ವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆ ಬಂಡಾಯದ ಬಿಸಿ ಜೋರಾಗಿದೆ. ಹಿರಿಯ ನಾಯಕ ಕೆಎಸ್ ಈಶ್ವರಪ್ಪ ರಾಜೀನಾಮೆ ಬೆನ್ನಲ್ಲೇ ಬಿಜೆಪಿಯಲ್ಲಿ ಸಂಕಷ್ಟಗಳ ಸರಮಾಲೆ ಶುರುವಾಗಿದೆ. ಈಶ್ವರಪ್ಪ ರಾಜೀನಾಮೆಯಿಂದ ಇದೀಗ ಶಿವಮೊಗ್ಗ ಮಹಾನಗರ ಪಾಲಿಕೆಯ 19 ಸದಸ್ಯರು ರಾಜೀನಾಮೆ ಘೋಷಿಸಿದ್ದಾರೆ.
ಶಿವಮೊಗ್ಗ(ಏ.12): ಕರ್ನಾಟಕ ವಿಧಾನಸಭಾ ಚುನಾವಣೆ ಬಿಜೆಪಿ 189 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಆದರೆ ಬಿಜೆಪಿ ಟಿಕೆಟ್ ವಿಚಾರ ಇದೀಗ ಬಿಜೆಪಿಯಲ್ಲಿ ಬಂಡಾಯದ ಬಾವುಟ ಜೋರಾಗಿದೆ. ಪಕ್ಷದ ಹಿರಿಯ ನಾಯರ ಕೆಎಸ್ ಈಶ್ವರಪ್ಪ ರಾಜೀನಾಮೆ ಘೋಷಣೆ ಬೆನ್ನಲ್ಲೇ ಹಲವು ಹಿರಿಯ ನಾಯಕರು ಪಕ್ಷ ತೊರೆಯುತ್ತಿದ್ದಾರೆ. ಲಕ್ಷ್ಮಣ್ ಸವದಿ ಬೆನ್ನಲ್ಲೇ ಆರ್ ಶಂಕರ್ ಬಿಜೆಪಿ ತೊರೆದಿದ್ದಾರೆ. ಇತ್ತ ಈಶ್ವರಪ್ಪ ರಾಜೀಮಾಮೆ ಎಫೆಕ್ಟ್ ಇಷ್ಟಕ್ಕೆ ನಿಂತಿಲ್ಲ. ರಾಜೀನಾಮೆಯಿಂದ ಬೇಸತ್ತು, ಶಿವಮೊಗ್ಗ ಮಹಾನಗರ ಪಾಲಿಕೆಯ 19 ಸದಸ್ಯರು ದಿಢೀರ್ ರಾಜೀನಾಮೆ ಘೋಷಿಸಿದ್ದಾರೆ. ಶಿವಮೊಗ್ಗ ನಗರ ಬಿಜೆಪಿ ಅಧ್ಯಕ್ಷಕರು ಹಾಗೂ ಜಿಲ್ಲಾಧ್ಯಕ್ಷರಿಗೆ ರಾಜೀನಾಮೆ ಪತ್ರ ನೀಡಿದ್ದಾರೆ.
ಮಾಜಿ ಸಚಿವ ಈಶ್ವರಪ್ಪನವರಿಗೆ ಟಿಕೆಟ್ ನಿರಾಕರಿಸಿದ ಕಾರಣ ಈಶ್ವರಪ್ಪ ರಾಜೀನಾಮೆ ನೀಡಿದ್ದಾರೆ. ಪಕ್ಷದ ಸೂಚನೆಯಂತೆ ನಡೆದುಕೊಂಡಿದ್ದಾರೆ. ಆದರೆ ಕರ್ನಾಟಕದಲ್ಲಿ ಬಿಜೆಪಿ ಪಕ್ಷ ಕಟ್ಟಿದ ಹಿರಿಯ ನಾಯಕರಿಗೆ ಬಿಜೆಪಿ ಹೈಕಮಾಂಡ್ ದ್ರೋಹ ಮಾಡಿದೆ ಎಂದು ಪಾಲಿಗೆ ಸದಸ್ಯರು ಆರೋಪಿಸಿದ್ದಾರೆ. ಹೀಗಾಗಿ ರಾಜೀನಾಮೆ ನೀಡಿರುವುದಾಗಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
undefined
ಆಕ್ರೋಶಗೊಂಡ ಕಾರ್ಯಕರ್ತರಿಗೆ ರಾಜೀನಾಮೆ ಹಿಂದಿನ ಅಸಲಿ ಸತ್ಯ ವಿವರಿಸಿದ ಈಶ್ವರಪ್ಪ!
