ಪದಕ ಎಸೆತ ಕೈಬಿಟ್ಟ ಕುಸ್ತಿಪಟುಗಳು: ಈ ಕಾರಣಕ್ಕೆ ನದಿಗೆ ಪದಕ ಎಸೆದಿದ್ದ ಪ್ರಖ್ಯಾತ ಬಾಕ್ಸರ್‌ ಮುಹಮ್ಮದ್‌ ಅಲಿ!

Published : May 31, 2023, 03:22 PM IST
ಪದಕ ಎಸೆತ ಕೈಬಿಟ್ಟ ಕುಸ್ತಿಪಟುಗಳು: ಈ ಕಾರಣಕ್ಕೆ ನದಿಗೆ ಪದಕ ಎಸೆದಿದ್ದ ಪ್ರಖ್ಯಾತ ಬಾಕ್ಸರ್‌ ಮುಹಮ್ಮದ್‌ ಅಲಿ!

ಸಾರಾಂಶ

1960ರ ದಶಕದಲ್ಲಿ ಅಮೆರಿಕದಲ್ಲಿ ನಡೆಯುತ್ತಿದ್ದ ವರ್ಣ ತಾರತಮ್ಯವನ್ನು ಖಂಡಿಸಿ ಜಗತ್ತಿನ ಬಾಕ್ಸಿಂಗ್‌ ದಂತಕತೆ ಮುಹಮ್ಮದ್‌ ಅಲಿ ತಮ್ಮ ಒಲಿಂಪಿಕ್ಸ್‌ ಚಿನ್ನದ ಪದಕವನ್ನು ಓಹಿಯೋ ನದಿಗೆ ಎಸೆದು ಪ್ರತಿಭಟನೆ ನಡೆಸಿದ್ದರು.

ಓಹಿಯೋ (ಅಮೆರಿಕ /  ಹರಿದ್ವಾರ (ಉತ್ತರಾಖಂಡ) (ಮೇ 31, 2023): ಭಾರತೀಯ ಕುಸ್ತಿ ಫೆಡರೇಶನ್‌ ಅಧ್ಯಕ್ಷ ಬ್ರಿಜ್‌ಭೂಷಣ್‌ ಸಿಂಗ್‌ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿರುವ ಕುಸ್ತಿಪಟುಗಳು, ಬ್ರಿಜ್‌ಭೂಷಣ್‌ರನ್ನು ಬಂಧಿಸದ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ತಾವು ಈ ಹಿಂದೆ ಗೆದ್ದ ವಿಶ್ವ ಚಾಂಪಿಯನ್‌ಶಿಪ್‌ ಹಾಗೂ ಒಲಿಂಪಿಕ್ಸ್‌ನ ಪದಕಗಳನ್ನು ಮಂಗಳವಾರ ಗಂಗಾ ನದಿಗೆ ಎಸೆಯಲು ಮುಂದಾಗಿ ಹೈಡ್ರಾಮಾ ಸೃಷ್ಟಿಸಿದರು. ಆದರೆ, ಈ ರೀತಿ ಘಟನೆ ನಡೆದಿರೋದು ಇದೇ ಮೊದಲಲ್ಲ. ಜಗತ್ತಿನ ಬಾಕ್ಸಿಂಗ್‌ ದಂತಕತೆ ಮುಹಮ್ಮದ್‌ ಅಲಿ ಸಹ ತಮ್ಮ ಒಲಿಂಪಿಕ್‌ ಪದಕವನ್ನು ಅಮೆರಿಕದ ನದಿಗೆ ಎಸೆದಿದ್ದರು. 

