ಬಿಎಸ್‌ವೈ ಸ್ಪಾಟ್‌ ಡಿಸಿಷನ್‌ನಿಂದ ಬಿಜೆಪಿಗೆ ಅನುಕೂಲ: ಈಶ್ವರಪ್ಪ

By Kannadaprabha NewsFirst Published Jul 24, 2022, 4:00 AM IST
Highlights

ರಾಜ್ಯಕ್ಕೂ, ಪಕ್ಷಕ್ಕೂ ಅನುಕೂಲವಾಗುವ ತೀರ್ಮಾನವನ್ನು ಯಡಿಯೂರಪ್ಪ ಕೈಗೊಂಡಿದ್ದಾರೆ ಎಂದ ಈಶ್ವರಪ್ಪ 

ಬೆಂಗಳೂರು(ಜು.24):  ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ವಿಶೇಷತೆಯನ್ನು ರಾಜ್ಯದ ಜನತೆ ಅರ್ಥ ಮಾಡಿಕೊಂಡಿದ್ದು, ರಾಜ್ಯಕ್ಕೂ, ಪಕ್ಷಕ್ಕೂ ಅನುಕೂಲವಾಗುವ ತೀರ್ಮಾನವನ್ನು ಯಡಿಯೂರಪ್ಪ ಕೈಗೊಂಡಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ಬಣ್ಣಿಸಿದ್ದಾರೆ.

ಶನಿವಾರ ಪುರಭವನದಲ್ಲಿ ನಡೆದ ಕುಂಬಾರ ಕುಲಾಲ ಪ್ರಜಾಪತಿ ಜಾಗೃತಿ ಸಮಾವೇಶದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಯಡಿಯೂರಪ್ಪ ಅವರ ಜತೆ ಹಲವು ಬಾರಿ ಇದ್ದೆ. ಆ ವೇಳೆ ಅವರು ತೆಗೆದುಕೊಂಡಿರುವ ‘ಸ್ಪಾಟ್‌ ಡಿಸಿಷನ್‌’ ಪಕ್ಷಕ್ಕೆ ಮತ್ತು ರಾಜ್ಯಕ್ಕೆ ಅನುಕೂಲವಾಗಿದೆ. ಸರ್ವಜ್ಞ ಮತ್ತು ತಿರುವಳ್ಳವರ್‌ ಪ್ರತಿಮೆ ನಿರ್ಮಾಣ ಮಾಡಿದ ಹಿರಿಮೆ ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ. ಯಡಿಯೂರಪ್ಪ ಹೇಳಿಕೆ ಕುರಿತು ಎಲ್ಲವನ್ನೂ ಹೈಕಮಾಂಡ್‌ ತೀರ್ಮಾನ ಮಾಡುತ್ತದೆ. ಹೈಕಮಾಂಡ್‌ ಯಡಿಯೂರಪ್ಪ ಅವರನ್ನು ಒಪ್ಪಿಕೊಂಡು ಬರಲಿದೆ ಎಂದು ಅಭಿಪ್ರಾಯಪಟ್ಟರು.

Latest Videos

ರಾಜಕೀಯ ನಿವೃತ್ತಿ ಘೋಷಿಸಿದ್ರಾ ಬಿಎಸ್ ಯಡಿಯೂರಪ್ಪ, ಬಿಜೆಪಿಯಲ್ಲಿ ತಳಮಳ!

ಕುಟುಂಬ ರಾಜಕಾರಣ ಮಾಡದವರು ಯಾರೂ ಇಲ್ಲವೇ? ಕಾಂಗ್ರೆಸ್‌ನ ಅಧಿನಾಯಕರಾದ ಇಂದಿರಾಗಾಂಧಿ, ಸೋನಿಯಾಗಾಂಧಿ, ರಾಹುಲ್‌ಗಾಂಧಿಯವರಿಲ್ಲವೇ? ನಾಳೆ ಯಾವ ಪಾಪು ಗಾಂಧಿ ಯಾವಾಗ ಬರುತ್ತದೋ ಗೊತ್ತಿಲ್ಲ. ಕಾಂಗ್ರೆಸ್‌ನಲ್ಲಿ ಹೇಳೋರು, ಕೇಳೋರು ಯಾರೂ ಇಲ್ಲ. ಇವತ್ತು ಕಾಂಗ್ರೆಸ್‌ ಎಲ್ಲಿ ಇದೆ ಎಂದರೆ, ತಿಹಾರ್‌ ಜೈಲಿಗೆ ಹೋಗಿ ಬಂದ ಡಿ.ಕೆ.ಶಿವಕುಮಾರ್‌ ಕಾಂಗ್ರೆಸ್‌, ಪರಪ್ಪನ ಆಗ್ರಹಾರಕ್ಕೆ ಹೋಗಿ ಬಂದ ನಲಪಾಡ್‌ ಕಾಂಗ್ರೆಸ್‌ ಎಂದು ಟೀಕಿಸಿದರು. ನಾನು ಒಕ್ಕಲಿಗ, ನಾನು ಹಿಂದುಳಿದ ವರ್ಗದ ನಾಯಕ ಮತ್ತು ನಾನೇ ಮುಖ್ಯಮಂತ್ರಿ ಎಂದುಕೊಳ್ಳುತ್ತಿದ್ದಾರೆ. ಆದರೆ ಅವರು ಜಾತಿವಾದಿಗಳು ಎಂಬುದು ಸಾಬೀತಾಗಿದ್ದು, ಜಾತಿವಾದಿ ಕಾಂಗ್ರೆಸ್‌ ಈಗ ಉಳಿದಿದೆ. ಜಾತಿವಾದಿಗಳಿಂದಲೇ ಕಾಂಗ್ರೆಸ್‌ ತುಂಬಿ ಹೋಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ವಿರುದ್ಧ ಹರಿಹಾಯ್ದರು.

