ಬಿಜೆಪಿ ಹಾಗೂ ಜೆಡಿಎಸ್ ದುರಾಡಳಿತಕ್ಕೆ ರಾಜ್ಯದ ಜನರು ಬೇಸತ್ತು ಬದಲಾವಣೆ ಬಯಸುತ್ತಿದ್ದಾರೆ. ಹೀಗಾಗಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 224 ಸ್ಥಾನಗಳಲ್ಲಿಯೂ ಎಎಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಯಲಿದೆ ಎಂದು ಆಮ್ ಆದ್ಮಿ ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದರು.
ಹೊಸಪೇಟೆ (ಫೆ.27) ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ದುರಾಡಳಿತಕ್ಕೆ ರಾಜ್ಯದ ಜನರು ಬೇಸತ್ತು ಬದಲಾವಣೆ ಬಯಸುತ್ತಿದ್ದಾರೆ. ಹೀಗಾಗಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 224 ಸ್ಥಾನಗಳಲ್ಲಿಯೂ ಎಎಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಪಕ್ಷ ಸಿದ್ಧತೆ ನಡೆಸಿದೆ. ಇದರ ಭಾಗವಾಗಿ ಮಾ. 4ರಂದು ದಾವಣಗೆರೆಯಲ್ಲಿ ಬೃಹತ್ ಸಮಾವೇಶ ನಡೆಯಲಿದೆ ಎಂದು ಹಿರಿಯ ನಟ, ಆಮ್ ಆದ್ಮಿ ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು(Mukyamantri chandru) ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಸಿಬಿ ಪಕ್ಷಗಳ ದುರಾಡಳಿತದಿಂದ ಜನರು ಬೇಸತ್ತಿದ್ದಾರೆ. ಜಾತಿ, ಹಣ ಹಾಗೂ ತೋಳ್ಬಲದಿಂದಾಗಿ ರಾಜಕಾರಣ ಕಲುಷಿತಗೊಂಡಿದೆ. ಹೀಗಾಗಿ ರಾಜಕೀಯ ಶುದ್ಧೀಕರಣಕ್ಕಾಗಿ ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆ(Karnataka Assembly election 2023)ಯಲ್ಲಿ ಎಎಪಿ(AAP) ಕಣಕ್ಕಿಳಿಯಲಿದೆ. ಮೂರು ಪಕ್ಷಗಳಲ್ಲಿರುವ ಕೆಲವು ಪ್ರಮುಖರು ಆಮ್ ಆದ್ಮಿ ಪಕ್ಷದ ಕಡೆ ವಾಲುತ್ತಿದ್ದಾರೆ ಎಂದರು.
ಸರ್ಕಾರ EWS ಜಾರಿ ಮಾಡದಿದ್ರೆ ಹೈಕೋರ್ಟ್‌ನಲ್ಲಿ ದಾವೆ: ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ ಹಾರನಹಳ್ಳಿ
ಕಳೆದ 7 ದಶಕಗಳಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಸರ್ಕಾರಗಳನ್ನೂ ನಾಡಿನ ಜನತೆ ನೋಡಿದ್ದಾರೆ. ಯಾವುದೇ ಪಕ್ಷ ನುಡಿದಂತೆ ನಡೆಯುತ್ತಿಲ್ಲ. ಆದರೆ, ಆಮ್ ಆದ್ಮಿ ಪಕ್ಷ ಮಾತ್ರ ಯಾವುದೇ ಸದ್ದು- ಗದ್ದಲವಿಲ್ಲದೇ ದೇಶಕ್ಕೆ ಮಾದರಿಯಾಗುವಂತೆ ದೆಹಲಿಯನ್ನು ಅಭಿವೃದ್ಧಿ ಪಡಿಸುತ್ತಿದೆ. ಮಹಿಳೆಯರಿಗೆ ಉಚಿತ ಬಸ್ ಪಾಸ್, ಮಕ್ಕಳಿಗೆ ಗುಣಮಟ್ಟದ ಶಿಕ್ಷಣಕ್ಕಾಗಿ ಸುಸಜ್ಜಿತ ಶಾಲೆಗಳು, ಆರೋಗ್ಯ ಸುಧಾರಣೆಗಾಗಿ ಅತ್ಯಾಧುನಿಕ ಸರ್ಕಾರಿ ಆಸ್ಪತ್ರೆಗಳನ್ನು ನಿರ್ಮಿಸಲಾಗಿದೆ. ಇದೇ ಕಾರಣಕ್ಕೆ ಕರ್ನಾಟಕದ ಜನತೆ ಕೂಡಾ ಆಪ್‌ನತ್ತ ಒಲವು ತೋರುತ್ತಿದ್ದಾರೆ ಎಂದರು.
