ಹಿಂದೂ ಕಾರ್ಯಕರ್ತನ ಹತ್ಯೆ, ಸುಮ್ಮನೆ ಇಲ್ಲಿ ಕುಳಿತು ಹೇಳಿಕೆಗಳನ್ನು ನೀಡಬಾರದು ಎಂದ ಸಿದ್ದು

By Suvarna NewsFirst Published Feb 21, 2022, 11:33 AM IST
Highlights

* ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣ
* ಆರೋಪಿಗಳಿಗೆ ಗಲ್ಲು ಶಿಕ್ಷೆಯಾಗಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ
* ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ವಿಧಾನಸೌಧದಲ್ಲಿ ಸಿದ್ದರಾಮಯ್ಯ ಹೇಳಿಕೆ

ಬೆಂಗಳೂರು(ಫೆ.21): ಮೊದಲೇ ಹಿಜಾಬ್ ವಿವಾದದ (Hijab Row) ನಡುವೆ ಶಿವಮೊಗ್ಗದಲ್ಲಿ (Shivamogga) ಭಜರಂಗದಳ ಕಾರ್ಯಕರ್ತನ ಕಗ್ಗೊಲೆ (Murder) ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವಂತೆ ಮಾಡಿದೆ. 

ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ವಿಧಾನಸೌಧದಲ್ಲಿ ಹೇಳಿಕೆ ನೀಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah), ಕೊಲೆ (Murder) ಆರೋಪಿಗಳಿಗೆ ಗಲ್ಲು ಶಿಕ್ಷೆಯಾಗಬೇಕು. ಕೊಲೆ ಆರೋಪಿಗಳಿಗೆ ಕಠಿಣವಾದ ಶಿಕ್ಷೆಯಾಗಬೇಕು ಆಗ್ರಹಿಸಿದರು.

Latest Videos

Shivamogga ಮುಸಲ್ಮಾನ ಗೂಂಡಾಗಳು ಹಿಂದೂ ಕಾರ್ಯಕರ್ತನನ್ನು ಹತ್ಯೆ ಮಾಡಿದ್ದಾರೆ, ಈಶ್ವರಪ್ಪ ಗಂಭೀರ ಆರೋಪ

ಗೃಹ ಸಚಿವರು ಕೂಡ ಶಿವಮೊಗ್ಗ ಜಿಲ್ಲೆಯವರಾಗಿದ್ದಾರೆ. ಅವರ ಜಿಲ್ಲೆಯಲ್ಲಿ ಕೊಲೆ ಆಗಿದೆ ಅಂದರೆ ಏನು ಅರ್ಥ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಇಂತಹ ವಿಚಾರದಲ್ಲಿ ರಾಜಕಾರಣ ಮಾಡಬಾರದು. ಮೊದಲು ಆರೋಪಿಗಳನ್ನು ಬಂಧಿಸಿ. ಸುಮ್ಮನೆ ಇಲ್ಲಿ ಕುಳಿತು ಹೇಳಿಕೆಗಳನ್ನು ನೀಡಬಾರದು ಹೇಳಿದರು.

ಗೃಹ ಸಚಿವರು ರಾಜೀನಾಮೆ ನೀಡಬೇಕು ಎಂದು ಮಾತನಾಡಿದ ಸಿದ್ದರಾಮಯ್ಯ, ಅವರು ಭಂಡರು ಹೀಗಾಗಿ ರಾಜೀನಾಮೆ ಕೇಳಲು ಹೋಗಲ್ಲ. ನಮ್ಮ ಸರ್ಕಾರದಲ್ಲಿ ಕೆ.ಜೆ.ಜಾರ್ಜ್ ರಾಜೀನಾಮೆ ನೀಡಿದ್ದರು. ಸದನ ನಡೆಯಬಾರದೆಂಬ ಉದ್ದೇಶದಿಂದ ಹೇಳಿಕೆ ನೀಡಿದ್ದಾರೆ. ರಾಷ್ಟ್ರಧ್ವಜದ ಬಗ್ಗೆ ಸಚಿವ ಈಶ್ವರಪ್ಪ ಹೇಳಿಕೆ ನೀಡಿರಬಹುದು. ಅವರ ವೈಫಲ್ಯದ ಬಗ್ಗೆ ಚರ್ಚೆಯಾಗಬಾರದೆಂದು ಹೇಳಿರಬಹುದು. ಸಚಿವ ಈಶ್ವರಪ್ಪ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದಾರೆ. ಅವರು ರಾಜೀನಾಮೆ ಕೊಟ್ಟರೆ ಚರ್ಚೆ ಮಾಡುವುದಕ್ಕೆ ಸಿದ್ಧ. ಚರ್ಚೆ ಮಾಡಲು ಸಿದ್ಧರಾಗಿಲ್ಲ ಹೀಗಾಗಿ ರಾಜೀನಾಮೆ ಕೊಟ್ಟಿಲ್ಲ ಎಂದು ಕಿಡಿಕಾರಿದರು.