1960ರ ದಶಕದಲ್ಲಿ ಅಮೆರಿಕದಲ್ಲಿ ನಡೆಯುತ್ತಿದ್ದ ವರ್ಣ ತಾರತಮ್ಯವನ್ನು ಖಂಡಿಸಿ ಜಗತ್ತಿನ ಬಾಕ್ಸಿಂಗ್‌ ದಂತಕತೆ ಮುಹಮ್ಮದ್‌ ಅಲಿ ತಮ್ಮ ಒಲಿಂಪಿಕ್ಸ್‌ ಚಿನ್ನದ ಪದಕವನ್ನು ಓಹಿಯೋ ನದಿಗೆ ಎಸೆದು ಪ್ರತಿಭಟನೆ ನಡೆಸಿದ್ದರು. ಅದು ಅಮೆರಿಕದಲ್ಲಿ ತೀವ್ರ ಸಂಚಲನ ಮೂಡಿಸಿತ್ತು. ಈಗ ಕುಸ್ತಿ ಪಟುಗಳು ಗಂಗಾನದಿಗೆ ತಮ್ಮ ಪದಕ ಎಸೆಯಲು ಹೊರಟಿದ್ದುದು ಆ ಘಟನೆಯನ್ನು ನೆನಪಿಸುವಂತಿತ್ತು.

ಇದನ್ನು ಓದಿ: ನಿರ್ಲಜ್ಜತೆಯ ವಿರಾಟರೂಪ, ಬೇಸರ ತರುತ್ತೆ; ಮಹಿಳಾ ರೆಸ್ಲರ್ ಎಳೆದಾಟಕ್ಕೆ ಕವಿರಾಜ್, ಸುನಿ ಅಸಮಧಾನ

ಆದರೆ, ಭಾರತದಲ್ಲಿ ಕುಸ್ತಿ ಪಟುಗಳು ತಮ್ಮ ಪದಕಗಳನ್ನು ನದಿಗೆ ಎಸೆಯಲಿಲ್ಲ. ಈ ವೇಳೆ ರೈತ ಹೋರಾಟಗಾರ ನರೇಶ್‌ ಟಿಕಾಯತ್‌ ಮುಂತಾದವರು ಐದು ದಿನದಲ್ಲಿ ಸಮಸ್ಯೆಗೆ ಪರಿಹಾರ ದೊರಕಿಸುವ ಭರವಸೆ ನೀಡಿ ಪದಕ ಎಸೆಯದಂತೆ ಮನವೊಲಿಸಿದರು. ಅದರಂತೆ ಪದಕ ಎಸೆತ ನಿರ್ಧಾರ ಕೈಬಿಟ್ಟ ಕುಸ್ತಿಪಟುಗಳು, ಶೀಘ್ರದಲ್ಲೇ ದೆಹಲಿಯ ಇಂಡಿಯಾ ಗೇಟ್‌ ಬಳಿ ಆಮರಣ ಉಪವಾಸ ಆರಂಭಿಸುವುದಾಗಿ ಎಚ್ಚರಿಕೆ ನೀಡಿದರು.

ಹರಿದ್ವಾರದಲ್ಲಿ ಹೈಡ್ರಾಮಾ:
ದೆಹಲಿಯ ಜಂತರ್‌ ಮಂತರ್‌ನಿಂದ ಪೊಲೀಸರು ತಮ್ಮನ್ನು ಎತ್ತಂಗಡಿ ಮಾಡಿಸಿದ ಹಿನ್ನೆಲೆಯಲ್ಲಿ ಮಂಗಳವಾರ ಹರಿದ್ವಾರದಲ್ಲಿ ತಮ್ಮ ಪದಕಗಳನ್ನು ಗಂಗಾನದಿಗೆ ಎಸೆಯುವುದಾಗಿ ಕುಸ್ತಿಪಟುಗಳು ಹೇಳಿದ್ದರು. ಅದರಂತೆ ಹರ್‌ಕೀ ಪೌರಿ ಬಳಿ ಗಂಗಾನದಿಯ ದಡದಲ್ಲಿ ಸಂಜೆ 6 ಗಂಟೆಯ ವೇಳೆಗೆ ಕುಸ್ತಿಪಟುಗಳಾದ ವಿನೇಶ್‌ ಫೋಗಾಟ್‌, ಭಜರಂಗ್‌ ಪೂನಿಯಾ ಹಾಗೂ ಸಾಕ್ಷಿ ಮಲಿಕ್‌ ತಮ್ಮ ಕುಟುಂಬದವರ ಜೊತೆ ನೆರೆದರು. ಅವರೊಂದಿಗೆ ನೂರಾರು ಬೆಂಬಲಿಗರೂ ಸೇರಿದ್ದರು.