ಕರ್ನಾಟಕದಲ್ಲಿ ಬಿಜೆಪಿ ಪಕ್ಷವನ್ನು ಹುಟ್ಟು ಹಾಕಿ, ರಾಜ್ಯದಲ್ಲಿ ಪಕ್ಷವನ್ನು ಈ ಮಟ್ಟಕ್ಕೆ ಬೆಳೆಯಲು ಕಾರಣರಾಜ ಮಹನೀಯರಲ್ಲಿ ಬಿಎಸ್ ಯಡಿಯೂರಪ್ಪ, ದಿವಂಗತ ಅನಂತ್ ಕುಮಾರ್ ಹಾಗೂ ಕೆಎಸ್ ಈಶ್ವರಪ್ಪನ ಅಗ್ರಮಾನ್ಯರು. ಈಶ್ವರಪ್ಪ ತಮ್ಮದೇ ವ್ಯಕ್ತಿತ್ವ ಹಾಗೂ ವರ್ಚಸ್ಸಿನ ಮೂಲಕ ಇಡೀ ರಾಜ್ಯಾದ್ಯಂತ ಪಕ್ಷವನ್ನು ಸಂಘಟಿಸಿದ್ದಾರೆ. ಶಿವಮೊಗ್ಗ ನಗರದ ಶಾಸಕರಾಗಿ, ರಾಜ್ಯ ಸರ್ಕಾರದ ಸಚಿವರಾಗಿ ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಈ ಜನಪ್ರಿಯ ನಾಯಕರನ್ನು ವಯಸ್ಸಿನ ಕಾರಣ ಶಿವಮೊಗ್ಗ ನಗರ ಕ್ಷೇತ್ರದಿಂದ ಸ್ಪರ್ಧಿಸದಂತೆ ಸೂಚಿಸಿ ಬಿಜೆಪಿ ಹೈಕಮಾಂಡ್ ರಾಜೀನಾಮೆ ಪತ್ರವನ್ನು ಪಡೆದಿದ್ದಾರೆ. ಕೇಂದ್ರದ ಬಿಜೆಪಿ ವರಿಷ್ಠರ ನಿರ್ಧಾರ ಆತಂಕಕಾರಿಯಾಗಿದೆ. ಇದೇ ವಯಸ್ಸಿನ ಬೇರೆ ನಾಯಕರಿಗೆ ಇತರ ಕ್ಷೇತ್ರದಲ್ಲಿ ಸ್ಪರ್ಧಿಸಲು ಅವಕಾಶ ನೀಡಿದ್ದಾರೆ. ಆದರೆ ಈಶ್ವರಪ್ಪನವರಿಗೆ ಟಿಕೆಟ್ ನಿರಾಕರಿಸಲಾಗಿದೆ. ನಮ್ಮಂತ ನಾಯಕರನ್ನು ಗುರುತಿಸಿ ಬೆಳೆಸಿದ ಸಂಪೂರ್ಣ ಶ್ರೇಯಸ್ಸು ಈಶ್ವರಪ್ಪನವರಿಗೆಸಲ್ಲುತ್ತದೆ. ಬಿಜೆಪಿ ಹೈಕಮಾಂಡ್ ಅನಿರೀಕ್ಷಿತ ನಡೆಯನ್ನು ವಿರೋಧಿಸಿ ಶಿವಮೊಗ್ಗ ಮಹಾನಗರ ಪಾಲಿಕೆ ಸದಸ್ಯತ್ವಕ್ಕೆ ರಾಜೀನಾಮೆ ಘೋಷಿಸುತ್ತಿದ್ದೇವೆ ಎಂದು 19 ಬಿಜೆಪಿ ನಾಯಕರು ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.