ಶಿವಮೊಗ್ಗ ಯುವಕನ ಕೊಲೆ ಕುರಿತು ವಿಪಕ್ಷ ಉಪನಾಯಕ ಯು.ಟಿ.ಖಾದರ್ ಪ್ರತಿಕ್ರಿಯೆ ನೀಡಿದ್ದಾರೆ. ನಿನ್ನೆಯ ಯುವಕನ ಕೊಲೆಯನ್ನ ತೀವ್ರವಾಗಿ ಖಂಡಿಸುತ್ತೇವೆ ಎಂದು ಹೇಳಿದ್ದಾರೆ.

ಹಿರಿಯ ನಾಯಕರು, ಗೃಹ ಸಚಿವರು ಇರುವ ಜಿಲ್ಲೆಯಲ್ಲಿ ಇಂತಹ ಘಟನೆ ನಡೆದಿದೆ. ಕೊಲೆಗಡುಕರನ್ನ ತಕ್ಷಣ ಪತ್ತೆ ಹಚ್ಚಬೇಕು. ಕಾನೂನು ಸುವ್ಯವಸ್ಥೆ ಕಾಪಾಡುವುದು ಸರ್ಕಾರದ ಕೆಲಸ. ಯಾರೋ ಮಾಡಿದ ತಪ್ಪಿಗೆ ಮುಗ್ಧ ಜನರಿಗೆ ಅನ್ಯಾಯ ಆಗಬಾರದು. ಕೂಡಲೇ ಕೊಲೆ ಆರೋಪಿಗಳ ಬಂಧನ ಆಗಬೇಕು ಎಂದು ಯು.ಟಿ.ಖಾದರ್ ಒತ್ತಾಯಿಸಿದ್ದಾರೆ.

ಇಂಟೆಲಿಜೆನ್ಸ್ ಇದೆ, ಇಂತಹ ಪರಿಸ್ಥಿತಿ ಬಗ್ಗೆ ಮುಂದಾಲೋಚನೆ ಇರಬೇಕು. ಬೇಗ ಆಕ್ಷ್ಯನ್ ತಗೊಬೇಕು. ಇಂತಹ ಘಟನೆ ಆಗಿರೋದು ಅತ್ಯಂತ ದುರಾದೃಷ್ಟಕರ ಎಂದಿದ್ದಾರೆ.

ಶಿವಮೊಗ್ಗದಲ್ಲಿ ನಡೆದ ಹಿಂದೂ ಕಾರ್ಯಕರ್ತನ ಕೊಲೆ ಪ್ರಕರಣದ ಲಾಭ ಪಡೆಯುವುದಕ್ಕೆ ಬೇರೆಯವರಿಗೆ ಅವಕಾಶ ನೀಡಬಾರದು. ಶಾಂತಿ ಕಾಪಾಡುವುದಕ್ಕೆ ತಕ್ಷಣ ಕ್ರಮ ತೆಗೆದುಕೊಳ್ಳಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒತ್ತಾಯಿಸಿದ್ದಾರೆ.

ಡಿಕೆ ಶಿವಕುಮಾರ್ ಪ್ರತಿಕ್ರಿಯೆ
ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಕುವೆಂಪು ಅವರು ಕರ್ನಾಟಕವನ್ನು ಸರ್ವ ಜನಾಂಗದ ಶಾಂತಿಯ ತೋಟ ಎಂದು ಕರೆದಿದ್ದಾರೆ. ಶಾಂತಿ ಸುವ್ಯವಸ್ಥೆ ಕದಡುವುದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು ಹೇಳಿದರು.

