
ಬೆಂಗಳೂರು (ಜು.24): ಕಳೆದ ಫೆಬ್ರವರಿ ತಿಂಗಳಿನಿಂದ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಲಕ್ಷಾಂತರ ಮಹಿಳೆಯರಿಗೆ ಗೃಹಲಕ್ಷಿಯ ಹಣವನ್ನೇ ಬಿಡುಗಡೆ ಮಾಡಿಲ್ಲ. ಎಲ್ಲ ಜಿಲ್ಲೆಗಳಲ್ಲಿಯೂ ಮಹಿಳೆಯರು ಸಾಕಷ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ಯಾರಂಟಿ ಹಣವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಕೇವಲ ಚುನಾವಣೆಗಳಿಗಾಗಿ, ತಮ್ಮ ನಕಲಿ ಸಾಧನ ಸಮಾವೇಶಗಳ ಸಮಯದಲ್ಲಿ ಮಹಿಳೆಯರನ್ನು ಪ್ರಚೀದನೆ ಮಾಡುವುದಕ್ಕೆ ಮಾತ್ರ ಹಣವನ್ನು ಬಿಡುಗಡೆ ಮಾಡುತ್ತಿದ್ದಾರೆ. ಇನ್ನು ಮಿಕ್ಕೆಲ್ಲಾ ಗ್ಯಾರಂಟಿಗಳು ಸಂಪೂರ್ಣ ಹಳ್ಳ ಹಿಡಿದಿವೆ ಎಂದು ಎಎಪಿಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ ಆರೋಪಿಸಿದ್ದಾರೆ.
ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಆಹಾರ ಭದ್ರತಾ ಕಾಯ್ದೆಯ ಅಡಿಯಲ್ಲಿ ಕೇಂದ್ರ ಸರ್ಕಾರವು ಕಡ್ಡಾಯವಾಗಿ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೂ ತಲಾ 5 ಕೆ.ಜಿ. ಅಕ್ಕಿಯನ್ನು ಅನ್ನಭಾಗ್ಯ ಎಂಬ ಹೆಸರಿನಲ್ಲಿ ಕಾಂಗ್ರೆಸ್ ರಾಜ್ಯ ಸರ್ಕಾರವು ತನ್ನ ಕಾರ್ಯಕ್ರಮವೆಂದು ಬಿಂಬಿಸಿಕೊಳ್ಳುತ್ತಿರುವುದು ತೀರ ನಾಚಿಕೆಗೇಡಿನ ಸಂಗತಿ ಎಂದು ಟೀಕೆ ಮಾಡಿದರು.
ಗೃಹ ಜ್ಯೋತಿ ಎಂಬ ಹೆಸರಿನಲ್ಲಿ 300 ಯೂನಿಟ್ ಉಚಿತ ವಿದ್ಯುತ್ ನೀಡುತ್ತೇವೆಂದು ಸುಳ್ಳು ಹೇಳಿ ಈಗ ಸರಾಸರಿಯ ನೆಪದಲ್ಲಿ 50 ಯೂನಿಟ್ ಗಳನ್ನು ನೀಡಲು ಸಹ ಸಾಧ್ಯವಾಗುತ್ತಿಲ್ಲ. ಅಂದಾದುಂದಿ ವಿದ್ಯುತ್ ಬೆಲೆಯನ್ನು ಏರಿಸಿ ರಾಜ್ಯದ ಕೈಗಾರಿಕಗಳ ಮೇಲೆ ಹಾಗೂ ಗೃಹಶಕ್ತಿ ಬಳಕೆದಾರರ ಬಿಲ್ಲುಗಳಲ್ಲಿ ಸುಲಿಗೆ ಮಾಡುತ್ತಿದ್ದಾರೆ. ಇದಲ್ಲದೆ ಈಗ ಪ್ರತಿಯೊಬ್ಬ ಬಳಕೆದಾರರು ಸ್ಮಾರ್ಟ್ ಮೀಟರ್ ಅಳವಡಿಸಿಕೊಳ್ಳಬೇಕೆಂಬ ಕಡ್ಡಾಯವನ್ನು ಸಹ ಹಾಕುವ ಮೂಲಕ ಸಿದ್ದರಾಮಯ್ಯ ಸರ್ಕಾರ ಹಗಲುದರೊಡೆಗೆ ಇಳಿದಿರುವುದು ರಾಜ್ಯದ ಜನತೆಯ ನತದೃಷ್ಟ ಪರಿಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ.
ಇನ್ನು ಅವೈಜ್ಞಾನಿಕವಾಗಿ ಜಾರಿಗೊಳಿಸಿರುವ ಶಕ್ತಿ ಎಂಬ ಮಹಿಳೆಯರ ಉಚಿತ ಸಾರಿಗೆ ವ್ಯವಸ್ಥೆಯಿಂದಾಗಿ ಪ್ರಯಾಣಿಕರ ಹಾಗೂ ಸಾರಿಗೆ ನಿಗಮಗಳ ಪರಿಸ್ಥಿತಿ ಹೇಳ ತೀರದಾಗಿದೆ. ಸಮಯಕ್ಕೆ ಸರಿಯಾಗಿ ಬಸ್ಸುಗಳು ಓಡಾಡದಂತಹ ವಾತಾವರಣ ಎಲ್ಲೆಂದರಲ್ಲಿ ಕಂಡುಬರುತ್ತದೆ. ಯುವ ನಿಧಿ ಯೋಜನೆಯಲ್ಲಿ ಮಾಸಾಶನವನ್ನು ರಾಜ್ಯದ ಯಾವ ನಿರುದ್ಯೋಗ ಪದವೀಧರರಿಗೆ ಬಿಡುಗಡೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಸರ್ಕಾರದಲ್ಲಿಯೇ ಇಲ್ಲದಾಗಿದೆ.
ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಸರ್ಕಾರವು 10 ವರ್ಷಗಳಿಂದ ಅತ್ಯಂತ ವೈಜ್ಞಾನಿಕವಾಗಿ ಕರಾರುವಕ್ಕಾಗಿ ಕೊಡುತ್ತಿದ್ದ ಎಲ್ಲಾ ಗ್ಯಾರಂಟಿಗಳನ್ನು ರಾತ್ರೋರಾತ್ರಿ ಮತ ಗಳಿಕೆಗಾಗಿ ಕದ್ದು ಕರ್ನಾಟಕ ರಾಜ್ಯವು ದಿವಾಳಿಯ ಹಂತಕ್ಕೆ ತಲುಪಿದೆ. ಇಷ್ಟಕ್ಕೂ ಸಿದ್ದರಾಮಯ್ಯ ಕಾಂಗ್ರೆಸ್ ಸರ್ಕಾರವು ತನ್ನ 3 ಬಜೆಟ್‌ಗಳಿಂದ 3.5 ಲಕ್ಷ ಕೋಟಿ ಸಾಲವನ್ನು ಮಾಡುವ ಮೂಲಕ ಜನತೆಯನ್ನು ಸಾಲದ ಕೂಪಕ್ಕೆ ತಳ್ಳಿದೆ. ಕರ್ನಾಟಕ ರಾಜ್ಯದ ರೈತರುಗಳು ಮೊದಲಿನಿಂದಲೂ ಕೃಷಿಯನ್ನೇ ಅವಲಂಬಿಸಿ ಕಷ್ಟಪಟ್ಟು ದುಡಿಯುತ್ತಿದ್ದಾರೆ. ರೈತಾಪಿ ಮಕ್ಕಳು ಕಷ್ಟಪಟ್ಟು ವಿದ್ಯಾಭ್ಯಾಸವನ್ನು ಮಾಡಿ ಪದವಿಗಳನ್ನು ಗಳಿಸಿ , ಉನ್ನತ ವ್ಯಾಸಂಗಗಳನ್ನು ಮಾಡಿ ಉನ್ನತ ಖಾಸಗಿ ಹುದ್ದೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅಸಂಖ್ಯಾತ ಯುವಕರು ಬೆಂಗಳೂರಿನಲ್ಲಿ ಕಷ್ಟಪಟ್ಟು ಹಗಲಿರುಳು ದುಡಿಯುತ್ತಿದ್ದಾರೆ. ಅನೇಕ ಪ್ರತಿಭಾವಂತರು ಹಾಗೂ ಯುವಕರುಗಳು ತಮ್ಮದೇ ಆದ ಸಣ್ಣ ಸಣ್ಣ ಸ್ವಂತ ಉದ್ಯೋಗಗಳಲ್ಲಿ ತೊಡಗಿಕೊಂಡಿದ್ದಾರೆ.
ಬೆಂಗಳೂರು ನಗರದಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಹಾಗೂ ಐಟಿ ಉದ್ಯಮಗಳು ಲಕ್ಷಾಂತರ ಉದ್ಯೋಗವನ್ನು ಸೃಷ್ಟಿಸಿವೆ. ರಾಜ್ಯದ ಕೈಗಾರಿಕೋದ್ಯಮಿಗಳು ರಾಜ್ಯದಲ್ಲಿ ಎಷ್ಟೇ ಸಂಕಷ್ಟಗಳು ಬಂದರೂ ಸಹ ತಮ್ಮ ಉತ್ಪಾದನೆಯ ಮೂಲಕ ತಲಾದಾಯದಲ್ಲಿ ಹೆಚ್ಚಿನ ಕೊಡುಗೆಯನ್ನು ನೀಡುತ್ತಿದ್ದಾರೆ. ಬೆಂಗಳೂರು ನಗರವು ದೇಶದ ಅರ್ಥವ್ಯವಸ್ಥೆಯ ಹೃದಯ ಎಂಬ ಹಿರಿಮೆ ಗರಿಮೆಯನ್ನು ಈ ಮೂಲಕ ಗಳಿಸಿಕೊಂಡಿದೆ. ದೇಶಕ್ಕೆ ಅತಿ ಹೆಚ್ಚಿನ ತೆರಿಗೆ ಕೊಡುಗೆ ಬೆಂಗಳೂರು ನಗರದಿಂದ ಹೋಗುತ್ತಿದೆ. ಈ ಎಲ್ಲಾ ಕಾರಣಗಳಿಂದಾಗಿ ಮಾತ್ರ ರಾಜ್ಯವು ತಲಾದಾಯದಲ್ಲಿ ದೇಶದಲ್ಲಿಯೇ ಪ್ರಪ್ರಥಮ ಸ್ಥಾನದಲ್ಲಿ ಇದೆ.
ಆದರೆ ಕಾಂಗ್ರೆಸ್ ಪಕ್ಷದ ನಾಯಕರುಗಳು ತಮ್ಮ ಗ್ಯಾರಂಟಿಗಳಿಂದಲೇ ರಾಜ್ಯದ ತಲಾದಾಯ ವೃದ್ಧಿಯಾಗಿದೆ ಎಂಬ ಹಸಿ ಹಸಿ ಸುಳ್ಳುಗಳನ್ನು ಹರಡುವ ಮೂಲಕ ಜನತೆಯನ್ನು ದಾರಿತಪ್ಪಿಸುವ ನೀಚ ಕೆಲಸಗಳನ್ನು ನಿಲ್ಲಿಸಬೇಕಿದೆ ಎಂದು ಸೀತಾರಾಮ ಗುಂಡಪ್ಪ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.