
ಬೆಂಗಳೂರು (ಏ.02): ರೆಬಲ್ ಸ್ಟಾರ್ ಅಂಬರೀಶ್ ಅವರಾಗಲಿ, ನಾನಾಗಲಿ ನಮ್ಮ ಕುಟುಂಬವಾಗಲಿ ಯಾವತ್ತಿಗೂ ಅಧಿಕಾರಕ್ಕೆ ಅಂಟಿಕೊಂಡು ಕೂತವರಲ್ಲ. ಮಂಡ್ಯಗಾಗಿ, ನನ್ನ ಮಂಡ್ಯದ ಸ್ವಾಭಿಮಾನಿಗಳ ಸೇವೆಗೆ ಯಾವತ್ತಿಗೂ ನಾವು ಬದ್ಧ. ಹಾಗಾಗಿಯೇ ಏನೇ ನಿರ್ಧಾರ ತಗೆದುಕೊಂಡರೂ ನಿಮ್ಮೊಂದಿಗೆ ಚರ್ಚಿಸಿಯೇ ಮುಂದುವರೆಯುವೆ ಎಂದು ಹೇಳಿದ್ದೇನೆ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ.
ಮಂಡ್ಯ ಲೋಕಸಭಾ ಚುನಾವನೆಯಲ್ಲಿ ಸ್ಪರ್ಧೆ ಮಾಡುವ ಕುರಿತು ನಾಳೆ ಮಂಡ್ಯದಲ್ಲಿಯೇ ಜನರ ಮುಂದೆ ತಮ್ಮ ನಿರ್ಧಾರವನ್ನು ತಿಳಿಸುತ್ತೇನೆ ಎಂದು ಸಂಸದೆ ಸುಮಲತಾ ಅಂಬರೀಶ್ ಅವರು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಇದರಲ್ಲಿ ಅಂಬರೀಶ್ ಅವರಾಗಲೀ, ನಾನಾಗಲೀ ಅಥವಾ ನಮ್ಮ ಕುಟುಂಬವಾಗಲೀ ಅಧಿಕಾರಕ್ಕೆ ಅಂಟಿಕೊಂಡು ಕುಳಿತಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ತಾವು ಸ್ಪರ್ಧೆಯಿಂದ ಹಿಂದಕ್ಕೆ ಸರಿಯುವ ಸುಳಿವು ನೀಡಿದರಾ ಎಂದು ಚರ್ಚೆಯಾಗುತ್ತಿದೆ.
2019ರ ಚುನಾವಣೆಯ ಬದ್ಧ ವೈರಿ, 2024ರಲ್ಲಿ ಮೈತ್ರಿ ಸ್ನೇಹಿತರು; ಸುಮಲತಾ ಭೇಟಿಯಾದ ಕುಮಾರಸ್ವಾಮಿ
ಫೇಸ್‌ಬುಕ್ ಪೋಸ್ಟ್‌ನಲ್ಲಿ 'ನನ್ನ ಸ್ವಾಭಿಮಾನಿ ಮಂಡ್ಯದ ಬಂಧುಗಳೆ, ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ನಾನು ಕಳೆದ ಬಾರಿ ಐತಿಹಾಸಿಕ ಗೆಲುವು ಸಾಧಿಸಿದ ನಂತರ, ಈ ಕ್ಷೇತ್ರದ ಬಗ್ಗೆ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಈ ಸಲದ ಲೋಕಸಭೆ ಚುನಾವಣೆಯೂ ಅದಕ್ಕೆ ಹೊರತಾಗಿಲ್ಲ. ಈಗಾಗಲೇ ರಾಜಕೀಯ ಪಲ್ಲಟಕ್ಕೆ ಮಂಡ್ಯ ಕ್ಷೇತ್ರ ಸಾಕ್ಷಿಯಾಗಿದೆ.