ಭ್ರಷ್ಟಾಚಾರ:
ರಾಜ್ಯದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಈ ಹಿಂದೆ ಸರ್ಕಾರದಲ್ಲಿ ಕೇಳಿ ಬರುತ್ತಿದ್ದ 10, 20 ಪರ್ಸೆಂಟ್ ಕಮಿಷನ್ ಮಾತುಗಳು ಇತ್ತೀಚೆಗೆ 40, 50ಕ್ಕೆ ಏರಿಕೆಯಾಗಿದೆ. ಚುನಾವಣೆ ಸಮೀಪಿಸುತ್ತಿದ್ದಂತೆ ಕಮಿಷನ್ ದಂಧೆ ಶೇ. 100ಕ್ಕೆ ತಲುಪಿದೆ. ಸರ್ಕಾರದಲ್ಲಿ ಯಾವುದೇ ಕೆಲಸ ಕಾರ್ಯಗಳು ನಡೆಯದಯೇ ಬಿಲ್ ಪಾವತಿಯಾಗುತ್ತಿರುವ ಗುಮಾನಿ ಇದೆ ಎಂದು ಶಂಕೆ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಈ ವರೆಗೆ ಅಧಿಕಾರ ನಡೆಸಿರುವ ಎಲ್ಲ ರಾಜಕೀಯ ಪಕ್ಷಗಳು ಲೋಕಸಭೆಯಿಂದ ಗ್ರಾಪಂ ವರೆಗಿನ ಎಲ್ಲ ಚುನಾವಣಾ ಸಂದರ್ಭದಲ್ಲಿ ಜನರಿಗೆ ಕುಡಿಯುವ ನೀರು, ರಸ್ತೆ, ವಿದ್ಯುತ್ ಸೌಲಭ್ಯಗಳನ್ನು ಕಲ್ಪಿಸುವ ಭರವಸೆಗಳನ್ನು ನೀಡುತ್ತಿದ್ದಾರೆ. ಹಾಗಾದರೆ ಕಳೆದ ಏಳು ದಶಕಗಳಿಂದ ಆಯಾ ಪಕ್ಷಗಳ ಕೊಡುಗೆ ಏನು ಎಂದು ಕಾರವಾಗಿ ಪ್ರಶ್ನಿಸಿದರು.
ಬೃಹತ್ ಸಮಾವೇಶ:
ಕರ್ನಾಟಕದ ಹೃದಯ ಭಾಗವಾಗಿರುವ ದಾವಣಗೆರೆಯಲ್ಲಿ ಆಮ್ ಆದ್ಮಿ ಪಕ್ಷದ ಬೃಹತ್ ಸಮಾವೇಶ ಮಾ. 4ರಂದು ಆಯೋಜಿಸಿದ್ದು, ನಾಡಿನ ಮೂಲೆ ಮೂಲೆಯಿಂದ ಸುಮಾರು 30 ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಆಪ್ ಮುಖ್ಯಸ್ಥ ಹಾಗೂ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಸೇರಿದಂತೆ ರಾಜ್ಯ ಮತ್ತು ರಾಷ್ಟ್ರೀಯ ನಾಯಕರು ಭಾಗವಹಿಸುವರು ಎಂದು ವಿವರಿಸಿದರು.
