ಕಾಂಗ್ರೆಸ್‌ ಅಂಬೇಡ್ಕರ್‌ ವಿರೋಧಿ: ಸಚಿವ ಪ್ರಭು ಚವ್ಹಾಣ್‌

By Kannadaprabha NewsFirst Published Dec 11, 2022, 9:30 PM IST
Highlights

ಅಂಬೇಡ್ಕರ್‌ ಅವರನ್ನು ಸಂಸತ್‌ ಪ್ರವೇಶಿಸಲು ಅಡ್ಡಗಾಲು ಹಾಕಿತು. ಅವರು ನಿಧನರಾದಾಗ ಹೊಸದಿಲ್ಲಿಯಲ್ಲಿ ಅಂತ್ಯಸಂಸ್ಕಾರಕ್ಕೂ ತೊಂದರೆ ಮಾಡಲಾಗಿತ್ತು. ಇಂದಿರಾ ಗಾಂಧಿ ಅವರಿಗೆ ಭಾರತ ರತ್ನ ನೀಡಿ, ಅಂಬೇಡ್ಕರ್‌ಗೆ ನೀಡದೆ ಅಗೌರವ ತೋರಿಸಲಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರಭು ಚವ್ಹಾಣ್‌ 

ಔರಾದ್‌(ಡಿ.11): ಕಾಂಗ್ರೆಸ್‌ ಈ ಹಿಂದಿನಿಂದಲೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್‌.ಅಂಬೇಡ್ಕರ್‌ ವಿರೋಧಿಯಾಗಿ ನಡೆದುಕೊಂಡಿದೆ. ಆದರೆ, ಬಿಜೆಪಿ ಅಂಬೇಡ್ಕರ್‌ ಮತ್ತು ಅವರ ಚಿಂತನೆಗಳನ್ನು ಗೌರವಿಸುತ್ತಾ ಬಂದಿದ್ದು, ಇದೀಗ ಬಿಜೆಪಿಯಿಂದ ಮಾತ್ರ ಅಂಬೇಡ್ಕರ್‌ ಆಶಯಗಳನ್ನು ಸಾಕಾರಗೊಳಿಸಲು ಸಾಧ್ಯ ಎಂದು ಪಶು ಸಂಗೋಪನೆ ಸಚಿವರಾದ ಪ್ರಭು ಚವ್ಹಾಣ್‌ ತಿಳಿಸಿದರು.

ಔರಾದ್‌ನಲ್ಲಿ ನಡೆದ ಬಿಜೆಪಿ ಔರಾದ್‌ ಮಂಡಲದ ಎಸ್‌ಸಿ ಮೋರ್ಚಾ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಅಂಬೇಡ್ಕರ್‌ ಅವರನ್ನು ಸಂಸತ್‌ ಪ್ರವೇಶಿಸಲು ಅಡ್ಡಗಾಲು ಹಾಕಿತು. ಅವರು ನಿಧನರಾದಾಗ ಹೊಸದಿಲ್ಲಿಯಲ್ಲಿ ಅಂತ್ಯಸಂಸ್ಕಾರಕ್ಕೂ ತೊಂದರೆ ಮಾಡಲಾಗಿತ್ತು. ಇಂದಿರಾ ಗಾಂಧಿ ಅವರಿಗೆ ಭಾರತ ರತ್ನ ನೀಡಿ, ಅಂಬೇಡ್ಕರ್‌ಗೆ ನೀಡದೆ ಅಗೌರವ ತೋರಿಸಲಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇಶ ಸೇವೆಗೆ ಯುವಕರ ಕಾತುರ ಹೆಮ್ಮೆ ವಿಷಯ: ಕೇಂದ್ರ ಸಚಿವ ಖೂಬಾ

ನರೇಂದ್ರ ಮೋದಿಯವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ದೇಶದಲ್ಲಿ ಅಂಬೇಡ್ಕರ್‌ ಆಶಯಗಳನ್ನು ಈಡೇರಿಸಲಾಗುತ್ತಿದೆ. ಆನ್ಲೈನ್‌ ಹಣಕಾಸು ವ್ಯವಹಾರಕ್ಕಾಗಿ ರೂಪಿಸಿದ ಆ್ಯಪ್‌ಗೆ ’ಭೀಮ್‌’ ಎಂದು ಹೆಸರಿಟ್ಟು ಗೌರವಿಸಲಾಗಿದೆ. ಆದರೂ ಬಿಜೆಪಿ ಅಂಬೇಡ್ಕರ್‌ ಅವರಿಗೆ ಏನೂ ಮಾಡಿಲ್ಲ ಎಂಬ ಸುಳ್ಳು ಪ್ರಚಾರವನ್ನು ಕಾಂಗ್ರೆಸ್‌ ಮಾಡುತ್ತಿದೆ. ಹೀಗಾಗಿ ಜನರಿಗೆ ನಿಜ ಸಂಗತಿಯನ್ನು ತಿಳಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು ಎಂದು ತಿಳಿಸಿದರು.

