* ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣ
* ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ
* 2 ವರ್ಷದ ಹಿಂದೆ ಹರ್ಷ ಕೊಲೆಗೆ ಘೋಷಣೆ ಮಾಡಿದ್ದರು ಎಂದ ಎಚ್‌ಡಿಕೆ
ಶಿವಮೊಗ್ಗ (ಫೆ.21): ಹಿಜಾಬ್ ವಿವಾದದಿಂದ ಸುದ್ದಿಯಾಗಿದ್ದ ಮಲೆನಾಡು ಶಿವಮೊಗ್ಗ(Shivamogga) ಜಿಲ್ಲೆಯಲ್ಲಿ ಈಗ ಭಜರಂಗದಳದ ಕಾರ್ಯಕರ್ತನ ಭೀಕರ ಹತ್ಯೆಯಿಂದ (Murder) ಪರಿಸ್ಥಿತಿ ಉದ್ವಿಗ್ನವಾಗಿದೆ. ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ತವರು ಜಿಲ್ಲೆಯಲ್ಲಿಯೇ ಘಟನೆ ನಡೆದಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಇನ್ನು ಈ ಬಗ್ಗೆ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ(HD Kumaraswamy) ಪ್ರತಿಕ್ರಿಯಿಸಿದ್ದು, ಒಬ್ಬ ಯುವಕನಿಗೆ ರಕ್ಷಣೆ ಕೊಡೋಕೆ ಆಗದ ಸರ್ಕಾರ, ರಾಜ್ಯದ ಜನತೆಗೆ ಹೇಗೆ ರಕ್ಷಣೆ ಕೊಡ್ತೀರಿ? 2023ರಲ್ಲಿ ಏನಾಗುತ್ತೆ ಅಂತ ಟ್ರೈಲರ್ ಬಿಟ್ಟಿದ್ದಾರೆ. ಮುಂದೆ ಫುಲ್ ಫಿಕ್ಚರ್ ಬಾಕಿ ಇದೆ. ಇದು ಪ್ರಾರಂಭಿಕ ಹಂತನಾ ಅಂತ ನನಗೆ ಅನುಮಾನ. ಪ್ರಜೆಗಳ ರಕ್ಷಣೆಗೆ ಸರ್ಕಾರ ಬೇಕು. ಊರೆಲ್ಲ ಬೆಂಕಿ ಹಚ್ಚಿದ ಮೇಲೆ ಆರಿಸೋಕೆ ಹೋಗೊದಲ್ಲ ಎಂದು ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದರು.
Shivamogga ಮುಸಲ್ಮಾನ ಗೂಂಡಾಗಳು ಹಿಂದೂ ಕಾರ್ಯಕರ್ತನನ್ನು ಹತ್ಯೆ ಮಾಡಿದ್ದಾರೆ, ಈಶ್ವರಪ್ಪ ಗಂಭೀರ ಆರೋಪ
ಶಿವಮೊಗ್ಗದಲ್ಲಿ ಅಮಾಯಕ ಯುವಕನ ಕೊಲೆಯಾಗಿದೆ. ಇನ್ನೊಂದು ವಾರ ಅವರ ಮನೆಗೆ ಭೇಟಿ ನೀಡುತ್ತಾರೆ. ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಮೊಸಳೆ ಕಣ್ಣೀರು ಸುರಿಸ್ತಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಹಲವು ಅಹಿತಕರ ಘಟನೆ ನಡೆದಿತ್ತು. ಆಗ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಆರೋಪಿಸಿತ್ತು. ಅವರ ಆರೋಪದಲ್ಲಿ ಕೆಲವೊಂದು ಸತ್ಯವೂ ಇದೆ. ನಿನ್ನೆ ಘಟನೆಯ ಹಿಂದಿನ ಉದ್ದೇಶ ಏನೆಂದು ಗೊತ್ತಾಗಬೇಕು ಎಂದರು.
2 ವರ್ಷದ ಹಿಂದೆ ಹರ್ಷ ಕೊಲೆಗೆ ಘೋಷಣೆ ಮಾಡಿದ್ದರು. 10 ಲಕ್ಷ ಹಣ ಕೊಡುವುದಾಗಿ ಘೋಷಿಸಿದ್ದರೆಂದು ಮೃತ ಹರ್ಷ ಸಂಬಂಧಿಕರೊಬ್ಬರು ಈ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಬಿಜೆಪಿ ನಾಯಕರಿಗೆ ಮಾಹಿತಿ ಇರಲಿಲ್ಲವೇ? ನಿಮ್ಮ ಪಕ್ಷಕ್ಕೆ ಬೆಂಬಲ ನೀಡುವ ಸದಸ್ಯನಿಗೆ ರಕ್ಷಣೆ ನೀಡಿಲ್ಲ. ಇನ್ನು ನೀವು ಈ ರಾಜ್ಯದ ಜನರಿಗೆ ರಕ್ಷಣೆ ಕೊಡುತ್ತೀರಾ? ಮುಂದೆ ರಾಜ್ಯದಲ್ಲಿ ಏನಾಗುತ್ತೆ ಎಂಬುದಕ್ಕೆ ಇದು ಟ್ರೇಲರ್ ಎಂಬ ಬಗ್ಗೆ ನನಗೆ ಅನುಮಾನವಿದೆ ಎಂದು ಹೇಳಿದರು.
