ನನಗೆ ತಾಕತ್ತಿದ್ರೆ ಜವಾಬ್ದಾರಿ ಸಿಗುತ್ತೆ: ವಿಜಯೇಂದ್ರ

By Kannadaprabha News  |  First Published Jul 24, 2022, 2:30 AM IST

ಕುಟುಂಬ ರಾಜಕಾರಣ ನಾನು ಒಪ್ಪೋದಿಲ್ಲ, ತಂದೆ, ಪಕ್ಷದ ಆದೇಶಕ್ಕೆ ಬದ್ಧ: ಬಿಜೆಪಿ ರಾಜ್ಯ ಉಪಾಧ್ಯಕ್ಷ


ಬೆಂಗಳೂರು(ಜು.24):  ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ತಮ್ಮ ಮಕ್ಕಳು ಸೇರಿದಂತೆ ಯಾರೇ ಆಗಲಿ ಸ್ವಂತ ಪರಿಶ್ರಮದಿಂದ ಮೇಲೆ ಬರಬೇಕು ಎಂದು ಅಪೇಕ್ಷೆ ಹೊಂದಿದ್ದಾರೆ. ಹೀಗಾಗಿ ಶಿಕಾರಿಪುರದಲ್ಲಿ ನನ್ನ ಸ್ಪರ್ಧೆ ಕುರಿತು ಘೋಷಣೆ ಮಾಡಿದ್ದು, ಪಕ್ಷಕ್ಕೂ ವಿಜಯೇಂದ್ರಗೆ ಶಕ್ತಿ ಹಾಗೂ ತಾಕತ್ತು ಇದೆ ಎನ್ನಿಸಿದರೆ ಜವಾಬ್ದಾರಿ ನೀಡುತ್ತದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅಭಿಪ್ರಾಯಪಟ್ಟಿದ್ದಾರೆ.

ಶನಿವಾರ ಪುರಭವನದಲ್ಲಿ ನಡೆದ ಕುಂಬಾರ ಕುಲಾಲ ಪ್ರಜಾಪತಿ ಜಾಗೃತಿ ಸಮಾವೇಶದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಕುಟುಂಬ ರಾಜಕಾರಣ ವಿಚಾರವನ್ನು ನಾನು ಒಪ್ಪುವುದಿಲ್ಲ. ನಮ್ಮ ಪಕ್ಷವೂ ಒಪ್ಪುವುದಿಲ್ಲ. ಪಕ್ಷದಲ್ಲಿ ಹಲವು ವರ್ಷದಿಂದ ದುಡಿಯುತ್ತಿದ್ದೇನೆ. ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ, ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆ ಎಂದು ಯಡಿಯೂರಪ್ಪ ಹೇಳಿದ್ದಾರೆ. ಉಪಾಧ್ಯಕ್ಷನಾಗಿ ಅವರ ಮಾತಿಗೆ ಬದ್ಧ. ಪಕ್ಷದ ಸೂಚನೆಯಂತೆ ನಡೆದುಕೊಳ್ಳುತ್ತೇನೆ. ನನ್ನ ಬಗ್ಗೆ ನಾನು ಪ್ರಚಾರ ಮಾಡಿಕೊಳ್ಳುವ ಅಗತ್ಯ ಇಲ್ಲ ಎಂದು ಹೇಳಿದರು.

Tap to resize

Latest Videos

ನಿನ್ನೆ ವಿಜಯೇಂದ್ರಗೆ ಟಿಕೆಟ್ ಅಂತ ಹೇಳಿದ್ರು, ಈಗ ಹೈಕಮಾಂಡ್ ತೀರ್ಮಾನ ಅಂದ್ರು, ಏನಿದು BSY ಲೆಕ್ಕಾಚಾರ?

ಪಕ್ಷದ ಯಾವುದೇ ತೀರ್ಮಾನಕ್ಕೆ ಯಾವಾಗಲೂ ಬದ್ಧನಾಗಿದ್ದೇನೆ. ಮೈಸೂರು ಭಾಗದಲ್ಲಿ ಸ್ಪರ್ಧಿಸಬೇಕೋ? ಶಿಕಾರಿಪುರದಲ್ಲಿ ನಿಲ್ಲಬೇಕೋ? ಎನ್ನುವ ಬಗ್ಗೆ ಶುಕ್ರವಾರದ ಬೆಳವಣಿಗೆ ಬಳಿಕ ಹಲವು ಚರ್ಚೆಗಳು ನಡೆಯುತ್ತಿವೆ. ವೈಯಕ್ತಿಕ ಹಿತದೃಷ್ಟಿಯಿಂದ ಯಡಿಯೂರಪ್ಪ ಈಗ ತೀರ್ಮಾನ ಕೈಗೊಂಡಿದ್ದಾರೆ. ನಾನು ತಂದೆಯವರ ಮಾತು ಪಾಲಿಸಬೇಕಾಗುತ್ತದೆ ಮತ್ತು ಪಕ್ಷ ಏನು ಹೇಳುತ್ತದೋ ಅದನ್ನೂ ನಾನು ಕೇಳಬೇಕಾಗುತ್ತದೆ. ಇದನ್ನೇ ಪಕ್ಷದ ಮುಂದೆಯೂ ತಿಳಿಸಿದ್ದೇನೆ. ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುವುದರ ಜತೆಗೆ ಹಳೇ ಮೈಸೂರು ಭಾಗದಲ್ಲಿ ಸಂಘಟನೆ ಮಾಡಬೇಕು ಎಂದು ಹೈಕಮಾಡ್‌ ಬಯಸಿದೆ. ನಾನು ಪಕ್ಷ ಸಂಘಟಿಸಲು ಸಿದ್ಧನಿದ್ದೇನೆ ಎಂದರು.

ಪಿಎಸ್‌ಐ ನೇಮಕಾತಿ ಹಗರಣದಲ್ಲಿ ವಿಜಯೇಂದ್ರ ಹೆಸರಿದೆ ಎಂಬ ಪ್ರತಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿರಿಯರಿದ್ದಾರೆ. ಪಿಎಸ್‌ಐ ಹಗರಣ ಕಾಂಗ್ರೆಸ್‌ನವರ ಮನೆ ಬಾಗಿಲಿಗೆ ಬರಲಿದೆ. ಈ ರೀತಿಯ ಊಹಾಪೋಹ ಆರೋಪಗಳು ಸರಿಯಲ್ಲ. ನಾನು ಹಗರಣದಲ್ಲಿ ಭಾಗಿಯಾಗಿದ್ದೇನೆ ಎಂದರೆ ಮುಂದಿನ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಇಂತಹ ಆರೋಪಗಳನ್ನು ಮಾಡುವುದು ಸರಿಯಲ್ಲ ಎಂದು ಕಿಡಿಕಾರಿದರು.
 

click me!