧ್ಯ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ನನ್ನ ರಾಜಕೀಯ ಜೀವನದ 2ನೇ ಇನ್ನಿಂಗ್ಸ್ ಶುರು: ಜಗದೀಶ್ ಶೆಟ್ಟರ್
ಇದೇ ಸಂದರ್ಭದಲ್ಲಿ ಗ್ರಾಮದ ಮುಖಂಡರು ಶ್ರೀ ವೇಣುಗೋಪಾಲ ಸ್ವಾಮಿರಿಗೆ ವಿಶೇಷ ಪೂಜೆ ಸಲ್ಲಿಸಿ, ಎರಡನೇ ಬಾರಿ ಶಾಸಕರಾದ ಶರತ್ ಬಚ್ಚೇಗೌಡರಿಗೆ ಗೋವಿನ ಪುತ್ಥಳಿಯ ನಿನಪಿನ ಕಾಣಿಕೆ ನೀಡಿ ಅಭಿನಂದಿಸಿದರು. ಶ್ರೀ ವೇಣುಗೋಪಾಲ ದೇವಾಲಯದ ಅಧ್ಯಕ್ಷ ನಾಗರಾಜಪ್ಪ, ಮುಖಂಡರಾದ ಮಾರ್ಕಾಂಡಪ್ಪ, ಕಲ್ಲಪ್ಪ, ಶೇಷಣ್ಣ, ಮುನಿಯಪ್ಪ, ಬೀರಣ್ಣ, ನಾರಾಯಣಸ್ವಾಮಿ, ರಾಮಕೃಷ್ಣ, ನಂಜಪ್ಪ, ನಾರಾಯಣಸ್ವಾಮಿ, ಲಕ್ಷ್ಮೀನಾರಾಯಣ್, ಕೊರಳೂರು ಸುರೇಶ್, ಮುನಿರಾಜ್, ಅಟ್ಟುರು ರಾಜಣ್ಣ ಇತರರು ಹಾಜರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.