ಭಾರಿ ಮಳೆಗೆ ಕರ್ನಾಟಕದಲ್ಲಿ 127 ಜನ ಬಲಿ: ಸಚಿವ ಅಶೋಕ್‌ರಿಂದ ಮಾಹಿತಿ

By Govindaraj S  |  First Published Sep 20, 2022, 3:30 AM IST

ಜುಲೈ ತಿಂಗಳಿನಿಂದ ಸೆ.12ರ ಅವಧಿಯಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದ್ದು, ಅತಿವೃಷ್ಟಿ, ಪ್ರವಾಹ ಮತ್ತು ಭೂಕುಸಿತದಿಂದಾಗಿ ರಾಜ್ಯದಲ್ಲಿ 127 ಮಂದಿ ಸಾವನ್ನಪ್ಪಿದ್ದಾರೆ. 1289 ಜಾನುವಾರುಗಳ ಸಾವಾಗಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಮಾಹಿತಿ ನೀಡಿದ್ದಾರೆ.


ವಿಧಾನಸಭೆ (ಸೆ.20): ಜುಲೈ ತಿಂಗಳಿನಿಂದ ಸೆ.12ರ ಅವಧಿಯಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದ್ದು, ಅತಿವೃಷ್ಟಿ, ಪ್ರವಾಹ ಮತ್ತು ಭೂಕುಸಿತದಿಂದಾಗಿ ರಾಜ್ಯದಲ್ಲಿ 127 ಮಂದಿ ಸಾವನ್ನಪ್ಪಿದ್ದಾರೆ. 1289 ಜಾನುವಾರುಗಳ ಸಾವಾಗಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಮಾಹಿತಿ ನೀಡಿದ್ದಾರೆ. ಸೋಮವಾರ ಅತಿವೃಷ್ಟಿಕುರಿತ ಚರ್ಚೆಗೆ ಉತ್ತರ ನೀಡಿದ ಅವರು, ತೀವ್ರತರ ಮಳೆಯಿಂದಾಗಿ ರಾಜ್ಯದಲ್ಲಿ 45,465 ಮನೆಗಳು ಹಾನಿಗೀಡಾಗಿವೆ. ಈ ಪೈಕಿ ಸುಮಾರು 2438 ಮನೆಗಳು ಸಂಪೂರ್ಣ ಹಾನಿಯಾಗಿದ್ದು, 14976 ಮನೆಗಳ ತೀವ್ರ ಹಾನಿ ಮತ್ತು 28,051 ಮನೆಗಳು ಭಾಗಶಃ ಹಾನಿಯಾಗಿವೆ. 

ಕೃಷಿ ಭೂಮಿಯಲ್ಲಿ ಹೆಚ್ಚಿನ ತೇವಾಂಶ, ವಾರಗಟ್ಟಲೆ ನಿಂತ ನೀರು ಮತ್ತು ಪ್ರವಾಹದಿಂದ 8,91,187 ಹೆಕ್ಟೇರ್‌ ಪ್ರದೇಶದಲ್ಲಿ ಕೃಷಿ ಬೆಳೆ ಹಾನಿ ಮತ್ತು ಸುಮಾರು 1,03,254 ಹೆಕ್ಟೇರ್‌ ಪ್ರದೇಶದಲ್ಲಿ ತೋಟಗಾರಿಕೆ ಬೆಳೆಗಳ ನಷ್ಟವಾಗಿದೆ ಎಂದು ವಿವರಿಸಿದರು. ಪ್ರವಾಹ ಪರಿಸ್ಥಿತಿಯಿಂದಾಗಿ 27,648 ಕಿ.ಮೀ. ಉದ್ದದ ರಸ್ತೆ, 2325 ಸೇತುವೆ, 8627 ಶಾಲಾ ಕೊಠಡಿಗಳು, 269 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 5194 ಅಂಗನವಾಡಿ ಕೇಂದ್ರಗಳು ಮತ್ತು ಗ್ರಾಮಪಂಚಾಯಿತಿಗಳ ಆಸ್ತಿಗಳಿಗೆ ಹಾನಿಯಾಗಿದೆ. ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ವಿದ್ಯುತ್‌ ಸಂಪರ್ಕಗಳು ಭಾರೀ ಪ್ರಮಾಣದಲ್ಲಿ ಹಾನಿಯಾಗಿದ್ದು, ಸುಮಾರು 33,475 ವಿದ್ಯುತ್‌ ಕಣಬಗಳು, 3508 ಟ್ರಾನ್ಸ್‌ಫಾರ್ಮರ್‌ಗಳು ಹಾನಿಗೊಂಡಿದ್ದು ಮತ್ತು 4136 ಕಿ.ಮೀ. ಉದ್ದದ ವಿದ್ಯುತ್‌ ಸಂಪರ್ಕದ ತಂತಿ ಹಾಳಾಗಿದೆ. 

