
ನಾಗಮಂಗಲ (ಏ.16): ರಾಜ್ಯದ ಎಲ್ಲ ವರ್ಗದ ಪ್ರತಿ ಕುಟುಂಬಕ್ಕೂ ಕಾಂಗ್ರೆಸ್ ಪಕ್ಷ ಘೋಷಣೆ ಮಾಡಿರುವ ಜನಪರ ಗ್ಯಾರಂಟಿ ಯೋಜನೆಗಳನ್ನು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಕೊಡಲು ಸಾಧ್ಯವೇ ಎಂಬುದನ್ನು ಯೋಚಿಸಿ ಪಕ್ಷವನ್ನು ಬೆಂಬಲಿಸಬೇಕು ಎಂದು ಕಾಂಗ್ರೆಸ್ ಅಭ್ಯರ್ಥಿ ಮತ್ತು ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು. ತಾಲೂಕಿನ ದೇವಲಾಪುರದಲ್ಲಿ ಹೋಬಳಿಯ ಬೂತ್ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಆಂತರೀಕ ಸಮೀಕ್ಷೆಗಳಿಂದ ವಿಪಕ್ಷದವರಿಗೂ ಗೊತ್ತಾಗಿದೆ.
ಅದಕ್ಕಾಗಿಯೇ ಇಲ್ಲದ ಭರವಸೆ ಕೊಟ್ಟು ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ವಿರೋಧ ಪಕ್ಷಗಳ ಯಾವುದೇ ಆಸೆ ಆಮಿಷ ಮತ್ತು ಸುಳ್ಳು ಭರವಸೆಗಳಿಗೆ ಬಲಿಯಾಗಿ ಕಳೆದ ಬಾರಿ ಮೋಸ ಹೋದಂತೆ ಈ ಬಾರಿ ಕ್ಷೇತ್ರ ಮತ್ತು ಜಿಲ್ಲೆಯ ಜನರು ಮೋಸಹೋಗಬಾರದು ಎಂದು ಹೇಳಿದರು. ಮನ್ಮುಲ ಮಾಜಿ ಅಧ್ಯಕ್ಷ ಜವರೇಗೌಡ ಮಾತನಾಡಿ, ಕ್ಷೇತ್ರದಲ್ಲಿ ಗುರುತು ಮಾಡಿ ತೋರಿಸಬಹುದಾದ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡಿರುವುದರಲ್ಲಿ ಎನ್.ಚಲುವರಾಯಸ್ವಾಮಿ ಮೊದಲಿಗರು ಎಂಬುದನ್ನು ಘಂಟಾಘೋಷವಾಗಿ ಹೇಳುತ್ತೇನೆ. ಆದರೆ ಈಗ ಒಂದು ರಸ್ತೆ ಅಭಿವೃದ್ಧಿ ಕೆಲಸದ ಗುದ್ದಲಿಪೂಜೆ ಮಾಡಲೂ ಸಹ ಶಾಸಕ ಸುರೇಶ್‌ಗೌಡಗೆ ಹಣ ಕೊಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.
ಬಿಜೆಪಿಯಂತಹ ಕೆಟ್ಟ ಸರ್ಕಾರವನ್ನು ನನ್ನ ಜೀವನದಲ್ಲಿ ನೋಡಿಲ್ಲ: ಸಿದ್ಧರಾಮಯ್ಯ
ಮೈಸೂರಿನ ದೀಪಕ್ ಮಾತನಾಡಿ, ರಾಜ್ಯಕ್ಕೆ ಕಾಂಗ್ರೆಸ್ ಪಕ್ಷ ಎಷ್ಟುಅನಿವಾರ್ಯವೋ ಕ್ಷೇತ್ರಕ್ಕೆ ಚಲುವರಾಯಸ್ವಾಮಿ ಕೂಡ ಅಷ್ಟೇ ಅನಿವಾರ್ಯ. ಬೇರೆ ಪಕ್ಷದವರು ಗೆದ್ದರೆ ಒಬ್ಬ ಶಾಸಕನನ್ನು ಮಾತ್ರ ಕೊಡಬಹುದು. ಅದೇ ಚಲುವರಾಯಸ್ವಾಮಿ ಗೆದ್ದರೆ ಶಾಸಕ ಮಾತ್ರವಲ್ಲದೆ ರಾಜ್ಯಕ್ಕೆ ಒಬ್ಬ ಉತ್ತಮ ನಾಯಕನನ್ನು ಕೊಡಬಹುದು. ಆದ್ದರಿಂದ ಕ್ಷೇತ್ರದ ಮತದಾರರು ಮತದಾನದ ಮಹತ್ವವನ್ನು ತಿಳಿದು ರಾಜ್ಯದ ಹಿತದೃಷ್ಟಿಯಿಂದ ಚಲುವರಾಯಸ್ವಾಮಿ ಅವರನ್ನು ಈ ಬಾರಿ ಗೆಲ್ಲಿಸಲೇಬೇಕಾದ ಅನಿವಾರ್ಯತೆಯಿದೆ ಎಂದರು.