ಘಟನೆಗೆ ಸಂಬಂಧಪಟ್ಟಂತೆ ಸ್ಥಳೀಯ ನಾಯಕರಿಂದ ಮಾಹಿತಿ ಪಡೆದಿದ್ದೇನೆ. ತಕ್ಷಣ ಸೆಕ್ಷನ್ 144 ಜಾರಿಗೊಳಿಸಬೇಕು, ತಪ್ಪಿತಸ್ಥರನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.

ರಾಜೀನಾಮೆಗೆ ಆಗ್ರಹ : ಘಟನೆಗೆ ಸಂಬಂಧಪಟ್ಟಂತೆ ಗೃಹ ಸಚಿವ ಆರಗ‌ ಜ್ಞಾನೇಂದ್ರ ರಾಜೀನಾಮೆ ನೀಡಬೇಕು ಎಂದು ಶಾಸಕ ಪ್ರಿಯಾಂಕ ಖರ್ಗೆ ಆಗ್ರಹಿಸಿದ್ದಾರೆ.

ಗೃಹ ಸಚಿವರ ತವರು ಜಿಲ್ಲೆಯಲ್ಲಿ ಪದೇ ಪದೇ ಇಂಥ ಘಟನೆಗಳು ನಡೆಯುತ್ತಿವೆ. ಇದು ಗುಪ್ತಚರ ವ್ಯವಸ್ಥೆಯ ವೈಫಲ್ಯ ಎಂದು ಆರೋಪಿಸಿದ್ದಾರೆ.

ಪ್ರಕರಣ
ಹಿಂದೂಪರ ಕಾರ್ಯಕರ್ತ (Hindu Activits) ಹರ್ಷ ಎಂಬಾತನನ್ನು ಅಪರಿಚಿತ ದುರ್ಷರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ ಘಟನೆ ತೀರ್ಥಹಳ್ಳಿ ರಸ್ತೆಯ ಭಾರತಿ ಕಾಲೋನಿಯಲ್ಲಿ ನಡೆದಿದೆ. ಘಟನೆಯಿಂದಾಗಿ ನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಎರಡು ಕಡೆ ಕಲ್ಲುತೂರಾಟ ನಡೆದ ಘಟನೆಯೂ ವರದಿಯಾಗಿದೆ. ಈ ವೇಳೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಗುಂಪು ಚದುರಿಸಿದ್ದಾರೆ.

ಮುನ್ನೆಚ್ಚರಿಕಾ ಕ್ರಮವಾಗಿ ನಗರ ವ್ಯಾಪ್ತಿಯಲ್ಲಿ ಸೋಮವಾರ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದ್ದು, ಈಗಾಗಲೇ ಜಾರಿಯಲ್ಲಿದ್ದ 144 ಸೆಕ್ಷನ್‌ ಅನ್ನು ಮತ್ತೆರಡು ದಿನ ವಿಸ್ತರಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಸುದ್ದಿ ತಿಳಿಯುತ್ತಿದ್ದಂತೆ  ಮೆಗ್ಗಾನ್‌ ಆಸ್ಪತ್ರೆ ಎದುರು ನೂರಾರು ಮಂದಿ ಜಮಾಯಿಸಿದ್ದು, ಈ ವೇಳೆ ಕೆಲವರು ಆಸ್ಪತ್ರೆಯ ಮೇಲೆ ಕಲ್ಲು ತೂರಿದ್ದಾರೆ. ಇದರಿಂದ ಆಸ್ಪತ್ರೆ ಗಾಜುಗಳಿಗೆ ಹಾನಿಯಾಗಿದೆ.

ಕಲ್ಲುತೂರಾಟ-ಘಟನೆ ಬೆನ್ನಲ್ಲೇ ನಗರದ ರವಿವರ್ಮ ಬೀದಿ ಮತ್ತು ಆಜಾದ್‌ ನಗರದಲ್ಲಿ ಕಲ್ಲುತೂರಾಟದ ಘಟನೆ ವರದಿಯಾಗಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಗುಂಪು ಚದುರಿಸಿದ್ದಾರೆ. ಈ ಮಧ್ಯೆ, ನಗರದ ಎಲ್ಲೆಡೆ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.

click me!