
ಬೆಂಗಳೂರು(ಫೆ.08): ಬಿಜೆಪಿ ವಿಜಯ ಸಂಕಲ್ಪ ಅಭಿಯಾನಕ್ಕೆ ಭರ್ಜರಿ ಪ್ರತಿಕ್ರಿಯೆ ಲಭಿಸಿದ್ದು, 40 ಲಕ್ಷ (40,50,351) ಸದಸ್ಯತ್ವ ನೋಂದಣಿ ಮಾಡಲಾಗಿದೆ. ಉನ್ನತ ಶಿಕ್ಷಣ ಸಚಿವ ಹಾಗೂ ಅಭಿಯಾನದ ಸಂಚಾಲಕ ಡಾ.ಸಿ.ಎನ್. ಅಶ್ವತ್ಥನಾರಾಯಣ ಈ ಮಾಹಿತಿ ಬಹಿರಂಗಪಡಿಸಿದ್ದಾರೆ.
ಮಂಗಳವಾರ ಬಿಜೆಪಿ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಳೆದ ಜ.21ರಿಂದ ಫೆ.5ರವರೆಗೆ ನಡೆದ ವಿಜಯ ಸಂಕಲ್ಪ ಅಭಿಯಾನವು ಪೂರ್ಣಗೊಂಡಿದೆ. ಈ ಅಭಿಯಾನದಲ್ಲಿ ಕೇಂದ್ರ-ರಾಜ್ಯ ಸರ್ಕಾರಗಳ ಸಾಧನೆಗಳನ್ನು ಮನೆ-ಮನೆಗೆ ತಿಳಿಸುವುದು, ಗೋಡೆ ಬರಹ ಪ್ರಕಟಿಸುವುದು, ಕರಪತ್ರ ಹಂಚುವುದರ ಜತೆಗೆ ಪಕ್ಷದ ಸದಸ್ಯತ್ವ ನೋಂದಣಿ ನಡೆದಿದೆ. 2 ಕೋಟಿ ಮನೆಗಳಿಗೆ ಭೇಟಿ, 1 ಕೋಟಿ ಸದಸ್ಯತ್ವ ನೋಂದಣಿ ಗುರಿ ಹೊಂದಲಾಗಿತ್ತು’ ಎಂದರು.
ಕಾಂಗ್ರೆಸ್ ಬಸ್‌ಯಾತ್ರೆಗೆ 52 ಸ್ಥಾನ ಮಾತ್ರ: ಸಚಿವ ಅಶ್ವತ್ಥ ನಾರಾಯಣ್
ರಾಜ್ಯದ 58,186 ಬೂತ್ ಪೈಕಿ 39,572 ಬೂತ್‌ಗಳನ್ನು ಸಂಪರ್ಕಿಸಲಾಗಿದೆ. 22,55,562 (22 ಲಕ್ಷ) ಮನೆಗಳ ಸಂಪರ್ಕ ಮಾಡಿದ್ದು, 13,35,254 (13 ಲಕ್ಷ) ಮನೆಗಳು ಹಾಗೂ 4,91,067 (4.91 ಲಕ್ಷ) ವಾಹನಗಳ ಮೇಲೆ ಸ್ಟಿಕ್ಕರ್ ಅಂಟಿಸಲಾಗಿದೆ. 1.94 ಲಕ್ಷ ಗೋಡೆ ಬರಹ ಹಾಗೂ 32,489 ಡಿಜಿಟಲ್ ವಾಲ್ ಪೇಂಟಿಂಗ್ ಮಾಡಲಾಗಿದೆ. 31,260 ಬೂತ್‌ಗಳಲ್ಲಿ 5 ಲಕ್ಷ ಜನರು ಮನ್ ಕಿ ಬಾತ್ ಆಲಿಸಿದ್ದಾರೆ ಎಂದು ತಿಳಿಸಿದರು.
ಬಿಜೆಪಿ ಗೆಲ್ಲಲು ಪೂರಕ:
‘ಈ ಅಭಿಯಾನ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಕನಿಷ್ಠ 150 ಶಾಸಕರು ಗೆಲ್ಲಲು ಪೂರಕವಾಗಿದೆ. ಮಂಗಳೂರು- ಉಡುಪಿಯಲ್ಲಿ ಶೇ.100ರಷ್ಟು ಮನೆಗಳ ಸಂಪರ್ಕ ಆಗಿದೆ. ದ್ವೀಪವಾಸಿಗಳನ್ನೂ ಸಂಪರ್ಕಿಸಲಾಗಿದೆ. ಕೊಡಗು, ಶಿವಮೊಗ್ಗ, ಮೈಸೂರಿನಲ್ಲಿ ಶೇ.100ರಷ್ಟು ಮನೆ ಸಂಪರ್ಕ ನಡೆಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕಾಡುಗಳಲ್ಲಿ ವಾಸಿಸುವ ಬುಡಕಟ್ಟು ಜನಾಂಗದವರನ್ನೂ ಸಂಪರ್ಕಿಸಲಾಗಿದೆ. ಈ ಅಭಿಯಾನದ ಮುಖಾಂತರ ಜನರ ಸಹಕಾರ, ಬೆಂಬಲ ಕೋರಿದ್ದೇವೆ’ ಎಂದು ಡಾ. ಅಶ್ವತ್ಥ ಹೇಳಿದರು. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ರಾಜ್ಯ ಉಪಾಧ್ಯಕ್ಷ ನಂದೀಶ್, ರಾಜ್ಯ ಕಾರ್ಯದರ್ಶಿ ಜಗದೀಶ್ ಹಿರೇಮನಿ ಉಪಸ್ಥಿತರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.