Karnataka Politics: ಇದೇ ನನ್ನ ಕೊನೆ ಚುನಾವಣೆ: ಸಿದ್ದರಾಮಯ್ಯ

Published : Jul 18, 2022, 05:00 AM IST
Karnataka Politics: ಇದೇ ನನ್ನ ಕೊನೆ ಚುನಾವಣೆ: ಸಿದ್ದರಾಮಯ್ಯ

ಸಾರಾಂಶ

ಕಳೆದ ಒಂದೆರಡು ವರ್ಷಗಳಿಂದ ಪರೋಕ್ಷವಾಗಿ ಮತ್ತೆ ಮುಖ್ಯಮಂತ್ರಿಯಾಗುವ ಇಂಗಿತವನ್ನು ಪದೇ ಪದೇ ವ್ಯಕ್ತಪಡಿಸುತ್ತಿದ್ದಲೇ ಬಂದಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಇದೀಗ ಮೊದಲು ಪಕ್ಷವನ್ನು ಅಧಿಕಾರಕ್ಕೆ ತರುವ ಕಡೆ ಗಮನಕೊಡಿ ಎಂಬ ಸಂದೇಶವನ್ನು ಕಾರ್ಯಕರ್ತರಿಗೆ ರವಾನಿಸಿದ್ದಾರೆ.

ಮೈಸೂರು (ಜು.18): ಕಳೆದ ಒಂದೆರಡು ವರ್ಷಗಳಿಂದ ಪರೋಕ್ಷವಾಗಿ ಮತ್ತೆ ಮುಖ್ಯಮಂತ್ರಿಯಾಗುವ ಇಂಗಿತವನ್ನು ಪದೇ ಪದೇ ವ್ಯಕ್ತಪಡಿಸುತ್ತಿದ್ದಲೇ ಬಂದಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಇದೀಗ ಮೊದಲು ಪಕ್ಷವನ್ನು ಅಧಿಕಾರಕ್ಕೆ ತರುವ ಕಡೆ ಗಮನಕೊಡಿ ಎಂಬ ಸಂದೇಶವನ್ನು ಕಾರ್ಯಕರ್ತರಿಗೆ ರವಾನಿಸಿದ್ದಾರೆ. ‘ನಾನು ಅಧಿಕಾರಕ್ಕೆ ಬರಬೇಕು ಅಂತ ಅಲ್ಲ, ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ನನಗೆ ಮುಖ್ಯ’ ಎಂದು ಹೇಳಿದ್ದಾರೆ.

ಮೈಸೂರಿನ ಕಾಂಗ್ರೆಸ್‌ ಭವನದಲ್ಲಿ ಭಾನುವಾರ ನಡೆದ ಚಾಮುಂಡೇಶ್ವರಿ, ಇಲವಾಲ, ಜಯಪುರ ಬ್ಲಾಕ್‌ ಕಾಂಗ್ರೆಸ್‌ ಸಮಿತಿಯ ಮುಂಚೂಣಿ ಘಟಕಗಳ ಪದಗ್ರಹಣ ಸಮಾರಂಭದಲ್ಲಿ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಕಾರ್ಯಕರ್ತರೊಬ್ಬರು ಘೋಷಣೆ ಕೂಗಿದಾಗ ಅವರಿಗೆ ಗದರುತ್ತಲೇ ಈ ವಿಚಾರ ತಿಳಿಸಿದರು. ಈ ರಾಜ್ಯ ಉಳಿಯಬೇಕಾದರೆ, ಬಿಜೆಪಿ ಕಪಿಮುಷ್ಟಿಯಿಂದ ಹೊರಬರಬೇಕಾದರೆ ಕಾಂಗ್ರೆಸ್‌ ಅಧಿಕಾರಕ್ಕೆ ಬರಬೇಕು. 130ರಿಂದ 150 ಸ್ಥಾನ ಗೆಲ್ಲಲೇಬೇಕು. ಮೈಸೂರಿನ 11 ಸ್ಥಾನಗಳಲ್ಲಿ 9 ಸ್ಥಾನ ಗೆಲ್ಲಬೇಕು ಎಂದರು.

ಚಾಮುಂಡೇಶ್ವರಿಯಲ್ಲಿ ಸೋಲು-ಗೆಲುವಿನ ಆಳ ಅಗಲ ಬಿಚ್ಚಿಟ್ಟ ಸಿದ್ದರಾಮಯ್ಯ

ಇದೇ ಕೊನೇ ಚುನಾವಣೆ: ಭ್ರಷ್ಟ, ಕೋಮುವಾದಿ ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಹೊರಗಿಡಬೇಕು ಎಂಬ ಕಾರಣಕ್ಕೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ. ಮತ್ತೆ ಸ್ಪರ್ಧೆ ಮಾಡುವುದಿಲ್ಲ. ಇದೇ ನನ್ನ ಕೊನೇ ಚುನಾವಣೆ. ಆ ಬಳಿಕ ಯಾವ ಸ್ಥಾನಮಾನವನ್ನೂ ಸ್ವೀಕರಿಸುವುದಿಲ್ಲ ಎಂದರು.