ಚುನಾವಣೆಗೆ ಸ್ಪರ್ಧಿಸುವ ಕುರಿತಂತೆ ನನ್ನ ನಿಲುವಿಗಾಗಿ ಅನೇಕರು ಕಾಯುತ್ತಿದ್ದಾರೆ. ಈಗಾಗಲೇ ಆ ಕುರಿತಂತೆ ಗಂಭೀರ ಚಿಂತನೆ ಕೂಡ ಮಾಡಲಾಗಿದೆ. ನಿಮ್ಮೆಲ್ಲರ ನೆಚ್ಚಿನ ರೆಬಲ್ ಸ್ಟಾರ್ ಅಂಬರೀಶ್ ಅವರಾಗಲಿ, ನಾನಾಗಲಿ ನಮ್ಮ ಕುಟುಂಬವಾಗಲಿ ಯಾವತ್ತಿಗೂ ಅಧಿಕಾರಕ್ಕೆ ಅಂಟಿಕೊಂಡು ಕೂತವರಲ್ಲ. ಮಂಡ್ಯಗಾಗಿ, ನನ್ನ ಮಂಡ್ಯದ ಸ್ವಾಭಿಮಾನಿಗಳ ಸೇವೆಗೆ ಯಾವತ್ತಿಗೂ ನಾವು ಬದ್ಧ. ಹಾಗಾಗಿಯೇ ಏನೇ ನಿರ್ಧಾರ ತಗೆದುಕೊಂಡರೂ ನಿಮ್ಮೊಂದಿಗೆ ಚರ್ಚಿಸಿಯೇ ಮುಂದುವರೆಯುವೆ ಎಂದು ಹೇಳಿದ್ದೇನೆ.
ನಿಮ್ಮ ಭಾವನೆಗಳನ್ನು ನನ್ನೊಂದಿಗೆ ಹಂಚಿಕೊಳ್ಳಲು ನಿಮ್ಮ ಸಮಯವನ್ನು ನನಗೆ ಕೊಟ್ಟು ಮನೆವರೆಗೂ ಬಂದಿದ್ದೀರಿ. ಕೆಲವರು ತಾವು ಇದ್ದಲ್ಲೇ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದೀರಿ. ನಿಮ್ಮೆಲ್ಲರಿಗೂ ಧನ್ಯವಾದಗಳು. ನಿಮ್ಮ ಪ್ರೀತಿ ದೊಡ್ಡದು. ಯಾವತ್ತೂ ಅದು ಹಾಗೆಯೇ ಇರಲಿ ಎಂದು ಆಶಿಸುವೆ.
Lok Sabha Election 2024: ಸುಮಲತಾ ಸುದ್ದಿಗೆ ನಾನು ಹೋಗಲ್ಲ: ಡಿ.ಕೆ. ಶಿವಕುಮಾರ್
ನಾಳೆ (ಏಪ್ರಿಲ್ 3) ಬೆಳಗ್ಗೆ 10 ಗಂಟೆಗೆ ಕಾಳಿಕಾಂಬಾ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ನಂತರ ದೇವಸ್ಥಾನದ ಆವರಣದಲ್ಲೇ ನನ್ನ ಮತ್ತು ನಿಮ್ಮೆಲ್ಲರ ನಿಲುವನ್ನು ಸ್ಪಷ್ಟ ಪಡಿಸುವ ಹಾಗೂ ಮಂಡ್ಯ ಲೋಕಸಭೆ ಚುನಾವಣೆ ಕುರಿತಂತೆ ನನ್ನ ನಿರ್ಧಾರವನ್ನು ನಿಮ್ಮೆಲ್ಲರ ಮುಂದೆಯೇ ಪ್ರಕಟಿಸುತ್ತಿದ್ದೇನೆ. ಅಂದು ನಮ್ಮೊಂದಿಗೆ ನಮ್ಮೆಲ್ಲರ ಪ್ರೀತಿಯ ದರ್ಶನ್, ಅಭಿಷೇಕ್ ಅಂಬರೀಶ್ ಇರಲಿದ್ದಾರೆ. ತಮ್ಮ ಸಲಹೆ ಮತ್ತು ಸೂಚನೆ ಹಾಗೂ ಭಾವನೆಗಳಿಗೆ ಯಾವತ್ತೂ ನಾನು ನೋವು ತರಲಾರೆ. ನಿಮ್ಮ ನಡೆಯೇ ನನ್ನದೂ ಆಗಿರಲಿದೆ. ಬನ್ನಿ, ಜೊತೆಯಾಗಿ ಮಂಡ್ಯವನ್ನು ಮತ್ತಷ್ಟು ಅಭಿವೃದ್ದಿ ಪಡಿಸೋಣ. #ನನ್ನಹೆಜ್ಜೆಮಂಡ್ಯಕ್ಕಾಗಿ ಎಂದು ಬರೆದುಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.