ದೇವೇಗೌಡರ ಛಲದ ಪ್ರತೀಕ ಜೆಡಿಎಸ್‌ಗೆ ತುಂಬಿತು 23 ವರ್ಷ.. ಎರಡು ದಶಕಗಳಲ್ಲಿ ಮೂರು ಬಾರಿ ಅಧಿಕಾರ...!

Published : Jul 13, 2022, 09:20 PM IST
ದೇವೇಗೌಡರ ಛಲದ ಪ್ರತೀಕ ಜೆಡಿಎಸ್‌ಗೆ ತುಂಬಿತು 23 ವರ್ಷ.. ಎರಡು ದಶಕಗಳಲ್ಲಿ ಮೂರು ಬಾರಿ ಅಧಿಕಾರ...!

ಸಾರಾಂಶ

* ದೇವೇಗೌಡರ ಛಲದ ಪ್ರತೀಕ ಜೆಡಿಎಸ್‌ಗೆ ತುಂಬಿತು 23 ವರ್ಷ * ಎರಡು ದಶಕಗಳಲ್ಲಿ ಮೂರು ಬಾರಿ ಅಧಿಕಾರ * ಸಡ್ಡು ಹೊಡೆದು ಅಸ್ತಿತ್ವ ಉಳಿಸಿಕೊಂಡಿರುವ ಪ್ರಾದೇಶಿಕ ಪಕ್ಷ

ಬೆಂಗಳೂರು, (ಜುಲೈ.13): ಜಾತ್ಯಾತೀತ ಜನತಾದಳ... ರಾಜ್ಯದಲ್ಲಿಎರಡು ರಾಷ್ಟ್ರೀಯ ಪಕ್ಷಗಳಿಗೆ ಸಡ್ಡು ಹೊಡೆದು ಅಸ್ತಿತ್ವ ಉಳಿಸಿಕೊಂಡಿರುವ ಪ್ರಾದೇಶಿಕ ಪಕ್ಷ... ರಾಜ್ಯ ರಾಜಕಾರಣದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾದಾಗಲೆಲ್ಲಾ ಜೆಡಿಎಸ್‌ಗೆ ಭಾರೀ ಡಿಮ್ಯಾಂಡ್. ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ರಣ ರಣ ರಾಜಕಾರಣದ ಮಧ್ಯೆ ರಾಜ್ಯ ರಾಜಕೀಯದಲ್ಲಿ ತನ್ನದೇ ಶಕ್ತಿ ಉಳಿಸಿಕೊಂಡು ಬಂದಿರುವ ಜೆಡಿಎಸ್‌ಗೆ ಭರ್ತಿ 23 ವರ್ಷ ತುಂಬಿದೆ. 

ಹೌದು... ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ಜಾತ್ಯಾತೀತ ಜನತಾದಳವನ್ನು ಸ್ಥಾಪನೆ ಮಾಡಿ ಇವತ್ತಿಗೆ ಭರ್ತಿ 23 ವರ್ಷ. 1999ರಲ್ಲಿ ಜನತಾ ಪರಿವಾರದಿಂದ ಸಿಡಿದ ಕಿಡಿಯೇ ಈ ಜೆಡಿಎಸ್. ಅವತ್ತು ರಾಜ್ಯದಲ್ಲಿ ಜನತಾದಳ ಇಬ್ಭಾಗವಾದಾಗ ದೇವೇಗೌಡ್ರು ಜಾತ್ಯಾತೀತ ಜನತಾದಳ ಪಕ್ಷ ಕಟ್ಟಿದ್ರು. ರಾಮಕೃಷ್ಣ ಹೆಗಡೆ, ಜೆ.ಎಚ್ ಪಟೇಲ್”ರಂತಹ ಘಟಾನುಘಟಿ ನಾಯಕರನ್ನು ಬಿಟ್ಟು ತಮ್ಮದೇ ಹಾದಿ ಹಿಡಿದ ದೇವೇಗೌಡರಿಗೆ ಮೊದಲ ಚುನಾವಣೆಯಲ್ಲೇ ಎದುರಾಗಿದ್ದು ಅಂತಿಂಥಾ ಸೋಲಲ್ಲ.

ಬಿಜೆಪಿ ಸರ್ಕಾರದಿಂದ ಲೂಟಿ: ಎಚ್‌.ಡಿ.ಕುಮಾರಸ್ವಾಮಿ

ಜೆಡಿಎಸ್’ನಿಂದ 1999ರ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ ಗೌಡರ ಮಕ್ಕಳಿಬ್ಬರೂ ಸೋತು ಬಿಟ್ರು. ಹೊಳೆನರಸೀಪುರದಿಂದ ಗೌಡರ ಹಿರಿಯ ಪುತ್ರ ಎಚ್.ಡಿ ರೇವಣ್ಣ ಸೋತ್ರೆ,. ಸಾತನೂರಿನಿಂದ ಸ್ಪರ್ಧಿಸಿದ್ದ ದೇವೇಗೌಡರ ಕಿರಿಯ ಪುತ್ರ ಎಚ್.ಡಿ ಕುಮಾರಸ್ವಾಮಿ, ಈಗಿನ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿರುದ್ಧ ಸೋತಿದ್ರು. 

