ಬೆಳಗಾವಿ: ಬಿಜೆಪಿ ಬ್ಲಾಕ್‌ ಅಧ್ಯಕ್ಷ ಗಾದಿಗೆ ಗುದ್ದಾಟ..!

By Kannadaprabha News  |  First Published Dec 11, 2022, 10:30 PM IST

ಹಾಲಿ, ಮಾಜಿ ಅಧ್ಯಕ್ಷರ ಪ್ರತ್ಯೇಕ ಸಭೆ, ಅಧ್ಯಕ್ಷತೆ ಬದಲಾವಣೆಗೆ ಕಾರ್ಯಕರ್ತರ ಆಕ್ರೋಶ


ಅಥಣಿ(ಡಿ.11): ಚುನಾವಣೆ ಸಮೀಪಿಸುತ್ತಿದ್ದಂತೆ ಟಿಕೆಟ್‌ ಆಕಾಂಕ್ಷಿಗಳು ಕ್ಷೇತ್ರ ಪರ್ಯಟನೆ ಹಾಗೂ ಮುಖಂಡರ ಭೇಟಿ ಜಿಲ್ಲೆಯಲ್ಲಿ ಜೋರಾಗಿ ಸಾಗಿದೆ. ಅಲ್ಲಲ್ಲಿ ಅಸಮಾಧಾನಗಳು, ಒಳಜಗಳಗಳು ಮುನ್ನೆಲೆಗೆ ಬಂದಿವೆ. ಅಥಣಿಯ ಬಿಜೆಪಿ ಬ್ಲಾಕ್‌ ಅಧ್ಯಕ್ಷ ಗಾದಿಗಾಗಿ ಗುದ್ದಾಟ ಆರಂಭವಾಗಿದೆ. ಹಾಲಿ ಬಿಜೆಪಿ ಅಧ್ಯಕ್ಷರೆಂದು ಹೇಳಿಕೂಂಡಿರುವ ಡಾ.ರವಿ ಸಂಕ ಅವರು ಶನಿವಾರ ಸಭೆ ಕರೆದಿದ್ದರು. ಬಿಜೆಪಿ ಮಾಜಿ ಅಧ್ಯಕ್ಷರಾದ ಅಣ್ಣಾಸಾಹೇಬ ನಾಯಕ ಮತ್ತು ಅವರ ಬೆಂಬಲಿಗರು ಪ್ರತ್ಯೇಕ ಸಭೆ ನಡೆಸಿ, ತಮ್ಮ ಅಸಮಾಧಾನ ಹೊರಹಾಕಿದರು.

ನೂತನ ಅಧ್ಯಕ್ಷ ಡಾ.ರವಿ ಸಂಕ ಅವರು ಕರೆದ ಸಭೆಗೆ ಕೇವಲ 15 ಜನರು ಬಂದಿದ್ದರು. ಬೆರಳಣಿಯ ಕಾರ್ಯಕರ್ತರು ಆಗಮಿಸದ್ದರಿಂದ ಸಭೆಯನ್ನು ಡಿ.13 ಮುಂದೂಡಲಾಯಿತು. ಆದರೆ ಅಣ್ಣಾಸಾಹೇಬ ಅವರು ಆಯೋಜಿಸದ್ದ ಪ್ರತ್ಯೇಕ ಸಭೆಯಲ್ಲಿ ಸಾವಿರಾರು ಕಾರ್ಯಕರ್ತರು ಆಗಮಿಸಿ, ಅಧ್ಯಕ್ಷ ಬದಲಾವಣೆಯು ಕಾರ್ಯಕರ್ತರಿಗೆ ಇಷ್ಟವಿಲ್ಲ ಎಂಬ ಸಂದೇಶವನ್ನು ಬಿಜೆಪಿ ಜಿಲ್ಲಾಧ್ಯಕ್ಷರಿಗೆ ರವಾನಿಸಿದ್ದಾರೆ.

Tap to resize

Latest Videos

ಬೆಳಗಾವಿ ಗಡಿ ವಿವಾದ ಹಳೇ ವಿವಾದಕ್ಕೆ ಮರುಜೀವ, ನಿಪ್ಪಾಣಿ ನಗರಸಭೆ ಮೇಲಿನ ಭಗವಾ ಧ್ವಜ ತೆರವಿಗೆ ಆಗ್ರಹ

ಅಣ್ಣಾಸಾಹೇಬ ನಾಯಕ ನೇತೃತ್ವದಲ್ಲಿ ನಡೆದ ಪ್ರತ್ಯೇಕ ಸಭೆಯಲ್ಲಿ ಕಾರ್ಯಕರ್ತರು ನೀವೇ ನಮ್ಮ ನಿಜವಾದ ಅಧ್ಯಕ್ಷರು. ನಿಮ್ಮ ನೇತೃತ್ವದಲ್ಲಿಯೇ ನಾವು ಪಕ್ಷ ಸಂಘಟಿಸುತ್ತೇವೆ. ಡಾ.ರವಿ ಸಂಕ ನಮ್ಮ ಪಾಲಿಗೆ ಅಥಣಿ ಬ್ಲಾಕ್‌ ಅಧ್ಯಕ್ಷರಲ್ಲ. ಎಂಎಲ್‌ಸಿ ಚುನಾವಣೆಯಲ್ಲಿ ಅವರು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ ಎಂದು ಆರೋಪಿಸಿದರು. ಅಲ್ಲದೇ ಪಕ್ಷದಲ್ಲಿ ಗುರುತಿಸಿಕೊಂಡಿಲ್ಲ. ನಮ್ಮ ಮತಕ್ಷೇತ್ರದವರಲ್ಲ. ಯಾವುದೇ ಕಾರಣಕ್ಕೂ ಅವರ ಅಧ್ಯಕ್ಷತೆಯನ್ನು ಒಪ್ಪುವುದಿಲ್ಲ ಎಂದು ಸಂದೇಶವನ್ನು ಬಿಜೆಪಿ ಜಿಲ್ಲಾಧ್ಯಕ್ಷರಿಗೆ ಕಾರ್ಯಕರ್ತರು ಸಭೆಯಲ್ಲಿ ರವಾನಿಸಿದರು.