Tap to resize

Latest Videos

ದೇವೇಗೌಡರ ಮನೆಗೆ ಅಶೋಕ್‌: ಫೋನ್‌ನಲ್ಲಿ ಸಿಎಂ ಬೊಮ್ಮಾಯಿ ಕೂಡ ಮಾತು

ಕಳೆದ 50 ವರ್ಷದಲ್ಲಿಯೇ ಅತಿ ಹೆಚ್ಚು ಮಳೆಯಾಗಿದ್ದು, ದಾಖಲೆಯ ಇತಿಹಾಸವಾಗಿದೆ ಎಂದ ಅವರು, 2022ನೇ ಸಾಲಿನಲ್ಲಿ 5.80 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಮೊದಲ ಹಂತದಲ್ಲಿ 1,04,006 ರೈತರ ಬ್ಯಾಂಕ್‌ ಖಾತೆಗೆ 116.39 ಕೋಟಿ ರು. ಪರಿಹಾರ ತಂತ್ರಾಂಶದ ಮೂಲಕ ನೇರವಾಗಿ ಜಮೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಕಳೆದ ನಾಲ್ಕು ವರ್ಷದಲ್ಲಿ ಒಟ್ಟು 50, 14,649 ಹೆಕ್ಟೇರ್‌ ಬೆಳೆ ಹಾನಿಯಾದ 38,31, 749 ರೈತರ ಬ್ಯಾಂಕ್‌ ಖಾತೆಗೆ 4,736.37 ಕೋಟಿ ರು. ಪರಿಹಾರ ಜಮೆ ಮಾಡಲಾಗಿದೆ ಎಂದು ಹೇಳಿದರು.

ಒತ್ತುವರಿ ತೆರವಿಗೆ ಹಲವಾರು ಅಡ್ಡಿ:  ಶ್ರೀಮಂತರು, ಐಟಿ ಬಿಟಿ ಕಂಪನಿಗಳು ಮಾಡಿರುವ ಒತ್ತುವರಿ ತೆರವಿಗೆ ಕಾಂಗ್ರೆಸ್‌ನವರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ, ಬಡವರು ಮಾಡಿರುವ ಒತ್ತುವರಿ ತೆರವು ಮಾಡಿದರೆ ಮಾಧ್ಯಮಗಳು ಹಿಂದೆ ಬೀಳುತ್ತಿವೆ. ಹೀಗಾಗಿ ಬೆಂಗಳೂರಿನಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸುವುದು ಸರ್ಕಾರಕ್ಕೆ ದೊಡ್ಡ ಸಮಸ್ಯೆಯಾಗಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಅಸಹಾಯಕತೆ ತೋಡಿಕೊಂಡ ಘಟನೆ ಶುಕ್ರವಾರ ನಡೆಯಿತು.

ಮಳೆ ಹಾನಿ ವಿಚಾರ ಕುರಿತು ಚರ್ಚೆಯಲ್ಲಿ ಮಾತನಾಡಿದ ಜೆಡಿಎಸ್‌ ಸದಸ್ಯ ಎ.ಟಿ.ರಾಮಸ್ವಾಮಿ ಅವರು, ಹಿಂದಿನಿಂದಲೂ ಎಲ್ಲಾ ಸರ್ಕಾರಗಳೂ ಬೆಂಗಳೂರಲ್ಲಿ ಮಳೆ ಬಂದಾಗ ಮಾತ್ರ ಯಾವುದೇ ಪ್ರಭಾವ, ಒತ್ತಡಕ್ಕೆ ಒಳಗಾಗದೆ ಎಲ್ಲ ಒತ್ತುವರಿಗಳನ್ನೂ ನಿರ್ದಾಕ್ಷಿಣ್ಯವಾಗಿ ತೆರವು ಮಾಡುವುದಾಗಿ ಹೇಳುತ್ತವೆ. ಮೂರ್ನಾಲ್ಕು ದಿನ ತೆರವು ಮಾಡಿ ಆ ಮೇಲೆ ಸುಮ್ಮನಾಗುತ್ತವೆ. ಈಗಿನ ಸರ್ಕಾರ ಹಾಗೆ ಮಾಡಬಾರದು. ಎಲ್ಲ ಒತ್ತುವರಿಗಳನ್ನೂ ಪೂರ್ಣ ಪ್ರಮಾಣದಲ್ಲಿ ತೆರವು ಮಾಡಬೇಕು ಎಂದು ಆಗ್ರಹಿಸಿದರು.

Lake Encroachment: ಅಧಿವೇಶನದಲ್ಲೇ ಕೆರೆ ನುಂಗಣ್ಣರ ಪಟ್ಟಿ ಬಿಡುಗಡೆ ಮಾಡುವೆ: ಸಚಿವ ಅಶೋಕ್‌

ಈ ವೇಳೆ, ಮಧ್ಯಪ್ರವೇಶಿಸಿದ ಸಚಿವ ಅಶೋಕ್‌ ಅವರು, ಕಾಂಗ್ರೆಸ್‌ನ ರಾಮಲಿಂಗಾರೆಡ್ಡಿ ಅವರು ಗುರುವಾರ ಸದನದಲ್ಲಿ ಆಡಿ ಮಾತುಗಳನ್ನು ಉಲ್ಲೇಖಿಸಿ ಕಾಂಗ್ರೆಸ್‌ನವರು ಐಟಿ ಬಿಟಿಯವರ ಮೇಲೆ ಏಕೆ ನಿಮ್ಮ ಕಣ್ಣು ಅಂತಾರೆ. ಶ್ರೀಮಂತರು ಮಾಡಿರುವ ಒತ್ತವರಿ ತೆರವಿಗೆ ವಿರೋಧ ವ್ಯಕ್ತವಾಗುತ್ತದೆ. ಬಡವರ ಒತ್ತುವರಿ ತೆರವು ಮಾಡಲು ಹೋದರೆ ಮಾಧ್ಯಮಗಳು ಹಿಂದೆ ಬೀಳುತ್ತಿವೆ. ಸರ್ಕಾರಕ್ಕೆ ಒತ್ತುವರಿ ತೆರವು ಕಾರ್ಯಾಚರಣೆ ದೊಡ್ಡ ಸಮಸ್ಯೆಯಾಗಿದೆ ಎಂದರು.

click me!