ಕಾಂಗ್ರೆಸ್ ಪಕ್ಷ ಎಚ್.ಡಿ.ದೇವೇಗೌಡರನ್ನು ಪ್ರಧಾನಮಂತ್ರಿಯನ್ನಾಗಿ ಮಾಡಿದರೆ, ಎನ್.ಚಲುವರಾಯಸ್ವಾಮಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ್ದಾರೆ. ಆ ಪಕ್ಷ ಮತ್ತು ವ್ಯಕ್ತಿ ಇಬ್ಬರನ್ನೂ ಸೋಲಿಸಲು ಹೊರಟಿರುವುದು ನ್ಯಾಯವೇ. ಹಾಗಿದ್ದರೆ ನೀವು ಎಷ್ಟುಜನರನ್ನು ಸೋಲಿಸಬೇಕು. ಎಷ್ಟುಮಂದಿ ಒಕ್ಕಲಿಗ ನಾಯಕರು ನಿಮ್ಮ ತಂತ್ರಗಳಿಗೆ ಬಲಿಯಾಗಬೇಕು. ರಾಜ್ಯದಲ್ಲಿ ಯಾವೊಬ್ಬ ಒಕ್ಕಲಿಗ ನಾಯಕರು ರಾಜಕೀಯವಾಗಿ ಬೆಳೆದು ಮಂತ್ರಿಗಳಾಗಬಾರದೆ, ನೀವು ಮಾತ್ರ ಒಕ್ಕಲಿಗರು ಚಲುವರಾಯಸ್ವಾಮಿ ಒಕ್ಕಲಿಗರಲ್ಲವೇ ಎಂದು ಜಿಲ್ಲೆಯ ಜನರು ಜೆಡಿಎಸ್ ನಾಯಕರನ್ನು ಪ್ರಶ್ನೆ ಮಾಡಬೇಕಿದೆ ಎಂದು ಗುಡುಗಿದರು.
ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮಾತನಾಡಿದರು. ಇದೇ ವೇಳೆ ದೇವಲಾಪುರ ಹೋಬಳಿ ವಿವಿಧ ಗ್ರಾಮಗಳ ಜೆಡಿಎಸ್ ಪಕ್ಷದ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಪಕ್ಷ ತೊರೆದು ಚಲುವರಾಯಸ್ವಾಮಿ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.
ಕಾಂಗ್ರೆಸ್‌ನಿಂದ ಮಾತ್ರ ಸಂವಿಧಾನ ರಕ್ಷಣೆ: ಶಾಸಕ ಎಚ್.ಕೆ.ಪಾಟೀಲ್
ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ಜಿಪಂ ಮಾಜಿ ಸದಸ್ಯರಾದ ಎಂ.ಹುಚ್ಚೇಗೌಡ, ಎಂ.ಪ್ರಸನ್ನ, ತಾಪಂ ಮಾಜಿ ಅಧ್ಯಕ್ಷ ದಾಸೇಗೌಡ, ಚಲುವರಾಯಸ್ವಾಮಿ ಸಹೋದರ ಲಕ್ಷ್ಮೀಕಾಂತ್, ತಾಲೂಕು ಎಸ್ಸಿಎಸ್ಟಿಘಟಕದ ಅಧ್ಯಕ್ಷ ಮಹೇಶ್, ಮುಖಂಡರಾದ ಡಿ.ಶಿವಣ್ಣ, ಉದಯ ಕಿರಣ್, ತೂಬಿನಕೆರೆ ಚಂದ್ರು, ತಿಬ್ಬನಹಳ್ಳಿ ಚಂದ್ರು, ಎನ್.ಕೆ.ವಸಂತಮಣಿ, ನರಸಿಂಹಮೂರ್ತಿ, ಮರಿಸ್ವಾಮಿ, ಡಿ.ಟಿ.ಕೃಷ್ಣೇಗೌಡ, ದೇವಲಾಪುರ ಸುರೇಶ್ ಸೇರಿದಂತೆ ನೂರಾರುಮಂದಿ ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.