ಡಾ.ರವಿ ಸಂಕ ಕನ್ನಡಪ್ರಭದೊಂದಿಗೆ ಮಾತನಾಡಿ, ನಾನು ಇಂದು ಪಕ್ಷದ ಅಧ್ಯಕ್ಷನಾಗಿ ಜಿಲ್ಲಾಧ್ಯಕ್ಷರ ಆದೇಶದ ಸಭೆ ಆಯೋಜಿಸಿದೆ. ಸತ್ಯ ಕಾರ್ಯಕರ್ತರು ಬರದೆ ಇರುವುದಕ್ಕೆ ಬರುವ ಡಿ.13 ಮತ್ತೆ ಸಭೆ ಕರೆದಿದ್ದೇನೆ. ಕೆಲವರು ವಿನಾಕಾರಣವಾಗಿ ನನ್ನನ್ನು ವಿರೋಧಿಸುತ್ತಿದ್ದಾರೆ. ನಾನು ಸಮನ್ವಯತೆ ಕಾಯ್ದುಕೊಳ್ಳುವುದಕ್ಕೆ ಎಲ್ಲ ಪ್ರಯತ್ನ ಮಾಡುತ್ತಿದ್ದೇನೆ ಎಂದು ಹೇಳಿದರು.

ಗಡಿ ವಿವಾದ: ಎರಡೂ ರಾಜ್ಯದಲ್ಲಿ ಪ್ರತಿಭಟನೆ ಕಾವು

ತೀವ್ರ ವಿರೋಧ:

ಸ್ಥಳೀಯ ಕಾರ್ಯಕರ್ತರು, ಶಾಸಕರು ಹಾಗೂ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರ ಗಮನಕ್ಕೆ ತರದೇ ಬ್ಲಾಕ್‌ ಅಧ್ಯಕ್ಷರ ಬದಲಾವಣೆ ಎಷ್ಟರ ಮಟ್ಟಿಗೆ ಸರಿ. ಡಾ.ರವಿ ಸಂಕ ಅವರನ್ನು ಬ್ಲಾಕ ಅಧ್ಯಕ್ಷರಾಗಿ ನೇಮಿಸಿದ ಜಿಲ್ಲಾಧ್ಯಕ್ಷ ನಡೆಗೆ ಸ್ಥಳೀಯ ಕಾರ್ಯಕರ್ತರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ ಎಂಬುವುದು ಕಾರ್ಯಕರ್ತರೊಬ್ಬರ ಅಳಲಾಗಿದೆ.

ಹಿನ್ನೆಲೆ

ಕೆಲವು ದಿನಗಳ ಹಿಂದೆ ಬಿಜೆಪಿ ಕಾರ್ಯಕರ್ತರು ಮಾಧ್ಯಮದವರನ್ನು ಹೊರಗಿಟ್ಟು ಗುಪ್ತ ಸಭೆ ನಡೆಸಿದರು. ಆ ಸಭೆಯಲ್ಲಿ ಶಾಸಕರಾದ ಮಹೇಶ ಕುಮಟಳ್ಳಿ ಅವರು ಹಾಜರಿದ್ದರು. ಈ ವೇಳೆ ಕಾರ್ಯಕರ್ತರು ನಾವು ನಮ್ಮ ಪಕ್ಷದ ಅಧ್ಯಕ್ಷರನ್ನಾಗಿ ಡಾ.ರವಿ ಸಂಕ ಅವರನ್ನು ಒಪ್ಪುವುದಿಲ್ಲ. ಈಗಿರುವ ಅಧ್ಯಕ್ಷರಾದ ಅಣ್ಣಾಸಾಬೇಬ ನಾಯಕ ಅವರನ್ನು ನಾವು ಅಧ್ಯಕ್ಷರನ್ನಾಗಿ ಒಪ್ಪಿದ್ದೇವೆ. ಅವರ ನೇತೃತ್ವದಲ್ಲಿ ಮುಂದಿನ ಸಭೆಗಳನ್ನು, ಪಕ್ಷದ ಚಟುವಟಿಯನ್ನು ಮಾಡುತ್ತೇವೆ ಎಂದು ಖಡಕ್‌ ಎಚ್ಚರಿಕೆಯನ್ನು ನೀಡಿದ್ದರು. ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಅಧ್ಯಕ್ಷರನ್ನು ಬದಲಾಯಿಸಿದ್ದಿರಿ ಎಂದು ಪ್ರಶ್ನಿಸಿದ ಕಾರ್ಯಕರ್ತರು. ಪ್ರಸ್ತುತ ಪರಿಸ್ಥಿತಿಯ ಬಗೆಗೆ ಪಕ್ಷದ ಜಿಲ್ಲಾಧ್ಯಕ್ಷರಿಗೆ ತಿಳಿಸಿ ಹೇಳಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಜೊತೆಗೆ ತಾಲೂಕಿನಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ತಾಲೂಕಿನ ಅಧಿಕಾರಿಗಳು ನಿಮ್ಮ ಹಿಡಿತದಲ್ಲಿಲ್ಲ ಎಂದು ಶಾಸಕರ ವಿರುದ್ಧವೇ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದರು ಎಂದು ಮೂಲಗಳು ತಿಳಿಸಿವೆ.
 

click me!