ಇದನ್ನೂ ಓದಿ: ಟಿಕಾಯತ್ ಎಂಟ್ರಿಯಿಂದ ಕುಸ್ತಿಪಟು ಪ್ರತಿಭಟೆನೆಯಲ್ಲಿ ಯು ಟರ್ನ್, ಪದಕ ನದಿಗೆ ಎಸೆಯುವ ಹೋರಾಟಕ್ಕೆ ಬ್ರೇಕ್!

ಸಾಕ್ಷಿ, ವಿನೇಶ್‌ ಹಾಗೂ ಅವರ ಸೋದರ ಸಂಬಂಧಿ ಸಂಗೀತಾ ಕಣ್ಣೀರು ಹಾಕುತ್ತಿದ್ದರು. ಅವರ ಪತಿ ಸಮಾಧಾನ ಮಾಡುತ್ತಿದ್ದರು. ಸುಮಾರು 20 ನಿಮಿಷ ಅವರೆಲ್ಲರೂ ಅಲ್ಲೇ ಮೌನವಾಗಿ ಕುಳಿತಿದ್ದರು. ವಿನೇಶ್‌ ತಮ್ಮ ಜೊತೆ ಏಷ್ಯನ್‌ ಗೇಮ್ಸ್‌ ಪದಕ ತಂದಿದ್ದರು. ಸಾಕ್ಷಿ ತಮ್ಮ ಒಲಿಂಪಿಕ್‌ ಕಂಚಿನ ಪದಕ ತಂದಿದ್ದರು.

ಈ ವೇಳೆ ಹರ್ಯಾಣದ ಖಾಪ್‌ ನಾಯಕ ಶಾಮ್‌ ಸಿಂಗ್‌ ಮಲಿಕ್‌ ಹಾಗೂ ರೈತ ಹೋರಾಟಗಾರ ನರೇಶ್‌ ಟಿಕಾಯತ್‌ ಆಗಮಿಸಿ, ಕುಸ್ತಿಪಟುಗಳು ಪದಕ ನದಿಗೆಸೆಯದಂತೆ ಮನವೊಲಿಸಲು ಯತ್ನಿಸಿದರು. 5 ದಿನದಲ್ಲಿ ಬ್ರಿಜ್‌ಭೂಷಣ್‌ರನ್ನು ಬಂಧಿಸುವಂತೆ ಮಾಡಿ ಸಮಸ್ಯೆಗೆ ಪರಿಹಾರ ದೊರಕಿಸಿಕೊಡುವುದಾಗಿ ತಮ್ಮ ಸಿಖ್‌ ಪೇಟವನ್ನು ಕುಸ್ತಿಪಟುಗಳ ಮುಂದೆ ತೆಗೆದಿರಿಸಿ ಭರವಸೆ ನೀಡಿದರು. ಅದನ್ನು ಮನ್ನಿಸಿದ ಕುಸ್ತಿಪಟುಗಳು ಪದಕ ಎಸೆಯದೆ 45 ನಿಮಿಷಗಳ ಬಳಿಕ ವಾಪಸಾದರು.

ಇದನ್ನೂ ಓದಿ: Wrestlers Protest ಪಾರ್ಲಿ​ಮೆಂಟ್‌ ಮುತ್ತಿ​ಗೆಗೆ ಯತ್ನಿ​ಸಿ​ದ್ದ ಕುಸ್ತಿಪಟುಗಳ ವಿರು​ದ್ಧ ಎಫ್‌ಐಆರ್‌!