ಮತ್ತೊಂದೆಡೆ ಸ್ವತಃ ದೇವೇಗೌಡರೇ ಹಾಸನ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಸ್ವಾಮಿ ಗೌಡರ ವಿರುದ್ಧ ಸೋತು ಸುಣ್ಣವಾಗಿದ್ರು. ಹೀಗೆ ಜೆಡಿಎಸ್ ಚಿಹ್ನೆಯಿಂದ ಎದುರಿಸಿದ ಮೊದಲ ಚುನಾವಣೆಯಲ್ಲೇ ಅಪ್ಪಮಕ್ಕಳು ಮೂವರೂ ಸೋತಿದ್ರು. ಜನತಾದಳ ಇಬ್ಭಾಗವಾದಾಗ ದೇವೇಗೌಡರೊಂದಿಗೆ ಜೆಡಿಎಸ್ ಜೊತೆ ಹೆಜ್ಜೆ ಹಾಕಿದ್ದ, ಈಗಿನ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯನವರೂ ಕೂಡ 1999ರ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಸೋಲು ಕಂಡಿದ್ರು. 1999ರ ವಿಧಾನಸಭಾ ಚುನಾವಣೆಯಲ್ಲಿ 203 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಜೆಡಿಎಸ್’ಗೆ ದಕ್ಕಿದ್ದು ಕೇವಲ 10 ಸ್ಥಾನ ಮಾತ್ರ. ಕಾಂಗ್ರೆಸ್ ಪರವಾಗಿ ಬೀಸಿದ ಅಲೆಯಲ್ಲಿ ದೇವೇಗೌಡರ ಕುಟುಂಬ ಸದಸ್ಯರು ಸೇರಿದಂತೆ, ಜೆಡಿಎಸ್ ಅಭ್ಯರ್ಥಿಗಳು ಅಕ್ಷರಶಃ ಕೊಚ್ಚಿ ಹೋಗಿದ್ರು.

ಮೊದಲ ಚುನಾವಣೆಯಲ್ಲಿ 10 ಸ್ಥಾನ... ಎದುರಿಸಿದ 2ನೇ ವಿಧಾನಸಭಾ ಚುನಾವಣೆಯಲ್ಲಿ 59 ಸ್ಥಾನ ಪಡೆದ ಜೆಡಿಎಸ್, 2004ರಲ್ಲಿ ಕಾಂಗ್ರೆಸ್ ಜೊತೆ ಸೇರಿ ಮೈತ್ರಿ ಸರ್ಕಾರವನ್ನೂ ರಚಿಸಿ ಬಿಟ್ಟಿತು. ಕಾಂಗ್ರೆಸ್”ನ ಧರ್ಮಸಿಂಗ್ ಮುಖ್ಯಮಂತ್ರಿಯಾದ್ರೆ, ಜೆಡಿಎಸ್’ನ ಸಿದ್ದರಾಮಯ್ಯ ಉಪಮುಖ್ಯಮಂತ್ರಿಯಾದ್ರು. ಎರಡು ವರ್ಷ ಅಧಿಕಾರ ನಡೆಸಿದ ಮೈತ್ರಿಸರ್ಕಾರವನ್ನು 2006ರಲ್ಲಿ ಸ್ವತಃ ದೇವೇಗೌಡರ ಪುತ್ರ ಕುಮಾರಸ್ವಾಮಿಯವರೇ ಉರುಳಿಸಿದ್ರು. 

ನಂತರ ಬಿಜೆಪಿ ಜೊತೆ ಸೇರಿ 20-20 ಸರ್ಕಾರದಲ್ಲಿ ಮುಖ್ಯಮಂತ್ರಿಯಾದ ಕುಮಾರಸ್ವಾಮಿ, ಜನಸಾಮಾನ್ಯರ ಮುಖ್ಯಮಂತ್ರಿ ಅಂತ ಕರೆಸಿಕೊಂಡ್ರು. ಆದ್ರೆ ಬಿಜೆಪಿಗೆ ಅಧಿಕಾರ ಹಸ್ತಾಂತರ ಮಾಡಬೇಕಾದ ಸಂದರ್ಭ ಬಂದಾಗ, ಅಧಿಕಾರ ನೀಡಲು ನಿರಾಕರಿಸಿದ್ದರ ಪರಿಣಾಮ ಕುಮಾರಸ್ವಾಮಿಯವರಿಗೆ ವಚನಭ್ರಷ್ಟತೆಯ ಕಳಂಕ ಅಂಟಿಕೊಂಡಿತು. ಚನಭ್ರಷ್ಟತೆಯನ್ನೇ ಅಸ್ತ್ರವಾಗಿಸಿಕೊಂಡು 2008ರ ವಿಧಾನಸಭಾ ಚುನಾವಣೆ ಎದುರಿಸಿದ ಬಿಜೆಪಿ 110 ಸ್ಥಾನಗಳನ್ನು ಗೆದ್ದು, ಪಕ್ಷೇತರರ ಬೆಂಬಲದೊಂದಿಗೆ ಅಧಿಕಾರಕ್ಕೆ ಬಂದ್ರೆ, ಆ ಚುನಾವಣೆಯಲ್ಲಿ ಜೆಡಿಎಸ್’ಗೆ ಸಿಕ್ಕಿದ್ದು ಕೇವಲ 28 ಸ್ಥಾನ.

