
ತ್ರಿಪುರಾ(ಮಾ.02): ತ್ರಿಪುರಾ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಬಿಜೆಪಿ 33 ಸ್ಥಾನ ಗೆದ್ದು ತ್ರಿಪುರಾದಲ್ಲಿ ಸರ್ಕಾರ ರಚಿಸುವತ್ತ ದಾಪುಗಾಲಿಟ್ಟಿದೆ. ಬಿಜೆಪಿ ಸ್ಪಷ್ಟ ಬಹುಮತ ಪಡೆಯುವ ಮೂಲಕ ಅಧಿಕಾರದ ಗದ್ದುಗೆಗೆ ಏರಿದೆ. ಆದರೆ ತ್ರಿಪುರಾದಲ್ಲಿ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಸ್ಥಳೀಯ ಪಕ್ಷಗಳಿಗೆ 2 ವರ್ಷದ ಕೂಸು ಬೆವರಿಳಿಸಿದೆ. ಹೌದು, ರಾಯಲ್ ಕುಡಿ ಪ್ರಗ್ಯೋತ್ ಕಿಶೋರ್ ಮಾಣಿಕ್ಯ ದೆಬ್ಬರಮ ಹುಟ್ಟು ಹಾಕಿದ ಹೊಸ ಪಕ್ಷ ತಿಪ್ರ ಮೋಥಾ ಅಭೂತಪೂರ್ವ ಸಾಧನೆ ಮಾಡಿದೆ. 2 ವರ್ಷದ ಹಿಂದೆ ದೆಬ್ಬರಮ ತಿಪ್ರ ಮೋಥಾ ಪಾರ್ಟಿ ಆರಂಭಿಸಿದ್ದರು. ಈ ಬಾರಿಯ ವಿಧಾನಸಭಾ ಚುನಾವಣೆ ಮೊದಲ ಚುನಾವಣೆ. ಆದರೆ ಮೊದಲ ಪ್ರಯತ್ನದಲ್ಲಿ ತಿಪ್ರ ಮೋಥಾ ಪಾರ್ಟಿ 13 ಸ್ಥಾನ ಗೆದ್ದುಕೊಂಡಿದೆ. ತ್ರಿಪುರಾದಲ್ಲಿ ವಿಪಕ್ಷ ಸ್ಥಾನದ ಅರ್ಹತೆ ಪಡೆದುಕೊಂಡಿದೆ. ಬಿಜೆಪಿ ಅಧಿಕಾರ ರಚಿಸಿದೆ ಎಂದು ಬೀಗುವಂತಿಲ್ಲ. ಕಾರಣ ವರ್ಷಗಳ ಹಿಂದೆ ಹುಟ್ಟಿದ ಪಾರ್ಟಿ 13 ಸ್ಥಾನ ಬಾಚಿಕೊಳ್ಳುವ ಮೂಲಕ ಎಲ್ಲಾ ಪಕ್ಷಗಳಿಗೆ ಸ್ಪಷ್ಟ ಸೂಚನೆ ನೀಡಿದೆ. ಒಂದು ಸಣ್ಣ ಎಡವಟ್ಟಾದರೂ ತಿಪ್ರ ಮೋಥಾ ಪಾರ್ಟಿ ಮುಂದಿನ ಚುನಾವಣೆಗಳಲ್ಲಿ ಅಧಿಕಾರಕ್ಕೇರುವ ಸೂಚನೆ ನೀಡಿದೆ.
ತಿಪ್ರ ಮೋಥಾ ಪಾರ್ಟಿ ಬಿಜೆಪಿ ಹಾಗೂ ಸಿಎಂಪಿ ಜೊತೆ ಯಾವುದೇ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಚುನಾವಣೆಗೂ ಮೊದಲೇ ಸ್ಪಷ್ಟಪಡಿಸಿತ್ತು. ಏಕಾಂಗಿಯಾಗಿ ಚುನಾವಣಾ ಆಖಾಡಕ್ಕೆ ಇಳಿದಿತ್ತು. ತ್ರಿಪುರಾದ ಬುಡಕಟ್ಟು ಜನರ ಧ್ವನಿಯಾಗಿ ಪಾರ್ಟಿ ಕೆಲಸ ಮಾಡಿತ್ತು. ಇದೀಗ 2ನೇ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಚುನಾವಣೆಗೂ ಮೊದಲು ತಿಪ್ರ ಮೋಥಾ ಪಾರ್ಟಿ ಕಿಂಗ್ ಮೇಕರ್ ಆಗಲಿದೆ ಅನ್ನೋ ಮಾತುಗಳಿಗೆ ದೆಬ್ಬರಮ ಖಡಕ್ ತಿರುಗೇಟು ನೀಡಿದ್ದರು. ಕಿಂಗ್ ಮೇಕರ ಅಲ್ಲ, ನಾವು ಸರ್ಕಾರ ರಚಿಸುವ ವಿಶ್ವಾಸವಿದೆ ಎಂದಿದ್ದರು. ತಿಪ್ರಾ ಮೋಥಾ ಪಾರ್ಟಿ ಅದ್ವಿತೀಯ ಸಾಧನೆ ಮಾಡಿದೆ.