ಮಹಾನಗರ ಪಾಲಿಕೆಯ ಮೇಯರ್ ಶಿವಕುಮಾರ್ , ಉಪಮೇಯರ್ ಲಕ್ಷ್ಮಿ ಶಂಕರ್ ನಾಯಕ್ ಸೇರಿದಂತೆ 19 ಪಾಲಿಕೆ ಸದಸ್ಯರಿಂದ ರಾಜೀನಾಮೆ ಪತ್ರಕ್ಕೆ ಸಹಿ ಹಾಕಿ ನೀಡಿದ್ದಾರೆ. ಇದೇ ವೇಳೆ ಈಶ್ವರಪ್ಪನವರಿಗೆ ಟಿಕೆಟ್ ನೀಡುವಂತೆ ಆಗ್ರಹಿಸಿದ್ದಾರೆ. ಇದೀಗ ಈಶ್ವರಪ್ಪ ರಾಜೀನಾಮೆ ವಿಚಾರ ಭಾರಿ ಕೋಲಾಹಲ ಸೃಷ್ಟಿಸಿದೆ. ಈಗಾಗಲೇ ಈಶ್ವರಪ್ಪ ಕಾರ್ಯಕರ್ತರು, ಬೆಂಬಲಿಗರಿಗೆ ಸಮಾಧಾನ ಪಡಿಸುವ ಕಾರ್ಯವನ್ನೂ ಮಾಡಿದ್ದಾರೆ. ಆದರೆ ಬೆಂಬಲಿಗರು ಸುಮ್ಮನಾಗಿಲ್ಲ. ಟೈಯರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದಾರೆ.
ಟಿಕೆಟ್ ಘೋಷಣೆ ಮುನ್ನ ವಿಕೆಟ್ ಪತನ, ಆಲೌಟ್ ಲಕ್ಷಣ: ಈಶ್ವರಪ್ಪ ರಾಜೀನಾಮೆಗೆ ಬಿಜೆಪಿ ಕುಟುಕಿದ ಡಿಕೆಶಿ!
ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಲ್ಲಿ 34 ವರ್ಷಗಳಿಂದ ಸ್ಪರ್ಧಿಸಿ ಸೋಲು-ಗೆಲುವುಗಳ ಮೂಲಕ ಬಿಜೆಪಿಗೆ ಮತ್ತು ತಮ್ಮ ವರ್ಚಸ್ಸಿಗೆ ಭದ್ರ ಬುನಾದಿ ಹಾಕಿದ್ದ ಈಶ್ವರಪ್ಪ ಮಂಗಳವಾರ ಮಧ್ಯಾಹ್ನ ಯಾರಿಗೂ ಸುಳಿವು ನೀಡದೆ ನೇರವಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಪತ್ರ ಬರೆದು ತಮ್ಮ ಚುನಾವಣಾ ನಿವೃತ್ತಿ ಪ್ರಕಟಿಸಿದ್ದರು. ಒಂದೇ ನಿಮಿಷದಲ್ಲಿ ನಾನು ಪಕ್ಷೇತರನಾಗಿ ಸ್ಪರ್ಧಿಸುತ್ತೇನೆ ಎಂದು ಹೇಳಬಹುದು. ಆದರೆ ಯಾವ ತಾಯಿ ನಮ್ಮನ್ನು ಸಾಕಿ ಸಲಹಿದಳೋ ಅವಳಿಗೆ ದ್ರೋಹ ಬಗೆಯಬಾರದು. ನಮಗೂ ನೋವಾಗುತ್ತದೆ. ಆದರೆ ಪಕ್ಷ ತೆಗೆದುಕೊಂಡ ತೀರ್ಮಾನ ಅದು. ಜಗದೀಶ್ ಶೆಟ್ಟರ್ ಕೂಡ ಪಕ್ಷೇತರರಾಗಿ ನಿಲ್ಲುವ ಬಗ್ಗೆ ಹೇಳಿಕೆ ನೀಡಿದ್ದು ಸರಿಯಲ್ಲ. ಪಕ್ಷ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದೆ, ಹಾಗಾಗಿ ಪಕ್ಷದ ಜತೆಗೆ ನಿಲ್ಲಬೇಕು ಎಂದು ಹಿರಿಯರು ತಿಳಿ ಹೇಳುತ್ತಾರೆ. ಕಾರ್ಯಕರ್ತರು ಏನೇ ಸರ್ಕಸ್ ಮಾಡಿದರೂ ಚುನಾವಣೆಯಲ್ಲಿ ನಾನು ಸ್ಪರ್ಧಿಸಲ್ಲ ಎಂದರು.