ಆಹ್ವಾನ:
ಸಮಾಜದಲ್ಲಿರುವ ಸತ್ಯನಿಷ್ಠರು, ವಿದ್ಯಾವಂತರು, ಸುಸಂಸ್ಕೃತರು, ಪ್ರಾಮಾಣಿಕರಿಗೆ ಆಮ್ ಆದ್ಮಿ ಪಕ್ಷದ ಬಾಗಿಲು ಸದಾ ತೆರೆದಿರುತ್ತದೆ. ಆದರೆ, ಹಿಂದೆ ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಿ ಬಿಜೆಪಿ ಸರ್ಕಾರ ರಚನೆಗೆ ಕಾರಣರಾದವರನ್ನು ಭ್ರಷ್ಟಮತ್ತು ಕೋಮುವಾದಿ ಹಾಲಿ, ಮಾಜಿ ಶಾಸಕರು, ಸಂಸದರಿಗೆ ಆಪ್‌ನಲ್ಲಿ ಎಂದಿಗೂ ಅವಕಾಶ ಸಿಗುವುದಿಲ್ಲ. ಅವರಲ್ಲಿ ಸೂಕ್ತ ವ್ಯಕ್ತಿಗಳು ಪಕ್ಷಕ್ಕೆ ಬಂದು ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದೆ ಬಂದರೆ, ಅವರಿಗೆ ಅವಕಾಶ ನೀಡಲಿದೆ ಎಂದು ಸ್ಪಷ್ಟಪಡಿಸಿದರು.
ವಿಜಯನಗರ ಜಿಲ್ಲೆಯ ಹರಪನಹಳ್ಳಿ ಕೇತ್ರದ ಎಚ್. ನಾಗರಾಜ, ಕೂಡ್ಲಿಗಿ ನಾರಿ ಶ್ರೀನಿವಾಸ್, ಹಗರಿಬೊಮ್ಮನಹಳ್ಳಿ ಡಾ. ಹನುಮಂತಪ್ಪ, ಹೂವಿನಹಡಗಲಿ ಶ್ರೀಧರ್ ನಾಯ್‌್ಕ, ವಿಜಯನಗರ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಶಂಕರದಾಸ್, ಕಾರ್ಯಾಧ್ಯಕ್ಷ ಶಿವರಾಯಪ್ಪ ಜೋಗಿನ್, ರಾಜ್ಯ ಉಪಾಧ್ಯಕ್ಷ ರುದ್ರಯ್ಯ ನವಲಿ ಹಿರೇಮಠ, ವಿಜಯನಗರ ಜಿಲ್ಲಾಧ್ಯಕ್ಷ ಜೆ.ಎನ್. ಕಾಳಿದಾಸ್, ಜಿಲ್ಲಾ ಕಾರ್ಯದರ್ಶಿ ವಿಜಯಕುಮಾರ ಬೆಣ್ಣೆಹಳ್ಳಿ, ಸಂಘಟನಾ ಕಾರ್ಯದರ್ಶಿ ಎಂ.ಡಿ. ಮದೀನ್ ಉಪಸ್ಥಿತರಿದ್ದರು.
ಲಂಚ ಪಡೆದ ಆರೋಪ; ದಾವಣಗೆರೆ ನಾಲ್ವರು ಪಿಡಬ್ಲ್ಯುಡಿ ಅಧಿಕಾರಿಗಳ ವಿರುದ್ಧ ಎಫ್‌ಐಆರ್
ಘಟಾನುಘಟಿಗಳು ಆಪ್ ಸಂಪರ್ಕದಲ್ಲಿ:
ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಅಸಮಾಧಾನಿತರು ಆಪ್ ಸಂಕರ್ಪದಲ್ಲಿದ್ದು, ಮಾ. 4ರ ದಾವಣಗೆರೆ ಸಮಾವೇಶದ ಬಳಿಕ ಬಹಿರಂಗ ಪಡಿಸಲಾಗುವುದು ಎಂದು ಆಮ್ ಆದ್ಮಿ ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸುದ್ದಿಯಲ್ಲಿರುವ ಪ್ರಮುಖರು ನಮ್ಮ ಸಂಪರ್ಕದಲ್ಲಿದ್ದಾರೆ. ನಾವು ಈಗಲೇ ಅವರ ಹೆಸರನ್ನು ಬಹಿರಂಗ ಪಡಿಸುವುದಿಲ್ಲ ಎಂದರು.