ಈ ವೇಳೆ ಮಾತನಾಡಿದ ಕುಸ್ತಿಪಟುಗಳು, 5 ದಿನದಲ್ಲಿ ಬ್ರಿಜ್‌ ಭೂಷಣ್‌ರನ್ನು ಬಂಧಿಸದಿದ್ದರೆ ಮತ್ತೆ ಹರಿದ್ವಾರಕ್ಕೆ ಬಂದು ಪದಕಗಳನ್ನು ಎಸೆಯುತ್ತೇವೆ. ಸದ್ಯದಲ್ಲೇ ದೇಶದ ಐತಿಹಾಸಿಕ ಸ್ಥಳವಾದ ಇಂಡಿಯಾ ಗೇಟ್‌ ಬಳಿ ಆಮರಣ ಉಪವಾಸ ಆರಂಭಿಸುತ್ತೇವೆ ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಹೋರಾಟ ನಿಲ್ಲಲ್ಲ - ಭಜರಂಗ್‌:
ಹರಿದ್ವಾರಕ್ಕೆ ತೆರಳುವ ಮುನ್ನ ನವದೆಹಲಿಯಲ್ಲಿ ಮಾತನಾಡಿದ ಭಜರಂಗ್‌, ‘ನಮ್ಮ ಕುತ್ತಿಗೆಯನ್ನು ಅಲಂಕರಿಸಿದ ಪದಕಗಳಿಗೆ ಈಗ ಯಾವುದೇ ಬೆಲೆ ಇಲ್ಲದಂತೆ ಕಂಡು ಬರುತ್ತಿದೆ. ದೇಶಕ್ಕಾಗಿ ನಾವು ನೀಡಿದ ಕೊಡುಗೆಗಳು ಈಗ ನಗಣ್ಯವೆನಿಸುತ್ತಿದೆ. ಈ ವ್ಯವಸ್ಥೆ, ಪೊಲೀಸರು ನಮ್ಮನ್ನು ಕ್ರಿಮಿನಲ್‌ಗಳಂತೆ ಕಾಣುತ್ತಿದ್ದಾರೆ. ನಮ್ಮನ್ನು ಜಂತರ್‌-ಮಂತರ್‌ನಿಂದ ಓಡಿಸಿ, ನಮ್ಮ ಪ್ರತಿಭಟನೆ ಹತ್ತಿಕ್ಕುವ ಕೆಲಸವಾಗಿದೆ. ಆದರೆ ನಾವು ಹೋರಾಟ ನಿಲ್ಲಿಸುವುದಿಲ್ಲ. ಸದ್ಯದಲ್ಲೇ ದೇಶದ ಐತಿಹಾಸಿಕ ಸ್ಥಳವೆನಿಸಿರುವ ಇಂಡಿಯಾ ಗೇಟ್‌ ಬಳಿ ಆಮರಣಾಂತ ಉಪಪಾಸ ಕೂರುತ್ತೇವೆ’ ಎಂದು ಹೇಳಿದರು.

ಇದನ್ನೂ ಓದಿ: Wrestlers Protest 'ಹಾಡುಹಗಲೇ ಪ್ರಜಾಪ್ರಭುತ್ವದ ಕಗ್ಗೊಲೆ': ಕುಸ್ತಿಪಟುಗಳನ್ನು ಬಂಧಿಸಿದ ಡೆಲ್ಲಿ ಪೊಲೀಸರು..!

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಂಗಳೂರಿನಲ್ಲಿ ವರ್ಲ್ಡ್ ಟೆನಿಸ್ ಲೀಗ್; ಟೂರ್ನಿಯ ವೇಳಾಪಟ್ಟಿ ಪ್ರಕಟ, ಟಿಕೆಟ್ ಬುಕಿಂಗ್ ಆರಂಭ
ಸತತ ಎರಡನೇ ಬಾರಿಗೆ ಭಾರತ ಮಹಿಳೆಯರಿಗೆ ಒಲಿದ ಕಬಡ್ಡಿ ವಿಶ್ವಕಪ್ ಚಾಂಪಿಯನ್ ಪಟ್ಟ!