ಇನ್ನು ಡಿಕೆಶಿ ಪ್ರಚೋದನೆಯಿಂದ ಹತ್ಯೆಯಾಗಿದೆ ಎಂಬ ಈಶ್ವರಪ್ಪನವರ ಹೇಳಿಕೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, ಹೀಗೆ ಹೇಳುವ ಬಿಜೆಪಿ ನಾಯಕರು ಕ್ರಮಕೈಗೊಳ್ಳಬೇಕಿತ್ತು. ಅವರ ವಿರುದ್ಧ ಸರ್ಕಾರ ಮೊದಲೇ ಕ್ರಮ ತೆಗೆದುಕೊಳ್ಳಬೇಕಿತ್ತು. ಊರೆಲ್ಲಾ ಬೆಂಕಿ ಇಟ್ಟ ಮೇಲೆ ಫೈರ್ ಇಂಜಿನ್ ಹೋಗಬಾರದು ಎಂದು ಟಾಂಗ್ ಕೊಟ್ಟರು.
ರಾಜ್ಯದಲ್ಲಿ 100ಕ್ಕೆ 50ರಷ್ಟು ರಾಜಕಾರಣಿಗಳ ಶಾಲೆಗಳಿವೆ. ಈ ಶಾಲೆಗಳಲ್ಲಿ ಹಿಜಾಬ್, ಕೇಸರಿ ಶಾಲು ವಿವಾದ ಇದ್ಯಾ. ಕೇವಲ ಅಮಾಯಕ ಮಕ್ಕಳಿರುವ ಶಾಲೆಗಳಲ್ಲಿ ವಿವಾದ ಇದೆ. ಚುನಾವಣೆಗಾಗಿ ಈ ವಿವಾದ ಹುಟ್ಟು ಹಾಕಿರುವ ಆರೋಪ ರಾಜ್ಯದ ಜನರು ಎಚ್ಚೆತ್ತುಕೊಳ್ಳಬೇಕು ಮನವಿ ಮಾಡಿದರು.
ಪ್ರಕರಣ
ಹಿಂದೂಪರ ಕಾರ್ಯಕರ್ತ (Hindu Activits) ಹರ್ಷ ಎಂಬಾತನನ್ನು ಅಪರಿಚಿತ ದುರ್ಷರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ ಘಟನೆ ತೀರ್ಥಹಳ್ಳಿ ರಸ್ತೆಯ ಭಾರತಿ ಕಾಲೋನಿಯಲ್ಲಿ ನಡೆದಿದೆ. ಘಟನೆಯಿಂದಾಗಿ ನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಎರಡು ಕಡೆ ಕಲ್ಲುತೂರಾಟ ನಡೆದ ಘಟನೆಯೂ ವರದಿಯಾಗಿದೆ. ಈ ವೇಳೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಗುಂಪು ಚದುರಿಸಿದ್ದಾರೆ.
ಮುನ್ನೆಚ್ಚರಿಕಾ ಕ್ರಮವಾಗಿ ನಗರ ವ್ಯಾಪ್ತಿಯಲ್ಲಿ ಸೋಮವಾರ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದ್ದು, ಈಗಾಗಲೇ ಜಾರಿಯಲ್ಲಿದ್ದ 144 ಸೆಕ್ಷನ್ ಅನ್ನು ಮತ್ತೆರಡು ದಿನ ವಿಸ್ತರಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಸುದ್ದಿ ತಿಳಿಯುತ್ತಿದ್ದಂತೆ ಮೆಗ್ಗಾನ್ ಆಸ್ಪತ್ರೆ ಎದುರು ನೂರಾರು ಮಂದಿ ಜಮಾಯಿಸಿದ್ದು, ಈ ವೇಳೆ ಕೆಲವರು ಆಸ್ಪತ್ರೆಯ ಮೇಲೆ ಕಲ್ಲು ತೂರಿದ್ದಾರೆ. ಇದರಿಂದ ಆಸ್ಪತ್ರೆ ಗಾಜುಗಳಿಗೆ ಹಾನಿಯಾಗಿದೆ.
ಕಲ್ಲುತೂರಾಟ-ಘಟನೆ ಬೆನ್ನಲ್ಲೇ ನಗರದ ರವಿವರ್ಮ ಬೀದಿ ಮತ್ತು ಆಜಾದ್ ನಗರದಲ್ಲಿ ಕಲ್ಲುತೂರಾಟದ ಘಟನೆ ವರದಿಯಾಗಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಗುಂಪು ಚದುರಿಸಿದ್ದಾರೆ. ಈ ಮಧ್ಯೆ, ನಗರದ ಎಲ್ಲೆಡೆ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.