ಕಾಂಗ್ರೆಸ್‌ ಪಕ್ಷ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡದ ಜನರನ್ನು ಕೇವಲ ಮತ ಬ್ಯಾಂಕ್‌ಗಾಗಿ ದುರ್ಬಳಕೆ ಮಾಡಿದೆ. ಅವರನ್ನು ಬೆಳೆಸುವದಕ್ಕಿಂತ ಹೆಚ್ಚಾಗಿ ತುಳಿಯುವ ಕೆಲಸ ಮಾಡಿದೆ. ಹಲವು ದಶಕಗಳಿಂದ ಮೀಸಲಾತಿ ಹೆಚ್ಚಳಕ್ಕಾಗಿ ಎಷ್ಟೇ ಹೋರಾಟ ಮಾಡಿದರೂ ಸ್ಪಂದನೆ ನೀಡಿರಲಿಲ್ಲ. ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಯಾದ ನಂತರ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವುದರೊಂದಿಗೆ ಎಸ್ಸಿ ಎಸ್ಟಿಜನಾಂಗದ ಅಭಿವೃದ್ಧಿಗೆ ದಿಟ್ಟಹೆಜ್ಜೆಯನ್ನಿಟ್ಟಿದ್ದಾರೆ ಎಂದರು.

ಬೀದರ್‌: ಭಾಲ್ಕಿಯಲ್ಲಿ ವಿದ್ಯಾರ್ಥಿ ವೇತನಕ್ಕಾಗಿ ಬೀದಿಗಿಳಿದ ವಿದ್ಯಾರ್ಥಿಗಳು

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನತೆಯ ಕಲ್ಯಾಣಕ್ಕಾಗಿ ಸಾಕಷ್ಟುಯೋಜನೆಗಳನ್ನು ಜಾರಿಗೆ ತಂದಿವೆ. ಈ ಯೋಜನೆಗಳ ಬಗ್ಗೆ ಜನರಲ್ಲಿ ತಿಳುವಳಿಕೆ ಮೂಡಿಸಬೇಕು. ಸರ್ಕಾರದ ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವ ದಿಶೆಯಲ್ಲಿ ಕಾರ್ಯಕರ್ತರು ಶ್ರಮಿಸಬೇಕು ಎಂದು ಹೇಳಿದರು.

ಬಿಜೆಪಿ ಔರಾದ್‌ ಮಂಡಲ ಅಧ್ಯಕ್ಷರಾದ ರಾಮಶೆಟ್ಟಿಪನ್ನಾಳೆ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳು ಮತ್ತು ಸಚಿವರಾದ ಪ್ರಭು ಚವ್ಹಾಣ್‌ ಅವರ ಜನಪರ ಕೆಲಸಗಳ ಬಗ್ಗೆ ವಿವರಿಸಿದರು. ಎಸ್ಸಿ ಮೋರ್ಚಾ ಅಧ್ಯಕ್ಷ ಸಂಜುಕುಮಾರ ಮಾನಕರೆ ಪ್ರಸ್ತಾವಿಕವಾಗಿ ಮಾತನಾಡಿದರು. ಯಾದು ಮೇತ್ರೆ ನಿರೂಪಿಸಿದರು. ಸಭೆಯಲ್ಲಿ ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯ ಶಿವಾಜಿರಾವ ಕಾಳೆ, ಮುಖಂಡರಾದ ಗಿರೀಶ ಒಡೆಯರ್‌, ಸಂತೋಷ ಪೋಕಲವಾರ, ಸಂಜುಕುಮಾರ ಒಡೆಯರ್‌, ಸಚಿನ್‌ ರಾಠೋಡ್‌ ಸೇರಿದಂತೆ ಮತ್ತಿತರರು ಇದ್ದರು.
 

click me!