ಮೆಘಾಲಯದಲ್ಲೂ ಬಿಜೆಪಿ ಸರ್ಕಾರ, ಅಮಿತ್ ಶಾಗೆ ಕರೆ ಮಾಡಿ ಬೆಂಬಲ ಕೇಳಿದ 26 ಸ್ಥಾನ ಗೆದ್ದ NPP!
ತ್ರಿಪುರಾದಲ್ಲಿ ಬಿಜೆಪಿ ಅಬ್ಬರಕ್ಕೆ ಕಾಂಗ್ರೆಸ್, ಸಿಪಿಎಂ ಪಕ್ಷದಳು ಧೂಳೀಪಟವಾಗಿದೆ. ಕಾಂಗ್ರೆಸ್ ಹಾಗೂ ಎಡರಂಗ ಪಕ್ಷಗಳ ಮೈತ್ರಿ 14 ಸ್ಥಾನ ಗೆದ್ದುಕೊಂಡಿದೆ. ಆದರೆ ತಿಪ್ರ ಮೋಥಾ ಪಾರ್ಟಿ ಏಕಾಂಗಿಯಾಗಿ 13 ಸ್ಥಾನ ಗೆದ್ದುಕೊಂಡಿದೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಏಕಾಂಗಿಯಾಗಿ 36 ಸ್ಥಾನ ಗೆದ್ದುಕೊಂಡಿತ್ತು. ಈ ಬಾರಿ ಬಿಜೆಪಿಯ ಪ್ರಮುಖ ಸ್ಥಾನಗಳನ್ನು ತಿಪ್ರಾ ಮೋಥಾ ಪಾರ್ಟಿ ಕೈವಶ ಮಾಡಿದೆ.
ಚುನಾವಣೋತ್ತರ ಸಮೀಕ್ಷೆಯಲ್ಲಿ ಬಹುತೇಕ ವರದಿಗಳು ಬಿಜೆಪಿ ಸ್ಪಷ್ಟಬಹುಮತ ಪಡೆಯಲಿದೆ ಎಂದು ಸೂಚಿಸಿತ್ತು. ತ್ರಿಪುರಾದಲ್ಲಿ ಬಿಜೆಪಿ ಬಹುಮತ ಪಡೆಯಬಹುದು ಅಥವಾ ಅದರ ಅಂಚಿಗೆ ಬಂದು ನಿಲ್ಲಬಹುದು. ಬಿಜೆಪಿ ಇಲ್ಲಿ 27ರಿಂದ 40 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬಹುದು’ ಎಂದು ಜನ್ ಕೀ ಬಾತ್, ಝೀ ನ್ಯೂಸ್, ಟೈಮ್ಸ್ ನೌ ಮತ್ತು ಇಂಡಿಯಾ ಟುಟೇ ಸಮೀಕ್ಷೆಗಳು ಹೇಳಿವೆ. ಇನ್ನು ಕಾಂಗ್ರೆಸ್ ಒಂದೂ ಸ್ಥಾನದಲ್ಲಿ ಜಯಗಳಿಸುವುದು ಅನುಮಾನ ಎಂದು 3 ಸಮೀಕ್ಷೆಗಳು ಹೇಳಿದ್ದು, ಎಡಪಕ್ಷಗಳು 10ರಿಂದ 20 ಸ್ಥಾನಗಳಲ್ಲಿ ಜಯಗಳಿಸಬಹುದು ಎಂದು ಅಂದಾಜಿಸಿತ್ತು. ಇದೀಗ ಸಮೀಕ್ಷಾ ವರದಿ ಪ್ರಕಾರ, ಬಿಜೆಪಿ ಜಯಭೇರಿ ಬಾರಿಸಿದೆ.
ನಾಗಾಲ್ಯಾಂಡ್‌ನ ಮೊದಲ ಮಹಿಳಾ ಶಾಸಕಿ, ಇತಿಹಾಸ ರಚಿಸಿದ ಬಿಜೆಪಿ ಮೈತ್ರಿಕೂಟದ ಹೆಕಾನಿ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.