2008ರಿಂದ 2013ರವರೆಗೆ ಬಿಜೆಪಿ ಸರ್ಕಾರದ ಭ್ರಷ್ಟಾಚಾರಗಳನ್ನು ನಾಡಿನ ಜನತೆಯ ಮುಂದಿಟ್ಟ ಕುಮಾರಸ್ವಾಮಿ, 2013ರ ಚುನಾವಣೆಯಲ್ಲಿ ಕನಿಷ್ಠ 75 ಸ್ಥಾನಗಳ ನಿರೀಕ್ಷೆಯಲ್ಲಿದ್ರು. ಆದ್ರೆ ಫಲಿತಾಂಶ ಬಂದಾಗ ದಕ್ಕಿದ್ದು 40 ಸೀಟು. 122 ಸ್ಥಾನಗಳನ್ನು ಗೆದ್ದ  ಕಾಂಗ್ರೆಸ್ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೇರಿತು. ಹಿಂದೆ ಜೆಡಿಎಸ್”ನಲ್ಲೇ ಇದ್ದ ಸಿದ್ದರಾಮಯ್ಯ, ಕಾಂಗ್ರೆಸ್ ಸೇರಿದ ಏಳೇ ವರ್ಷಗಳಲ್ಲಿ ಮುಖ್ಯಮಂತ್ರಿಯಾದ್ರು. ಜೆಡಿಎಸ್”ಗೆ ಮತ್ತೆ ಪ್ರತಿಪಕ್ಷ ಸ್ಥಾನವೇ ಗಟ್ಟಿಯಾಯ್ತು.

ಅಲ್ಲಿಂದ ಮತ್ತೆ ಮತ್ತೆ ಅಧಿಕಾರ ಸಿಗಲು ಜೆಡಿಎಸ್ 10 ವರ್ಷಗಳ ಕಾಲ ಕಾಯಬೇಕಾಯ್ತು. 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 105, ಕಾಂಗ್ರೆಸ್ 80 ಹಾಗೂ ಜೆಡಿಎಸ್ 37 ಸ್ಥಾನಗಳನ್ನು ಗೆದ್ದ ಪರಿಣಾಮ ಅತಂತ್ರ ವಿಧಾನಸಭೆ ಸೃಷ್ಠಿಯಾಯ್ತು. ಜೆಡಿಎಸ್”ಗೆ ಬೇಕಿದ್ದದ್ದು ಅದೇ. ಕಾಂಗ್ರೆಸ್ ಜೊತೆ ಸೇರಿ ಮತ್ತೆ ಸರ್ಕಾರ ರಚಿಸಿತು ಜೆಡಿಎಸ್. ಕುಮಾರಸ್ವಾಮಿ 2ನೇ ಬಾರಿ ಮುಖ್ಯಮಂತ್ರಿಯಾದ್ರು. ಆದ್ರೆ ಆಂತರಿಕ ಕಚ್ಚಾಟದ ಕಾರಣ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಕೇವಲ 14 ತಿಂಗಳಲ್ಲೇ ಪತನಗೊಂಡಿತು. 

ಹೀಗೆ ಪಕ್ಷ ಸ್ಥಾಪನೆಗೊಂಡ 23 ವರ್ಷಗಳಲ್ಲಿ ಮೂರು ಬಾರಿ ಜೆಡಿಎಸ್ ಮೈತ್ರಿ ಸರ್ಕಾರಗಳಲ್ಲಿ ಭಾಗಿಯಾಗಿದೆ. ಎರಡು ಬಾರಿ ಜೆಡಿಎಸ್ ಪಕ್ಷದ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾರೆ. 2023ರಲ್ಲಿ ನಿರ್ಣಾಯಕ ಆಟಕ್ಕೆ ಸಜ್ಜಾಗಿರುವ ಕುಮಾರಸ್ವಾಮಿ, ಪೂರ್ಣ ಬಹುಮತದ ಸರ್ಕಾರದ ಕನಸು ಕಾಣುತ್ತಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನಾನು ಹತ್ತು ಲಕ್ಷದ ವಾಚಾದ್ರೂ ಕಟ್ಟುತ್ತೇನೆ, ಅದು ನನ್ನ ಆಸ್ತಿ: ಬಿಜೆಪಿಗೆ ತಿರುಗೇಟು ಕೊಟ್ಟ ಡಿಕೆಶಿ
ಡಿಕೆಶಿ ಸಿಎಂ ಆದ್ರೆ ಅವರ ಸಂಪುಟದಲ್ಲಿ ನಾನು ಸಚಿವ ಆಗೋಲ್ಲ: ಕೆಎನ್ ರಾಜಣ್ಣ ದೊಡ್ಡ ನಿರ್ಧಾರ!