ಚಾಮುಂಡೇಶ್ವರಿಯಿಂದ ಸ್ಪರ್ಧಿಸಲ್ಲ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸುವ ಸಾಧ್ಯತೆಯನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪಷ್ಟವಾಗಿ ತಳ್ಳಿ ಹಾಕಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸಲ್ಲ, ಕ್ಷೇತ್ರದಿಂದ ಪಕ್ಷ ಯಾರನ್ನೇ ಕಣಕ್ಕಿಳಿಸಿದರೂ ಕಾರ್ಯಕರ್ತರು ಒಳಜಗಳ ಬಿಟ್ಟು ಗೆಲ್ಲಿಸಬೇಕು ಎಂದು ಹೇಳಿದರು. ಕಾಂಗ್ರೆಸ್‌ ಮುಂಚೂಣಿ ಘಟಕಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮತ್ತೆ ಸ್ಪರ್ಧಿಸಲ್ಲ. ಇಲ್ಲಿ ಸ್ಪರ್ಧಿಸಿದಾಗ ಅನೇಕ ಕಡೆ ಬೂತ್‌ ಮಟ್ಟದ ಕಾರ್ಯಕರ್ತರೂ ಇರಲಿಲ್ಲ. ಆದರೆ, ಬಾದಾಮಿಯಲ್ಲಿ 2 ದಿನ ಪ್ರಚಾರ ಮಾಡಿದರೂ ಜನ ಗೆಲ್ಲಿಸಿದರು. 

ಹಾಗಂತ ಮತದಾರರ ಬಗ್ಗೆ ನನಗೆ ಕೋಪವಿಲ್ಲ. ನನಗೆ ಕಾರ್ಯಕರ್ತರ ಮೇಲೆಯೇ ಕೋಪ ಎಂದರು. ಜತೆಗೆ, ನನ್ನನ್ನು ಸಂತೋಷಪಡಿಸಲು ಈ ಕ್ಷೇತ್ರದಿಂದ ಸ್ಪರ್ಧಿಸುವ ವಿಷಯ ಯಾರೂ ಪ್ರಸ್ತಾಪಿಸಬಾರದು ಎಂದು ಬೆಂಬಲಿಗರಿಗೆ ತಾಕೀತನ್ನೂ ಮಾಡಿದರು. ಮುಂಬರುವ ಚುನಾವಣೆಯಲ್ಲಿ ಬಾದಾಮಿಯಲ್ಲಿ ಮತ್ತೆ ನಿಲ್ಲುವಂತೆ ಒತ್ತಾಯ ಮಾಡುತ್ತಿದ್ದಾರೆ. ಕೋಲಾರ, ಕೊಪ್ಪಳ, ಹುಣಸೂರು ಮತ್ತು ಬೆಂಗಳೂರಿನಿಂದಲೂ ಸ್ಪರ್ಧಿಸುವಂತೆ ಒತ್ತಾಯ ಬರುತ್ತಿದೆ. ಎಲ್ಲಿ ನಿಲ್ಲಬೇಕು ಎಂಬುದನ್ನು ಇನ್ನೂ ತೀರ್ಮಾನಿಸಿಲ್ಲ ಎಂದರು.

ಸಿದ್ದರಾಮಯ್ಯ ಕಾರಿಗೆ ಹಣ ಎಸೆದ ಘಟನೆಯ ಹಿಂದೆ ಎಸ್‌ಡಿಪಿಐ ಕೈವಾಡ: ಕಾಶಪ್ಪನವರ ಆರೋಪ

ಸಿದ್ದು ಸ್ಪರ್ಧೆ ಬಗ್ಗೆ ಗದ್ದಲ: ಇದಕ್ಕೂ ಮುನ್ನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಮತ್ತೆ ಸ್ಪರ್ಧಿಸಬೇಕೆಂಬ ಅನೇಕರ ಒತ್ತಾಯ ಒಂದು ಹಂತದಲ್ಲಿ ಗೊಂದಲ, ಗದ್ದಲಕ್ಕೂ ಕಾರಣವಾಯಿತು. ಕೆಲವರು ಸಿದ್ದರಾಮಯ್ಯ ಅವರು ಕ್ಷೇತ್ರದಿಂದ ಮತ್ತೆ ಸ್ಪರ್ಧಿಸಲಿ ಎಂದರೆ, ಮತ್ತೆ ಕೆಲವರು ಸೋಲಿಸಿ ಮತ್ತೆ ಯಾಕೆ ಕರೆಯುತ್ತೀರಿ ಎಂದು ಕಿಡಿಕಾರಿದರು. ಬಳಿಕ ಸಿದ್ದರಾಮಯ್ಯ ಅವರೇ ಎಲ್ಲರನ್ನೂ ಗದರಿ, ಸಮಾಧಾನಪಡಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕರ್ನಾಟಕ ಗದ್ದುಗೆ ಫೈಟ್‌ ಬಗ್ಗೆ ಹೈಕಮಾಂಡ್‌ ನಾಯಕರ ಚರ್ಚೆ
ಚುಂಚ ಶ್ರೀ ಬಳಿ ಕೈ ಮುಗಿದು ಎಚ್‌ಡಿಕೆ ಕ್ಷಮೆ