ಸ್ವಾತಂತ್ರ್ಯಕ್ಕೆ ಹೋರಾಡಿದ ಯಾರೂ ಕಾಂಗ್ರೆಸ್‌ನಲ್ಲಿ ಉಳಿದಿಲ್ಲ. ಜಾತಿವಾದಿಗಳು ಸಮಾಜವಾದದ ಬಗ್ಗೆ ಮಾತನಾಡುತ್ತಾರೆ. ಯಾರು ಜಾತಿವಾದಿಗಳು, ಯಾರು ಕೋಮುವಾದಿಗಳು ಎನ್ನುವುದನ್ನು ಜನರೇ ತೀರ್ಮಾನ ಮಾಡುತ್ತಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಇಬ್ಬರೇ ಸಾಕು ಕಾಂಗ್ರೆಸ್‌ ನಿರ್ನಾಮ ಮಾಡಲು. ಸಿದ್ದರಾಮಯ್ಯ ಎಲ್ಲಿ ನಿಂತರೂ ಸೋಲಲಿದ್ದಾರೆ ಎಂಬುದು ಅವರಿಗೆ ಗೊತ್ತು. ಮಾಜಿ ಸಚಿವ ಡಾ.ಜಿ.ಪರಮೇಶ್ವರ್‌ ಅವರನ್ನು ಸೋಲಿಸಿದ್ದು ನಾನಲ್ಲ ಎಂದು ಸಿದ್ದರಾಮಯ್ಯ ಹೇಳಬಿಡಲಿ ನೋಡೋಣ ಎಂದು ಸವಾಲು ಹಾಕಿದರು.

ಪುತ್ರನಿಗೆ ಬಿಎಸ್‌ವೈ ಕ್ಷೇತ್ರ ತ್ಯಾಗ: ಇದು ಬಿಜೆಪಿ ನಿರ್ಧಾರ ಅಲ್ಲ, ಅಚ್ಚರಿ ಹೇಳಿಕೆ ನೀಡಿದ ಸಚಿವ

ಹಿಂದೂಗಳು ಎಲ್ಲಿ ಹೆಚ್ಚಾಗಿ ಇದ್ದಾರೋ ಅಲ್ಲಿ ಸಿದ್ದರಾಮಯ್ಯ ಸ್ಪರ್ಧಿಸುವುದಿಲ್ಲ. ಬಾದಾಮಿ ಕ್ಷೇತ್ರವನ್ನು ಈಗ ಬಿಡುತ್ತಿದ್ದು, ಚಾಮರಾಜಪೇಟೆ ಕ್ಷೇತ್ರಕ್ಕೆ ಹೋಗುತ್ತಿದ್ದಾರೆ. ಜಮೀರ್‌ ಅಹ್ಮದ್‌ ಕಾಲು ಹಿಡಿಯುತ್ತಿದ್ದಾರೆ. ಸಿದ್ದರಾಮಯ್ಯ ಅವರನ್ನು ನನ್ನ ಕ್ಷೇತ್ರಕ್ಕೆ ಬನ್ನಿ ಸಾರ್‌ ಎನ್ನುತ್ತಿದ್ದಾರೆ ಬಾಲಂಗೋಚಿಗಳು. ಅವರ ಹಿಂದಿನ ಕ್ಷೇತ್ರಕ್ಕೆ ಹೋಗಿ ತಪ್ಪಾಯಿತು ಎಂದು ಯಾಕೆ ಕೇಳುತ್ತಿಲ್ಲ. ಕೇರಳದ ವಯನಾಡು ರಾಹುಲ್‌ಗಾಂಧಿಗೆ, ರಾಜ್ಯದ ಚಾಮರಾಜಪೇಟೆ ಸಿದ್ದರಾಮಯ್ಯಗೆ ಎಂದು ಟಾಂಗ್‌ ಕೊಟ್ಟರು.

ಸಚಿವ ಸ್ಥಾನ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನಾನು ಈವರೆಗೆ ಇಂತಹದ್ದೇ ಮಾಡಿ ಎಂದು ಹೈಕಮಾಂಡ್‌ ಬಳಿ ಕೇಳಿಲ್ಲ. ಏನು ಹೇಳಿದರೂ ನಾನು ಮಾಡಲು ಸಿದ್ಧ. ಸಂಪುಟಕ್ಕೆ ಸೇರಿಸಿಕೊಳ್ಳಿ ಎಂದು ಈವರೆಗೆ ಮುಖ್ಯಮಂತ್ರಿಗಳನ್ನು ಕೇಳಿಲ್ಲ ಎಂದು ಹೇಳಿದರು.
 

click me!